ಕ್ರೆಟಾ, ಸೆಲ್ಟೋಸ್‌ಗೆ ನಡುಕ ಹುಟ್ಟಿಸಲು ನಾಳೆ ರಿಲೀಸ್‌ ಆಗ್ತಿದೆ Nissan Tekton, ಇದರಲ್ಲಿದೆ ಇಂಥಾ ಮಹಾಫೀಚರ್ಸ್‌

Published : Jul 08, 2026, 09:04 PM IST
Nissan Tekton

ಸಾರಾಂಶ

ಜಪಾನ್‌ನ ನಿಸ್ಸಾನ್ ಕಂಪನಿಯು ತನ್ನ ಹೊಚ್ಚಹೊಸ 'ನಿಸ್ಸಾನ್ ಟೆಕ್ಟಾನ್' ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಜುಲೈ 9 ರಂದು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಅತ್ಯಾಧುನಿಕ ಫೀಚರ್ಸ್, ಮೂರು ಇಂಜಿನ್ ಆಯ್ಕೆಗಳು ಮತ್ತು ಆಕರ್ಷಕ ಬೆಲೆಯೊಂದಿಗೆ ಕಾರು ರಿಲೀಸ್‌ ಆಗಲಿದೆ.

ನವದೆಹಲಿ (ಜು.8): ಭಾರತದ ಅತ್ಯಂತ ಜನಪ್ರಿಯ ಹಾಗೂ ಹೆಚ್ಚು ಪೈಪೋಟಿ ಇರುವ ಕಾಂಪ್ಯಾಕ್ಟ್ ಎಸ್‌ಯುವಿ (Compact SUV) ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಜಪಾನ್‌ನ ಪ್ರಖ್ಯಾತ ಕಾರು ತಯಾರಿಕಾ ಸಂಸ್ಥೆಯಾದ ನಿಸ್ಸಾನ್ (Nissan) ಸಜ್ಜಾಗಿದೆ. ಕಂಪನಿಯು ತನ್ನ ಹೊಚ್ಚಹೊಸ ಎಸ್‌ಯುವಿ 'ನಿಸ್ಸಾನ್ ಟೆಕ್ಟಾನ್' (Nissan Tekton) ಅನ್ನು ಜುಲೈ 9 ರಂದು ದೇಶೀಯ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಸದ್ಯ ಭಾರತದಲ್ಲಿ ನಿಸ್ಸಾನ್ ಪೋರ್ಟ್‌ಫೋಲಿಯೊದಲ್ಲಿ ಮ್ಯಾಗ್ನೈಟ್, ಗ್ರ್ಯಾವೈಟ್ ಮತ್ತು ಎಕ್ಸ್-ಟ್ರಯಲ್ ಕಾರುಗಳಿದ್ದು, ಟೆಕ್ಟಾನ್ ಬಿಡುಗಡೆಯಾದ ನಂತರ ನಿಸ್ಸಾನ್ ಲೈನ್‌ಅಪ್‌ನಲ್ಲಿ ಒಟ್ಟು ನಾಲ್ಕು ಮಾದರಿಗಳಾಗಲಿವೆ.

ಮಾಧ್ಯಮ ವರದಿಗಳ ಪ್ರಕಾರ, ನಿಸ್ಸಾನ್ ಟೆಕ್ಟಾನ್ ಕಾರಿನ ಆರಂಭಿಕ ಎಕ್ಸ್-ಶೋರೂಮ್ ಬೆಲೆ ಸರಿಸುಮಾರು 10.49 ಲಕ್ಷ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಇದರ ಟಾಪ್ ಎಂಡ್ ವೇರಿಯೆಂಟ್ ಬೆಲೆ 19.99 ಲಕ್ಷ ರೂಪಾಯಿಗಳವರೆಗೆ (ಎಕ್ಸ್-ಶೋರೂಮ್) ಇರುವ ಸಾಧ್ಯತೆಯಿದೆ. ಈ ಆಕರ್ಷಕ ಬೆಲೆಯಲ್ಲಿ ಬಿಡುಗಡೆಯಾಗುತ್ತಿರುವ ಈ ಕಾರು, ಮಾರುಕಟ್ಟೆಯಲ್ಲಿ ಈಗಾಗಲೇ ಪ್ರಾಬಲ್ಯ ಸಾಧಿಸಿರುವ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರಾಂಡ್ ವಿಟಾರಾ, ಟೊಯೋಟಾ ಹೈರೈಡರ್, ಹೊಂಡಾ ಎಲಿವೇಟ್ ಮತ್ತು ಸ್ಕೋಡಾ ಕುಶಾಕ್‌ನಂತಹ ಜನಪ್ರಿಯ ಎಸ್‌ಯುವಿಗಳಿಗೆ ನೇರ ಪೈಪೋಟಿ ನೀಡಲಿದೆ.

ರೆನಾಲ್ಟ್ ಡಸ್ಟರ್ ಪ್ಲಾಟ್‌ಫಾರ್ಮ್ ಆಧಾರಿತ ಕಾರು

ನಿಸ್ಸಾನ್ ಟೆಕ್ಟಾನ್ ಕಾರನ್ನು ರೆನಾಲ್ಟ್ ಡಸ್ಟರ್ (Renault Duster) ನಿರ್ಮಾಣವಾಗಿರುವ ಅದೇ ಸುಧಾರಿತ ಮಾಡ್ಯುಲರ್ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಸಿದ್ಧಪಡಿಸಲಾಗಿದೆ ಎನ್ನಲಾಗಿದೆ. ಈ ಅತ್ಯಾಧುನಿಕ ಪ್ಲಾಟ್‌ಫಾರ್ಮ್ ನೆರವಿನಿಂದ ನಿಸ್ಸಾನ್ ಕಂಪನಿಯು ಭವಿಷ್ಯದಲ್ಲಿ ಇದೇ ಮಾದರಿಯನ್ನು ಆಧರಿಸಿ ಇನ್ನೂ ಹಲವು ಹೊಸ ಕಾರುಗಳನ್ನು ಮಾರುಕಟ್ಟೆಗೆ ತರಲು ಯೋಜನೆ ರೂಪಿಸಿದೆ.

ಕಾರಿನಲ್ಲಿರಲಿವೆ ಅತ್ಯಾಧುನಿಕ ಪ್ರೀಮಿಯಂ ಫೀಚರ್ಸ್

ವೈಶಿಷ್ಟ್ಯಗಳ ವಿಷಯದಲ್ಲಿ ನಿಸ್ಸಾನ್ ಟೆಕ್ಟಾನ್ ಅತ್ಯಂತ ಪ್ರೀಮಿಯಂ ಲುಕ್ ಹೊಂದಿರಲಿದೆ. ಇದರಲ್ಲಿ ಗ್ರಾಹಕರು ನಿರೀಕ್ಷಿಸಬಹುದಾದ ಪ್ರಮುಖ ಫೀಚರ್ಸ್ ಈ ಕೆಳಗಿನಂತಿವೆ

  • ಪ್ಯಾನೊರಮಿಕ್ ಸನ್‌ರೂಫ್ ಮತ್ತು 6-ವೇ ಪವರ್ ಅಡ್ಜಸ್ಟಬಲ್ ಹಾಗೂ ವೆಂಟಿಲೇಟೆಡ್ ಫ್ರಂಟ್ ಸೀಟುಗಳು.
  • ಡ್ಯುಯಲ್-ಜೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಹಾಗೂ 48 ಬಣ್ಣಗಳ ಆಂಬಿಯೆಂಟ್ ಲೈಟಿಂಗ್ ವ್ಯವಸ್ಥೆ.
  • ಪವರ್ಡ್ ಟೇಲ್‌ಗೇಟ್, 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್.
  • ಗೂಗಲ್ ಅಸಿಸ್ಟೆಂಟ್ (Google Assistant) ಸಪೋರ್ಟ್ ಹೊಂದಿರುವ 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್.
  • ವಯರ್‌ಲೆಸ್ ಫೋನ್ ಚಾರ್ಜರ್ ಮತ್ತು 360-ಡಿಗ್ರಿ ಕ್ಯಾಮೆರಾ ವ್ಯವಸ್ಥೆ.
  • ಪ್ರಮುಖವಾಗಿ, ಪ್ರಯಾಣಿಕರ ಸುರಕ್ಷತೆಗಾಗಿ 17 ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿರುವ 'ಎಡಾಸ್' (ADAS) ಪ್ಯಾಕೇಜ್ ಇರಲಿದೆ.

ಇವೆಲ್ಲದರ ಜೊತೆಗೆ, ಸುದೀರ್ಘ ಪ್ರಯಾಣದ ವೇಳೆ ಹೆಚ್ಚಿನ ಲಗೇಜ್ ಕೊಂಡೊಯ್ಯಲು ನೆರವಾಗುವಂತೆ ಬರೋಬ್ಬರಿ 700 ಲೀಟರ್ ಸಾಮರ್ಥ್ಯದ ಬೃಹತ್ ಬೂಟ್ ಸ್ಪೇಸ್ (Boot Space) ನೀಡಲಾಗುತ್ತಿದೆ.

ಆಕರ್ಷಕ ಮತ್ತು ರಗಡ್ ಡಿಸೈನ್

ಇತ್ತೀಚೆಗಷ್ಟೇ ನಿಸ್ಸಾನ್ ಕಂಪನಿಯು ಈ ಕಾರಿನ ಮೊದಲ ನೋಟದ ಝಲಕ್ ಅನ್ನು ಬಿಡುಗಡೆ ಮಾಡಿತ್ತು. ಈ ಎಸ್‌ಯುವಿಯ ಮುಂಭಾಗದಲ್ಲಿ ದೊಡ್ಡದಾದ ಗ್ರಿಲ್, ಅದರ ಮಧ್ಯಭಾಗದಲ್ಲಿ ನಿಸ್ಸಾನ್ ಲೋಗೋ, ಎಲ್-ಶೇಪ್ (L-Shape) ಎಲ್‌ಇಡಿ ಡಿಆರ್‌ಎಲ್‌ಗಳು, ಎಲ್‌ಇಡಿ ಹೆಡ್‌ಲೈಟ್‌ಗಳು, ರಗಡ್ ಮತ್ತು ಬಲಿಷ್ಠವಾಗಿ ಕಾಣುವ ಫ್ರಂಟ್ ಬಂಪರ್ ಇರಲಿದೆ. ಬಾನೆಟ್‌ನ ಮೇಲೆ 'Tekton' ಎಂದು ಬರೆಯಲಾಗಿರುವ ಬ್ಯಾಡ್ಜಿಂಗ್ ಇರಲಿದ್ದು, ರೂಫ್ ರೈಲ್ಸ್, ಬ್ಲ್ಯಾಕ್ ಫಿನಿಶಿಂಗ್ ಹೊಂದಿರುವ ORVMs (ಸೈಡ್ ಮಿರರ್ಸ್) ಹಾಗೂ 360-ಡಿಗ್ರಿ ಕ್ಯಾಮೆರಾದ ಭಾಗವಾಗಿರುವ ಫ್ರಂಟ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಮೂರು ಬಲಿಷ್ಠ ಇಂಜಿನ್ ಆಯ್ಕೆಗಳು

ನಿಸ್ಸಾನ್ ಟೆಕ್ಟಾನ್ ಒಟ್ಟು ಮೂರು ವಿಭಿನ್ನ ಇಂಜಿನ್ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ.

1.0 ಲೀಟರ್ ಟರ್ಬೊ ಪೆಟ್ರೋಲ್ ಇಂಜಿನ್: ಇದು 99 bhp ಪವರ್ ಮತ್ತು 166 Nm ಟಾರ್ಕ್ ಉತ್ಪಾದಿಸಲಿದ್ದು, ಇದಕ್ಕೆ 6-ಸ್ಪೀಡ್ ಮ್ಯಾನುಯಲ್ ಗೇರ್‌ಬಾಕ್ಸ್ ಜೋಡಿಸುವ ಸಾಧ್ಯತೆಯಿದೆ.

1.3 ಲೀಟರ್ ಟರ್ಬೊ ಪೆಟ್ರೋಲ್ ಇಂಜಿನ್: ಇದು 160 bhp ನಷ್ಟು ಬಲವಾದ ಪವರ್ ಮತ್ತು 280 Nm ಟಾರ್ಕ್ ನೀಡಲಿದ್ದು, ಇದರಲ್ಲಿ 6-ಸ್ಪೀಡ್ ಮ್ಯಾನುಯಲ್ ಹಾಗೂ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಎರಡೂ ಆಯ್ಕೆಗಳು ಲಭ್ಯವಿರಲಿವೆ.

1.8 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಇಂಜಿನ್: ಪರಿಸರಸ್ನೇಹಿ ಹಾಗೂ ಇಂಧನ ಉಳಿತಾಯಕ್ಕೆ ಪೂರಕವಾಗಿರುವ ಈ ಇಂಜಿನ್ ಸುಮಾರು 160 bhp ಪವರ್ ಮತ್ತು 172 Nm ಟಾರ್ಕ್ ನೀಡುವ ನಿರೀಕ್ಷೆಯಿದೆ. ಹೈಬ್ರಿಡ್ (Hybrid) ತಂತ್ರಜ್ಞಾನ ಇರುವುದರಿಂದ ಈ ಕಾರು ಅತ್ಯುತ್ತಮ ಮೈಲೇಜ್ ನೀಡಲಿದ್ದು, ಗ್ರಾಹಕರ ಇಂಧನ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.

 

PREV
Read more Articles on
click me!

Recommended Stories

'ಅಂತರಪಟ' ಖ್ಯಾತಿಯ ನಟಿ ರಾಧ್ಯಾ ರಾಜ್ 10 ವರ್ಷದ ಕನಸು ನನಸು: ಹೊಸ ಕಾರು ಖರೀದಿ ಬೆನ್ನಲ್ಲೇ ಭಾವುಕ ಪೋಸ್ಟ್!
ಕೇವಲ ಕಾರಲ್ಲ ಆತನ ಕನಸು, ಜೀವದ ಹಂಗು ತೊರೆದು ಕೊಚ್ಚಿ ಹೋಗ್ತಿದ್ದ ಕಾರು ಉಳಿಸಲು ಮಾಲೀಕನ ಪ್ರಯತ್ನ