
Business Desk: ಮಾಸಿಕ ವೇತನ ಪಡೆಯುವ ಬಹುತೇಕ ಎಲ್ಲ ಉದ್ಯೋಗಿಗಳು ಇಪಿಎಫ್ ಖಾತೆ ಹೊಂದಿರುತ್ತಾರೆ. ಪ್ರತಿ ತಿಂಗಳು ಉದ್ಯೋಗಿಯ ವೇತನದ ಒಂದು ಭಾಗವನ್ನು ಈ ಖಾತೆಗೆ ಜಮೆ ಮಾಡಲಾಗುತ್ತದೆ. ಈ ಯೋಜನೆಯಡಿಯಲ್ಲಿ, ಉದ್ಯೋಗಿ ಹಾಗೂ ಉದ್ಯೋಗದಾತರು (ಕಂಪನಿ ಅಥವಾ ಸಂಸ್ಥೆ) ತಮ್ಮ ಮೂಲ ವೇತನದಿಂದ ಇಪಿಎಫ್ ಖಾತೆಗೆ ಶೇ.12ರಷ್ಟು ಮೊತ್ತವನ್ನು ಕೊಡುಗೆ ನೀಡುತ್ತಾರೆ. ಇಪಿಎಫ್ ಖಾತೆಗೆ ಸರ್ಕಾರ ಪ್ರತಿ ವರ್ಷ ಬಡ್ಡಿ ಜಮೆ ಮಾಡುತ್ತದೆ. ಪ್ರಸ್ತುತ ಶೇ.8.1ರಷ್ಟು ಬಡ್ಡಿ ನೀಡಲಾಗುತ್ತಿದೆ. ಇನ್ನು ಇಪಿಎಫ್ ಖಾತೆ ಹೊಂದಿರೋರಿಗೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ವಿಶಿಷ್ಟ ಸಂಖ್ಯೆಯಾದ ಯುನಿವರ್ಸಲ್ ಖಾತೆ ಸಂಖ್ಯೆ (ಯುಎಎನ್) ನೀಡುತ್ತದೆ. ಉದ್ಯೋಗಿ ಸಂಸ್ಥೆ ಬದಲಾಯಿಸಿದ ಬಳಿಕವೂ ಆತನ ಯುಎಎನ್ ಅದೇ ಇರುತ್ತದೆ. ಯುಎಎನ್ ಬಳಸಿಕೊಂಡು ಉದ್ಯೋಗಿ ಇಪಿಎಫ್ ಪೋರ್ಟಲ್ ನಲ್ಲಿ ತನ್ನ ವೈಯಕ್ತಿಕ ಮಾಹಿತಿಗಳು ಹಾಗೂ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು. ಆದರೆ, ಆನ್ ಲೈನ್ ನಲ್ಲಿ ಈ ಸೌಲಭ್ಯ ಬಳಸಲು ಉದ್ಯೋಗಿ ಇಪಿಎಫ್ಒನಲ್ಲಿ ಕೆವೈಸಿ ಮಾಹಿತಿಗಳನ್ನು ನವೀಕರಿಸುವುದು ಅಗತ್ಯ. ಕೆವೈಸಿ ಮಾಹಿತಿಗಳಿಂದ ವಂಚನೆ ಪ್ರಕರಣಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಇನ್ನು ಕೆವೈಸಿ ಮಾಹಿತಿಗಳನ್ನು ಕೂಡ ಆನ್ ಲೈನ್ ನಲ್ಲಿ ಸುಲಭವಾಗಿ ನವೀಕರಿಸಬಹುದು.
ಇಪಿಎಫ್ಒ ಪೋರ್ಟಲ್ ನಲ್ಲಿ ಕೆವೈಸಿ ನವೀಕರಣ
ಇಪಿಎಫ್ಒ ಪೋರ್ಟಲ್ ನಲ್ಲಿ ಕೆವೈಸಿ ಮಾಹಿತಿಗಳನ್ನು ನವೀಕರಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ 1: ಇಪಿಎಫ್ಒ ಅಧಿಕೃತ ವೆಬ್ ಸೈಟ್ https://unifiedportal-mem.epfindia.gov.in/memberinterface ಭೇಟಿ ನೀಡಿ.
ಹಂತ 2: ಯುಎಎನ್, ಪಾಸ್ ವರ್ಡ್ ಹಾಗೂ ಕ್ಯಾಪ್ಚ ಕೋಡ್ ಬಳಸಿ ನಿಮ್ಮ ಇಪಿಎಫ್ ಖಾತೆಗೆ ಲಾಗಿನ್ ಆಗಿ.
ಹಂತ 3: ‘Manage’ವಿಭಾಗದಡಿ 'ಕೆವೈಸಿ' ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 4: ಈಗ ಅರ್ಜಿ ನಮೂನೆ ಕಾಣಿಸುತ್ತದೆ. ಪ್ಯಾನ್ ಸಂಖ್ಯೆ, ಆಧಾರ್, ಪಾಸ್ ಪೋರ್ಟ್ ಹಾಗೂ ಬ್ಯಾಂಕ್ ಮಾಹಿತಿಗಳನ್ನು ಭರ್ತಿ ಮಾಡಿ.
ಹಂತ 5: ನೀವು ನವೀಕರಿಸಬೇಕಾದ ದಾಖಲೆಗೆ ಸಂಬಂಧಿಸಿದ ಬಾಕ್ಸ್ ಮೇಲೆ ಕ್ಲಿಕ್ ಮಾಡಿ. ಈ ಪ್ರಕ್ರಿಯೆ ಪೂರ್ಣಗೊಳಿಸಲು ದಾಖಲೆ ಸಂಖ್ಯೆ ನಮೂದಿಸಿ. ದಾಖಲೆ ಹಾಗೂ ಹೆಚ್ಚುವರಿ ಮಾಹಿತಿಗಳಿಗೆ ಅನುಗುಣವಾಗಿ ಹೆಸರು ನಮೂದಿಸಿ.
ಹಂತ 6: ‘Pending KYC’ವಿಭಾಗದಡಿಯಲ್ಲಿ ‘Save’ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 7: ಸಂಬಂಧಪಟ್ಟ ಇಲಾಖೆಯ ದತ್ತಾಂಶಗಳನ್ನು ಆಧರಿಸಿ ಇಪಿಎಫ್ ಒ ನೀವು ನೀಡಿದ ಮಾಹಿತಿಗಳನ್ನು ಪರಿಶೀಲಿಸುತ್ತದೆ.
ಹಂತ 8: ನೀವು ನೀಡಿದ ಮಾಹಿತಿಗಳು ಸಂಬಂಧಪಟ್ಟ ಇಲಾಖೆಯ ದತ್ತಾಂಶಗಳೊಂದಿಗೆ ಹೊಂದಿಕೆಯಾದ್ರೆ ಪರಿಶೀಲಿಸಲಾಗಿದೆ ಎಂದು ಗುರುತು ಮಾಡಲಾಗುತ್ತದೆ.
ಬ್ಯಾಂಕ್ ಖಾತೆ ತೆರೆಯಲು ವಿಡಿಯೋ ಕೆವೈಸಿ; ಯಾವೆಲ್ಲ ಬ್ಯಾಂಕ್ ಗಳಲ್ಲಿ ಲಭ್ಯ?
ಕೆವೈಸಿ ನವೀಕರಣದ ಪ್ರಯೋಜನಗಳು:
*ಕೆವೈಸಿ ಮಾಹಿತಿಗಳು ನವೀಕರಣಗೊಂಡಿದ್ರೆ ಇಪಿಎಫ್ ಖಾತೆಗಳನ್ನು ಸುಲಭವಾಗಿ ವರ್ಗಾವಣೆ ಮಾಡಬಹುದು.
*ಯುಎಎನ್ ಜೊತೆಗೆ ಕೆವೈಸಿ ಮಾಹಿತಿಗಳನ್ನು ಸೇರ್ಪಡೆಗೊಳಿಸಿದ ಬಳಿಕ ಅಥವಾ ಇಪಿಎಫ್ ಕೆವೈಸಿ ನವೀಕರಣದ ನಂತರ ಆನ್ ಲೈನ್ ವಿತ್ ಡ್ರಾ ಕ್ಲೇಮ್ ಗಳನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.
*ಎಲ್ಲ ಸದಸ್ಯರಿಗೂ ಪಿಎಫ್ ಖಾತೆಯ ಪ್ರತಿ ತಿಂಗಳ ಮಾಹಿತಿ ಎಸ್ ಎಂಎಸ್ ಮೂಲಕ ಸಿಗುತ್ತದೆ.
ಇನ್ಮುಂದೆ ನಾಣ್ಯಗಳು ಬೇಕಾದ್ರೆ ಬ್ಯಾಂಕಿಗೆ ಹೋಗ್ಬೇಕಾಗಿಲ್ಲ, ವೆಂಡಿಂಗ್ ಮಷಿನ್ ನಲ್ಲೇ ಪಡೆಯಬಹುದು!
ಟಿಡಿಎಸ್ ಕಡಿತ ಇಳಿಕೆ
2023-24ನೇ ಸಾಲಿನ ಬಜೆಟ್ ನಲ್ಲಿ ನೌಕರರ ಭವಿಷ್ಯ ನಿಧಿ (ಇಪಿಎಫ್) ವಿತ್ ಡ್ರಾ ಮೇಲಿನ ಟಿಡಿಎಸ್ ಅನ್ನು ಶೇ.30ರಿಂದ ಶೇ.20ಕ್ಕೆ ಇಳಿಕೆ ಮಾಡಲಾಗಿದೆ. ಇದು ಕಾಯಂ ಖಾತೆ ಸಂಖ್ಯೆ ಅಥವಾ ಪ್ಯಾನ್ ಕಾರ್ಡ್ ಹೊಂದಿರದ ಪ್ರಕರಣಗಳಿಗೆ ಮಾತ್ರ ಅನ್ವಯಿಸುತ್ತದೆ. ಈ ಹೊಸ ತಿದ್ದುಪಡಿ 2023ರ ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ.ಈ ಘೋಷಣೆಯಿಂದ ಇಪಿಎಫ್ಒ ದಾಖಲೆಗಳಲ್ಲಿ ಪ್ಯಾನ್ ಮಾಹಿತಿ ನವೀಕರಿಸದ ವ್ಯಕ್ತಿಗಳಿಗೆ ಪ್ರಯೋಜನವಾಗಲಿದೆ. ಪ್ರಸ್ತುತವಿರುವ ಆದಾಯ ತೆರಿಗೆ ಕಾನೂನಿನ ಅನ್ವಯ ಇಪಿಎಫ್ ಖಾತೆ ತೆರೆದು ಐದು ವರ್ಷದೊಳಗೆ ಹಣವನ್ನು ವಿತ್ ಡ್ರಾ ಮಾಡಿದ್ರೆ ಟಿಡಿಎಸ್ ಕಡಿತ ಮಾಡಲಾಗುತ್ತದೆ. ವಿತ್ ಡ್ರಾ ಮೊತ್ತ 50 ಸಾವಿರ ರೂ. ಅಥವಾ ಅದಕ್ಕಿಂತ ಹೆಚ್ಚಿದ್ರೆ ಮಾತ್ರ ಟಿಡಿಎಸ್ ಕಡಿತ ಮಾಡಲಾಗುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.