Maruti Suzuki Exports: 2021ರಲ್ಲಿ ಅತಿ ಹೆಚ್ಚು ವಾಹನಗಳನ್ನು ರಫ್ತು ಮಾಡಿದ ಮಾರುತಿ ಸುಜುಕಿ!

By Suvarna NewsFirst Published Jan 5, 2022, 7:16 PM IST
Highlights
  • ದೇಶೀಯ ಮಾರುಕಟ್ಟೆ ಕುಂಠಿತವಾದರೂ ಕೈಬಿಡದ ವಿದೇಶಿ ಗ್ರಾಹಕರು
  • ಅನೇಕ ಕಂಪನಿಗಳಿಗೆ ರಫ್ತಿನಿಂದ ಭಾರಿ ಲಾಭ
  • ಮಾರುತಿ ಸುಜುಕಿಯಿಂದ 2 ಲಕ್ಷಕ್ಕೂ ಹೆಚ್ಚು ವಾಹನಗಳ ರಫ್ತು

Auto Desk: ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ (Maruti Suzuki) ಇಂಡಿಯಾ ಲಿಮಿಟೆಡ್‌ (ಎಂಎಸ್‌ಐಎಲ್‌-MSIL) 2021ನೇ ಸಾಲಿನಲ್ಲಿ 2,05,450 ವಾಹನಗಳನ್ನು ರಫ್ತು (export) ಮಾಡಿರುವುದಾಗಿ ತಿಳಿಸಿದೆ. ಇದು ಯಾವುದೇ ಕ್ಯಾಲೆಂಡರ್‌ ವರ್ಷಗಳಿಗೆ ಹೋಲಿಸಿದರೆ ಅತಿ ಹೆಚ್ಚಿನ ರಫ್ತು ಪ್ರಮಾಣವಾಗಿದೆ ಎಂದು ಕಂಪನಿ ತಿಳಿಸಿದೆ.ಕೋವಿಡ್‌ ಸಾಂಕ್ರಾಮಿಕದ ಎರಡನೇ ಅಲೆ, ಸುದೀರ್ಘ ಲಾಕ್‌ಡೌನ್‌ಗಳು (lockdown), ಚಿಪ್‌ ಕೊರತೆ, ಕಚ್ಚಾ ವಸ್ತುಗಳ ಬೆಲೆ ಏರಿಕೆ, ಅಂಗಡಿ, ಮಳಿಗೆಗಳಿಗೆ ಬರಲು ಹಿಂಜರಿದ ಸಾರ್ವಜನಿಕರು ಸೇರಿದಂತೆ ಹಲವು ಕಾರಣಗಳಿಂದ 2021ರಲ್ಲಿ ದೇಶೀಯ ವಾಹನಗಳ ಮಾರಾಟ ಪ್ರಮಾಣ ಗಣನೀಯ ಇಳಿಕೆ ಕಂಡಿತ್ತು. ಇದರಿಂದ ಅನೇಕ ಆಟೊಮೊಬೈಲ್‌ (automobile) ಕಂಪನಿಗಳು ನಷ್ಟಕ್ಕೆ ಸಿಲುಕುವ ಭೀತಿ ಎದುರಿಸುತ್ತಿದ್ದವು.

ಆಗ ಅವರಿಗೆ ವರದಾನವಾಗಿದ್ದು, ವಾಹನಗಳ ರಫ್ತು ವಹಿವಾಟು.ಭಾರತ ದೇಶಕ್ಕೆ ಹೋಲಿಸಿದರೆ ಇತರ ರಾಷ್ಟ್ರಗಳಲ್ಲಿ ಕೋವಿಡ್‌ ಪರಿಸ್ಥಿತಿ ಭಿನ್ನವಾಗಿದ್ದಿದ್ದರಿಂದ ಬಹುತೇಕ ಆಟೊಮೊಬೈಲ್‌ ಕಂಪನಿಗಳ ರಫ್ತು ವಹಿವಾಟು ಪ್ರಮಾಣ ಹೆಚ್ಚಳಗೊಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಾಂಕ್ರಾಮಿಕದ ಪರಿಣಾಮ ಕಡಿಮೆಯಾಗಿದ್ದು, ಉತ್ಪಾದನೆ ಸಾಮಾನ್ಯ ಹಂತಕ್ಕೆ ತಲುಪಿದೆ. ಆದರೆ, ಭಾರತದಲ್ಲಿ ಮಾತ್ರ ಇನ್ನೂ ನಿಧಾನಗತಿಯಲ್ಲಿಯೇ ಸಾಗುತ್ತಿದೆ.

ಇದನ್ನೂ ಓದಿ: Auto Sales 2021: ಸಾಕಷ್ಟು ಅಡೆತಡೆಗಳ ನಡುವೆಯೂ ಶೇ.27ರಷ್ಟು ಮಾರಾಟದ ಪ್ರಗತಿ ಸಾಧಿಸಿದ ಆಟೊಮೊಬೈಲ್ ಕ್ಷೇತ್ರ!

ಎಂಎಸ್‌ಐಎಲ್‌ನ ಎಂಡಿ (MD) ಹಾಗೂ ಸಿಇಒ (CEO) ಕೆನಿಚಿ ಆಯುಕಾವಾ, “ಮಾರುತಿ ಸುಜುಕಿ, ಕೇಂದ್ರ ಸರ್ಕಾರದ ಮೇಕ್‌ ಇನ್‌ ಇಂಡಿಯಾ ಪರಿಕಲ್ಪನೆಯನ್ನು ಜಗತ್ತಿಗೆ ಪರಿಚಯಿಸಲು ಬದ್ಧವಾಗಿದೆ. ಈ ರಫ್ತು ಮೈಲಿಗಲ್ಲು, ನಮ್ಮ ಕಾರುಗಳ ಗುಣಮಟ್ಟ, ತಂತ್ರಜ್ಞನ, ವಿಶ್ವಾಸಾರ್ಹತೆ, ಕಾರ್ಯಕ್ಷಮತೆ ಮತ್ತು ಕೈಗೆಟಕುವ ದರದ ಬಗ್ಗೆ ವಿಶ್ವಾದ್ಯಂತದ ಗ್ರಾಹಕರಿಗೆ ಇರುವ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ” ಎಂದಿದ್ದಾರೆ.

ಇದಕ್ಕೆ ನಾವು ವಿಶ್ವಾದ್ಯಂತ ಇರುವ ಸುಜುಕಿ ಮೋಟಾರ್‌ ಕಾರ್ಪೊರೇಟರ್‌ ಹಾಗೂ ಅದರ ವಿತರಕರ ಶ್ರಮವನ್ನು ಶ್ಲಾಘಿಸಬೇಕು. ಅವರ ವ್ಯಾಪ್ತಿ ಮತ್ತು ಬೆಂಬಲ, ವಿಶೇಷವಾಗಿ ಇಂತಹ ಸವಾಲಿನ ಸಮಯದಲ್ಲಿ ಕಂಪನಿಗೆ ಸಾಕಷ್ಟು ನೆರವು ನೀಡಿದೆ. ಜಾಗತಿಕ ಗ್ರಾಹಕರು ಕಂಪನಿಯ ಮೇಲೆ ಇರಿಸಿರುವ ವಿಶ್ವಾಸವನ್ನು ಉಳಿಸಿಕೊಂಡು, ಈ ಮೈಲಿಗಲ್ಲನ್ನು ಮುಂದುವರಿಸುವುದು ಕಂಪನಿಯ ಮುಂದಿನ ಗುರಿಯಾಗಲಿದೆ ಎಂದರು.

ಇದನ್ನೂ ಓದಿ: Car Price Hike 2022 ಮಾರುತಿ ಸುಜುಕಿ to ಟೊಯೋಟಾ, ಇಲ್ಲಿದೆ ಹೊಸ ವರ್ಷದಿಂದ ಬೆಲೆ ಹೆಚ್ಚಿಸಿದ ಕಾರು ಕಂಪನಿ ಲಿಸ್ಟ್!

ಎಂಎಸ್‌ಐಎಲ್‌ 1986-97ರಲ್ಲಿ ವಾಹನಗಳ ರಫ್ತು ವಹಿವಾಟು ಆರಂಭಿಸಿತು. ಇದರ ಮೊದಲ ಬೃಹತ್‌ ಕನ್‌ಸೈನ್‌ಮೆಂಟ್‌ ಅನ್ನು ಹಂಗೇರಿಗೆ (hungary) ರಫ್ತು ಮಾಡಲಾಗಿತ್ತು. ಈಗ ಈ ಕಂಪನಿ 100ಕ್ಕೂ ಹೆಚ್ಚು ದೇಶಗಳಿಗೆ ತಮ್ಮ ವಾಹನಗಳನ್ನು ತಲುಪಿಸುವ ಬಹುದೊಡ್ಡ ರಫ್ತು ಪ್ರಮಾಣ ಹೊಂದಿರುವ ಕಂಪನಿಯಾಗಿದೆ. ಇಲ್ಲಿಯವರೆಗೆ ಎಂಎಸ್‌ಐಎಲ್‌ 21.75 ಲಕ್ಷ ವಾಹನಗಳನ್ನು ರಫ್ತು ಮಾಡಿದೆ. ಮಾರುತಿ ಸುಜುಕಿಯ ವಾಹನಗಳು ಲ್ಯಾಟಿನ್‌ ಅಮೆರಿಕ, ಏಷಿಯನ್‌, ಆಫ್ರಿಯಾ, ಮಧ್ಯ ಪ್ರಾಚ್ಯ ಮತ್ತು ನೆರೆಯ ಪ್ರದೇಶಗಳು ಸೇರಿದಂತೆ ವಿಶ್ವಾದ್ಯಂತಹ ಜಾಗತಿಕ ಗ್ರಾಹಕರ ನಡುವೆ ಜನಪ್ರಿಯವಾಗಿದೆ ಎಂದು ಕಂಪನಿ ಪ್ರಕಟಣೆ ತಿಳಿಸಿದೆ.

2021ರ ಡಿಸೆಂಬರ್‌ ತಿಂಗಳಲ್ಲಿ ಮಾರುತಿ ಸುಜುಕಿ ವಾಹನಗಳ ಮಾರಾಟ 1,23,016 ದಾಖಲಾಗಿದೆ. ಇದು ಶೇ.12.6ರಷ್ಟು ಮಾರಾಟದ ಕುಸಿತವಾಗಿದೆ. 2020ರ ಡಿಸೆಂಬರ್‌ನಲ್ಲಿ ಕಂಪನಿಯ 1,40,754 ವಾಹನಗಳು ಮಾರಾಟವಾಗಿದ್ದವು. ಆದರೆ, ಇದೊಂದೇ ತಿಂಗಳಲ್ಲಿ ವಾಹನಗಳ ರಫ್ತು ಪ್ರಮಾಣ ದುಪ್ಪಟ್ಟು ಹೆಚ್ಚಾಗಿದೆ. ಡಿಸೆಂಬರ್‌ ತಿಂಗಳಲ್ಲಿ ಒಟ್ಟು 22,820 ವಾಹನಗಳು ರಫ್ತಾಗಿವೆ. 2020ರ ಡಿಸೆಂಬರ್‌ನಲ್ಲಿ ಇದು 9,938ರಷ್ಟಿತ್ತು ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿCar Sales ಮಾರಾಟದಲ್ಲಿ ಶೇ.4 ರಷ್ಟು ಕುಸಿತ ಕಂಡ ಮಾರುತಿ ಸುಜುಕಿ!

ಇದೆಲ್ಲದರ ನಡುವೆಯೂ, ಮಾರುತಿ ಸುಜುಕಿಯ ಎಂಟು ವಾಹನಗಳು ದೇಶದ ಅತಿ ಹೆಚ್ಚು ಮಾರಾಟವಾದ ವಾಹನಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.2022ರಲ್ಲಿಯೂ ಕಂಪನಿ ಹಲವು ಹೊಸ ಕಾರುಗಳು, ಎಸ್‌ಯುವಿ (SUV) ಹಾಗೂ ಸಿಎನ್‌ಜಿ(CNG) ಕಾರುಗಳ ಬಿಡುಗಡೆಗೆ ಸಜ್ಜಾಗಿದೆ.

click me!