*ಭಾರತಕ್ಕೆ ವಾಹನ ಆಮದು ಮಾಡಿಕೊಳ್ಳಲು ಮುಂದಾಗಿರುವ ಟೆಸ್ಲಾ
*ಆಮದು ಸುಂಕ ಹೆಚ್ಚಳದಿಂದ ವಿಳಂಬ
*ಸುಂಕ ಕಡಿತಕ್ಕೆ ಷರತ್ತು ವಿಧಿಸಿದ ಸರ್ಕಾರ
Auto Desk: ಅಮೆರಿಕದಲ್ಲಿ (USA) ಎಲೆಕ್ಟ್ರಿಕ್ ವಾಹನ- ಇವಿ (EV) ಕ್ರಾಂತಿ ಮೂಡಿಸಿದ್ದ ಟೆಸ್ಲಾ (Tesla)ಕೊನೆಗೂ ಭಾರತಕ್ಕೆ ಕಾಲಿಡಲು ಸಜ್ಜಾಗುತ್ತಿದೆ. ಅದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಭಾರತ ಸರ್ಕಾರ ಕೂಡ ಸುಂಕರಹಿತ ಆಮದು ಸೌಲಭ್ಯ ಒದಗಿಸಲು ಕೆಲವು ಷರತ್ತುಗಳನ್ನು ವಿಧಿಸಿದೆ.ಇದರ ಭಾಗವಾಗಿ, ಭಾರತದಲ್ಲಿ ಆಮದು ತೆರಿಗೆ ಕಡಿತಕ್ಕೆ ಅರ್ಹರಾಗಲು ಎಲೆಕ್ಟ್ರಿಕ್ ಕಾರ್ ಮೇಜರ್ ಟೆಸ್ಲಾ 500 ಮಿಲಿಯನ್ ಡಾಲರ್ ಮೌಲ್ಯದ ಸ್ಥಳೀಯ ಆಟೋ ಘಟಕಗಳನ್ನು ಖರೀದಿಸಬೇಕು ಎಂದು ಸರ್ಕಾರ ಷರತ್ತು ಒಡ್ಡಿದೆ ಎಂದು ಬ್ಲೂಮ್‌ಬರ್ಗ್ (Blumberg) ವರದಿ ಮಾಡಿದೆ. ಟೆಸ್ಲಾಗೆ ಸ್ಥಳೀಯ ಆಟೋ ಭಾಗಗಳನ್ನು ತಳಮಟ್ಟದಲ್ಲಿ ಸಂಗ್ರಹಿಸಲು ಪ್ರಾರಂಭಿಸಲು ಅನುಮತಿ ನೀಡಲಾಗಿದೆ ಎಂದು ವರದಿ ತಿಳಿಸಿದೆ.
ಈ ಷರತ್ತಿನ ಭಾಗವಾಗಿ, ತೃಪ್ತಿದಾಯಕ ಮಟ್ಟವನ್ನು ಸಾಧಿಸುವವರೆಗೆ ಭಾರತೀಯ ಬಿಡಿಭಾಗಗಳ ಖರೀದಿಯನ್ನು ವರ್ಷದಿಂದ ವರ್ಷಕ್ಕೆ ಟೆಸ್ಲಾ, ಸುಮಾರು ಶೇ.10ರಿಂದ ಶೇ. 15ರವರೆಗೆ ಹೆಚ್ಚಿಸಲು ಸಮ್ಮತಿಸಬೇಕಾಗುತ್ತದೆ. ಆದರೆ, ಈ ಷರತ್ತುಗಳಿಗೆ ಟೆಸ್ಲಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನೊಂದು ಆಸಕ್ತಿಕರ ಸಂಗತಿಯೆಂದರೆ, 2021 ಆಗಸ್ಟ್ ನಲ್ಲಿ ತನ್ನ ಎಲೆಕ್ಟ್ರಿಕ್ ವಾಹನಗಳಿಗಾಗಿ ಭಾರತದಿಂದ ಸುಮಾರು 100 ಮಿಲಿಯನ್ ಡಾಲರ್ ಮೌಲ್ಯದ ವಾಹನಗಳ ಬಿಡಿಭಾಗಗಳನ್ನು ಪಡೆದುಕೊಂಡಿರುವುದಾಗಿ ಕಂಪನಿ ಹೇಳಿಕೊಂಡಿದೆ.
ಇದನ್ನೂ ಓದಿ: Geomagnetic Storm Hits Starlink: ಆಗಸದಿಂದ ಉದುರಿ ಬೀಳುತ್ತಿವೆ ಎಲಾನ್ ಮಸ್ಕ್ SpaceX ಉಪಗ್ರಹಗಳು!
ಭಾರತೀಯ ವಾಹನ ಮಾರುಕಟ್ಟೆಗೆ ಆಗಮಿಸಲು ಟೆಸ್ಲಾ ಆಸಕ್ತಿ ಹೊಂದಿದ್ದು, ಜನರು ಕೂಡ ಟೆಸ್ಲಾದ ಬರುವಿಕೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಅಮೆರಿಕ ಮೂಲದ ಈ ಎಲೆಕ್ಟ್ರಿಕ್ ಕಾರು ತಯಾರಕರು ದೇಶದ ಆಮದು ತೆರಿಗೆಯ ಹೆಚ್ಚಿನ ದರದಿಂದಾಗಿ ಭಾರತಕ್ಕೆ ಆಗಮಿಸಲು ಹಿಂದೇಟು ಹಾಕುತ್ತಿದ್ದಾರೆ.
ವಾಹನ ತಯಾರಕರು ಮೊದಲು ತನ್ನ ಎಲೆಕ್ಟ್ರಿಕ್ ಕಾರುಗಳನ್ನು ಸಂಪೂರ್ಣವಾಗಿ ನಿರ್ಮಿಸಿದ ಘಟಕ (CBU) ಮಾದರಿಯಲ್ಲಿ ಆಮದು ಮಾಡಿಕೊಳ್ಳಲು ಯೋಜಿಸಿತ್ತು. ಆದರೆ, ಹೆಚ್ಚಿನ ತೆರಿಗೆ ದರದಿಂದಾಗಿ ಸಿಬಿಯು ಟೆಸ್ಲಾ ಕಾರುಗಳ ಬೆಲೆ ಗಣನೀಯವಾಗಿ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಟೆಸ್ಲಾ ಆಮದು ತೆರಿಗೆ ಕಡಿತಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದೆ. ಆದರೆ, ಸರ್ಕಾರ ಇದಕ್ಕೆ ಹೆಚ್ಚು ಆಸಕ್ತಿ ತೋರುತ್ತಿಲ್ಲ.
ಬದಲಿಗೆ, ಟೆಸ್ಲಾ ದೇಶದಲ್ಲಿಯೇ ಉತ್ಪಾದನಾ ಘಟಕವನ್ನು ಸ್ಥಾಪಿಸಬೇಕು ಮತ್ತು ಭಾರತದಲ್ಲಿಯೇ ತನ್ನ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಬೇಕು ಎಂದು ಸರ್ಕಾರ ಬಯಸುತ್ತಿದೆ. ಆದರೆ, ದೇಶದಲ್ಲಿ ಉತ್ಪಾದನಾ ಘಟಕಗಳನ್ನು ಆರಂಭಿಸುವ ಮೊದಲು, ಸ್ಥಳೀಯ ಉತ್ಪಾದನಾ ಸಾಮರ್ಥ್ಯ, ವೆಚ್ಚ ಹಾಗೂ ಕಾರುಗಳ ಬೇಡಿಕೆಯನ್ನು ಪರಿಶೀಲಿಸಲು ಟೆಸ್ಲಾ ನಿರ್ಧರಿಸಿದೆ.
ಇದನ್ನೂ ಓದಿ: ಎಲೆಕ್ಟ್ರಿಕ್ ಕಾರುಗಳಿಗಾಗಿ ಟೆಸ್ಲಾ ತಂತ್ರಜ್ಞಾನ ಅಳವಡಿಸಿಕೊಳ್ಳಲಿದೆ ವೋಲ್ವೋ!
ಟೆಸ್ಲಾ ಮತ್ತು ಭಾರತ ಸರ್ಕಾರದ ನಡುವಿನ ಈ ಬಿಕ್ಕಟ್ಟಿನಿಂದ, ಕಾರು ಭಾರತ ಪ್ರವೇಶಿಸುವುದು ವಿಳಂಬವಾಗುತ್ತಿದೆ. ದೇಶದಲ್ಲಿನ ಹೆಚ್ಚಿನ ತೆರಿಗೆ ದರದ ಬಗ್ಗೆ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಭಾರತ ಸರ್ಕಾರ, ಟೆಸ್ಲಾ ತಮ್ಮ ಷರತ್ತುಗಳಿಗೆ ಒಪ್ಪಿದಲ್ಲಿ ತೆರಿಗೆ ಕಡಿತಗೊಳಿಸುವುದಾಗಿ ಹೇಳಿಕೆ ನೀಡುತ್ತಿದೆ.
ಟೆಸ್ಲಾ ಮೋಟಾರ್ಸ್, ಅಮೆರಿಕದ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯನ್ನು 2003 ರಲ್ಲಿ ಮಾರ್ಟಿನ್ ಎಬರ್ಹಾರ್ಡ್ ಮತ್ತು ಮಾರ್ಕ್ ಟಾರ್ಪೆನಿಂಗ್ ಎಂಬುವವರು ಆರಂಭಿಸಿದರು. ಭೌತಶಾಸ್ತ್ರಜ್ಞ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿರುವ ನಿಕೋಲಾ ಟೆಸ್ಲಾ ಅವರ ಹೆಸರನ್ನು ಕಂಪನಿಗೆ ಇಡಲಾಗಿದೆ. ಕಂಪನಿಯ ಮೂರನೇ ಸದಸ್ಯರಾದ ಎಲೋನ್ ಮಸ್ಕ್ ಈಗ ಅದರ ನೇತೃತ್ವ ವಹಿಸಿದ್ದು, 2008 ರಿಂದ ಅದರ ಸಿಇಓ ಆಗಿದೆ. ಟೆಸ್ಲಾ - ಮಾಡೆಲ್ 3 ಮತ್ತು ಮಾಡೆಲ್ ಎಸ್ ಮಾದರಿಗಳನ್ನು ಹೊಂದಿದ್ದು, ಭಾರತದಲ್ಲಿ ಮಾಡೆಲ್ 3 ಕಾರು 70.00 ಲಕ್ಷ ರೂ. ದರ ನಿಗದಿಯಾಗುವ ನಿರೀಕ್ಷೆಯಿದೆ.