ರೈಲ್ವೆ ಕೆಳಹಂತದ ಹುದ್ದೆ ಪರೀಕ್ಷೆಗಳಲ್ಲಿ ಮಾತ್ರ ಕನ್ನಡ..!

By Kannadaprabha NewsFirst Published Nov 4, 2022, 1:00 PM IST
Highlights

ಉನ್ನತ ಹಂತದ ಹುದ್ದೆಗಳಿಗೆ ಹಿಂದಿ, ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ, ಕೆಳಹಂತದ ಸಿ, ಡಿ ದರ್ಜೆ ಹುದ್ದೆಗಳಿಗೆ ಕಾಟಾಚಾರಕ್ಕೆ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ

ಜಯಪ್ರಕಾಶ್‌ ಬಿರಾದಾರ್‌

ಬೆಂಗಳೂರು(ನ.04):  ಕೇಂದ್ರ ಸರ್ಕಾರದ ಅತ್ಯಂತ ದೊಡ್ಡ ಉದ್ಯೋಗ ಮೂಲ ರೈಲ್ವೆ ಇಲಾಖೆ. ಆದರೆ, ಇಲ್ಲಿ ಉನ್ನತ, ಮೇಲ್ವರ್ಗದ ಬಹುತೇಕ ಹುದ್ದೆಯ ನೇಮಕಾತಿ ಪರೀಕ್ಷೆಗಳು ಇಂದಿಗೂ ಹಿಂದಿ, ಇಂಗ್ಲಿಷ್‌ಗೆ ಸೀಮಿತವಾಗಿವೆ. ಸಿ ಮತ್ತು ಡಿ ದರ್ಜೆಯ ಹುದ್ದೆಗಳ ನೇಮಕಾತಿ ಪರೀಕ್ಷೆಗಳು ಮಾತ್ರ ಕನ್ನಡ ಭಾಷೆಗೆ ಅವಕಾಶ ನೀಡಿದ್ದು, ಅದನ್ನು ಕೂಡಾ ಅವ್ಯವಸ್ಥಿತವಾಗಿ ಗೂಗಲ್‌ ಅನುವಾದದೊಂದಿಗೆ ಕಾಟಾಚಾರಕ್ಕೆ ನಡೆಸಲಾಗುತ್ತಿದೆ.

ಕೇಂದ್ರ ಸರ್ಕಾರದ ನೌಕರಿ ಆಕಾಂಕ್ಷಿಗಳಲ್ಲಿ ಹೆಚ್ಚಿನವರ ಮೊದಲ ಆಯ್ಕೆ ರೈಲ್ವೆ ಇಲಾಖೆಯಾಗಿರುತ್ತದೆ. ಅಂತೆಯೇ ಭಾರತೀಯ ರೈಲ್ವೆಯಲ್ಲಿ ವಾರ್ಷಿಕ ಒಂದು ಲಕ್ಷಕ್ಕೂ ಅಧಿಕ ಹುದ್ದೆಗಳ ನೇಮಕಾತಿ ನಡೆಯುತ್ತದೆ. ಅದರಲ್ಲೂ, ರಾಜ್ಯ ವ್ಯಾಪ್ತಿಯ ರೈಲ್ವೆ ನೇಮಕಾತಿ ಮಂಡಳಿ ಬೆಂಗಳೂರಿನಲ್ಲಿ (ಆರ್‌ಆರ್‌ಬಿ) ವಾರ್ಷಿಕ 15ರಿಂದ 20 ಸಾವಿರ ರೈಲ್ವೆ ಹುದ್ದೆಗಳಿಗೆ ನೇಮಕಾತಿಗಳು ನಡೆಯುತ್ತವೆ. ಆದರೆ, ಪರೀಕ್ಷೆಗಳಲ್ಲಿನ ಅವ್ಯವಸ್ಥೆಯಿಂದ ಮತ್ತು ಭಾಷಾ ತಾರತಮ್ಯದಿಂದ ಕನ್ನಡಿಗರು ಹೆಚ್ಚಿನ ಹುದ್ದೆಗಳಿಗೆ ಆಯ್ಕೆಯಾಗುತ್ತಿಲ್ಲ. ಬಹುಪಾಲು ಹುದ್ದೆಗಳು ಉತ್ತರ ಭಾರತೀಯರು, ಹಿಂದಿ ಭಾಷಿಕರ ಪಾಲಾಗುತ್ತಿವೆ.

ಹಿಂದಿ, ಇಂಗ್ಲಿಷಲ್ಲಿ ಮಾತ್ರ ಎಸ್‌ಎಸ್‌ಸಿ: ಕನ್ನಡಿಗರ ವಿರೋಧ

ರೈಲ್ವೆ ಹುದ್ದೆಗಳ ಪೈಕಿ ಸಹಾಯಕ ಲೋಕೊ ಪೈಲಟ್‌, ಜೂನಿಯರ್‌ ಟೆಕ್ನಿಷಿಯನ್‌, ಸ್ಟೇಷನ್‌ ಮಾಸ್ಟರ್‌, ಟಿಕೆಟ್‌ ಕಲೆಕ್ಟರ್‌ನಂತಹ ಕ್ಲರ್ಕ್ (ಗುಮಾಸ್ತ) ಸಿ ಗ್ರೂಪ್‌ ಹುದ್ದೆಗಳು ಮತ್ತು ಟ್ರಾಕ್‌ ಮ್ಯಾನ್‌, ಕಿ ಮ್ಯಾನ್‌, ಮೇಸ್ತ್ರಿ, ಪಾಯಿಂಟ್‌ ಮ್ಯಾನ್‌, ಗೇಟ್‌ಮ್ಯಾನ್‌, ಕಚೇರಿ ಸಹಾಯಕ, ನಿಲ್ದಾಣ ಸ್ವಚ್ಛತಾ ಸಿಬ್ಬಂದಿಯಂತಹ ಡಿ ಗ್ರೂಪ್‌ನ ಹುದ್ದೆಗಳು ಮಾತ್ರ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಯಲ್ಲಿ ನಡೆಯುತ್ತಿವೆ. ಇಲಾಖೆಯ ಬಿ ಗ್ರೂಪ್‌ನ ಅಧಿಕಾರಿ ಹುದ್ದೆಗಳು ಪರೀಕ್ಷೆಯ ಇಂದಿಗೂ ಹಿಂದಿ ಮತ್ತು ಇಂಗ್ಲಿಷ್‌ಗೆ ಸೀಮಿತವಾಗಿವೆ. ಇನ್ನು ಎ ಗ್ರೂಪ್‌ ಹುದ್ದೆಗೆ ಭಾರತೀಯ ಆಡಳಿತ ಸೇವೆ (ಐಎಎಸ್‌)ಯಿಂದ ನೇಮಕಾತಿಯಾಗುತ್ತಿದ್ದು, ಅಲ್ಲಿಯೂ ಪ್ರಾಥಮಿಕ ಪರೀಕ್ಷೆಗಳಲ್ಲಿ ಕನ್ನಡ ಇಲ್ಲ. ಈ ಮೂಲಕ ಕೆಳ ವರ್ಗ ಹುದ್ದೆಗಳಲ್ಲಿ ಮಾತ್ರ ಕನ್ನಡಿಗರಿಗೆ ಅವಕಾಶ ಕೊಟ್ಟು ಉನ್ನತ ಹುದ್ದೆಗಳನ್ನು ಕನ್ನಡಿಗರಿಂದ ಕೈತಪ್ಪಿಸಲಾಗುತ್ತಿದೆ.

ದಶಕ ಕಳೆದರೂ ಗೂಗಲ್‌ ಭಾಷಾಂತರ:

2011ರಿಂದಲೇ ರೈಲ್ವೆ ಇಲಾಖೆ ಪರೀಕ್ಷೆ ಕನ್ನಡ ಸೇರಿದಂತೆ ಪ್ರಾದೇಶಕ ಭಾಷೆಗಳಲ್ಲಿ ನಡೆಯಬೇಕು ಎಂಬ ನಿಯಮ ಜಾರಿಯಲ್ಲಿದೆ. ಆದರೆ, ಇಂದಿಗೂ ಲಿಖಿತ ಪರೀಕ್ಷೆಯ ಕನ್ನಡ ಮಾಧ್ಯಮ ಪಶ್ನೆಪತ್ರಿಕೆಗಳನ್ನು ಗೂಗಲ್‌ ಅನುವಾದ ಮಾಡಲಾಗುತ್ತಿದ್ದು, ಹಲವು ದೋಷಗಳಿಂದ ಕೂಡಿರುತ್ತವೆ. ವ್ಯಾಕರಣ ಮಾತ್ರವಲ್ಲದೆ ದೇಶ, ರಾಜ್ಯಗಳ ಪ್ರಮುಖರ ಹೆಸರುಗಳೂ ತಪ್ಪಾಗಿ ಮುದ್ರಣಗೊಂಡಿರುತ್ತವೆ. ಇಂಗ್ಲಿಷ್‌ ಶಬ್ದಗಳನ್ನೇ ಕನ್ನಡೀಕರಣಗೊಳಿಸಿ ಸರಿಯಾಗಿ ವಾಕ್ಯ ರಚನೆ ಮಾಡಲಾಗುತ್ತಿದೆ. ಪರೀಕ್ಷಾರ್ಥಿಗಳು ಅನಿವಾರ್ಯವಾಗಿ ಇಂಗ್ಲಿಷ್‌ ಪ್ರಶ್ನೆಪತ್ರಿಕೆ ಮೊರೆ ಹೋಗಬೇಕಿದೆ. ಇಂಗ್ಲಿಷ್‌ ಬರದವರು ತಮಗೆ ತಿಳಿದ ಉತ್ತರ ಬರೆದು ಕೈ ತೊಳೆದುಕೊಂಡರು. ಹೀಗಾಗಿ, ರೈಲ್ವೆ ಇಲಾಖೆ ಕನ್ನಡ ಮಾಧ್ಯಮದಲ್ಲಿ ನಡೆಸುತ್ತಿರುವ ಲಿಖಿತ ಪರೀಕ್ಷೆ ಕಾಟಚಾರಕ್ಕೆ ಎಂಬಂತಾಗಿದೆ.

‘ಪ್ರಶ್ನೆಗಳ ವಾಕ್ಯ ರಚನೆ ಪ್ರಶ್ನೆಯ ರೀತಿಯಲ್ಲೇ ಇರುವುದಿಲ್ಲ. ಕೆಲವು ಪ್ರಶ್ನೆಗಳು ಅರ್ಥವೇ ಆಗುವುದಿಲ್ಲ. ಬಹುತೇಕ ಪ್ರಶ್ನೆಗಳ ವಾಕ್ಯ ರಚನೆ ಪ್ರಶ್ನೆಯ ರೀತಿಯಲ್ಲೆ ಇರುವುದಿಲ್ಲ. ಆದರೂ, ಅನಿವಾರ್ಯವಾಗಿ ನಾವು ಪರೀಕ್ಷೆ ಬರೆಯುತ್ತಿದ್ದೇವೆ. ಹೆಚ್ಚಿನ ಅಂಕ ಗಳಿಕೆಗೆ ಸಮಸ್ಯೆಯಾಗುತ್ತಿದ್ದು, ನೇಮಕಾತಿಯಾಗುತ್ತಿಲ್ಲ’ ಎಂದು ಹಲವು ಸ್ಥಳೀಯ ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹುದ್ದೆ ಅಧಿಸೂಚನೆ/ ಪ್ರಕಟಣೆ ಹಿಂದಿ, ಇಂಗ್ಲಿಷ್‌ ಮಾತ್ರ:

ಸದ್ಯ ರೈಲ್ವೆ ನೇಮಕಾತಿ ಕುರಿತ ಅಧಿಸೂಚನೆ ಮತ್ತು ಸಂಬಂಧಿಸಿದ ಪ್ರಕಟಣೆಗಳನ್ನು ಇಂಗ್ಲಿಷ್‌ ಮತ್ತು ಹಿಂದಿಯಲ್ಲಿಯೇ ಹೊರಡಿಸಲಾಗುತ್ತಿದ್ದು, ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿಲ್ಲ. ಈ ಅಂಶವೂ ಕೂಡಾ ರೈಲ್ವೆ ಮಂಡಳಿಯ ಭಾಷಾ ತಾರತಮ್ಯವನ್ನು ಎತ್ತಿ ಹಿಡಿಯುತ್ತದೆ.

ಗುತ್ತಿಗೆ ಕೆಲಸಗಳಿಗೆ ಸೇರಲು ಹಿಂದಿ ಬರಬೇಕಂತೆ!

ರೈಲ್ವೆ ನಿಲ್ದಾಣಗಳು ಮತ್ತು ಕಚೇರಿಗಳಲ್ಲಿ ಸಿ ಮತ್ತು ಡಿ ಗ್ರೂಪ್‌ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಸೇರಲು ಕೂಡಾ ‘ಹಿಂದಿ ಬರುತ್ತದೆಯೇ?’ ಎಂಬ ಪ್ರಶ್ನೆಯನ್ನು ಕೇಳಲಾಗುತ್ತದೆ. ಕಾರಣ, ಹಿರಿಯ ಅಧಿಕಾರಿಗಳು ಮತ್ತು ಹೆಚ್ಚಿನ ಅಧಿಕಾರಿ ವರ್ಗ ಉತ್ತರ ಭಾರತದವರು, ಅನ್ಯ ಭಾಷಿಕರಾಗಿದ್ದು ಅವರ ಬಳಿ ಸಂಹವನಕ್ಕೆ ಹಿಂದಿ ಅನುಕೂಲವಾಗಲಿ ಎಂದು ಗುತ್ತಿಗೆ ನೇಮಕಾತಿಯಲ್ಲಿಯೂ ಹಿಂದಿ ಕಡ್ಡಾಯವಾಗಿ ಕೇಳಲಾಗುತ್ತಿದೆ ಎಂದು ಅಲ್ಲಿನ ಸಿಬ್ಬಂದಿ, ಸಂದರ್ಶನಕ್ಕೆ ತೆರಳಿ ಭಾಷೆ ಕಾರಣದಿಂದ ಹುದ್ದೆ ಕೈತಪ್ಪಿಸಿಕೊಂಡ ಹಲವರು ದೂರಿದ್ದಾರೆ.

ಕೇವಲ 3% ಕನ್ನಡಿಗರಿಗಷ್ಟೇ ಐಎಎಸ್‌, ಐಪಿಎಸ್‌ ಹುದ್ದೆ..!

ರಾಜ್ಯದ ಹುದ್ದೆ ರಾಜ್ಯದವರಿಗೆ ಮೀಸಲಿಡಿ: ಜಾವಗಲ್‌

ರಾಜ್ಯಕ್ಕೆ ಸಂಬಂಧಿಸಿದ ರೈಲ್ವೆ ಹುದ್ದೆಗಳ ಪೈಕಿ ಸಿಂಪಪಾಲು ಹುದ್ದೆಗಳು ಕನ್ನಡಿಗರು (ರಾಜ್ಯದವರಿಗೆ) ಸಿಗಬೇಕು. ಸಾಂಸ್ಕೃತಿಕ ವಿನಿಮಯ ದೃಷ್ಟಿಕೋನದಲ್ಲಿ ಶೇ.10ರಷ್ಟುಹುದ್ದೆಗಳಿಗೆ ಅನ್ಯ ರಾಜ್ಯದವರನ್ನು ಪರಿಗಣಿಸಲಿ. ಅಲ್ಲದೆ, ರೈಲ್ವೆ ಇಲಾಖೆಯ ಎಲ್ಲಾ ಹುದ್ದೆಗಳನ್ನು ಕನ್ನಡ ಭಾಷೆಯಲ್ಲಿ ನಡೆಸಬೇಕು. ಅದರಲ್ಲೂ ಸುಲಭ ಕನ್ನಡದಲ್ಲಿ ಪ್ರಶ್ನೆ ಪತ್ರಿಕೆ ಇರಬೇಕು. ಇಂತಹ ಕಾನೂನನ್ನು ಕೇಂದ್ರ ಸರ್ಕಾರ ಶೀಘ್ರ ಜಾರಿಗೊಳಿಸಬೇಕು ಎಂದು ಕನ್ನಡ ಪರ ಹೋರಾಟಗಾರ ಅರುಣ್‌ ಜಾವಗಲ್‌ ಆಗ್ರಹಿಸಿದ್ದಾರೆ.

ಗೂಗಲ್‌ ಅನುವಾದ ನಿಲ್ಲಿಸಿ, ಭಾಷಾ ತಜ್ಞರ ನೇಮಿಸಿಕೊಳ್ಳಿ

ರೈಲ್ವೆ ಹುದ್ದೆ ಪರೀಕ್ಷೆಗಳು ಕನ್ನಡದಲ್ಲಿ ನಡೆಯುತ್ತಿದ್ದರೂ ಕನ್ನಡಿಗರಿಗೆ ಹೆಚ್ಚು ಅನುಕೂಲವಾಗುತ್ತಿಲ್ಲ. ಪ್ರಶ್ನೆ ಪತ್ರಿಕೆಯ ಲೋಪದೋಷಗಳು ಅಭ್ಯರ್ಥಿಗಳಿಗೆ ದೊಡ್ಡ ಸವಾಲಾಗಿದೆ. ಗೂಗಲ್‌ ಅನುವಾದ ನಿಲ್ಲಿಸಿ ಭಾಷಾ ತಜ್ಞರ ನೇಮಕ ಮಾಡಿಕೊಂಡು ಪ್ರಶ್ನೆ ಪತ್ರಿಕೆ ರಚಿಸಬೇಕು. ರಾಜ್ಯದಲ್ಲಿ ಸೃಷ್ಟಿಯಾಗುವ ರೈಲ್ವೆ ಹುದ್ದೆಗಳನ್ನು ರಾಜ್ಯದವರಿಗೆ ಮೀಸಲಿಡಬೇಕು ಎಂದು ಕನ್ನಡಪರ ಚಿಂತಕ ಗಿರೀಶ್‌ ಮತ್ತೇರ ಒತ್ತಾಯಿಸಿದ್ದಾರೆ.
 

click me!