
ಯೂಟ್ಯೂಬ್ (YouTube) ಮೂಲಕ ಹಣ ಗಳಿಸೋದು ಸುಲಭ ಅಂತಿದ್ದೋರಿಗೆ ಯೂಟ್ಯೂಬ್ ಶಾಕಿಂಗ್ ನ್ಯೂಸ್ ನೀಡಿದೆ. ತನ್ನ ಮೋನೆಟೈಸೇಶನ್ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ಯೂಟ್ಯೂಬ್ ಮಾಡ್ತಿದೆ. ಹೊಸ ನಿಯಮ ಇದೇ ಜುಲೈ 15 ರಿಂದ ಜಾರಿಗೆ ಬರಲಿದೆ. ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ಚಾನೆಲ್ ಗಳ ಸಂಖ್ಯೆ ವಿಪರೀತ ಹೆಚ್ಚಾಗಿದೆ. ಜನರು ಎಐ ಬಳಸಿ, ಸುಲಭವಾಗಿ, ಯಾವುದೇ ಶ್ರಮವಿಲ್ಲದೆ ವಿಡಿಯೋ ತಯಾರಿಸ್ತಿದ್ದಾರೆ. ಮತ್ತೆ ಕೆಲವರು ಬೇರೆಯವರ ವಿಡಿಯೋಗಳನ್ನು ಅಲ್ಪಸ್ವಲ್ಪ ಬದಲಾವಣೆ ಮಾಡಿ ಹಾಕ್ತಿದ್ದಾರೆ. ಹಳೆ ವಿಡಿಯೋಗಳನ್ನೇ ಮತ್ತೆ ಮತ್ತೆ ಅಪ್ಲೋಡ್ ಮಾಡಿ ವೀವ್ಸ್ ಪಡೆಯುತ್ತಿರುವವರ ಸಂಖ್ಯೆ ಕೂಡ ಕಡಿಮೆ ಇಲ್ಲ. ಈಗ ಇವೆಲ್ಲದಕ್ಕೂ ಕಡಿವಾಣ ಹಾಕಲು ಯೂಟ್ಯೂಬ್ ಮುಂದಾಗಿದೆ.
ಯೂಟ್ಯೂಬ್ ಹೊಸ ನಿಯಮ ಏನು? : ಜುಲೈ 15, 2025 ರಿಂದ, ಪದೇ ಪದೇ ಒಂದೇ ವಿಡಿಯೋ ಅಪ್ಲೋಡ್ ಮಾಡಿದ್ರೆ ಇಲ್ಲವೆ ಬೇರೆಯವರ ವಿಡಿಯೋವನ್ನು ನಕಲಿ ಮಾಡಿ ಪೋಸ್ಟ್ ಮಾಡಿದ್ರೆ ಅಂಥ ಖಾತೆದಾರರಿಗೆ ಯೂಟ್ಯೂಬ್ ಹಣಗಳಿಸಲು ಅವಕಾಶ ನೀಡುವುದಿಲ್ಲ. ಯೂಟ್ಯೂಬ್ ಪ್ಲಾಟ್ಫಾರ್ಮ್ನಲ್ಲಿ ಅಪ್ಲೋಡ್ ಆಗುವ ವಿಡಿಯೋಗಳ ಗುಣಮಟ್ಟವನ್ನು ಸುಧಾರಿಸುವ ಗುರಿಯಿಂದ ಯೂಟ್ಯೂಬ್ ಈ ನಿರ್ಧಾರ ತೆಗೆದುಕೊಂಡಿದೆ. ಈ ಮೂಲಕ ಯೂಟ್ಯೂಬ್ ತನ್ನ ನಿಯಮಗಳನ್ನು ಬಿಗಿಗೊಳಿಸುತ್ತಿದೆ. ನಿಜವಾದ ಕಂಟೆಂಟ್ ಕ್ರಿಯೇಟರ್ಸ್ ರಕ್ಷಿಸುವುದು ಮತ್ತು ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳುವ ಚಾನಲ್ಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಇದ್ರ ಮುಖ್ಯ ಉದ್ದೇಶವಾಗಿದೆ.
ಈ ವಿಡಿಯೋಕ್ಕೆ ಸಿಗಲ್ಲ ಹಣ :
• ಸ್ವಂತಿಕೆ ಇನ್ಮುಂದೆ ಮುಖ್ಯ. ಬೇರೊಬ್ಬರ ವಿಷಯವನ್ನು ಎತ್ತಿಕೊಂಡು ಅದನ್ನು ಸ್ವಲ್ಪ ಬದಲಾಯಿಸಿ ಪೋಸ್ಟ್ ಮಾಡಲು ಅನುಮತಿ ನೀಡಲಾಗುವುದಿಲ್ಲ. ವೀಡಿಯೊವನ್ನು ಹೊಸದಾಗಿ ತಯಾರಿಸ್ಬೇಕು. ಬೇರೆ ವಿಡಿಯೋವನ್ನು ಕೂಡ ಸಂಪೂರ್ಣ ಬದಲಿಸಿ ಪೋಸ್ಟ್ ಮಾಡ್ಬೇಕು.
• ಪುನರಾವರ್ತಿತ ವೀಡಿಯೊಗಳನ್ನು ನಿಷೇಧಿಸಲಾಗುವುದು. ಹಣ ಗಳಿಕೆಗೆ ನೀವು ಮಾಡಿದ ವಿಡಿಯೋವನ್ನೇ ಮತ್ತೆ ಮತ್ತೆ ಹಾಕುವಂತಿಲ್ಲ.
• ಟೆಂಪ್ಲೇಟ್ ಬಳಸಿದ ವಿಡಿಯೋ, ರೋಬೋಟ್ನಂತಹ ಧ್ವನಿ ಹೊಂದಿರುವ ವಿಡಿಯೋಕ್ಕೆ ಅವಕಾಶ ಇಲ್ಲ.
• ಬರೀ ಹಣ ಗಳಿಸುವ ಉದ್ಧೇಶದಿಂದ ಮಾಹಿತಿ ಇಲ್ಲದ ಅಥವಾ ಮನರಂಜನೆ ಇಲ್ಲದ ವೀಡಿಯೊಗಳಿಗೆ ಅವಕಾಶ ಇಲ್ಲ.
• ವಿಷಯ ಶೈಕ್ಷಣಿಕ ಅಥವಾ ಮನರಂಜನೆಯಾಗಿರಲಿ, ನೈಜ ಮೌಲ್ಯ ಇಲ್ಲಿಇರಬೇಕು.
ಯೂಟ್ಯೂಬ್ ತನ್ನ ನಿಯಮದಲ್ಲಿ ಎಲ್ಲೂ ಎಐ ಹೆಸರನ್ನು ಹೇಳಿಲ್ಲ. ಆದ್ರೆ ಎಐ ನಿಂದ ಮಾಡಿದ, ಮಾನವೀಯ ಸ್ಪರ್ಶವಿಲ್ಲದ, ಆಟೋ ಜನರೇಟ್ ಧ್ವನಿಯ ವಿಡಿಯೋವನ್ನು ಸಹ ಈ ಕಟ್ಟುನಿಟ್ಟಿನ ನಿಯಮದಲ್ಲಿ ತರಬಹುದು ಎನ್ನಲಾಗಿದೆ.
ಜುಲೈ 15 ರಿಂದ, ಯೂಟ್ಯೂಬ್ ಮೂಲ ವಿಷಯಕ್ಕೆ ಆದ್ಯತೆ ನೀಡುತ್ತದೆ. ಹೊಸ ಮಾಹಿತಿ ಅಥವಾ ಉಪಯುಕ್ತ ಒಳನೋಟ ಒದಗಿಸುವ ಶೈಕ್ಷಣಿಕ ವೀಡಿಯೊಗಳು, ತಾಜಾ, ಸೃಜನಶೀಲ ಮತ್ತು ಪ್ರೇಕ್ಷಕರನ್ನು ತೊಡಗಿಸಿಕೊಳ್ಳುವ ಮನರಂಜನಾ ವಿಷಯ ಮಾನ್ಯವಾಗುತ್ತದೆ. ನಿಮ್ಮ ವಿಷಯ ಅನನ್ಯ ಮತ್ತು ಅರ್ಥಪೂರ್ಣವಾಗಿದ್ದರೆ ಮಾತ್ರ ನೀವು ಯೂಟ್ಯೂಬ್ ನಿಂದ ಹಣ ಗಳಿಸಲು ಸಾಧ್ಯ.
ಹಿಂದಿನ ನಿಯಮ : ಯೂಟ್ಯೂಬ್ ನಲ್ಲಿ ಹಣ ಗಳಿಸಲು ಕಳೆದ 12 ತಿಂಗಳುಗಳಲ್ಲಿ 1,000 ಸಬ್ಸ್ಕ್ರೈಬರ್ ಮತ್ತು 4,000 ಗಂಟೆ ವೀವ್ಸ್ ಸಮಯ ಪೂರ್ಣಗೊಂಡಿರಬೇಕು. ಕಳೆದ 90 ದಿನಗಳಲ್ಲಿ ಶಾರ್ಟ್ಸ್ ವಿಡಿಯೋಗಳು 10 ಮಿಲಿಯನ್ ವೀವ್ಸ್ ಪಡೆದಿರಬೇಕು. ನೀವು ಇದನ್ನು ಪೂರ್ಣಗೊಳಿದ್ರೆ ಚಾನಲ್ ಹಣಗಳಿಕೆ ಒಪ್ಪಿಗೆ ನೀಡ್ತಿತ್ತು. ಹಿಂದೆ ಕಾಪಿ – ಪೇಸ್ಟ್ ಗೆ ಅವಕಾಶ ಇತ್ತು. ಎಐ ಬಳಕೆ ಮಾಡ್ಬಹುದಿತ್ತು. ಹಳೆ ವಿಡಿಯೋವನ್ನು ಮತ್ತೆ ಮತ್ತೆ ಪೋಸ್ಟ್ ಮಾಡಬಹುದಿತ್ತು. ಈ ಬದಲಾವಣೆ ಸಾವಿರಾರು ಕಂಟೆಂಟ್ ಕ್ರಿಯೇಟರ್ ಗಳ ಗಳಿಕೆ ಮೇಲೆ ಪರಿಣಾಮ ಬೀರಲಿದೆ. ಆದ್ರೆ ವೀಕ್ಷಕರಿಗೆ ಇದು ನೆಮ್ಮದಿ ನೀಡಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.