
ಚಾಮರಾಜನಗರ (ಜ.24) ಕಷ್ಟಪಟ್ಟು ಬೆಳೆದ ಬೆಳೆಯನ್ನು ಪಕ್ಕದ ಮನೆಯವರ ದನ ಕರು ಮೇಯುತ್ತಿದ್ದ ಕಾರಣಕ್ಕೆ ಮಹಿಳೆ ವಾರ್ನಿಂಗ್ ನೀಡಿದ್ದಾರೆ. ಇಷ್ಟೇ ನೋಡಿ, ಪಕ್ಕದ ಮನೆಯ ಮಹಿಳೆ ವಾರ್ನಿಂಗ್ ನೀಡಿದ ರೈತ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ ಘಟನೆ ಚಾಮರಾಜನಗರದ ಹನೂರು ತಾಲೋಕು ದೊಮ್ಮನಗದ್ದೆ ಸಮೀಪದ ಜಿ ಆರ್ ನಗರ ಗ್ರಾಮದಲ್ಲಿ ನಡೆದಿದೆ. ಕಣ್ಣಮ್ಮ ಎಂಬ ಮಹಿಳೆ ಮೇಲೆ ಸೆಲ್ವಿ ಎಂಬ ಮಹಿಳೆ ಹಲ್ಲೆ ಮಾಡಿದ್ದಾರೆ. ರಾಮಾಪುರ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.
ಕಣ್ಣಮ್ಮ ತಮ್ಮ ಜಮೀನಿನಲ್ಲಿ ಹುರುಳಿ ಬೆಳೆ ಬೆಳೆದಿದ್ದರು. ಕಳೆದ ವರ್ಷ ಹೆಚ್ಚುವರಿ ಮಳೆಯಿಂದ ಬೆಳೆಗಳಿಗೆಸಮಸ್ಯೆಯಾಗಿತ್ತು. ಈ ವರ್ಷದ ಅಕಾಲಿ ಮಳೆ, ಹವಾಮಾನ ವೈಪರಿತ್ಯದಿಂದ ಬೆಳೆಗಳ ಮೇಲೂ ಪರಿಣಾಮ ಬೀರಿತ್ತು. ಆದರೆ ಶ್ರಮವಹಿಸಿ ಹುರುಳಿ ಬೆಳೆ ಬೆಳೆದಿದ್ದ ಕಣ್ಣಮ್ಮಗೆ ದನ ಕರುಗಳ ತಲೆನೋವು ಶುರುವಾಗಿತ್ತು. ಕಣ್ಣಮ್ಮ ಮನೆಯಿಂದ ಕೆಲ ದೂರದಲ್ಲಿರುವ ಸೆಲ್ವಿ ಎಂಬ ಮಹಿಳೆಯ ದನ ಕರುಗಳು ಹುರಳಿ ಬೆಳೆ ಮೇಯುತ್ತಿತ್ತು. ಹೀಗಾಗಿ ಹಲವು ಬಾರಿ ಈ ಕುರಿತು ಸೆಲ್ವಿಗೆ ಸೂಚನೆ ನೀಡಿದ್ದರು. ದನ ಕರುಗಳನ್ನು ಕಟ್ಟಿ ಹಾಕುವಂತೆ ಸೂಚಿಸಿದ್ದರು. ಆದರೆ ಸೆಲ್ವಿ ಈ ಮಾತುಗಳನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಬದಲಾಗಿ ವಾದ ಮಾಡಲು ಆರಂಭಿಸಿದ್ದರು.
ಕಷ್ಟಪಟ್ಟು ಬೆಳೆದ ಬೆಳೆ ಹಾಳಾಗುತ್ತಿದೆ. ಅಪಾರ ನಷ್ಟ ಸಂಭವಿಸುತ್ತಿದೆ. ಹೀಗಾಗಿ ದನ ಕರುಗಳನ್ನು ಕಟ್ಟಿ ಹಾಕದಿದ್ದರೆ, ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಕಣ್ಣಮ್ಮ ಹಾಗೂ ಸೆಲ್ವಿ ನಡುವೆ ಮಾತಿಗೆ ಮಾತು ಬೆಳೆದಿದೆ. ಬಳಿಕ ಕಣ್ಣಮ್ಮ ಹಾಗೂ ಸೆಲ್ವಿ ಕುಟುಂಬ ಸದಸ್ಯರ ಮಧ್ಯಪ್ರವೇಶದಿಂದ ಜಗಳಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿತ್ತು.
ವಾರ್ನಿಂಗ್ ನೀಡಿದ ಕಣ್ಣಮ್ಮನನ್ನು ಹಿಡಿದೆಳೆದು ತಂದ ಸೆಲ್ವಿ ಹಾಗೂ ಇಬ್ಬರು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ಸತತವಾಗಿ ಥಳಿಸಿ ಹಲ್ಲೆ ಮಾಡಿದ್ದಾರೆ. ಕಿರುಚಾಟಗಳು ಕೇಳಿ ಸ್ಥಳೀಯರು ಬಂದಿದ್ದಾರೆ. ಸ್ಥಳೀಯರು ಮಧ್ಯಪ್ರವೇಶ ಮಾಡಿದ ಕಾರಣ ಕಣ್ಣಮ್ಮನನ್ನು ಬಿಟ್ಟು ಕಳುಹಿಸಿದ್ದಾರೆ. ಘಟನೆ ಸಂಬಂಧ ರಾಮಾಪುರ ಠಾಣೆಯಲ್ಲಿ ಸೆಲ್ವಿ ಸೇರಿದಂತೆ ಮೂವರ ವಿರುದ್ದ ಪ್ರಕರಣ ದಾಖಲಾಗಿದೆ.