
ನವದೆಹಲಿ: ಭಾರತದ ಕಾರ್ಮಿಕ ಕಾನೂನು ವ್ಯವಸ್ಥೆಯನ್ನು ಸಂಪೂರ್ಣವಾಗಿ ಪರಿಷ್ಕರಿಸುವ ಮಹತ್ವದ ಹೆಜ್ಜೆಯಾಗಿ ಕೇಂದ್ರ ಸರ್ಕಾರವು ಶುಕ್ರವಾರ ನಾಲ್ಕು ಏಕೀಕೃತ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿರುವ ಬಗ್ಗೆ ಅಧಿಕೃತವಾಗಿ ಘೋಷಿಸಿದೆ. ವೇತನ ಸಂಹಿತೆ (2019), ಕೈಗಾರಿಕಾ ಸಂಬಂಧ ಸಂಹಿತೆ (2020), ಸಾಮಾಜಿಕ ಭದ್ರತೆ ಸಂಹಿತೆ (2020), ಮತ್ತು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳು (OSHWC) ಸಂಹಿತೆ (2020) ಗಳನ್ನು ನವೆಂಬರ್ 21, 2025 ರಿಂದ ದೇಶವ್ಯಾಪಿ ಜಾರಿಗೆ ತರಲಾಗುತ್ತಿದೆ.
ಈ ನೀತಿ ಪರಿವರ್ತನೆ ಮೂಲಕ ಒಟ್ಟು 29 ಅಸ್ತಿತ್ವದಲ್ಲಿರುವ ಕಾರ್ಮಿಕ ಕಾನೂನುಗಳನ್ನು ತರ್ಕಬದ್ಧಗೊಳಿಸಿ ಒಂದೇ ಚೌಕಟ್ಟಿನಲ್ಲಿ ಏಕೀಕರಿಸಲಾಗುತ್ತಿದೆ. ಕಾರ್ಮಿಕರಿಗೆ ಬಲವಾದ ರಕ್ಷಣೆ, ಉದ್ಯಮಗಳಿಗೆ ಅನುಸರಣೆ ಸುಗಮಗೊಳಿಸುವುದು ಮತ್ತು ಹೊಸ ಮಾದರಿಯ ಉದ್ಯೋಗ ವಾತಾವರಣಕ್ಕೆ ಕಾನೂನು ಹೊಂದಿಸುವ ಗುರಿ ಈ ಸುಧಾರಣೆಯಲ್ಲಿದೆ.
ಸರ್ಕಾರದ ಪ್ರಕಾರ, ಹೊಸ ಕಾರ್ಮಿಕ ಸಂಹಿತೆಗಳು ದೇಶದ ಕಾರ್ಮಿಕರಿಗೆ ಉತ್ತಮ ವೇತನ, ಸಾಮಾಜಿಕ ಭದ್ರತೆ, ಸುರಕ್ಷತೆ ಮತ್ತು ಕಲ್ಯಾಣ ಒದಗಿಸುವ ಮಹತ್ವದ ಸಾಧನವಾಗಲಿದೆ. ಅವೆಂದರೆ
ಮೊದಲ ಬಾರಿಗೆ, ಸರ್ಕಾರವು ಕ್ಯಾಬ್ ಚಾಲಕರು, ಡೆಲಿವರಿ ಪಾರ್ಟ್ನರ್‌ಗಳು, ಆ್ಯಪ್ ಆಧಾರಿತ ಕೆಲಸಗಾರರು, ಫ್ರೀಲಾನ್ಸರ್‌ಗಳು ಮತ್ತು ಗಿಗ್ ವರ್ಕರ್‌ಗಳು ಸೇರಿದಂತೆ ಅಸಂಘಟಿತ ವಲಯವನ್ನು ಕಾನೂನು ಚೌಕಟ್ಟಿನೊಳಕ್ಕೆ ತರಿದೆ. ಆಧಾರ್ ಆಧಾರಿತ ಪೋರ್ಟಬಿಲಿಟಿ ಮೂಲಕ ದೇಶದ ಯಾವುದೇ ರಾಜ್ಯದಲ್ಲಿ ಸಾಮಾಜಿಕ ಭದ್ರತಾ ಸೌಲಭ್ಯ ಪಡೆಯುವ ಅವಕಾಶ ನೀಡಲಾಗಿದೆ.
ಸರ್ಕಾರದ ಪ್ರಕಾರ, 2015 ರಲ್ಲಿ ಕೇವಲ 19% ಇದ್ದ ಕೆಲಸಗಾರರ ಸಾಮಾಜಿಕ ಭದ್ರತಾ ವ್ಯಾಪ್ತಿ 2025 ರ ವೇಳೆಗೆ 64% ಕ್ಕಿಂತ ಹೆಚ್ಚಾಗಿದೆ. ಹೊಸ ಸಂಹಿತೆಗಳು ರಾಜ್ಯ ಮತ್ತು ವಲಯಗಳಾದ್ಯಂತ ಪೋರ್ಟಬಿಲಿಟಿ ಮತ್ತು ಸುಲಭ ಪ್ರವೇಶ ಒದಗಿಸುತ್ತವೆ. ಪರಿವರ್ತನಾ ಅವಧಿಯಲ್ಲಿ ಎಲ್ಲ ಅಧೀನ ನಿಯಮಗಳು ಪ್ರಕಟವಾಗುವವರೆಗೆ ಅಸ್ತಿತ್ವದಲ್ಲಿರುವ ಕಾನೂನುಗಳು ಜಾರಿಯಲ್ಲೇ ಇರುತ್ತವೆ.
ಮಹಿಳೆಯರು, ಯುವಕರು, ಅಸಂಘಟಿತ ವಲಯ ಮತ್ತು ಗಿಗ್ ವರ್ಕರ್‌ಗಳಿಗೆ ಬಲವಾದ ರಕ್ಷಣೆಗಳನ್ನು ನೀಡುವ ಮೂಲಕ ಹಾಗೂ ಸಂಸ್ಥೆಗಳ ಅನುಸರಣೆ ಹೊರೆಯನ್ನು ಕಡಿಮೆ ಮಾಡುವ ಮೂಲಕ ಈ ಸುಧಾರಣೆಗಳು ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸುವುದು, ಕೌಶಲ್ಯ ವಿಕಾಸ ಮತ್ತು ಕೈಗಾರಿಕಾ ಉತ್ಪಾದಕತೆಯ ಸುಧಾರಣೆ ಗುರಿಯನ್ನು ಹೊಂದಿವೆ. ಸರ್ಕಾರದ ಹೇಳಿಕೆಯಂತೆ, ಹೊಸ ಕಾರ್ಮಿಕ ಸಂಹಿತೆಗಳು ಆತ್ಮನಿರ್ಭರ ಭಾರತ ಗುರಿಯನ್ನು ಬೆಂಬಲಿಸುವ ದಿಟ್ಟ ನಿರ್ಧಾರವಾಗಿದೆ.