
ಬೆಂಗಳೂರು(ಆ.14): ಭಾರತೀಯ ವೈಮಾನಿಕ ಪ್ರದರ್ಶನ ಈ ಬಾರಿ ಬೆಂಗಳೂರು ನಗರದ ಕೈತಪ್ಪಿ ಹೋದರೆ ನಗರದ ಹೊಟೇಲ್ ಉದ್ಯಮದ ಮೇಲೂ ದುಷ್ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ. ಏರೋ ಇಂಡಿಯಾ ಶೋ ಬೆಂಗಳೂರು ಕೈತಪ್ಪಿ ಹೋದರೆ ಹೊಟೇಲ್ ಉದ್ಯಮದ ಮೇಲೆ ತೀವ್ರ ಹೊಡೆತ ಬೀಳಲಿದ್ದು, ಸುಮಾರು 500 ಕೋಟಿ ರೂ. ನಷ್ಟವಾಗಲಿದೆ ಎಂದು ಕೈಗಾರಿಕಾ ತಜ್ಞರು ಹೇಳಿದ್ದಾರೆ.
ವಿದೇಶಿ ಕಂಪನಿಗಳು ಮತ್ತು ಉನ್ನತ ಕಂಪನಿಗಳ ಅಧಿಕಾರಿಗಳು, ಅಂತರಿಕ್ಷ ಕೈಗಾರಿಕೆಗಳ ಉದ್ಯಮಿಗಳು ಏರ್ ಶೋದಲ್ಲಿ ಭಾಗವಹಿಸುವುದರಿಂದ, ಹೊಟೇಲ್ ಉದ್ಯಮ ವೇಗ ಪಡೆದುಕೊಳ್ಳುತ್ತದೆ. ವೈಮಾನಿಕ ಪ್ರದರ್ಶನಕ್ಕೆ ಬರುವ ಉದ್ಯಮಿಗಳು ಕೆಲವು ತಿಂಗಳುಗಳ ಹಿಂದೆಯೇ ಹೊಟೇಲ್ ಗಳನ್ನು ಬುಕ್ಕಿಂಗ್ ಮಾಡುತ್ತಾರೆ.
ಆದರೆ ಈ ಬಾರಿ ಏರೋ ಇಂಡಿಯಾ ಶೋ ಎಲ್ಲಿ ನಡೆಯುತ್ತದೆ ಎಂಬ ಗೊಂದಲ ಇರುವುದರಿಂದ ಇನ್ನೂ ಬುಕ್ಕಿಂಗ್ ಆಗಿಲ್ಲ ಎಂದು ಹೊಟೇಲ್ ಉದ್ಯಮದ ಮೂಲಗಳು ತಿಳಿಸಿವೆ. ಅಲ್ಲದೇ ಸಾರಿಗೆ ಉದ್ಯಮದಲ್ಲಿ ಕೂಡ ಇಂತಹದ್ದೇ ಪರಿಸ್ಥಿತಿ ಇದ್ದು, ವೈಮಾನಿಕ ಪ್ರದರ್ಶನಕ್ಕೆ ಮುನ್ನ ದುಬಾರಿ ಕಾರುಗಳನ್ನು ಕಾಯ್ದಿರಿಸಲು ಇದುವರೆಗೂ ಮನವಿಗಳು ಬಂದಿಲ್ಲ ಎನ್ನಲಾಗಿದೆ.
ಕೊನೆ ಕ್ಷಣದಲ್ಲಿ ಏರೋ ಇಂಡಿಯಾ ಶೋ ರದ್ದುಪಡಿಸಿದರೆ ಉನ್ನತ ಅಧಿಕಾರಿಗಳು ಬರುವಾಗ ಮುಜುಗರವಾಗುತ್ತದೆ ಎನ್ನುತ್ತಾರೆ ಬೆಂಗಳೂರು ಪ್ರವಾಸಿಗರ ಟ್ಯಾಕ್ಸಿ ನಿರ್ವಾಹಕರ ಸಂಘದ ಅಧ್ಯಕ್ಷ ಕೆ ರಾಧಾಕೃಷ್ಣ ಹೊಳ್ಳ.ವೈಮಾನಿಕ ಪ್ರದರ್ಶನವನ್ನು ಬೆಂಗಳೂರಿನಲ್ಲಿಯೇ ನಡೆಸಬೇಕೆಂದು ಸಂಘಟನೆ ಇತ್ತೀಚೆಗೆ ರಕ್ಷಣಾ ಸಚಿವರು ಮತ್ತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.