Narendra Modi New Car: ಶಸ್ತ್ರಸಜ್ಜಿತ ಮರ್ಸಿಡೀಸ್ ಮೇಬ್ಯಾಕ್ ಎಸ್ 650 ಗಾರ್ಡ್ಗೆ ಬದಲಾದ ಪ್ರಧಾನಿ!

By Suvarna News  |  First Published Dec 28, 2021, 1:20 PM IST

*ವಿಆರ್‌ 10-ಹಂತದ ರಕ್ಷಣೆ ಒದಗಿಸಲಿರುವ ಮರ್ಸಿಡೀಸ್‌ ಮೇಬ್ಯಾಕ್‌ 
*ಎಸ್‌ಪಿಜಿ ಬೇಡಿಕೆ ಮೇರೆಗೆ ಈ ಶಸ್ತ್ರಸಜ್ಜಿತ ಕಾರಿನ ಪರಿಷ್ಕರಣೆ
*ಇತ್ತೀಚೆಗೆ ಮೇಬ್ಯಾಕ್‌ ಎಸ್‌ 600 ಪ್ಯೂಲಿಮ್ಯಾನ್ ಖರೀದಿಸಿದ್ದ ರಾಷ್ಟ್ರಪತಿ  


Auto Desk: ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೊಸ ಕಾರಿನ ಬೆಲೆ ಎಷ್ಟು ಗೊತ್ತೆ? ಬರೋಬ್ಬರಿ 12 ಕೋಟಿ ರೂ. ಮೋದಿ ಬಳಸುತ್ತಿರುವ ಹೊಸ ಕಾರು ಮರ್ಸಿಡೀಸ್‌ ಮೇಬ್ಯಾಕ್ ಎಸ್‌ 650 ಗಾರ್ಡ್‌ (Mercedes-Maybach S 650 Guard) ಅತಿ ಹೆಚ್ಚಿನ ಸುರಕ್ಷತಾ ಸೌಲಭ್ಯಗಳನ್ನು ಒಳಗೊಂಡಿದೆ. ಇತ್ತೀಚೆಗೆ ಮೋದಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌  (Vladimir Putin)ಅವರನ್ನು ಸ್ವಾಗತಿಸಲು ದೆಹಲಿಯ ಹೈದ್ರಾಬಾದ್‌ ಹೌಸ್‌ಗೆ ಆಗಮಿಸಿದಾಗ ಈ ಕಾರು ಕಾಣಿಸಿಕೊಂಡಿತ್ತು.  ಇದು (VR-10) ವಿಆರ್‌ 10- ಹಂತದ ರಕ್ಷಣೆಯೊಂದಿಗೆ ಬರುತ್ತದೆ. BMW ಹಿಂದೆ ಬಳಸುತ್ತಿದ್ದ ಮಾದರಿಯನ್ನು ತಯಾರಿಸುವುದನ್ನು ನಿಲ್ಲಿಸಿದ ಕಾರಣ  ಈ ಹೊಸ ಕಾರುಗಳು ಅಪ್‌ಗ್ರೇಡ್ ಮಾಡಲಾಗಿದೆ. 

ಭದ್ರತಾ ವಿವರಗಳ ಖರೀದಿಗೆ ಸಂಬಂಧಿಸಿದ ನಿರ್ಧಾರಗಳು ವಿವಿಧ ಮಾನಡಂಡಗಳನ್ನು ಆಧರಿಸಿವೆ. ಹಾಗಾಗಿ ಈ ನಿರ್ಧಾರಗಳನ್ನು ರಕ್ಷಣೆ ಪಡೆಯುವವರ ಅಭಿಪ್ರಾಯಗಳನ್ನು ತೆಗೆದುಕೊಳ್ಳದೆ SPG ಸ್ವತಂತ್ರವಾಗಿ ತೆಗೆದುಕೊಳ್ಳುತ್ತದೆ. ಹೊಸ ಕಾರಿನ ಭದ್ರತಾ ವೈಶಿಷ್ಟ್ಯಗಳ ಕುರಿತು ವ್ಯಾಪಕವಾದ ಚರ್ಚೆಯು ರಾಷ್ಟ್ರೀಯ ಹಿತಾಸಕ್ತಿಯಲ್ಲಿಲ್ಲ ಏಕೆಂದರೆ ಇದು  ಸಾಕಷ್ಟು ಅನಗತ್ಯ ವಿವರಗಳನ್ನು ಬಹಿರಂಗಪಡಿಸುತ್ತದೆ. ಹಾಗಾಗಿ ಇದು ಪ್ರಧಾನಿ ಜೀವಕ್ಕೆ ಅಪಾಯ ತರಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿ ಮೋದಿ ಯಾವ ಕಾರುಗಳನ್ನು ಬಳಸಬೇಕೆಂಬುದರ ಬಗ್ಗೆ ಯಾವುದೇ ಆದ್ಯತೆಯನ್ನು ನೀಡಿಲ್ಲ. ಆದರೆ ಹಲವು ಬಾರಿ ವಿಐಪಿಗಳು ತಾವು ಬಳಸುವ ಕಾರುಗಳ ಮಾದರಿ ಹೇಗಿರಬೇಕೆಂದು ಹೇಳುತ್ತಾರೆ. ಈ ಹಿಂದೆ ಪ್ರಧಾನಿಗಾಗಿ ಖರೀದಿಸಲಾಗಿದ್ದ ರೇಂಜ್ ರೋವರ್‌ಗಳನ್ನು ಸೋನಿಯಾ ಗಾಂಧಿ ಬಳಸುತ್ತಿದ್ದರು.

Latest Videos

ಇನ್ನು ಇದಕ್ಕೂ ಮುನ್ನ ಮೋದಿ ಬಳಸುತ್ತಿದ್ದ ಕಾರುಗಳೆಂದರೆ, ರೇಂಜ್‌ ರೋವರ್‌ ವೋಗ್‌  (Range Rover Vogue)ಮತ್ತು ಟೊಯೋಟೊ ಲ್ಯಾಂಡ್‌ ಕ್ರೂಸರ್‌ (toyoto land Cruiser). ಮರ್ಸಿಡೀಸ್‌ ಮೇಬ್ಯಾಕ್‌ ಎಸ್‌ 650 ಇದರ ಪರಿಷ್ಕೃತ ಆವೃತ್ತಿಯಾಗಿದೆ. ಮರ್ಸಿಡೀಸ್‌ ಮೇಬ್ಯಾಕ್ ಎಸ್‌ 650 ತನ್ನ ಕಾರುಗಳಲ್ಲಿ ಅತ್ಯುನ್ನತ ಮಟ್ಟದ ಶಸ್ತ್ರಸಜ್ಜಿತ ರಕ್ಷಣೆ ಒದಗಿಸುತ್ತದೆ. ಈ ಸಲೂನ್‌ ಕಾರಿನ ಅಪ್‌ಗ್ರೇಡೆಡ್‌ ಕಿಟಕಿ ಗಾಜುಗಳು ಮತ್ತು ಇತರ ಭಾಗಗಳು ಎಕೆ-47 ರೈಫಲ್‌ ಸೇರಿದಂತೆ ಇತರ ಯಾವುದೇ ಬುಲೆಟ್‌ಗಳನ್ನು ತಡೆಯಬಲ್ಲದು.

ಕಾರಿನ ವಿಶೇಷತೆಗಳೇನು?

*ಎಕೆ-47 ರೈಫಲ್‌ನಿಂದ ದಾಳಿಯಾದರೂ ಕಾರಿನೊಳಗಿದ್ದವರಿಗೆ ರಕ್ಷಣೆ

*2 ಮೀಟರ್‌ ವ್ಯಾಪ್ತಿಯಲ್ಲಿ 15 ಕೇಜಿ ಟಿಎನ್‌ಟಿ ಸ್ಫೋಟವಾದರೂ ರಕ್ಷಣೆ

*ವಿಷಾನಿಲ ದಾಳಿಯಾದರೆ ಕಾರಿನಲ್ಲಿರುವವರಿಗೆ ಗಾಳಿ ಪೂರೈಕೆಗೆ ವ್ಯವಸ್ಥೆ

*ಕಾರಿನ ಮೇಲೆ ನೇರ ದಾಳಿ ನಡೆದರೂ ಹಾನಿಯಾಗದಂತೆ ರಕ್ಷಾಕವಚ

*ಏನೇ ಹಾನಿಯಾದರೂ ತ್ವರಿತ ಪಾರಾಗುವ ವಿಶೇಷ ರನ್‌-ಫ್ಲಾಟ್‌ ಟೈರ್‌

ಯಾವುದೇ ಸ್ಫೋಟದಿಂದ ಕಾರಿನೊಳಗಿನ ವ್ಯಕ್ತಿಗಳ ರಕ್ಷಣೆ!

ಈ ಕಾರು ಎಕ್ಸ್‌ಪ್ಲೋಸೀವ್‌ ರೆಸಿಸ್ಟೆಂಟ್‌ (ERV) 2010 ರೇಟಿಂಗ್‌ ಹೊಂದಿದ್ದು, ಕೇವಲ ಎರಡು ಮೀಟರ್‌ ಅಂತರದಲ್ಲಿ  ಕೂಡ 15 ಕೆಜಿ ಟಿಎನ್‌ಟಿ (TNT) ಸ್ಫೋಟದಿಂದ ಕಾರಿನಲ್ಲಿನ ಪ್ರಯಾಣಿಕರನ್ನು ರಕ್ಷಿಸುವ ಸಾಮರ್ಥ್ಯ ಹೊಂದಿದೆ. ಕಿಟಕಿಯ ಗಾಜುಗಳಿಗೆ ಒಳಗಿನಿಂದ ಪಾಲಿಕಾರ್ಬೊನೇಟ್ ಲೇಪನ ಮಾಡಲಾಗಿದ್ದು, ವಾಹನದ ಒಳಭಾಗ ಯಾವುದೇ ನೇರ ಸ್ಫೋಟದಿಂದ ಕಾರಿನೊಳಗಿನ ವ್ಯಕ್ತಿಗಳನ್ನು ರಕ್ಷಿಸುವಂತೆ ಸಜ್ಜಾಗಿದೆ. ಜೊತೆಗೆ, ಯಾವುದೇ ಅನಿಲ ದಾಳಿಯನ್ನು ತಡೆಯಲು ಇದರ ಕ್ಯಾಬಿನ್‌ಗಳು ಪ್ರತ್ಯೇಕ ಏರ್‌ ಸಪ್ಲೈ ಅನ್ನು ಕೂಡ ಒಳಗೊಂಡಿದೆ.

ಐಷಾರಾಮಿ ಇಂಟೀರಿಯರ್ ಹೊಂದಿರುವ ಮೇಬ್ಯಾಕ್‌!

ಮರ್ಸಿಡೀಸ್‌ ಮೇಬ್ಯಾಕ್‌ ಎಸ್‌- ಗಾರ್ಡ್ 516 ಬಿಎಚ್‌ಪಿ (bhp) ಮತ್ತು ಸುಮಾರು 900 ಎನ್‌ಎಂ (Nm) ಗರಿಷ್ಠ ಟಾರ್ಕ್ ಹಾಗೂ  6.0-ಲೀಟರ್ ಟ್ವಿನ್-ಟರ್ಬೊ V12 ಎಂಜಿನ್‌ನ ಪವರ್ ಹೊಂದಿದೆ. ಇದರ ಗರಿಷ್ಠ ವೇಗವನ್ನು  ಗಂಟೆಗೆ 160 ಕಿಮೀ (kmph) ಗೆ ನಿರ್ಬಂಧಿಸಲಾಗಿದೆ. ಕಾರು ವಿಶೇಷವಾದ ರನ್-ಫ್ಲಾಟ್ ಟೈರ್‌ಗಳನ್ನು ಕೂಡ ಒಳಗೊಂಡಿರುತ್ತದೆ. ಇದು ಹಾನಿ ಅಥವಾ ಪಂಕ್ಚರ್‌ನ ಸಂದರ್ಭದಲ್ಲಿ ತ್ವರಿತವಾಗಿ ಕಾರಿನಿಂದ ಹೊರಹೋಗುವುದಕ್ಕೆ ಅನುವು ಮಾಡಿಕೊಡುತ್ತದೆ. ಇತರ ಸೌಕರ್ಯಗಳು ಸ್ಟ್ಯಾಂಡರ್ಡ್ ಮೇಬ್ಯಾಕ್ ಎಸ್‌-ಕ್ಲಾಸ್‌ ನಂತೆಯೇ ಇವೆ. ಸೀಟ್ ಮಸಾಜ್‌ಗಳೊಂದಿಗೆ ಐಷಾರಾಮಿ ಇಂಟೀರಿಯರ್ ಸೇರಿದಂತೆ, ಆಸನಗಳನ್ನು ಆರಾಮದಾಯಕವಾಗಿ ಅಳವಡಿಸಲಾಗಿದೆ. ಇದರಲ್ಲಿ ಲೆಗ್‌ರೂಂ ಸ್ಥಳಾವಕಾಶ ಹೆಚ್ಚಿರುತ್ತದೆ.

ಪ್ರತಿ ಕಾರಿನ ಬೆಲೆ 12 ಕೋಟಿ ರೂ!

ಸಾಮಾನ್ಯವಾಗಿ ದೇಶದ ಪ್ರಧಾನಮಂತ್ರಿಗಳ ಸುರಕ್ಷತೆಯ ಜವಾಬ್ದಾರಿ ಹೊತ್ತಿರುವ ವಿಶೇಷ ರಕ್ಷಣಾ ತಂಡ ಅಥವಾ ಎಸ್‌ಪಿಜಿ ಹೊಸ ಕಾರಿನ ಬೇಡಿಕೆ ಇಡುತ್ತಾರೆ. ಎಸ್‌ಪಿಜಿ ಮೊದಲಿಗೆ ರಕ್ಷಣಾ ಅಗತ್ಯತೆಗಳನ್ನು ಪರಿಶೀಲಿಸುತ್ತಾರೆ ನಂತರ ದೇಶದ ನಾಯಕರ ವಾಹನದ ಪರಿಷ್ಕರಣೆಯ ಅಗತ್ಯವಿದೆಯೇ ಎಂಬುದನ್ನು ವಿಶ್ಲೇಷಿಸುತ್ತಾರೆ. ಸದ್ಯ ಎಸ್‌ಪಿಜಿ (SPG) ಎರಡು ಸಮಾನ ಕಾರುಗಳಿಗೆ ಬೇಡಿಕೆ ಇರಿಸಿದೆ. ಇನ್ನೊಂದು ಭದ್ರತಾ ವಾಹನವಾಗಿರಲಿದೆ. ಪ್ರತಿ ಕಾರಿನ ಬೆಲೆ 12 ಕೋಟಿ ರೂ.ಗಳಾಗಿರಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಬುಲೆಟ್‌ ಪ್ರೂಫ್‌ ಮಹೀಂದ್ರ ಸ್ಕಾರ್ಪಿಯೋ ಬಳಸುತ್ತಿದ್ದರು. ನಂತರ ಬಿಎಂಡಬ್ಲ್ಯು 7 ಸರಣಿಯ ಅತಿ ಹೆಚ್ಚಿನ ಭದ್ರತಾ ಆವೃತ್ತಿಗೆ ಬದಲಾಗಿದ್ದರು. ನಂತರ ಲ್ಯಾಂಡ್‌ ರೋವರ್‌ ರೇಂಜ್‌ ರೋವರ್‌ ವೋಗ್‌ ಹಾಗೂ ಬಳಿಕ ಟೊಯೋಟಾ ಲ್ಯಾಂಡ್‌ ಕ್ರೂಸರ್‌ ಬಳಕೆ ಮಾಡುತ್ತಿದ್ದರು.

ಇದನ್ನೂ ಓದಿ:

1) Top Cars of 2021: ಇಲ್ಲಿದೆ ಈ ವರ್ಷದ ಟಾಪ್ ಕಾರುಗಳ ಪಟ್ಟಿ: ನಿಮ್ಮ ಆಯ್ಕೆ ಯಾವುದು?

2) BMTC Electric Bus: ರಾಜಧಾನಿಯಲ್ಲಿ ಎಲೆಕ್ಟ್ರಿಕ್ ಬಸ್ ಶುರು: ಒಮ್ಮೆ ಚಾರ್ಜ್ ಮಾಡಿದರೆ 120km ಸಂಚಾರ!

3) Anand Mahindra Offer ಕೈ-ಕಾಲಿಲ್ಲದ ಪರಿಶ್ರಮಿಗೆ ಆನಂದ್ ಮಹೀಂದ್ರ ಉದ್ಯೋಗ ಆಫರ್, ಮುಗ್ದ ಸಾಧಕನ ಹಿಂದಿಂದೆ ನೋವಿನ ಕತೆ!

click me!