
ನವದೆಹಲಿ (ಆ.09) ಭಾರತದಲ್ಲಿ ಇ20 ಪೆಟ್ರೋಲ್ ಕುರಿತು ಗೊಂದಲ, ಆತಂಕ ಮುಂದುವರಿದಿದೆ. ಇ20 ಪೆಟ್ರೋಲ್ ಆತಂಕದಿಂದ ಇದೀಗ ಗ್ರಾಹಕರು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಎಲೆಕ್ಟ್ರಿಕ್ ಕಾರು, ಸಿಎನ್‌ಜಿ ಕಾರುಗಳ ಖರೀದಿಗೆ ಮುಂದಾಗುತ್ತಿದ್ದಾರೆ. ಆದರೆ ದುಬಾರಿಯಾಗುತ್ತಿರುವ ಕಾರಣ ಇದೀಗ ದೂರ ಸರಿದಿದ್ದ ಡೀಸೆಲ್ ಕಾರುಗಳತ್ತ ಗ್ರಾಹಕರು ಮುಖ ಮಾಡುತ್ತಿದ್ದಾರೆ. ಹೀಗಾಗಿ ಭಾರಿ ಕುಸಿತ ಕಂಡಿದ್ದ ಡೀಸೆಲ್ ಕಾರು ಮಾರಾಟದಲ್ಲಿ ಇದೀಗ ಗಣನೀಯ ಚೇತರಿಕೆ ಕಂಡಿದೆ.
ಭಾರತದಲ್ಲಿ ಡೀಸೆಲ್ ಕಾರುಗಳ ಮೇಲಿನ ನಿಯಮ ಕಠಿಣಗೊಳಿಸಿದ ಕಾರಣ ಬಹುತೇಕ ಆಟೋಮೊಬೈಲ್ ಕಂಪನಿಗಳು ಡೀಸೆಲ್ ಕಾರು ಉತ್ಪಾದನೆ ಕಡಿತಗೊಳಿಸಿದೆ. ಹೊಸ ನಿಯಮಗಳಿಗೆ ಅನುಸಾರ ಡೀಸೆಲ್ ಕಾರು ಉತ್ಪಾದನಾ ವೆಚ್ಚಾ ಭಾರಿ ಏರಿಕೆಯಾಗಿರುವ ಕಾರಣ ಹಲವು ಆಟೋಮೊಬೈಲ್ ಕಂಪನಿಗಳು ಡೀಸೆಲ್ ಕಾರಿನಿಂದ ದೂರ ಉಳಿದಿದೆ. ಆದರೆ ಇ20 ಆತಂಕ ತೀವ್ರಗೊಂಡಿರುವ ಕಾರಣ ಇದೀಗ ಡೀಸೆಲ್ ಕಾರುಗಳ ಮಾರಾಟದಲ್ಲಿ ಏರಿಕೆಯಾಗಿದೆ.
ಭಾರತ ಆಟೋಮೊಬೈಲ್ ತಯಾರಕ ಸಂಘ (SIAM) ಅಂಕಿ ಅಂಶ ಪ್ರಕಾರ ಜುಲೈ ತಿಂಗಳಲ್ಲಿ ಪೆಟ್ರೋಲ್ ಕಾರು ಮಾರಾಟದಲ್ಲಿ ಶೇಕಡಾ 3ರಷ್ಟು ಕುಸಿತ ಕಂಡಿದೆ. ಇ20 ಪೆಟ್ರೋಲ್‌ನಿಂದ ಮೈಲೇಜ್, ಪರ್ಫಾಮೆನ್ಸ್ ಕಡಿತ, ತುಕ್ಕು ಹಿಡಿಯುವ , ಎಂಜಿನ್ ರಿಪೇರಿ ಸೇರಿದಂತೆ ಹಲವು ಆತಂಕಗಳಿಗೆ ಸ್ಪಷ್ಟ ಉತ್ತರ ಸಿಗದೆ ಗ್ರಾಹಕರು ಪರದಾಡುತ್ತಿದ್ದಾರೆ. ಈ ಎಲ್ಲಾ ಆತಂಕಗಳಿಂದ ಗ್ರಾಹಕರು ಪೆಟ್ರೋಲ್ ವಾಹನಗಳ ಬದಲು ಪರ್ಯಾಯ ಇಂಧನಗಳತ್ತ ಮುಖ ಮಾಡುತ್ತಿದ್ದಾರೆ.
ಜುಲೈ ತಿಂಗಳಲ್ಲಿ ಪೆಟ್ರೋಲ್ ಕಾರುಗಳ ಮಾರಾಟ ಕುಸಿದಿದ್ದರೆ, ಮೂಲೆ ಸೇರಿದ್ದ ಡೀಸೆಲ್ ಕಾರುಗಳ ಮಾರಾಟದಲ್ಲಿ ಭಾರಿ ಏರಿಕೆಯಾಗಿದೆ. ಇದೀಗ ಕೆಲ ಕಂಪನಿಗಳು ಮತ್ತೆ ಡೀಸೆಲ್ ಕಾರುಗಳ ಉತ್ಪಾದನೆಯಲ್ಲಿ ತೊಡಗಿದ್ದಾರೆ. ಡೀಸೆಲ್ ಕಾರುಗಳ ಬೆಲೆ ದುಬಾರಿಯಾದರೂ ಗ್ರಾಹತರು ಡೀಸೆಲ್ ಕಾರು ಖರೀದಿಗೆ ಮುಂದಾಗುತ್ತಿದ್ದಾರೆ. ಇಂಧನ ಗೊಂದಲಗಳಿಂದ ದೂರವಿರಲು ಹಲವರು ದುಬಾರಿಯಾದರೂ ಡೀಸೆಲ್ ಕಾರುಗಳಿಗೆ ಮಣೆ ಹಾಕುತ್ತಿದ್ದಾರೆ.
ಇ20 ಆತಂಕದಿಂದ ಎಲೆಕ್ಟ್ರಿಕ್ ಹಾಗೂ ಸಿಎನ್‌ಜಿ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಎಲೆಕ್ಟ್ರಿಕ್ ಕಾರುಗಳ ಬೆಲೆ ದುಬಾರಿಯಾಗಿದೆ. ಜೊತೆಗೆ ಚಾರ್ಜಿಂಗ್ ಸೇರಿದಂತೆ ಮೂಲಭೂತ ಸಮಸ್ಯೆಗಳು ಎದುರಾಗುತ್ತಿದೆ. ಆದರೂ ಇದೀಗ ಇಂಧನ ಸಮಸ್ಯೆಯಿಂದ ಇವಿ ಹಾಗೂ ಸಿಎನ್‌ಜಿ ಕಾರುಗಳ ಮಾರಾಟದಲ್ಲಿ ಭಾರಿ ಏರಿಕೆ ಕಂಡು ಬಂದಿದೆ.