Auto Desk: ರಸ್ತೆ ಸುರಕ್ಷತೆ ಮತ್ತು ಅಪಘಾತಗಳ ಪರಿಣಾಮಕಾರಿ ನಿರ್ವಹಣೆಗಾಗಿ ಹಲವು ಹೊಸ ನಿಯಮಗಳನ್ನು ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರ, ಈಗ ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಹೊಸ ನಿಯಮ ಘೋಷಿಸಿದೆ.ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ,(Road and Highway Ministry) ನಾಲ್ಕು ವರ್ಷದೊಳಗಿನ ಮಕ್ಕಳನ್ನು ದ್ವಿಚಕ್ರ ವಾಹನಗಳಲ್ಲಿ ಕೊಂಡೊಯ್ಯುವ ಮುನ್ನ ಪಾಲಿಸಬೇಕಾದ ಕೆಲ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ಹೊಸ ಸುರಕ್ಷತಾ ನಿಯಮಗಳನ್ನು ಪ್ರಕಾರ, ಮಕ್ಕಳಿಗೆ ಹೆಲ್ಮೆಟ್ (helmet) ಧರಿಸುವುದು ಕಡ್ಡಾಯಗೊಳಿಸುತ್ತದೆ. ಜೊತೆಗೆ, ಸರಂಜಾಮು ಬೆಲ್ಟ್ ಧರಿಸುವುದು ಕೂಡ ಕಡ್ಡಾಯವಾಗಲಿದೆ. ಅಲ್ಲದೆ, ಮಕ್ಕಳಿರುವ ದ್ವಿಚಕ್ರ ವಾಹನಗಳ ವೇಗದ ಮಿತಿಯನ್ನು ಕೇವಲ 40 ಕಿಮೀಗೆ ಮಿತಿಗೊಳಿಸಲಾಗಿದೆ.
ಇಲ್ಲಿಯವರೆಗೆ ಮಕ್ಕಳಿಗೆ ಹೆಲ್ಮೆಟ್ ಧರಿಸುವುದರಿಂದ ವಿನಾಯ್ತಿ ದೊರೆತಿತ್ತು. ಆದರೆ, ಅಪಘಾತದಂತಹ ಸಂದರ್ಭಗಳಲ್ಲಿ ಮಕ್ಕಳ ತಲೆಗೆ ಗಂಭೀರ ಗಾಯಗಳಾಗಿ ಸಾವನ್ನಪ್ಪುತ್ತಿರುವ ಘಟನೆಗಳ ಹಿನ್ನೆಲೆಯಲ್ಲಿ ಸರ್ಕಾರ ನಿಯಮ ಜಾರಿಗೊಳಿಸಿದೆ. ಹೆಲ್ಮೆಟ್ ಜೊತೆಗೆ, ಸರಂಜಾಮು ಬೆಲ್ಟ್ಗಳನ್ನು ಬಳಸುವುದು ಕಡ್ಡಾಯಗೊಳಿಸಲಾಗಿದೆ.
ದ್ವಿಚಕ್ರ ವಾಹನದಲ್ಲಿ ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುವ ಮಕ್ಕಳ ಸುರಕ್ಷತೆಯ ಕುರಿತು ಯಾವುದೇ ಖಾತ್ರಿ ಇರುವುದಿಲ್ಲವಾದ್ದರಿಂದ, ಬೆಲ್ಟ್ ಧರಿಸುವುದು ಸಹಕಾರಿಯಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇದನ್ನೂ ಓದಿ: ಕಾರುಗಳ ಹಿಂಬಂದಿ ಮಧ್ಯದ ಸೀಟಿಗೂ 3 ಪಾಯಿಂಟ್ ಸೀಟ್‌ಬೆಲ್ಟ್ ಕಡ್ಡಾಯಗೊಳಿಸಲಿದೆ ಕೇಂದ್ರ ಸರ್ಕಾರ
ಇಷ್ಟೇ ಅಲ್ಲ, ಇನ್ನು ಮುಂದೆ ಮಕ್ಕಳಿರುವ ದ್ವಿಚಕ್ರ ವಾಹನಗಳನ್ನು ಮಿತಿಮೀರಿದ ವೇಗದಲ್ಲಿ ಓಡಿಸುವುದಕ್ಕೆ ಕೂಡ ಬ್ರೇಕ್ ಬೀಳಲಿದೆ. ಈ ವಾಹನಗಳಿಗೆ 40 ಕಿ.ಮೀ. ವೇಗ ಮಿತಿಯನ್ನು ಸರ್ಕಾರ ನಿಗದಿಪಡಿಸಿದೆ. ಹೊಸ ಸಂಚಾರ ನಿಯಮವನ್ನು ಉಲ್ಲಂಘಿಸಿದರೆ 1,000 ರೂ. ದಂಡ ಮತ್ತು ಮೂರು ತಿಂಗಳ ಅವಧಿಗೆ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲಾಗುತ್ತದೆ.
ದ್ವಿಚಕ್ರ ವಾಹನ ಚಲಾಯಿಸುವ ಮಕ್ಕಳಿಗೆ ಹೆಚ್ಚಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹೊಸ ನಿಯಮವನ್ನು ಸೇರಿಸಲು ಕೇಂದ್ರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ನಿಯಮವು ನಾಲ್ಕು ವರ್ಷ ವಯಸ್ಸಿನ ಮಕ್ಕಳಿಗೆ ಅನ್ವಯವಾಗಲಿದೆ.
ಹೊಸ ನಿಯಮಗಳ ಪ್ರಕಾರ, ಬಳಸುವ ಸುರಕ್ಷತಾ ಸರಂಜಾಮು ಹಗುರವಾಗಿರಬೇಕು, ಜಲನಿರೋಧಕವಾಗಿರಬೇಕು, ಮೆತ್ತಗಿರಬೇಕು ಮತ್ತು 30 ಕೆಜಿ ಭಾರ ಹೊರುವ ಸಾಮರ್ಥ್ಯವನ್ನು ಹೊಂದಿರಬೇಕು. ವಾಹನ ಸವಾರರು ಮಗುವಿಗೆ ಸುರಕ್ಷತಾ ಸರಂಜಾಮು ಬೆಲ್ಟ್ ಹಾಕಬೇಕು. ಇದು ಮಗುವನ್ನು ಸುರಕ್ಷಿತವಾಗಿರಿಸಲು ರೂಪಿಸುವ ಒಂದೆರಡು ಪಟ್ಟಿಗಳೊಂದಿಗೆ ಬರುತ್ತದೆ.
ದ್ವಿಚಕ್ರ ವಾಹನಗಳ ಹೊಸ ನಿಯಮಗಳ ಪ್ರಕಾರ, ನಾಲ್ಕು ವರ್ಷದೊಳಗಿನ ಮಕ್ಕಳು ಪಿಲಿಯನ್ ಸವಾರಿ ಮಾಡುವಾಗ ಕ್ರ್ಯಾಶ್ ಹೆಲ್ಮೆಟ್ ಅಥವಾ ಬೈಸಿಕಲ್ ಹೆಲ್ಮೆಟ್ ಧರಿಸಬೇಕು. ಹೆಲ್ಮೆಟ್‌ಗಳು ಸರ್ಕಾರ ನಿಗದಿಪಡಿಸಿದ ಮಾನದಂಡಗಳನ್ನು ಅನುಸರಿಸಬೇಕು. ಮಕ್ಕಳಿಗಾಗಿ ಹೆಲ್ಮೆಟ್‌ಗಳನ್ನು ತಯಾರಿಸಲು ಪ್ರಾರಂಭಿಸಲು ಕೇಂದ್ರವು ತಯಾರಕರಿಗೆ ಈಗಾಗಲೇ ಸೂಚನೆ ನೀಡಿದೆ.
ಇದನ್ನೂ ಓದಿ: Traffic Rules ಬೈಕ್ ಚಾಲನೆ ವೇಳೆ ಮೊಬೈಲ್ ಬಳಸಿದ್ರೆ ಹುಷಾರ್..!
ಕಳೆದ ವರ್ಷ ಅಕ್ಟೋಬರ್‌ನಲ್ಲಿ, ನಿಯಮದಲ್ಲಿ ಬದಲಾವಣೆಗಳನ್ನು ಪ್ರಸ್ತಾಪಿಸಿ ಸಚಿವಾಲಯವು ಕರಡು ಅಧಿಸೂಚನೆಯನ್ನು (Draft notification) ಹೊರಡಿಸಿತ್ತು. ಸವಾರರು ಮಕ್ಕಳಿಗೆ ಸುರಕ್ಷತಾ ಸರಂಜಾಮು ಮತ್ತು ಕ್ರ್ಯಾಶ್ ಹೆಲ್ಮೆಟ್ ಬಳಸುವುದನ್ನು ಕಡ್ಡಾಯಗೊಳಿಸಲು ಅದು ಪ್ರಸ್ತಾಪಿಸಿತ್ತು. ಈ ಅದರ ಅಂತಿಮ ಅಂತಿಮ ಅಧಿಸೂಚನೆ ಹೊರಬಿದ್ದಿದೆ.
ಈ ಹಿಂದೆ ಕೂಡ ಸರ್ಕಾರ ರಸ್ತೆ ಸುರಕ್ಷತೆ ಕುರಿತು ಹಲವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಕಳೆದ ಡಿಸೆಂಬರನಲ್ಲಿ ಸರ್ಕಾರ ಸಣ್ಣ ಕಾರುಗಳು ಸೇರಿ ಎಲ್ಲಾ ರೀತಿಯ ಕಾರುಗಳಲ್ಲಿ ಆರು ಸೀಟ್‌ಬೆಲ್ಟ್‌ಗಳ ಅಳವಡಿಕೆ ಕಡ್ಡಾಯ ಎಂಬ ನಿಯಮ ಜಾರಿಗೊಳಿಸಿತ್ತು. ಇದರಿಂದ ಅಪಘಾತದ ಸಂದರ್ಭದಲ್ಲಿ ವಾಹನದಲ್ಲಿರುವವರು ಸಾವನ್ನಪ್ಪುವುದನ್ನು ತಡೆಯಬಹುದು ಎಂದು ಸಚಿವಾಲಯ ಪ್ರತಿಪಾದಿಸಿತ್ತು.
ನಂತರ, ಇತ್ತೀಚೆಗೆ, ಕಾರಿನ ಹಿಂಭಾಗದ ಮಧ್ಯದ ಸೀಟುಗಳಲ್ಲಿ ಕೂಡ ಇತರ ಸೀಟುಗಳಲ್ಲಿರುವಂತೆ ಮೂರು ಪಾಯಿಂಟ್‌ನ ಸೀಟ್ ಬೆಲ್ಟ್‌ಗಳನ್ನು ಅಳವಡಿಸಬೇಕು ಎಂಬ ನಿಯಮ ಜಾರಿಗೆ ತರಲಾಗಿದೆ. ಸದ್ಯ ಬಹುತೇಕ ಕಾರುಗಳ ಎರಡನೇ ಸಾಲಿನ ಮಧ್ಯದ ಸೀಟಿನಲ್ಲಿ ಒಂದು ಬೆಲ್ಟ್ ಇರುತ್ತದೆ. ಆದರೆ, ಮೂರು ಪಾಯಿಂಟ್ ಸೀಟ್ ಬೆಲ್ಟ್ ಇರುವುದಿಲ್ಲ.