ನ್ಯೂಯಾರ್ಕ್ (ಮಾರ್ಚ್ 13, 2023): ಸಿಲಿಕಾನ್ ವ್ಯಾಲಿ ಬ್ಯಾಂಕ್ (ಎಸ್‌ವಿಬಿ) ಪತನದಿಂದ ಅಮೆರಿಕದ ಸಣ್ಣ ಉದ್ದಿಮೆಗಳಲ್ಲಿ 1 ಲಕ್ಷಕ್ಕೂ ಅಧಿಕ ಉದ್ಯೋಗಿಗಳು ನೌಕರಿ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಈ ಬ್ಯಾಂಕ್‌ನಲ್ಲಿ 37000ಕ್ಕೂ ಹೆಚ್ಚು ಸಣ್ಣ ಉದ್ದಿಮೆಗಳು ಖಾತೆ ಹೊಂದಿದ್ದು, ಅವುಗಳ ಪೈಕಿ ಕನಿಷ್ಠ 10000 ಸಣ್ಣ ಉದ್ದಿಮೆಗಳು ಇದೊಂದೇ ಬ್ಯಾಂಕ್‌ನಲ್ಲಿ ಹಣಕಾಸು ವ್ಯವಹಾರ ಹೊಂದಿವೆ. ಅವುಗಳಿಗೆ ಈಗ ಹಣವೇ ಸಿಗದಂತಾಗಿದ್ದು, ಒಂದೊಂದು ಕಂಪನಿ ಕನಿಷ್ಠ 10 ಜನರನ್ನು ವಜಾಗೊಳಿಸಿದರೂ ಒಂದು ಲಕ್ಷ ಜನರು ಕೆಲಸ ಕಳೆದುಕೊಳ್ಳಲಿದ್ದಾರೆ.
ಈ ಕುರಿತು ಅಮೆರಿಕದ (United States) ಸಣ್ಣ ಉದ್ದಿಮೆಗಳು ಸರ್ಕಾರಕ್ಕೆ (Government) ದೂರು ನೀಡಿದ್ದು, ತಮ್ಮ ನೆರವಿಗೆ ಬರುವಂತೆ ಆಗ್ರಹಿಸಿವೆ. ಅಮೆರಿಕದಲ್ಲಿ ಟೆಕ್ನಾಲಜಿ ಸ್ಟಾರ್ಟಪ್ ಕಂಪನಿಗಳಿಗೆ (Start Up Company) ಉತ್ತೇಜನ ನೀಡುವ ವೈ ಕಾಂಬಿನೇಟರ್ (Y Combinator) ಎಂಬ ಸಂಸ್ಥೆಯು ವಿತ್ತ ಸಚಿವೆ ಜಾನೆಟ್ ಯೆಲನ್ ಅವರಿಗೆ ಪತ್ರ ಬರೆದಿದ್ದು, ಅದಕ್ಕೆ ಸುಮಾರು 2 ಲಕ್ಷ ನೌಕರರನ್ನು ಪ್ರತಿನಿಧಿಸುವ 3500 ಸಿಇಒಗಳು ಸಹಿ ಹಾಕಿದ್ದಾರೆ. ತಕ್ಷಣ ಸರ್ಕಾರ ಮಧ್ಯಪ್ರವೇಶಿಸಿ ಸಣ್ಣ ಉದ್ದಿಮೆಗಳು, ಸ್ಟಾರ್ಟಪ್‌ಗಳು ಹಾಗೂ ಅವುಗಳಲ್ಲಿ ಕೆಲಸ ಮಾಡುವ ನೌಕರರ ನೆರವಿಗೆ ಬರುವಂತೆ ಅವರು ಆಗ್ರಹಿಸಿದ್ದಾರೆ. ಈ ಉದ್ದಿಮೆಗಳು, ಸ್ಟಾರ್ಟಪ್‌ಗಳು ಹಾಗೂ ನೌಕರರೆಲ್ಲರೂ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ (Silicon Valley Bank) ಗ್ರಾಹಕರಾಗಿದ್ದಾರೆ.
ಇದನ್ನು ಓದಿ: ಅಮೆರಿಕದ ಸ್ಟಾರ್ಟಪ್ ಸ್ಪೆಷಲಿಸ್ಟ್ ಸಿಲಿಕಾನ್ ವ್ಯಾಲಿ ಬ್ಯಾಂಕೇ ಬಂದ್: ಬಾಂಡಲ್ಲಿ ಹೂಡಿಕೆಯಿಂದ ಭಾರಿ ನಷ್ಟ
‘ಎಸ್‌ವಿಬಿಯಲ್ಲಿ 37000ಕ್ಕೂ ಹೆಚ್ಚು ಸಣ್ಣ ಉದ್ದಿಮೆಗಳು 2.5 ಲಕ್ಷ ಡಾಲರ್ (ಸುಮಾರು 210 ಕೋಟಿ ರು.) ಠೇವಣಿ ಹೊಂದಿವೆ. ಈ ಹಣ ಅವುಗಳಿಗೀಗ ಸಿಗದಂತಾಗಿದೆ. 37,000 ಕಂಪನಿಗಳ ಪೈಕಿ ಮೂರನೇ ಒಂದರಷ್ಟು ಕಂಪನಿಗಳು ಎಸ್‌ವಿಬಿಯೊಂದರಲ್ಲೇ ಖಾತೆ ಹೊಂದಿವೆ. ಅವು ಮುಂದಿನ 30 ದಿನಗಳಲ್ಲಿ ನೌಕರರಿಗೆ ಸಂಬಳ ನೀಡಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಲಿವೆ. ಈ ಸಣ್ಣ ಉದ್ದಿಮೆ ಅಥವಾ ಸ್ಟಾರ್ಟಪ್‌ಗಳು ಕನಿಷ್ಠ ತಲಾ 10 ಮಂದಿ ನೌಕರರನ್ನು ಹೊಂದಿವೆ ಎಂದು ಪರಿಗಣಿಸಿದರೂ ತಕ್ಷಣದಿಂದ ಅವರನ್ನು ವಜಾಗೊಳಿಸುವ, ಕಂಪನಿ ಮುಚ್ಚುವ ಅಥವಾ ಅವರ ಸಂಬಳ ತಡೆಹಿಡಿಯುವ ಸಾಧ್ಯತೆಯಿದೆ. ಆಗ 1 ಲಕ್ಷ ನೌಕರರು ಸಂಕಷ್ಟಕ್ಕೆ ಸಿಲುಕಲಿದ್ದಾರೆ’ ಎಂದು ವೈ ಕಾಂಬಿನೇಟರ್ ಸಿಇಒ ಗ್ಯಾರಿ ಟ್ಯಾನ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಭಾರತ ಕಂಪನಿಗಳ ನೆರವಿಗೆ ರಾಜೀವ್ ಚಂದ್ರಶೇಖರ್ ಸಭೆ..!
ನವದೆಹಲಿ: ಭಾರತದಲ್ಲಿರುವ ಸ್ಟಾರ್ಟಪ್‌ಗಳು ಸಿಲಿಕಾನ್ ವ್ಯಾಲಿ ಬ್ಯಾಂಕ್‌ನಲ್ಲೇನಾದರೂ ವ್ಯವಹಾರ ಹೊಂದಿದ್ದರೆ ಅವುಗಳಿಗಾದ ನಷ್ಟವನ್ನು ಅಂದಾಜು ಮಾಡಿ ನೆರವಿಗೆ ಧಾವಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಸಂಬಂಧ ಇದೇ ವಾರ ಸಭೆ ಕರೆದಿದ್ದೇನೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಟ್ವೀಟ್ ಮಾಡಿದ್ದಾರೆ.
ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್ (ಎಸ್‌ವಿಬಿ) ಪತನದಿಂದ ಸಂಕಷ್ಟಕ್ಕೆ ಸಿಲುಕಿರುವ ಅಲ್ಲಿನ ಸ್ಟಾರ್ಟಪ್‌ಗಳ ನೆರವಿಗೆ ಜೋ ಬೈಡೆನ್ ಸರ್ಕಾರ ಧಾವಿಸುವುದಕ್ಕೂ ಮೊದಲೇ ಭಾರತದಲ್ಲಿರುವ ಸ್ಟಾರ್ಟಪ್‌ಗಳು ಎಸ್‌ವಿಬಿಯಲ್ಲೇನಾದರೂ ವ್ಯವಹಾರ ಹೊಂದಿದ್ದರೆ ಅವುಗಳಿಗಾದ ನಷ್ಟವನ್ನು ಅಂದಾಜು ಮಾಡಿ ನೆರವಿಗೆ ಧಾವಿಸಲು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮುಂದಾಗಿದೆ.
‘ಎಸ್‌ವಿಬಿ ಪತನದಿಂದ ಜಗತ್ತಿನಾದ್ಯಂತ ಸ್ಟಾರ್ಟಪ್‌ಗಳ ಮೇಲೆ ದುಷ್ಪರಿಣಾಮ ಉಂಟಾಗಲಿದೆ. ಭಾರತದ ನವ ಆರ್ಥಿಕತೆಯಲ್ಲೂ ಸ್ಟಾರ್ಟಪ್‌ಗಳ ಪಾತ್ರ ದೊಡ್ಡದು. ಹೀಗಾಗಿ ಭಾರತೀಯ ಸ್ಟಾರ್ಟಪ್‌ಗಳ ಮೇಲೆ ಉಂಟಾಗಿರುವ ಪರಿಣಾಮವನ್ನು ಅಂದಾಜಿಸಿ, ಸರ್ಕಾರದಿಂದ ಹೇಗೆ ನೆರವು ನೀಡಬಹುದು ಎಂಬ ಬಗ್ಗೆ ಪರಿಶೀಲಿಸಲು ಈ ವಾರ ಸ್ಟಾರ್ಟಪ್‌ಗಳ ಸಭೆ ಕರೆದಿದ್ದೇನೆ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ನೀವು ಎಚ್ ಡಿಎಫ್ ಸಿ ಬ್ಯಾಂಕ್ ಗ್ರಾಹಕರಾ? ಅಪ್ಪಿತಪ್ಪಿಯೂ ಇಂಥ ಲಿಂಕ್ಸ್ ಮೇಲೆ ಕ್ಲಿಕ್ ಮಾಡ್ಬೇಡಿ!
ಭಾರತದಲ್ಲಿರುವ ಅನೇಕ ಸ್ಟಾರ್ಟಪ್‌ಗಳು ಅಮೆರಿಕದಲ್ಲಿ ಸಾಫ್ಟ್‌ವೇರ್ ಸೇವೆ ನೀಡುತ್ತಿವೆ. ಅವು ಅಲ್ಲಿನ ಸ್ಟಾರ್ಟಪ್ ಇನ್‌ಕ್ಯುಬೇಟರ್ ‘ವೈ ಕಾಂಬಿನೇಟರ್’ ಸಂಸ್ಥೆಯಲ್ಲಿ ನೋಂದಣಿ ಮಾಡಿಕೊಂಡಿರುತ್ತವೆ. ಅಂತಹ ಕಂಪನಿಗಳು ಎಸ್‌ವಿಬಿ ಪತನದಿಂದ ಸಂಕಷ್ಟಕ್ಕೆ ಸಿಲುಕಿರುವ ಸಾಧ್ಯತೆಯಿದೆ. ಆದರೆ ಇಂತಹ ಮೀಶೋ, ರೇಜರ್‌ಪೇ, ಕ್ಯಾಶ್‌ಫ್ರೀ ಪೇಮೆಂಟ್ಸ್ ಮುಂತಾದ ಕಂಪನಿಗಳು ನಮಗೇನೂ ಸಮಸ್ಯೆ ಆಗಿಲ್ಲ ಎಂದು ಹೇಳಿವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.