ಉತ್ತರಾಧಿಕಾರಿ ನೇಮಕಕ್ಕೆ ಮಕ್ಕಳ ಅಡಿಷನ್ ನಡೆಸಿದ ವಿಶ್ವದ ಸಿರಿವಂತ; ಯಾರ ಕೈಗೆ ಅಧಿಕಾರ ನೀಡ್ತಾರೆ ಅರ್ನಾಲ್ಟ್ ?

By Suvarna NewsFirst Published Apr 26, 2023, 11:01 AM IST
Highlights

ತಂದೆ ಕಟ್ಟಿದ ಉದ್ಯಮ,ಆಸ್ತಿಗೆ ಮಕ್ಕಳೇ ಉತ್ತರಾಧಿಕಾರಿಗಳು.ಅಧಿಕಾರ ಹಸ್ತಾಂತರಿಸುವ ಮುನ್ನ ಸಾಮಾನ್ಯವಾಗಿ ಮಕ್ಕಳ ಸಾಮರ್ಥ್ಯ ಪರೀಕ್ಷಿಸುವ ಕೆಲಸಕ್ಕೆ ತಂದೆ ಮುಂದಾಗೋದು ವಿರಳ.ಆದರೆ, ಜಗತ್ತಿನ ಶ್ರೀಮಂತ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ ತನ್ನ ಉದ್ಯಮ ಸಾಮ್ರಾಜ್ಯಕ್ಕೆ ಐವರು ಮಕ್ಕಳಲ್ಲಿ ಯಾರು ಸೂಕ್ತ ಉತ್ತರಾಧಿಕಾರಿ ಎಂಬುದನ್ನು ಪತ್ತೆ ಹಚ್ಚಲು ಅವರ ಅಡಿಷನ್ ನಡೆಸಿದ್ದಾರೆ. 
 

Business Desk:ಶ್ರೀಮಂತ ಉದ್ಯಮಿಗಳ ಕೋಟ್ಯಂತರ ರೂಪಾಯಿ ಮೌಲ್ಯದ ಉದ್ಯಮಕ್ಕೆ ಅವರ ಮಕ್ಕಳೇ ಉತ್ತರಾಧಿಕಾರಿಗಳು ಎಂಬ ಸತ್ಯ ಎಲ್ಲರಿಗೂ ಗೊತ್ತಿರೋದೆ. ಆದರೆ, ಕಷ್ಟಪಟ್ಟು ಬೆಳೆಸಿದ ಉದ್ಯಮವನ್ನು ಮಕ್ಕಳ ಕೈಗೆ ಹಸ್ತಾಂತರಿಸುವ ಮುನ್ನ ಯಾರು ಕೂಡ ಅವರ ಸಾಮರ್ಥ್ಯವನ್ನು ಪರೀಕ್ಷಿಸುವ ಗೋಜಿಗೆ ಹೋಗೋದಿಲ್ಲ. ಬಹುತೇಕ ಎಲ್ಲ ಉದ್ಯಮಿಗಳ ಮಕ್ಕಳು ಅವರ ತಂದೆಯ ಉದ್ಯಮದ ಉಸ್ತುವರಿಯನ್ನು ನೋಡಿಕೊಳ್ಳುವುದನ್ನು ನಾವು ನೋಡಬಹುದು. ಇತ್ತೀಚೆಗಷ್ಟೇ ರಿಲಯನ್ಸ್ ಸಮೂಹದ ಮುಖ್ಯಸ್ಥ ಮುಖೇಶ್ ಅಂಬಾನಿ ತಮ್ಮ ಮೂವರು ಮಕ್ಕಳಿಗೆ ವಿವಿಧ ಜವಾಬ್ದಾರಿಗಳನ್ನು ಹಂಚಿಕೆ ಮಾಡಿರೋದು ತಿಳಿದೇ ಇದೆ. ಆದರೆ, ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಬರ್ನಾರ್ಡ್ ಅರ್ನಾಲ್ಟ್ ಮಾತ್ರ ತನ್ನ ಉದ್ಯಮವನ್ನು ಮಕ್ಕಳ ಕೈಗೆ ನೀಡುವ ಮುನ್ನ ಅವರ ಸಾಮರ್ಥ್ಯ ಪರೀಕ್ಷೆ ನಡೆಸಿದ್ದಾರೆ. ಲೂಯಿಸ್ ವಿಟ್ಟನ್ (ಎಲ್ ವಿ ಎಂಎಚ್) ಮುಖ್ಯಸ್ಥ ತನ್ನ ಉದ್ಯಮ ಸಾಮ್ರಾಜ್ಯಕ್ಕೆ ಸಮರ್ಥ ಉತ್ತರಾಧಿಕಾರಿಯನ್ನು ನೇಮಿಸಲು ತನ್ನ ಐವರು ಮಕ್ಕಳಿಗೆ ತಿಂಗಳಿಗೊಮ್ಮೆ ಸಂದರ್ಶನ ನಡೆಸುತ್ತಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ತಿಳಿಸಿದೆ.

ಎಲ್ ವಿ ಎಂಎಚ್ ಮೊಯೆಟ್ ಹೆನ್ನೆಸ್ಸಿ ಲೂಯಿಸ್ ವಿಟಾನ್ ಎಸ್ ಇ ಪ್ರಧಾನ ಕಚೇರಿಯ ಖಾಸಗಿ ಡೈನಿಂಗ್ ಏರಿಯಾದಲ್ಲಿ ಅರ್ನಾಲ್ಟ್ ತನ್ನ ಮಕ್ಕಳ ಜೊತೆಗೆ ಮಧ್ಯಾಹ್ನದ ಊಟ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಕ್ಕಳ ಜೊತೆಗೆ  90 ನಿಮಿಷಗಳನ್ನು ಕಳೆದಿರುವ ಅವರು, ಕಂಪನಿಗೆ ಸಂಬಂಧಿಸಿದ ವಿಷಯಗಳು ಹಾಗೂ ಯೋಜನೆಗಳ ಬಗ್ಗೆ ಸುಮಾರು 90 ನಿಮಿಷಗಳ ಕಾಲ ಮಾತನಾಡಿದ್ದಾರೆ. ಸಂಸ್ಥೆಗೆ ಸಂಬಂಧಿಸಿದ ಅನೇಕ ವಿಚಾರಗಳ ಬಗ್ಗೆ ಮಕ್ಕಳ ಜೊತೆಗೆ ಚರ್ಚೆ ನಡೆಸಿದ್ದಾರೆ. ಅಲ್ಲದೆ ಅವರ ಅಡಿಷನ್ ನಡೆಸಿದ್ದಾರೆ.  ಈ ಆಡಿಷನ್ ಆಧಾರದಲ್ಲಿ ಅಂತಿಮವಾಗಿ ಒಬ್ಬರನ್ನು ಆಯ್ಕೆ ಮಾಡಲಿದ್ದಾರೆ ಕೂಡ. ಆಯ್ಕೆಯಾದವರಿಗೆ ತನ್ನ ಉದ್ಯಮ ಸಾಮ್ರಾಜ್ಯವನ್ನು ಅರ್ನಾಲ್ಟ್ ವಹಿಸಿಕೊಡಲಿದ್ದಾರೆ.  ಆದರೆ, ಈ ತನಕ ತನ್ನ ಐವರು ಮಕ್ಕಳಲ್ಲಿ ಯಾರಿಗೆ ಅಧಿಕಾರ ವಹಿಸಿಕೊಡಲಿದ್ದೇನೆ ಎಂಬ ಬಗ್ಗೆ ಅರ್ನಾಲ್ಟ್ ಮಾಹಿತಿ ನೀಡಿಲ್ಲ. 

ರಿಲಯನ್ಸ್ ಉದ್ಯೋಗಿಗೆ 1500 ಕೋಟಿ ಮೌಲ್ಯದ ಬಂಗಲೆ ಗಿಫ್ಟ್; ಮುಖೇಶ್ ಅಂಬಾನಿ ಈ ದುಬಾರಿ ಉಡುಗೊರೆ ನೀಡಿದ್ದು ಯಾರಿಗೆ?

ಬರ್ನಾರ್ಡ್ ಅರ್ನಾಲ್ಟ್ ಲೂಯಿ ವಿಟಾನ್, ಗಿವೆಂಚಿ ಮತ್ತು ಕೆಂಜೂ ಸೇರಿದಂತೆ ಹಲವಾರು ಬ್ರಾಂಡ್ ಗಳನ್ನು ಹೊಂದಿರುವ ಕಂಪನಿಯ ಸಿಇಒ ಆಗಿದ್ದಾರೆ. ಅರ್ನಾಲ್ಟ್ ಎಲ್ ವಿಎಂಎಚ್ ನ ದೊಡ್ಡ ಮೊತ್ತದ ಷೇರುಗಳನ್ನು 1989ರಲ್ಲಿ ಖರೀದಿಸಿದ್ದರು. ಫೋರ್ಬ್ಸ್ ವರದಿ ಪ್ರಕಾರ 2022ರ ಡಿಸೆಂಬರ್ ನಲ್ಲಿ ಅರ್ನಾಲ್ಟ್ ಕುಟುಂಬದ ನಿವ್ವಳ ಆದಾಯ 188.6 ಬಿಲಿಯನ್ ಡಾಲರ್ ಆಗಿತ್ತು. 

ಬರ್ನಾರ್ಡ್ ಅರ್ನಾಲ್ಟ್ ಎರಡು ಮದುವೆಯಾಗಿದ್ದು, ಅವರಿಗೆ ಒಟ್ಟು ಐವರು ಮಕ್ಕಳಿದ್ಶಾರೆ. ಇವರೆಲ್ಲರೂ ಎಲ್ ವಿಎಂಎಚ್ ನ ಅಂಗಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಅರ್ನಾಲ್ಟ್ ದ್ವಿತೀಯ ಪುತ್ರ ಆಂಟನಿ ಅರ್ನಾಲ್ಟ್ ಕ್ರಿಶ್ಚಿಯನ್ ಡಿಯಾರ್ ಎಸ್ ಇ ಎಂಬ ಸಂಸ್ಥೆ ಸ್ಥಾಪಿಸಿದ್ದಾರೆ. ಅರ್ನಾಲ್ಟ್ 1949ರಲ್ಲಿ ಫ್ರಾನ್ಸ್ ರೌಬೆಕ್ಸ್ ನಲ್ಲಿ ಜನಿಸಿದ್ದು, ಇಕೋಲ್ ಪಾಲಿಟೆಕ್ನಿಕ್ ಎಲೈಟ್ ಇಂಜಿನಿಯರಿಂಗ್ ಸ್ಕೂಲ್ ನಿಂದ ಪದವಿ ಪಡೆದಿದ್ದಾರೆ.1981ರಲ್ಲಿ ಯುಎಸ್ ತಲುಪಿದ್ದಾರೆ.

ಕಾಫಿ ಮಾರುಕಟ್ಟೆಗೆ ರಿಲಯನ್ಸ್ ಎಂಟ್ರಿ; ಟಾಟಾ ಸ್ಟಾರ್ ಬಕ್ಸ್ ಗೆ ಹೊಸ ಪ್ರತಿಸ್ಪರ್ಧಿ

ಬ್ಲೂಮ್ ಬರ್ಗ್ ಬಿಲಿಯನರ್ಸ್ ಸೂಚ್ಯಂಕದ ಅನ್ವಯ ಕಳೆದ ವರ್ಷ ಅರ್ನಾಲ್ಟ್ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರನ್ನು ಹಿಂದಿಕ್ಕಿ ವಿಶ್ಬದ ನಂ.1 ಸಿರಿವಂತನ ಪಟ್ಟವನ್ನು ಅಲಂಕರಿಸಿದ್ದರು. ಅರ್ನಾಲ್ಟ್ ಅವರ ನಿವ್ವಳ ಸಂಪತ್ತು 24,320 ಕೋಟಿ ರೂ. ಇದೆ. ತನ್ನ ಈ ಸಂಪತ್ತಿಗೆ ಉತ್ತರಾಧಿಕಾರಿಯಾಗಿ ಅರ್ನಾಲ್ಟ್ ಯಾರನ್ನು ನೇಮಕ ಮಾಡುತ್ತಾರೆ ಎಂಬುದು ಸದ್ಯದ ಕುತೂಹಲ. ಇದಕ್ಕೆ ಶೀಘ್ರವೇ ಉತ್ತರ ಸಿಗುವ ನಿರೀಕ್ಷೆಯಿದೆ. 

click me!