WPI Inflation:ಜನಸಾಮಾನ್ಯರ ಜೇಬು ಸುಡುತ್ತಿದೆ ಬೆಲೆಯೇರಿಕೆ ಬಿಸಿ; ನಾಲ್ಕು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಸಗಟು ಹಣದುಬ್ಬರ

Published : Apr 18, 2022, 07:29 PM IST
WPI Inflation:ಜನಸಾಮಾನ್ಯರ ಜೇಬು ಸುಡುತ್ತಿದೆ ಬೆಲೆಯೇರಿಕೆ ಬಿಸಿ; ನಾಲ್ಕು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಸಗಟು ಹಣದುಬ್ಬರ

ಸಾರಾಂಶ

*ಸಗಟು ಬೆಲೆ ಆಧಾರಿತ ಹಣದುಬ್ಬರ ಮಾರ್ಚ್ ನಲ್ಲಿ ಶೇ.14.55ಕ್ಕೆ ಏರಿಕೆ *ಫೆಬ್ರವರಿಯಲ್ಲಿ ಸಗಟು ಹಣದುಬ್ಬರ ಶೇ.13.11  *ತರಕಾರಿ,ಇಂಧನ ಸೇರಿದಂತೆ ನಿತ್ಯ ಬಳಕೆ ವಸ್ತುಗಳ ಬೆಲೆಯೇರಿಕೆಯೇ ಹಣದುಬ್ಬರ ಹೆಚ್ಚಳಕ್ಕೆ ಕಾರಣ

ನವದೆಹಲಿ (ಏ.18): ತರಕಾರಿ (Vegetables),ಇಂಧನ (Fuel) ಸೇರಿದಂತೆ ನಿತ್ಯ ಬಳಕೆ ವಸ್ತುಗಳ ಬೆಲೆಯೇರಿಕೆ ಪರಿಣಾಮ ಸಗಟು ಬೆಲೆ ಆಧಾರಿತ ಹಣದುಬ್ಬರವು (WPI) ಮಾರ್ಚ್ ನಲ್ಲಿ ಶೇ.14.55ಕ್ಕೆ ಏರಿಕೆಯಾಗಿದೆ. ಇದು ನಾಲ್ಕು ತಿಂಗಳಲ್ಲೇ ಗರಿಷ್ಠ ಮಟ್ಟದ್ದಾಗಿದೆ. 

ಸರ್ಕಾರ ಸೋಮವಾರ (ಏ.18) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ ಸಗಟು ಬೆಲೆ ಆಧಾರಿತ ಹಣದುಬ್ಬರ (WPI)2021ರ ಏಪ್ರಿಲ್ ನಿಂದ ಪ್ರಾರಂಭವಾಗಿ ಸತತ 12 ತಿಂಗಳಿಂದ ಎರಡಂಕಿಯಲ್ಲಿದೆ. 2021ರ ನವೆಂಬರ್ ನಲ್ಲಿ ಸಗಟು ಹಣದುಬ್ಬರ ಶೇ.14.87 ತಲುಪುವ ಮೂಲಕ ದಾಖಲೆ ನಿರ್ಮಿಸಿತ್ತು. ಆ ಬಳಿಕ ಅಂದ್ರೆ ಸುಮಾರು 4 ತಿಂಗಳ ನಂತರ ಹಣದುಬ್ಬರ ಮತ್ತೆ ಶೇ.14.55ಕ್ಕೆ ಏರಿಕೆಯಾಗಿದೆ. 2022ರ ಫೆಬ್ರವರಿಯಲ್ಲಿ ಸಗಟು ಹಣದುಬ್ಬರ ಶೇ.13.11 ರಷ್ಟಿತ್ತು. ಅದೇ ಕಳೆದ ವರ್ಷ ಮಾರ್ಚ್ ನಲ್ಲಿ ಶೇ. 7.89 ರಷ್ಟಿತ್ತು. 

100 ರೂ. ಇದ್ದ ಕೇಜಿ ನಿಂಬೆಹಣ್ಣಿಗೆ ಈಗ 300 ರೂ!

'2022ರ ಮಾರ್ಚ್ ನಲ್ಲಿ ಹಣದುಬ್ಬರ ದರ ಗರಿಷ್ಠ ಮಟ್ಟ ತಲುಪಿರೋದಕ್ಕೆ ರಷ್ಯಾ-ಉಕ್ರೇನ್ (Russia-Ukraine) ಸಂಘರ್ಷದ ಪರಿಣಾಮ ಕಚ್ಚಾ ತೈಲ (Crude oil) ಹಾಗೂ ನೈಸರ್ಗಿಕ ಅನಿಲ (Natural Gas), ಖನಿಜ ತೈಲಗಳು, ಲೋಹ ಮುಂತಾದವುಗಳ ಬೆಲೆಯಲ್ಲಿ ಏರಿಕೆಯಾಗಿರೋದೇ ಕಾರಣ' ಎಂದು ವಾಣಿಜ್ಯ ಹಾಗೂ ಕೈಗಾರಿಕ ಸಚಿವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧದಿಂದ  ಜಾಗತಿಕ (Global) ಪೂರೈಕೆ ಸರಪಳಿಯಲ್ಲಿ (Supply chain) ದೀರ್ಘಾವಧಿ ಅಡೆತಡೆ ಎದುರಾಗಿದ್ದು, ಮೂಲ  ಡಬ್ಲ್ಯೂಪಿಐ (WPI) ಹಣದುಬ್ಬರ ಮಾರ್ಚ್ ನಲ್ಲಿ ಶೇ.2.2ರಷ್ಟು ಏರಿಕೆಯಾಗಿತ್ತು.

ಉತ್ಪಾದನಾ ವಸ್ತುಗಳ ಹಣದುಬ್ಬರ ಈ ವರ್ಷದ ಫೆಬ್ರವರಿಯಲ್ಲಿ ಶೇ.9.84ರಷ್ಟಿದ್ದರೆ, ಮಾರ್ಚ್ ನಲ್ಲಿ ಶೇ.10.71ಕ್ಕೆ ಹೆಚ್ಚಳವಾಗಿತ್ತು. ಇಂಧನ ಹಣದುಬ್ಬರ ಕೂಡ ಮಾರ್ಚ್ ನಲ್ಲಿ ಶೇ.34.52 ಕ್ಕೆ ಏರಿಕೆಯಾಗಿತ್ತು. ಕಚ್ಚಾ ತೈಲ ಹಣದುಬ್ಬರ ಫೆಬ್ರವರಿಯಲ್ಲಿ ಶೇ.55.17ರಷ್ಟಿದ್ದು, ಮಾರ್ಚ್ ನಲ್ಲಿ ಶೇ.83.56ಕ್ಕೆ ಏರಿಕೆಯಾಗಿತ್ತು.
ಚಿಲ್ಲರೆ ಹಣದುಬ್ಬರವು ಮಾರ್ಚ್ ನಲ್ಲಿ 17 ತಿಂಗಳಲ್ಲೇ ಗರಿಷ್ಠ ಮಟ್ಟ ಶೇ. 6.95ಕ್ಕೆ ಏರಿಕೆಯಾಗಿದೆ. ಆಹಾರ ಪದಾರ್ಥಗಳ ಬೆಲೆಯೇರಿಕೆಯೇ ಚಿಲ್ಲರೆ ಹಣದುಬ್ಬರ ಏರಿಕೆಗೆ ಕಾರಣವಾಗಿದೆ. ಇದು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಗದಿಪಡಿಸಿರೋ ಗರಿಷ್ಠ ಸಹನಾ ಮಟ್ಟಕ್ಕಿಂತ (Tolerance level) ಸಾಕಷ್ಟು ಹೆಚ್ಚಿದೆ ಎಂದು ಕೇಂದ್ರ ಸರ್ಕಾರ (Central Government) ತಿಳಿಸಿದೆ. 

Retail Inflation: 17 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಚಿಲ್ಲರೆ ಹಣದುಬ್ಬರ; ಮಾರ್ಚ್ ನಲ್ಲಿ ಶೇ.6.95ಕ್ಕೆ ಏರಿಕೆ

ಸತತ ಮೂರು ತಿಂಗಳಿಂದ ಗ್ರಾಹಕ ದರ ಸೂಚ್ಯಂಕ (CPI) ಆಧಾರಿತ ಹಣದುಬ್ಬರ (Inflation) ಗರಿಷ್ಠ ಮಿತಿ ಶೇ.6ಕ್ಕಿಂತ ಹೆಚ್ಚಿನ ಮಟ್ಟ ತಲುಪಿದೆ. 2020ರ ಅಕ್ಟೋಬರ್‌ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ (Retail Inflation) ಶೇ. 7.61 ತಲುಪಿರೋದು ಈ ತನಕದ ಗರಿಷ್ಠ ಮಟ್ಟವಾಗಿದೆ. ಆಹಾರ ಹಣದುಬ್ಬರ 2022ರ ಮಾರ್ಚ್ ನಲ್ಲಿ ಶೇ.5.85ನಿಂದ ಶೇ.7.68ಕ್ಕೆ ಏರಿಕೆಯಾಗಿತ್ತು.ಅದೇ ಕಳೆದ ಸಾಲಿನ (2021) ಮಾರ್ಚ್ ನಲ್ಲಿ ಚಿಲ್ಲರೆ ಹಣದುಬ್ಬರ ಶೇ.5.52ರಷ್ಟಿದ್ದರೆ, ಆಹಾರ ಹಣದುಬ್ಬರ (Food Inflation) ಶೇ.4.87ರಷ್ಟಿತ್ತು.

ತರಕಾರಿಗಳು, ಲೋಹಗಳು ಮತ್ತು ಹಾಲಿನಂತಹ ಪ್ರಮುಖ ಸರಕುಗಳ ಬೆಲೆಗಳು ಹೆಚ್ಚಾಗಿರುವ ನಡುವೆ ಪ್ರಸ್ತುತ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ನಡುವೆ ಅಂತರರಾಷ್ಟ್ರೀಯ ತೈಲ ಬೆಲೆಗಳು ಏರಿಕೆ ಆಗಿರುವುದು ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ ಹೇಳಿದೆ. ನಿಂಬೆ ಹಣ್ಣಿನ (Lemon) ಬೆಲೆ ಕೆ.ಜಿ.ಗೆ 300ರೂ. ಗಡಿ ದಾಟಿದೆ.  ಬೆಂಡೆಕಾಯಿ, ಹೀರೇಕಾಯಿ ಮುಂತಾದ ತರಕಾರಿಗಳ ಬೆಲೆ 100ರೂ. ಗಡಿ ದಾಟಿದೆ. ಇನ್ನು ಜೀರಿಗೆ, ಕೊತ್ತಂಬರಿ ಹಾಗೂ ಮೆಣಸಿನಕಾಯಿ ಬೆಲೆ ದುಬಾರಿಯಾಗಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!