ನೀವು ಸಾವಿರಾರು ರೂಪಾಯಿ ಕೊಟ್ಟು ಖರೀದಿಸಿದ ಜೀನ್ಸ್ ಬಣ್ಣ ಬಿಡ್ತಿದ್ಯಾ? ಹಾಗಿದ್ರೆ ಈ ಸ್ಟೋರಿ ನೀವ್ ಓದ್ಲೇಬೇಕು. ಕೇವಲ ಐದು ವಾಶ್‌ನಲ್ಲಿ ಬಣ್ಣ ಕಳೆದುಕೊಂಡ ಬ್ರಾಂಡೆಡ್ ಜೀನ್ಸ್ ವಿರುದ್ಧ ಗ್ರಾಹಕರೊಬ್ಬರು ಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣದಲ್ಲಿ ಜಯಗಳಿಸಿದ್ದಾರೆ.
ಬೆಂಗಳೂರು: ನೀವು ಸಾವಿರಾರು ರೂಪಾಯಿ ಕೊಟ್ಟು ಖರೀದಿಸಿದ ಜೀನ್ಸ್ ಬಣ್ಣ ಬಿಡ್ತಿದ್ಯಾ? ಹಾಗಿದ್ರೆ ಈ ಸ್ಟೋರಿ ನೀವ್ ಓದ್ಲೇಬೇಕು. ಕೇವಲ ಐದು ವಾಶ್‌ನಲ್ಲಿ ಬಣ್ಣ ಕಳೆದುಕೊಂಡ ಬ್ರಾಂಡೆಡ್ ಜೀನ್ಸ್ ವಿರುದ್ಧ ಗ್ರಾಹಕರೊಬ್ಬರು ಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣದಲ್ಲಿ ಜಯಗಳಿಸಿದ್ದಾರೆ. ಗ್ರಾಹಕನಿಗೆ 4,016 ರೂಪಾಯಿ ಜೊತೆ 1 ಸಾವಿರ ಸೇರಿ ಒಟ್ಟು 5 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಈ ಪ್ರಕರಣದಲ್ಲಿ ಈಗ ನ್ಯಾಯಾಲಯ ಆದೇಶಿಸಿದೆ.
ಘಟನೆ ಹಿನ್ನೆಲೆ:
ಏಪ್ರಿಲ್ 16, 2023 ರಂದು, ಬೆಂಗಳೂರಿನ ಡಾ ರಾಜ್‌ಕುಮಾರ್ ರಸ್ತೆಯ ನಿವಾಸಿ ಹರಿಹರನ್ ಬಾಬು ಎಕೆ ಎಂಬುವವರು ಬಸವೇಶ್ವರನಗರದಲ್ಲಿರುವ ಆದಿತ್ಯ ಬಿರ್ಲಾ ಫ್ಯಾಷನ್ ಮತ್ತು ರಿಟೇಲ್ ಲಿಮಿಟೆಡ್ (ABFRL)ನ ಶೋರೂಮ್‌ಗೆ ಭೇಟಿ ನೀಡಿ, ಅಲ್ಲಿ ಒಂದು ಜೋಡಿ ನೀಲಿ ವ್ಯಾನ್ ಹ್ಯೂಸೆನ್ ಬ್ರಾಂಡ್‌ನ ಜೀನ್ಸ್‌ನ್ನು ಖರೀದಿಸಿದರು. ಆದರೆ ತೊಳೆಯುವಾಗಲೆಲ್ಲಾ ಬಣ್ಣ ಬಿಡುತ್ತಿದ್ದ ಈ ಜೀನ್ಸ್ ಕೇವಲ ಐದು ವಾಶ್‌ನಲ್ಲಿ ಸಂಪೂರ್ಣ ಬಣ್ಣ ಮಾಸಿ ಹೋಗಿತ್ತು.
ಖರೀದಿಸಿದ ಮೂರು ತಿಂಗಳಲ್ಲೇ ಜೀನ್ಸ್ ಪ್ಯಾಂಟ್ ಬಣ್ಣ ಮಾಸಿದ್ದರಿಂದ ಬೇಸರಗೊಂಡ ಜೀನ್ಸ್ ಪ್ಯಾಂಟ್ ಮಾಲೀಕ ಈ ವಿಚಾರವಾಗಿ ತಾವು ಜೀನ್ಸ್ ಪ್ಯಾಂಟ್ ಖರೀದಿಸಿದ್ದ ಶೋ ರೂಮ್ ಅನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದರು. ಜೊತೆಗೆ ಹಲವು ಬಾರಿ ಇ ಮೇಲ್ ಮೂಲಕ ಬಣ್ಣ ಮಾಸಿದ ಈ ಜೀನ್ಸ್ ಪ್ಯಾಂಟ್‌ನ ಫೋಟೋಗಳನ್ನು ಕಳಿಸಿ ಎಬಿಎಫ್‌ಆರ್‌ಎಲ್‌ನಿಂದ ಸಕರಾತ್ಮಕ ಪ್ರತಿಕ್ರಿಯೆಯ ಜೊತೆ ಹಣ ವಾಪಸ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಅಲ್ಲದೇ ಅಲ್ಲಿನ ಗ್ರಾಹಕ ಸೇವೆಗಳ ಅಧಿಕಾರಿಗಳ ಸಲಹೆಯಂತೆ ಅವರು ಈ ಬಣ್ಣ ಹೋದ ಜೀನ್ಸ್ ಪ್ಯಾಂಟ್‌ಗಳನ್ನು ಬಸವೇಶ್ವರ ನಗರದ ಶೋ ರೂಮ್‌ಗೆ ಮರಳಿಸಿದ್ದರು. ಇದಾದ ನಂತರ ಜುಲೈ 31 2023ರ ಈ ಪ್ರಕರಣವನ್ನು ಆಗಸ್ಟ್ 30 ರಂದು ಮುಕ್ತಾಯಗೊಳಿಸಿದ ಶೋ ರೂಮ್, ಈ ಜೀನ್ಸ್‌ನಲ್ಲಿ ಬಳಸುವ ಇಂಡಿಗೋ ಡೈ ತೊಳೆಯುವ ನಂತರ ಕ್ರಮೇಣ ಬಣ್ಣವನ್ನು ಕಳೆದುಕೊಳ್ಳುವ ನೈಸರ್ಗಿಕ ಪ್ರವೃತ್ತಿಯನ್ನು ಹೊಂದಿದೆ, ಪ್ರತಿ ಬಾರಿ ತೊಳೆದ ನಂತರ ಪ್ಯಾಂಟ್ ಮಸುಕಾಗುತ್ತದೆ ಮತ್ತು ತಿಳಿ ಬಣ್ಣಕ್ಕೆ ತಿರುಗುತ್ತದೆ ಎಂದು ಗ್ರಾಹಕನಿಗೆ ಹೇಳಿ ಸುಮ್ಮನಾಗಿದೆ.
ರಿಪ್ಡ್ ಜೀನ್ಸ್ ಧರಿಸುವ ಯುವಕರೇ ಎಚ್ಚರ; ಹರಿದ ಬಟ್ಟೆ ಧರಿಸಿದರೆ ಏನಾಗುತ್ತೆ ಗೊತ್ತಾ?
ಇದರಿಂದ ಸಿಟ್ಟಿಗೆದ್ದ ಜೀನ್ಸ್ ಪ್ಯಾಂಟ್ ಗ್ರಾಹಕ ಸೀದಾ ಹೋಗಿ ಬೆಂಗಳೂರು ನಗರದ ಶಾಂತಿನಗರದಲ್ಲಿರುವ 2ನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವನ್ನು ಸಂಪರ್ಕಿಸಿದ್ದಾರೆ. ನ್ಯಾಯ ಸಮ್ಮತವಲ್ಲದ ವ್ಯಾಪಾರ ಪ್ರಕ್ರಿಯೆ ಮಾಡುತ್ತಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಆರಂಭವಾದ ಈ ಪ್ರಕರಣದಲ್ಲಿ ಗ್ರಾಹಕ ಬಾಬು ಅವರು ಮಸುಕಾದ ಬಟ್ಟೆಯ ಫೋಟೋಗಳು ಸೇರಿದಂತೆ ಪುರಾವೆಯೊಂದಿಗೆ ತಮ್ಮದೇ ಆದ ವಾದವನ್ನು ಮಂಡಿಸಿದರು. ಆದರೆ ಇತ್ತ ABFRL ಪ್ರತಿನಿಧಿಗಳು ನೋಟಿಸ್ ನೀಡಿದ್ದರೂ ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾದರು.
ಈ ಹಿನ್ನೆಲೆಯಲ್ಲಿ ಫೆಬ್ರವರಿ 5 ರಂದು ಈ ಪ್ರಕರಣದ ತೀರ್ಪು ನೀಡಿದ ಗ್ರಾಹಕ ನ್ಯಾಯಾಲಯದ ನ್ಯಾಯಾಧೀಶರು, ಮಾರಾಟದ ವೇಳೆ ಈ ಡೆನಿಮ್ ಪ್ಯಾಂಟ್ ಅನ್ನು ತೊಳೆಯುವುದರ ಬಗ್ಗೆಯೂ ಸಂಸ್ಥೆ ಯಾವುದೇ ಸೂಚನೆ ನೀಡಿಲ್ಲ, ಜೊತೆಗೆ ಫ್ಯಾಬ್ರಿಕ್ ಗುಣಮಟ್ಟದ ಅವಧಿ ಎಲ್ಲಿವರೆಗೆ ಇರುತ್ತದೆ ಎಂಬುದನ್ನು ಗ್ರಾಹಕರಿಗೆ ತಿಳಿಸಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಧೀಶರು, ಎಬಿಆರ್‌ಎಫ್ಎಲ್ ಸಂಸ್ಥೆಗೆ 1000 ರೂಪಾಯಿ ಪರಿಹಾರದ ಜೊತೆ ಜೀನ್ಸ್‌ನ ಬೆಲೆ 4,016 ರೂಪಾಯಿಯನ್ನು ಮರು ಪಾವತಿ ಮಾಡಬೇಕು ಎಂದು ತೀರ್ಪು ನೀಡಿದೆ. ಈ ಆದೇಶವಾದ 60 ದಿನದೊಳಗೆ ಸಂಪೂರ್ಣ ಪಾವತಿ ನೀಡಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಸಂಪೂರ್ಣ ಹರಿದಿರೋ ಜೀನ್ಸ್ ಲೇಟೆಸ್ಟ್ ಫ್ಯಾಷನ್, ಈ ಪ್ಯಾಂಟ್ ಬೆಲೆಯಲ್ಲಿ ಐಫೋನ್ ಕೊಳ್ಬೋದು!