
ಬೆಂಗಳೂರು: ಕೋಟ್ಯಂತರ ವಾಹನಗಳ ದಟ್ಟಣೆ, ಟ್ರಾಫಿಕ್ ಗೆ ಹೆಸರುವಾಸಿಯಾಗಿರುವ ಬೆಂಗಳೂರಿನ ರಸ್ತೆಗಳಲ್ಲಿ 20 ನೇ ಶತಮಾನದ ಆರಂಭದವರೆಗೆ ಕುದುರೆ ಬಂಡಿಗಳು, ಎತ್ತಿನ ಗಾಡಿಗಳು ಮತ್ತು ಸಾಂಪ್ರದಾಯಿಕ ಸಾರಿಗೆ ಸಾಧನಗಳೇ ಶ್ರೇಷ್ಠವಾಗಿತ್ತು. ಆದರೆ, 1901 ರಲ್ಲಿ ಬೆಂಗಳೂರಿನ ರಸ್ತೆಗೆ ಮೊದಲ ಕಾರು ಬರುವ ಮೂಲಕ ನಗರದ ಸಾರಿಗೆ ಇತಿಹಾಸದಲ್ಲೇ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಿತು.
ಭಾರತದಲ್ಲಿ ಮೊದಲ ಬಾರಿಗೆ 1897 ರಲ್ಲಿ ಕೋಲ್ಕತ್ತಾದಲ್ಲಿ ಹಾಗೂ 1898 ರಲ್ಲಿ ಮುಂಬೈನಲ್ಲಿ ಕಾರುಗಳು ಕಾಣಿಸಿಕೊಂಡವು. ಅದಾಗಿ ಕೆಲವೇ ವರ್ಷಗಳಲ್ಲಿ, ಅಂದರೆ 1901 ರಲ್ಲಿ ಬೆಂಗಳೂರಿನ ರಸ್ತೆಗಳಿಗೂ ಕಾರು ಬಂತು. 1864 ರಲ್ಲೇ ರೈಲು ಸಂಪರ್ಕ ಹೊಂದಿದ್ದ ಬೆಂಗಳೂರು ನಗರವು, ಹೊಸ ತಂತ್ರಜ್ಞಾನ ಹಾಗೂ ಸುಧಾರಿತ ಸಾರಿಗೆಗೆ ಬಹಳ ಬೇಗ ಒಗ್ಗಿಕೊಂಡಿತು. ಪ್ರಾಣಿಗಳ ಸಹಾಯವಿಲ್ಲದೆ ಸ್ವಯಂ ಚಾಲಿತವಾಗಿ ಚಲಿಸುವ ಈ ನೂತನ 'ಯಂತ್ರ'ವನ್ನು ನೋಡಿ ಅಂದಿನ ಜನರು ಆಶ್ಚರ್ಯ ಗೊಂಡಿದ್ದರು.
ಆರಂಭಿಕ ದಿನಗಳಲ್ಲಿ ಕಾರು ಖರೀದಿಸುವುದು ಸಾರ್ವಜನಿಕರಿಗೆ ಅಥವಾ ಜನ ಸಾಮಾನ್ಯರಿಗೆ ಸಾಧ್ಯವಾಗುತ್ತಿರಲಿಲ್ಲ. ಮೈಸೂರಿನ ಮಹಾರಾಜರು, ರಾಜಮನೆತನದ ನಾಯಕರು, ದಿವಾನರು, ಪ್ರಭಾವಿ ಶ್ರೀಮಂತ ಕುಟುಂಬಗಳು ಜೊತೆಗೆ ಹಿರಿಯ ಬ್ರಿಟಿಷ್ ಅಧಿಕಾರಿಗಳ ಬಳಿ ಮಾತ್ರ ಕಾರುಗಳಿದ್ದವು.
ಆ ಕಾಲದಲ್ಲಿ ಡಾಂಬಾರ್ ಕಾಣದ ಕಚ್ಚಾ ರಸ್ತೆಗಳಿದ್ದುದರಿಂದ, ಕಾರುಗಳು ಪದೇ ಪದೇ ಪಂಕ್ಚರ್ ಆಗುವುದು ಹಾಗೂ ಕೆಟ್ಟು ನಿಲ್ಲುವುದು ಸಾಮಾನ್ಯ ವಿಷಯವಾಗಿತ್ತು. ನಗರದ ಮೂಲಸೌಕರ್ಯಗಳು ಮೋಟಾರು ವಾಹನಗಳಿಗೆ ಸೂಕ್ತವಾಗಿ ರೂಪುಗೊಳ್ಳುವ ಮುನ್ನವೇ ಈ ಆಧುನಿಕ ಯಂತ್ರಗಳು ಬೆಂಗಳೂರಿನ ಬೀದಿಗೆ ಬಂದಿತ್ತು.
1901 ರಲ್ಲಿ ಪ್ರತ್ಯಕ್ಷವಾದ ಕಾರುಗಳು, 1903 ರ ವೇಳೆಗೆ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ನಿಯಮಿತವಾಗಿ ಸಂಚರಿಸಲು ಪ್ರಾರಂಭಿಸಿದವು. ಮೈಸೂರು ಸಂಸ್ಥಾನದ ರಾಜಮನೆತನ ಮತ್ತು ಅಧಿಕಾರಿಗಳ ಬಳಕೆಯಲ್ಲಿದ್ದ ಈ ವಾಹನಗಳು, ನಗರದ ದೈನಂದಿನ ಸಾರಿಗೆ ವ್ಯವಸ್ಥೆಯ ಪ್ರಮುಖ ಅಂಗವಾಗಿ ಚೇಂಜ್ ಆಗಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ.
ಬೆಂಗಳೂರಿನಲ್ಲಿ ಕಾರುಗಳ ಜನಪ್ರಿಯತೆ ಹೆಚ್ಚುತ್ತಿದ್ದಂತೆ, ವಾಹನಗಳ ಉತ್ಪಾದನೆ ಮತ್ತು ಸೇವಾ ಕ್ಷೇತ್ರವೂ ಬೆಳೆಯ ತೊಡಗಿತು. 1906 ರ ವೇಳೆಗೆ, ಬೆಂಗಳೂರಿನ ಕಾರ್ಖಾನೆಯೊಂದರಲ್ಲಿ ಸುಮಾರು 150 ಉದ್ಯೋಗಿಗಳು ಸೈಕಲ್ ಹಾಗೂ ಕಾರುಗಳ ನಿರ್ಮಾಣದಲ್ಲಿ ತೊಡಗಿದ್ದರು. ಇಲ್ಲಿ ತಯಾರಾದ 6.5 ಅಶ್ವಶಕ್ತಿ (HP) ಹೊಂದಿದ್ದ 3-ಸೀಟರ್ ಕಾರೊಂದನ್ನು 'ಪ್ರಿನ್ಸ್ ಆಫ್ ವೇಲ್ಸ್' ಬಳಕೆಗೆ ನೀಡಲಾಗಿತ್ತು ಎಂಬುದು ವಿಶೇಷ.
1911 ರಲ್ಲಿ, ನಗರದ ಆಟೋಮೊಬೈಲ್ ವಹಿವಾಟು ಮತ್ತಷ್ಟು ಸಂಘಟಿತ ರೂಪ ಪಡೆಯಿತು. ಬ್ರಿಟಿಷ್ ಎಂಜಿನಿಯರ್ ಹಾಗೂ ಆಟೋಮೊಬೈಲ್ ಉತ್ಸಾಹಿ ಎಚ್.ಇ. ಓರ್ಮೆರೋಡ್ (H.E. Ormerod) ಎಂಬುವರು ಅಂದಿನ ಸೌತ್ ಪೆರೇಡ್ ರಸ್ತೆಯಲ್ಲಿ ಅಂದರೆ ಇಂದಿನ ಎಂ.ಜಿ. ರೋಡ್ 'ಕಣ್ಣನ್ ಬಿಲ್ಡಿಂಗ್'ನಲ್ಲಿ ನಗರದ ಮೊದಲ ಕಾರು ಶೋರೂಂ ಮತ್ತು ವರ್ಕ್‌ಶಾಪ್ ಪ್ರಾರಂಭಿಸಿದರು. ಅವರು ಕ್ಯಾಲ್ಥೋರ್ಪ್, ಎಂಪೈರ್, ಫೋರ್ಡ್ ಹಾಗೂ ಸ್ಟುಡ್‌ಬೇಕರ್ ಕಂಪನಿಗಳ ಕಾರುಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕಿಟ್ಟಿದ್ದರು. ಅದನ್ನು ನೋಡಲೆಂದೆ ಜನರು ಗುಂಪು ಗುಂಪಾಗಿ ಸೇರುತ್ತಿದ್ದರು. ಬೆಂಗಳೂರಿನಿಂದ ಪೂನಾ ಮೂಲಕ ಬಾಂಬೆಗೆ ಕಾರಿನಲ್ಲಿ ಹೋದ ಮೊದಲ ವ್ಯಕ್ತಿ ಓರ್ಮೆರೋಡ್ ಅವರು ನಾಲ್ಕು ದಿನಗಳಲ್ಲಿ ತಮ್ಮ ಪ್ರಯಾಣ ಪೂರ್ಣಗೊಳಿಸಿದರು.
ಬೆಂಗಳೂರಿನಲ್ಲಿ ಮೊದಲ ಕಾರುಗಳು 1901 ರ ಸುಮಾರಿಗೆ ಕಾಣಿಸಿಕೊಂಡವು, ಆದರೆ ಆ ಒಂದೇ ವಾಹನದ ನಿರ್ದಿಷ್ಟ ಮಾಲೀಕತ್ವದ ದಾಖಲೆಗಳು ಇತಿಹಾಸದಲ್ಲಿ ಕಳೆದುಹೋಗಿವೆ. 1902–1903ರಲ್ಲಿ ಮೈಸೂರು ಮಹಾರಾಜರು ಆರಂಭಿಕ ಫ್ರೆಂಚ್ ಪಿಯುಗಿಯೊ ಕಾರನ್ನು ಖರೀದಿಸಿದರು. ಈ ಮೂಲಕ ರಾಜಮನೆತನವು ರಾಜ್ಯದಲ್ಲಿ ಆರಂಭಿಕ ಮತ್ತು ಪ್ರಮುಖ ಮಾಲೀಕರಲ್ಲಿ ಒಂದಾಯಿತು . ಅದು ದೆಹಲಿಯ ಮೆಸರ್ಸ್ ಟ್ಯೂನರ್ ಹೋರೆ ಮತ್ತು ಕಂಪನಿಯ ಫ್ರೆಂಚ್ ಪ್ಯೂಗಿಯೊ, ಸಿಂಗಲ್ ಸಿಲಿಂಡರ್, 2 ಸೀಟುಗಳ ಕಾರು. ಪ್ಯೂಜಿಯೊ ಮೈಸೂರಿಗೆ ಆಗಮಿಸಿತು ಮತ್ತು ಸ್ವಲ್ಪ ಸಮಯದ ನಂತರ 1903 ರಲ್ಲಿ ಹೋರೆ ಮತ್ತು ಕಂಪನಿಗೆ ಹಿಂತಿರುಗಿಸಲಾಯಿತು. ಇದನ್ನು ನಾಲ್ಕು ಆಸನಗಳ ಡಿ ಡಿಯೋನ್ ಕಾರೊಂದಿಗೆ ಬದಲಾಯಿಸಲಾಯಿತು.
ಕುದುರೆ ಬಂಡಿಗಳಿಂದ ಆರಂಭವಾದ ಬೆಂಗಳೂರಿನ ಸಾರಿಗೆ ಪಯಣ, 1901 ರ ಮೊದಲ ಕಾರು ಆಗಮನ, 1906 ರ ಸ್ಥಳೀಯ ಉತ್ಪಾದನೆ ಮತ್ತು 1911 ರ ಪ್ರಥಮ ಶೋರೂಂ ಸ್ಥಾಪನೆಯ ಮೂಲಕ ಬೃಹತ್ ಆಟೋಮೊಬೈಲ್ ಸಾಮ್ರಾಜ್ಯವಾಗಿ ಬೆಳೆಯಿತು. ಇಂದು ವಿಶ್ವದ ಪ್ರಮುಖ ತಂತ್ರಜ್ಞಾನ ಹಾಗೂ ಮೂಲಸೌಕರ್ಯ ಹಬ್ ಆಗಿ ಬೆಳೆದಿರುವ ಬೆಂಗಳೂರಿನ ಸಾರಿಗೆ ಇತಿಹಾಸ ನಿಜಕ್ಕೂ ರೋಚಕ.