ಆಗಸ್ಟ್ ತಿಂಗಳಲ್ಲಿ ಶೇ.12.41ಕ್ಕೆ ತಗ್ಗಿದ ಸಗಟು ಹಣದುಬ್ಬರ,ಇಳಿಕೆಯಾಗುತ್ತಾ ಅಗತ್ಯ ವಸ್ತುಗಳ ಬೆಲೆ?

By Suvarna News  |  First Published Sep 14, 2022, 5:04 PM IST

*ಆಗಸ್ಟ್ ತಿಂಗಳಲ್ಲಿ ಏರಿಕೆಯಾಗಿದ್ದ ಚಿಲ್ಲರೆ ಹಣದುಬ್ಬರ
*ಸತತ ಮೂರು ತಿಂಗಳಿಂದ ಸಗಟು ಹಣದುಬ್ಬರ ಇಳಿಕೆ 
*ಜುಲೈನಲ್ಲಿ ಶೇ.13.93ರಷ್ಟಿದ್ದ ಸಗಟು ಬೆಲೆ ಆಧಾರಿತ ಹಣದುಬ್ಬರ  


ನವದೆಹಲಿ (ಸೆ.14): ಆಗಸ್ಟ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಏರಿಕೆ ದಾಖಲಿಸಿದ್ರೆ, ಸಗಟು ಹಣದುಬ್ಬರ ಇಳಿಕೆಯಾಗಿದೆ.  ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗಿದ್ರೂ ಉತ್ಪಾದಿತ ವಸ್ತುಗಳ ದರದಲ್ಲಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಆಗಸ್ಟ್ ನಲ್ಲಿ ಸಗಟು ಹಣದುಬ್ಬರ ಶೇ.12.41ಕ್ಕೆ ತಗ್ಗಿದೆ. ಈ ಮೂಲಕ  ಸತತ ಮೂರು ತಿಂಗಳಿಂದ ಸಗಟು ಹಣದುಬ್ಬರ ಇಳಿಕೆ ದಾಖಲಿಸುತ್ತಿದೆ. ಜುಲೈನಲ್ಲಿ ಸಗಟು ಬೆಲೆ ಆಧಾರಿತ ಹಣದುಬ್ಬರ  ಶೇ.13.93 ರಷ್ಟಿತ್ತು. ಜೂನ್ ನಲ್ಲಿ ಶೇ.15.18ರಷ್ಟಿದ್ದ ಸಗಟು ಹಣದುಬ್ಬರ ಜುಲೈನಲ್ಲಿ ಶೇ.1.25ರಷ್ಟು ಇಳಿಕೆಯಾಗಿ ಶೇ.13.93 ತಲುಪಿತ್ತು. ಮೇನಲ್ಲಿ ದಾಖಲೆಯ ಶೇ.15.88ಕ್ಕೆ ತಲುಪಿತ್ತು. ಆಗಸ್ಟ್ ನಲ್ಲಿ ಸಗಟು ಹಣದುಬ್ಬರ ಇಳಿಕೆಯಾಗಿದ್ರೂ ಇನ್ನೂ ಎರಡಂಕಿಯಲ್ಲೇ ಇದೆ. ಸಗಟು ಹಣದುಬ್ಬರ ಸತತ 17 ತಿಂಗಳಿಂದ ಎರಡಂಕಿಯಲ್ಲಿದೆ. ಇನ್ನು ಆಹಾರ ಹಣದುಬ್ಬರ ಆಗಸ್ಟ್ ನಲ್ಲಿ ಶೇ. 12.37 ಕ್ಕೆ ಏರಿಕೆಯಾಗಿದೆ. ಜುಲೈನಲ್ಲಿ ಇದು ಶೇ.10.77ರಷ್ಟಿತ್ತು. ಇನ್ನು ತರಕಾರಿಗಳ ಬೆಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಶೇ.22.29ರಷ್ಟು ಏರಿಕೆಯಾಗಿದೆ. ಜುಲೈನಲ್ಲಿ ಇದು ಶೇ. 18.25ರಷ್ಟಿತ್ತು.  ತೈಲ ಹಾಗೂ ಇಂಧನ ಹಣದುಬ್ಬರ ಆಗಸ್ಟ್ ನಲ್ಲಿ ಶೇ.33.67ರಷ್ಟಿದೆ. ಇದು ಜುಲೈನಲ್ಲಿ ಶೇ.43.75ರಷ್ಟಿತ್ತು. 

ಚಿಲ್ಲರೆ ಹಣದುಬ್ಬರ ಹೆಚ್ಚಳ
ಭಾರತದ (India) ಚಿಲ್ಲರೆ ಹಣದುಬ್ಬರ (Retail Inflation), ಆಗಸ್ಟ್ ತಿಂಗಳಲ್ಲಿ ಶೇ.7ಕ್ಕೆ ಏರಿಕೆಯಾಗಿದೆ. ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.71ರಷ್ಟಿತ್ತು. ಆಹಾರ ಪದಾರ್ಥಗಳ (Food items) ಬೆಲೆ ಹೆಚ್ಚಳದ ಪರಿಣಾಮ ಆಗಸ್ಟ್ ನಲ್ಲಿ ಚಿಲ್ಲರೆ ಹಣದುಬ್ಬರ ಏರಿಕೆಯಾಗಿದೆ. ಗ್ರಾಹಕರ ಬೆಲೆ ಸೂಚ್ಯಂಕ ಅಥವಾ ಸಿಪಿಐ ಹಣದುಬ್ಬರ  (CPI Inflation) ಆರ್ ಬಿಐ ನಿಗದಿಪಡಿಸಿರುವ ಗರಿಷ್ಠ ಸಹನಾ ಮಟ್ಟ ಶೇ.6ರನ್ನು ಮೀರುತ್ತಿರೋದು ಇದು ಸತತ  ಎಂಟನೇ ಬಾರಿಯಾಗಿದೆ. ಆಗಸ್ಟ್ ನಲ್ಲಿ ಆಹಾರ ಹಣದುಬ್ಬರ ಕೂಡ ಏರಿಕೆಯಾಗಿದ್ದು, ಶೇ.7.62 ತಲುಪಿದೆ. ಜುಲೈನಲ್ಲಿ ಆಹಾರ ಹಣದುಬ್ಬರ ಕೂಡ ಶೇ.6.75ರಷ್ಟಿತ್ತು. 

Tap to resize

Latest Videos

ಬಂಗಾರದ ಮೇಲಿನ ಹೂಡಿಕೆ ಲಾಭದಾಯಕವೇ? ಯಾವಾಗ ಚಿನ್ನದ ಮೇಲೆ ಹೂಡಿಕೆ ಮಾಡ್ಬೇಕು?

ಆಹಾರ ಪದಾರ್ಥಗಳ ಬೆಲೆಯೇರಿಕೆ
ಸಿಪಿಐ ಹಣದುಬ್ಬರದಲ್ಲಿ (CPI Inflation) ಆಹಾರ ಹಣದುಬ್ಬರದ (Food Inflation) ಪಾಲು ಅರ್ಧದಷ್ಟಿರುವ ಕಾರಣ ಆಹಾರ ಪದಾರ್ಥಗಳ ಬೆಲೆಯೇರಿಕೆ ಗಮನಾರ್ಹ ಪರಿಣಾಮ ಬೀರುತ್ತದೆ. ಗೋಧಿ (Wheat) ಹಾಗೂ ಅಕ್ಕಿ (Rice) ರಫ್ತಿನ (Export) ಮೇಲೆ ನಿಷೇಧ  ಸೇರಿದಂತೆ ಕೇಂದ್ರ ಸರ್ಕಾರ (Central government) ಕೈಗೊಂಡ ಕ್ರಮಗಳ ಹೊರತಾಗಿಯೂ ದೇಶದಲ್ಲಿ ಚಿಲ್ಲರೆ ಹಣದುಬ್ಬರ (Retail Inflation) ಇಳಿಕೆಯಾಗಿಲ್ಲ.ಅಕ್ಕಿ, ಗೋಧಿ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದ ಪರಿಣಾಮ ಆಗಸ್ಟ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಮತ್ತೆ ಮೇಲೆ ಜಿಗಿದಿದೆ.

10 ಸಾವಿರಕ್ಕಿಂತಲೂ ಕಡಿಮೆ ಬಂಡವಾಳದಲ್ಲಿ ಶುರು ಮಾಡಬಹುದು ಈ ಬ್ಯುಸಿನೆಸ್

ರೆಪೋ ದರ ಹೆಚ್ಚಳ ಸಾಧ್ಯತೆ
ಆರ್ ಬಿಐ ಹಣಕಾಸು ನೀತಿ ಸಮಿತಿ (MPC) ಸಭೆ ಈ ತಿಂಗಳ ಕೊನೆಯಲ್ಲಿ ಅಂದರೆ ಸೆ.30ರಂದು ಪ್ರಾರಂಭವಾಗಲಿದೆ.  ಇದರಲ್ಲಿ ಹಣದುಬ್ಬರಕ್ಕೆ ಸಂಬಂಧಿಸಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಈ ಬಾರಿ ಆರ್ ಬಿಐ (RBI) ರೆಪೋ ದರವನ್ನು 50 ಬೇಸಿಸ್ ಮೂಲಾಂಕಗಳಷ್ಟು (Basis points) ಹೆಚ್ಚಳ ಮಾಡುವ ನಿರೀಕ್ಷೆಯಿದೆ. ಮೇನಿಂದ ಈ ತನಕ ಆರ್ ಬಿಐ ರೆಪೋ ದರವನ್ನು 140 ಮೂಲಾಂಕಗಳಷ್ಟು ಏರಿಕೆ ಮಾಡಿದ್ದು,ಪ್ರಸ್ತುತ ಶೇ.5.4ಕ್ಕೆ ತಲುಪಿದೆ. ರೆಪೋ ದರ ಏರಿಕೆಯಿಂದ ಗೃಹ ಸಾಲ ಹಾಗೂ ವಾಹನ ಸಾಲ ಸೇರಿದಂತೆ ವಿವಿಧ ಸಾಲಗಳ ಮೇಲಿನ ಬಡ್ಡಿದರ ಇನ್ನೊಮ್ಮೆ ಹೆಚ್ಚಳವಾಗಲಿದೆ. ಈಗಾಗಲೇ ಬಡ್ಡಿದರ ಹೆಚ್ಚಳದಿಂದ ಶಾಕ್ ಆಗಿರುವ ಜನಸಾಮಾನ್ಯರಿಗೆ ಅದರ ಬಿಸಿ ಇನ್ನಷ್ಟು ತಟ್ಟಲಿದೆ.
 

click me!