ಇಂದು ಫಾದರ್ಸ್ ಡೇ. ಕನ್ನಡ ಸಿನಿಮಾರಂಗದಲ್ಲಿ ಖ್ಯಾತನಾಮರಾಗಿರುವ ಒಂದಷ್ಟು ಪ್ರಮುಖರ ಮಕ್ಕಳು ತಮ್ಮ ತಮ್ಮ ತಂದೆಯ ಬಗ್ಗೆ ಏನು ಹೇಳುತ್ತಾರೆ? ಆ ಜನಪ್ರಿಯರು ತಂದೆಯಾಗಿ ತಮ್ಮ ಮಕ್ಕಳ ಮೇಲೆ ಮೂಡಿಸಿದ ಪ್ರಭಾವವೇನು ಎನ್ನುವ ಬಗ್ಗೆ ಸಣ್ಣದಾಗಿ ನಡೆಸಿದ ಸಮೀಕ್ಷೆಗೆ ಸಿಕ್ಕ ಉತ್ತರ ಇಲ್ಲಿದೆ. ತಂದೆಯ ಜತೆಗಿನ ಆತ್ಮೀಯ ವಿಚಾರಗಳನ್ನು ಹಂಚಿಕೊಂಡ ಚಿತ್ರರಂಗದ ಎಲ್ಲ ಕಲಾವಿದ, ತಂತ್ರಜ್ಞರಿಗೆ ಸುವರ್ಣ ನ್ಯೂಸ್.ಕಾಮ್ ವತಿಯಿಂದ ಕೃತಜ್ಞತೆಗಳು.
ಇಂದು ಫಾದರ್ಸ್ ಡೇ. ಕನ್ನಡ ಸಿನಿಮಾರಂಗದಲ್ಲಿ ಖ್ಯಾತನಾಮರಾಗಿರುವ ಒಂದಷ್ಟು ಪ್ರಮುಖರ ಮಕ್ಕಳು ತಮ್ಮ ತಮ್ಮ ತಂದೆಯ ಬಗ್ಗೆ ಏನು ಹೇಳುತ್ತಾರೆ? ಆ ಜನಪ್ರಿಯರು ತಂದೆಯಾಗಿ ತಮ್ಮ ಮಕ್ಕಳ ಮೇಲೆ ಮೂಡಿಸಿದ ಪ್ರಭಾವವೇನು ಎನ್ನುವ ಬಗ್ಗೆ ಸಣ್ಣದಾಗಿ ನಡೆಸಿದ ಸಮೀಕ್ಷೆಗೆ ಸಿಕ್ಕ ಉತ್ತರ ಇಲ್ಲಿದೆ. ತಂದೆಯ ಜತೆಗಿನ ಆತ್ಮೀಯ ವಿಚಾರಗಳನ್ನು ಹಂಚಿಕೊಂಡ ಚಿತ್ರರಂಗದ ಎಲ್ಲ ಕಲಾವಿದ, ತಂತ್ರಜ್ಞರಿಗೆ ಸುವರ್ಣ ನ್ಯೂಸ್.ಕಾಮ್ ವತಿಯಿಂದ ಕೃತಜ್ಞತೆಗಳು.
ಶಶಿಕರ ಪಾತೂರು
undefined
`ಅಪ್ಪ'ಟ ಕನ್ನಡ ಮೇಷ್ಟರು - ನವೀನ್ ಕೃಷ್ಣ
ಕನ್ನಡದಲ್ಲಿ ಪೌರಾಣಿಕ, ಐತಿಹಾಸಿಕ ಚಿತ್ರಗಳು ಎಂದರೆ ನೆನಪಾಗುವ ಹೆಸರೇ ಡಾ.ರಾಜ್ ಕುಮಾರ್. ನಾಯಕರಾಗಿ ಅವರಿಗೆ ಆ ಸ್ಥಾನವಿದ್ದರೆ, ಅವರ ಆಸ್ಥಾನದಲ್ಲಿ ಇರಲೇಬೇಕಾದ ಕಲಾವಿದ ಶ್ರೀನಿವಾಸ ಮೂರ್ತಿ. ಅವರು ಸ್ಪಷ್ಟವಾಗಿ ಕನ್ನಡವನ್ನು ಉಚ್ಚರಿಸುವ ರೀತಿ, ಪಾತ್ರವೇ ತಾವಾಗುವ ಅವರ ಪ್ರೀತಿ ಇಂದಿಗೂ ಜನಪ್ರಿಯ. ಅವರ ಪುತ್ರ ನವೀನ್ ಕೃಷ್ಣ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದವರು. ಇಂದು ನಾಯಕನಾಗಿ, ಖಳನಾಯಕನಾಗಿ, ನಿರ್ದೇಶಕನಾಗಿ, ಸಾಹಿತಿಯಾಗಿ, ಪೋಷಕನಾಗಿ... ಬಹುಶಃ ಅವರು ಧರಿಸದ ಪೋಷಾಕೇ ಇಲ್ಲ ಎನ್ನಬಹುದು. ಇಂಥ ಬಹುಮುಖ ಪ್ರತಿಭೆಯ ಕಲಾವಿದ ನವೀನ್ ಕೃಷ್ಣ ತಮ್ಮ ತಂದೆಯ ಬಗ್ಗೆ ರಚಿಸಿದ ನಾಲ್ಕು ಸಾಲುಗಳ ಕವನ ಹೀಗಿದೆ.
ಕಲೆಯ ಕಾಲು ಹಿಡಿದ ಅಪ್ಪಾ
ಇಂದಿಗೂ ಕುಟುಂಬದ ಕೈ ಬಿಟ್ಟಿಲ್ಲ..
ಕೈ ಕಾಲು ತೊಳೆಯಿರೋ .. ಎನ್ನುವ ಶಿಸ್ತಿನಿಂದ ಹಿಡಿದು
ಕೈ ಮುಗಿದು ನಡೆಯಿರೋ ಎಂಬ ಸಂಸ್ಕಾರವನ್ನು ಹೇಳಿಕೊಟ್ಟ
`ಅಪ್ಪ'ಟ ಕನ್ನಡದ ಮೇಷ್ಟರು.. ನನ್ನ ಪ್ರೀತಿಯ ಅಪ್ಪಾ..
ನವೀನ್ ಕೃಷ್ಣ, ನಟ, ನಿರ್ದೇಶಕರು
ಕಥೆ ಹಿಂದಿನ ವ್ಯಥೆ ಎಂದಿಗೂ ಸ್ಪೂರ್ತಿದಾಯಕ: ಕೇಳಿ ನವೀನ್ ಕೃಷ್ಣ ಅವರ ಕ್ಲೋಸಪ್ ಕಥೆ
------------------------------------------------------------------------------------------
ನಮ್ಮಪ್ಪ ವರ್ಕೋಹಾಲಿಕ್- ಪನ್ನಗಾಭರಣ
ಸಾಮಾನ್ಯವಾಗಿ ಸಿನಿಮಾಗಳನ್ನು ಕಮರ್ಷಿಯಲ್ ಮತ್ತು ಕಲಾತ್ಮಕ ಎಂದು ವಿಭಾಗಿಸುತ್ತೇವೆ. ಅದು ನೋಡುವವರು ಮಾತ್ರವಲ್ಲ, ಮಾಡುವವರ ಕೂಡ ಪರಸ್ಪರ ಅಭಿರುಚಿಗಳೊಂದಿಗೆ ಬೆರೆಯುವುದು ಕಡಿಮೆ. ಆದರೆ ಎರಡೂ ವಿಭಾಗದಲ್ಲಿ ಕೂಡ ಸಕ್ರಿಯರಾಗಿ ಯಶಸ್ಸು ಪಡೆದ ನಿರ್ದೇಶಕರು ಏನಾದೂ ಇದ್ದರೆ, ಅವರು ಟಿ ಎಸ್ ನಾಗಾಭರಣ ಮಾತ್ರ. `ಗ್ರಹಣ', `ಸಿಂಗಾರವ್ವ'ದಂಥ ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾಗಳನ್ನು ನೀಡುವುದರ ನಡುವೆಯೇ `ಆಕಸ್ಮಿಕ', `ಜನುಮದ ಜೋಡಿ'ಯಂಥ ಸುಪರ್ ಹಿಟ್ ಸಿನಿಮಾಗಳನ್ನು ನೀಡಿದವರು. ಅವರ ಪುತ್ರ ಪನ್ನಗಾಭರಣ ಅವರು ತಮ್ಮ ತಂದೆಯ ಬಗ್ಗೆ ಹೇಳಿರುವ ಮಾತುಗಳು ಇವು.
ಹುಟ್ಟು ಹಬ್ಬದ ಶುಭಾಷಯಗಳು @t.s.nagabharana ..!!! Love u loads ❤️❤️❤️
A post shared by Pannaga Bharana (@pannagabharana) on Jan 22, 2020 at 10:23pm PST
"ನನ್ನ ತಂದೆ ಒಬ್ಬರು ವರ್ಕೋಹಾಲಿಕ್. ಜೀವನದಲ್ಲಿ ನಾನು ಏನಾದರೂ ಶಿಸ್ತು ಕಲಿತುಕೊಂಡಿದ್ದರೆ ಅದು ತಂದೆಯಿಂದ ಮಾತ್ರ. ಅವರು ಕೌಟುಂಬಿಕ ಸಮಾರಂಭ ಅಥವಾ ಇನ್ನಿತರ ವಿಚಾರಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ, ಕೆಲಸದ ಬಗ್ಗೆ ಸಂಪೂರ್ಣವಾದ ಗಮನ ನೀಡುತ್ತಲೇ ಇರುತ್ತಾರೆ. ಅದೇ ಸಂದರ್ಭದಲ್ಲಿ ಕುಟುಂಬವನ್ನು ಎಂದಿಗೂ ಬಿಟ್ಟು ಕೊಡದ, ಕೌಟುಂಬಿಕವಾಗಿ ತಮ್ಮ ಜವಾಬ್ದಾರಿಯನ್ನು ಆಕರ್ಷಕವಾಗಿ ನಿಭಾಯಿಸುವ ತಂದೆಯಾಗಿ ಮನಸೆಳೆಯುತ್ತಲೇ ಇರುತ್ತಾರೆ. ಸದಾ ಫ್ಯಾಮಿಲಿಗೆ ಸಪೋರ್ಟ್ ಸಿಸ್ಟಮ್ ಆಗಿರುವ ಅವರ ಗುಣವಿದೆಯಲ್ಲ? ಅದನ್ನು ನಾನು ತುಂಬ ಗೌರವಿಸುತ್ತೇನೆ. ಯಾಕೆಂದರೆ ಈಗ ನಾನು ಕೂಡ ತಂದೆಯಾಗಿರುವುದರಿಂದ, ಅವರು ತಂದೆಯಾಗಿ ಎಷ್ಟು ದೊಡ್ಡ ಮಾದರಿ ಎನ್ನುವುದು ಚೆನ್ನಾಗಿ ಅರ್ಥವಾಗುತ್ತದೆ. ಅವರ ಆ ಗುಣಗಳನ್ನು ಹತ್ತು ಪರ್ಸೆಂಟ್‌ನಷ್ಟು ಅಳವಡಿಸಿಕೊಳ್ಳಲು ಸಾಧ್ಯವಾದರೂ ನನ್ನ ಜೀವನ ಸಾರ್ಥಕವಾದಂತೆ."
ಪನ್ನಗಾಭರಣ, ನಿರ್ದೇಶಕರು
--------------------------------------------------------------------------------------------
ನಮ್ಮಪ್ಪ ಸ್ನೇಹಿತನಂತೆ ಇದ್ದರು - ಪೂಜಾ ಲೋಕೇಶ್
ತಂದೆ ಮಕ್ಕಳಿಗೆ ಸೀಮಿತವಾಗದೆ, ತಲೆಮಾರುಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವುದು ಸುಬ್ಬಯ್ಯ ನಾಯ್ಡು ಅವರ ಕುಟುಂಬ. ಕನ್ನಡದ ಪ್ರಥಮ ವಾಕ್ಚಿತ್ರವಾದ `ಸತಿ ಸುಲೋಚನ' ಸಿನಿಮಾದ ನಾಯಕರಾದವರು ಸುಬ್ಬಯ್ಯ ನಾಯ್ಡು. ಅವರ ಪುತ್ರರಾಗಿ ರಂಗಭೂಮಿ ಮತ್ತು ಸಿನಿಮಾರಂಗದಲ್ಲಿ ಗುರುತಿಸಿಕೊಂಡವರು ಲೊಕೇಶ್. ಲೋಕೇಶ್ ಅವರ ಮಕ್ಕಳಾದ ಸೃಜನ್ ಮತ್ತು ಪೂಜಾ ಇಬ್ಬರು ಕೂಡ ಸಿನಿಮಾ ಮತ್ತು ಕಿರುತೆರೆಯಲ್ಲಿ ಹೆಸರು ಮಾಡಿದವರು. ಸೃಜನ್ ಲೋಕೇಶ್ ಅವರು ಸಾಕಷ್ಟು ಬಾರಿ ತಮ್ಮ ತಂದೆಯ ಬಗ್ಗೆ ಮಾತನಾಡಿರುವುದನ್ನು ಕೇಳಿರುತ್ತೀರಿ. ಆದರೆ ವಿಶೇಷ ಎನ್ನುವಂತೆ ಲೋಕೇಶ್ ಅವರ ಮುದ್ದಿನ ಪುತ್ರಿ ಪೂಜಾ ಲೋಕೇಶ್ ಅವರು ಇಲ್ಲಿ ತಮ್ಮ ತಂದೆಯ ಬಗ್ಗೆ ಮಾತನಾಡಿದ್ದಾರೆ.
"ನನ್ನ ತಂದೆ ನನಗೆ ತಂದೆಯಾಗಿ ನೆನಪಾಗುವುದಕ್ಕಿಂತಲೂ ಹೆಚ್ಚಾಗಿ ತುಂಬ ಆಪ್ತ ಮಿತ್ರನಂತೆ ನೆನಪಾಗುತ್ತಾರೆ. ಯಾಕೆಂದರೆ ಅಷ್ಟೊಂದು ಆತ್ಮೀಯವಾಗಿ ಬೆರೆಯುತ್ತಿದ್ದರು. ಫ್ರೆಂಡ್ಸ್ ಜತೆಗೆ ಹೇಗೆ ಎಲ್ಲವನ್ನು ಹೇಳಿಕೊಳ್ಳಬಹುದಿತ್ತೋ, ಅಷ್ಟೇ ಚೆನ್ನಾಗಿ ತಂದೆಯೊಂದಿಗೆ ಬೆರೆಯಲು ಸಾಧ್ಯವಾಗುತ್ತಿತ್ತು. ನನ್ನನ್ನು ಯಾವತ್ತೂ ಹುಡುಗಿ ಎನ್ನುವ ಭೇದ ಭಾವದ ಕಣ್ಣುಗಳಲ್ಲಿ ಕಂಡವರೇ ಅಲ್ಲ. ಕಾಲೇಜು ದಿನಗಳಲ್ಲಿ ಅವರು ನನ್ನ ಬರ್ತ್ ಡೇಗೆ ಕೊಡಿಸಿದ ಸೆಕೆಂಡ್ ಹ್ಯಾಂಡ್ ಫಿಯೆಟ್ ಕಾರು ತೀರ ಇತ್ತೀಚಿನವರೆಗೆ ನನ್ನ ಬಳಿಯಲ್ಲೇ ಇತ್ತು. ನಾನು ಎಲ್ಲಾದರೂ ಹೋಗಿ ಗುದ್ಕೊಂಡು ಬರ್ತೀನಿ ಎನ್ನುವ ಕಾರಣಕ್ಕಾಗಿಯೇ ಸೆಕೆಂಡ್ ಹ್ಯಾಂಡ್ ಕಾರು ಕೊಡಿಸಿದ್ದರು ನಮ್ಮಪ್ಪ. ಅದು ನನ್ನ ತುಂಬ ಇಷ್ಟದ ಗಿಫ್ಟ್ ಆಗಿತ್ತು. ವೃತ್ತಿಪರವಾಗಿ ಹೇಳುವುದಾದರೆ ಅವರೇ ನನಗೆ ಮೇಕಪ್ ಮಾಡಿಕೊಳ್ಳುವ ಬಗ್ಗೆ, ವಾಯ್ಸ್ ಮಾಡ್ಯುಲೇಶನ್ ಬಗ್ಗೆ ಹೇಳಿಕೊಟ್ಟಂಥ ಗುರು ಎನ್ನಬಹುದು."
-ಪೂಜಾ ಲೋಕೇಶ್, ನಟಿ
-----------------------------------------------------------------------------------------------
ಅಪ್ಪನಿಂದ ಬದುಕುವ ರೀತಿ ಕಲಿತೆ - ಶರತ್ ಲೋಹಿತಾಶ್ವ
ಲೋಹಿತಾಶ್ವ ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ತಮ್ಮ ದಪ್ಪ ಧ್ವನಿ, ಎತ್ತರ, ಸಹಜವೆನಿಸುವ ಅಭಿನಯದಿಂದ ಗಮನ ಸೆಳೆದವರು. ಇದುವರೆಗೆ ಸುಮಾರು ಐದುನೂರರಷ್ಟು ಸಿನಿಮಾಗಳಲ್ಲಿ ನಟಿಸಿರುವ ಅವರಿಗೆ ಮೂವರು ಮಕ್ಕಳು. ಅವರಲ್ಲಿ ಶರತ್ ಲೋಹಿತಾಶ್ವ ಹಿರಿಯಮಗ. ಶರತ್ ಅವರು ಕೂಡ ಕನ್ನಡ ಸಿನಿಮಾ ಪ್ರೇಕ್ಷಕರ ಮೆಚ್ಚಿನ ನಟನಾಗಿ ಗುರುತಿಸಿಕೊಂಡವರು. ಇವರದೂ ತಂದೆಯಿಂದ ಬಳುವಳಿಯಾಗಿ ಬಂದ ಕಂಠ. ತಂದೆ ಆರಡಿಯ ಆಜಾನುಬಾಹುವಾದರೆ ಶರತ್ ಆರಡಿ ಮೀರಿ ಎರಡಿಂಚು ಬೆಳೆದಿದ್ದಾರೆ. ಆದರೆ ಪ್ರತಿಭೆಯಲ್ಲಿ ತಂದೆಯಷ್ಟು ಎತ್ತರ ಬೆಳೆಯುವುದು ತನ್ನಿಂದ ಸಾಧ್ಯವಿಲ್ಲ ಎನ್ನುವ ಶರತ್ ಲೋಹಿತಾಶ್ವ ಅವರು ಮನೆಯಲ್ಲಿ ತಂದೆಯಾಗಿ ಲೋಹಿತಾಶ್ವ ಹೇಗೆ ಎನ್ನುವುದನ್ನು ಇಲ್ಲಿ ಹಂಚಿಕೊಂಡಿದ್ದಾರೆ.
"ನಾನು ಇಂದು ಬೆಳೆದಿದ್ದೇನೆ ಎಂದರೆ ಅದು ನನ್ನ ತಂದೆ ಕೊಟ್ಟಂಥ ಪ್ರೋತ್ಸಾಹ. ಅವರು ಬಾಲ್ಯದಿಂದಲೇ ನನ್ನನ್ನು ಯಾವುದೇ ವಿಚಾರದಲ್ಲಿ ತುಂಬ ತೆಗಳುವುದನ್ನಾಗಲೀ, ಹೊಗಳುವುದನ್ನಾಗಲೀ ಮಾಡಿದವರಲ್ಲ. ಯಾವತ್ತಿಗೂ ಮಗನ ಮೇಲೆ ಸರ್ವಾಧಿಕಾರ ತೋರಿಸದೆ ಒಬ್ಬ ಸ್ನೇಹಿತನಂತೆ ನೋಡಿಕೊಂಡರು. ಅವರ ಸ್ಥಿತ ಪ್ರಜ್ಞತೆಯ ವರ್ತನೆಯಿಂದಲೇ ನಾನು ಬದುಕುವ ರೀತಿ ಕಲಿತು ಬೆಳೆದೆ. ಇಂದಿಗೂ ಕೂಡ ನಾನು ನಿಯಮಿತವಾಗಿ ಮನೆಗೆ ಫೋನ್ ಮಾಡುವಲ್ಲಿ ಏನಾದರೂ ತಡವಾದರೆ, ಅಥವಾ ಮನೆಯಿಂದ ಬಂದ ಫೋನ್ ರಿಸೀವ್ ಮಾಡದಿದ್ದರೆ ನನ್ನ ತಾಯಿಯಾದರೂ ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ತಂದೆ ಆತಂಕಗೊಳ್ಳುತ್ತಾರೆ. ಕೊರೊನಾ ಕಾಟ ಶುರುವಾದ ಮೇಲೆಯಂತೂ ಅವರು ಮತ್ತೆ ಮತ್ತೆ ಫೋನ್ ಮಾಡಿ ನನ್ನ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ವಿಚಾರಿಸುತ್ತಿರುತ್ತಾರೆ. ಪ್ರಸ್ತುತ ಅವರು ತುಮಕೂರು ಜಿಲ್ಲೆಯ ತೊಂಡಗೆರೆಯ ಹಳ್ಳಿಯಲ್ಲಿದ್ದಾರೆ. ಗಿಡ,ಮರ, ಬಳ್ಳಿ ಎಂದು ಪ್ರಕೃತಿಯ ಜತೆಗೆ ಇರುವುದರಿಂದ ನನಗೂ ಖುಷಿ ಇದೆ."
-ಶರತ್ ಲೋಹಿತಾಶ್ವ, ನಟ
----------------------------------------------------------------------------------------------
ನಮ್ಮಪ್ಪನ ಪರಿಶ್ರಮವೇ ನನಗೆ ಆದರ್ಶ- ಸೋನು ಗೌಡ
ರಾಮಕೃಷ್ಣ ಅವರು ಕನ್ನಡ ಸಿನಿಮಾ ಕಲಾವಿದರ ಪ್ರಿಯ ಮೇಕಪ್ ಆರ್ಟಿಸ್ಟ್. ಡಬಲ್ ಡಿಗ್ರಿ ಮಾಡಿದ ಮೇಲೆ ಮೇಕಪ್ ನಾಣಿಯವರ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ಸುಮಾರು ಐದು ದಶಕದಿಂದ ವೃತ್ತಿಯಲ್ಲಿರುವ ಅವರು ಖ್ಯಾತ ಕಲಾವಿದರ ಪರ್ಸನಲ್ ಪ್ರಸಾಧನ ಕಲಾವಿದರಾಗಿಯೂ ಗುರುತಿಸಿಕೊಂಡವರು. ಪದ್ಮಶ್ರೀ ಕಮಲ ಹಾಸನ್, ಪ್ರಣಯರಾಜ ಶ್ರೀನಾಥ್, ಡಾ.ಜಯಮಾಲ ಅವರ ಜತೆಗೆ ಪರ್ಸನಲ್ ಮೇಕಪ್ ಆರ್ಟಿಸ್ಟಾಗಿ ಕೆಲಸ ಮಾಡಿರುವ ರಾಮಕೃಷ್ಣ ಅವರು, ರೆಬಲ್ ಸ್ಟಾರ್ ಅಂಬರೀಷ್ ಅವರು ಕಡೆಯ ಚಿತ್ರದಲ್ಲಿ ಬಣ್ಣಹಚ್ಚುವಾಗಲೂ ಅವರ ಮೇಕಪ್ ಕಲಾವಿದರಾಗಿದ್ದರು. ಪ್ರಸ್ತುತ ರಿಯಲ್ ಸ್ಟಾರ್ ಉಪೇಂದ್ರ ಅವರ ಮೇಕಪ್ ಆರ್ಟಿಸ್ಟಾಗಿ ಗುರುತಿಸಿಕೊಂಡಿದ್ದಾರೆ. ಅವರ ಇಬ್ಬರು ಪುತ್ರಿಯರು ಕೂಡ ಕಲಾವಿದೆಯರಾಗಿದ್ದು, ಇಲ್ಲಿ ಹಿರಿಯ ಪುತ್ರಿ ಸೋನು ಗೌಡ ಅವರು ತಮ್ಮ ತಂದೆ ತಮಗೆ ಹೇಗೆ ಆದರ್ಶ ಎನ್ನುವುದನ್ನು ತಿಳಿಸಿದ್ದಾರೆ.
"ನಮ್ಮ ತಂದೆ ಯಾರಿಗೂ ಹರ್ಟ್ ಮಾಡುವವರಲ್ಲ. ಆದರೆ ನಾನು ಚಿಕ್ಕವಳಾಗಿದ್ದಾಗ ತಂದೆಯ ಜತೆಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. "ನೀನು ಯಾವತ್ತೂ ನಮಗೆ ಟೈಮ್ ಕೊಡಲ್ಲ" ಎಂದು ಸದಾ ಅವರಲ್ಲಿ ಜಗಳ ಮಾಡುತ್ತಿದ್ದೆ. ಆದರೆ ನಾನು ಕೂಡ ಇಂಡಸ್ಟ್ರಿಗೆ ಬಂದ ಮೇಲೆ ಗೊತ್ತಾಯಿತು, ಅವರು ನಮಗೋಸ್ಕರ ಎಷ್ಟು ಕಷ್ಟಪಡುತ್ತಿದ್ದಾರೆ ಎನ್ನುವುದು. ಹೆಚ್ಚಿನ ಮೇಕಪ್ ಕಲಾವಿದರಿಗೆ ಇಂದಿಗೂ ಕಷ್ಟವಿದೆ. ಅದು ಕಡಿಮೆ ಸಂಭಾವನೆ ಇರಬಹುದು ಅಥವಾ ಸರಿಯಾಗಿ ಪೇಮೆಂಟ್ ಸಿಗದೇ ಇರುವುದು ಮೊದಲಾದವು ಇರಬಹುದು. ಆದರೆ ನಮ್ಮಪ್ಪ ನಮಗೆಲ್ಲ ಒಳ್ಳೆಯ ವಿದ್ಯಾಭ್ಯಾಸ, ಒಳ್ಳೆಯ ಮನೆ ಕೊಡಿಸಿ ಭವಿಷ್ಯಕ್ಕೆ ಯಾವುದೇ ತೊಂದರೆ ಆಗದಂತೆ ನಮ್ಮನ್ನು ನೋಡಿಕೊಂಡಿದ್ದಾರೆ. ಈ ಲಾಕ್ಡೌನ್ ದಿನಗಳಲ್ಲಿ ನಮ್ಮದೇ ಫೀಲ್ಡಲ್ಲಿ ಇರುವವರು ಎಷ್ಟು ಕಷ್ಟದಲ್ಲಿದ್ದಾರೆಂದು ನನಗೆ ಗೊತ್ತು. ಆದರೆ ಕಳೆದ ಆರು ತಿಂಗಳಿನಿಂದ ನಾನು ಕೆಲಸ ಮಾಡಿಲ್ಲವಾದರೂ ನನಗೆ ಯಾವ ಕೊರತೆ ಎದುರಿಸುವ ಪರಿಸ್ಥಿತಿ ಬಂದಿಲ್ಲ ಎಂದರೆ ಅದಕ್ಕೆ ನಮ್ಮ ತಂದೆಯೇ ಕಾರಣ. ಮಾತ್ರವಲ್ಲ, ಅವರು ಈ ಸಂದರ್ಭದಲ್ಲಿ ತಮ್ಮ ಸಹಾಯಕರಿಗೆ ಸಹಾಯ ಮಾಡಿರುವುದನ್ನು ಕಂಡಿದ್ದೇನೆ. ಅವರ ಪರಿಶ್ರಮದ, ತಾಳ್ಮೆಯ ಬದುಕು ನನಗೆ ಮಾದರಿ ಮತ್ತು ಆದರ್ಶವಾಗಿದೆ."
-ಸೋನು ಗೌಡ, ನಟಿ