Cryptocurrency: ತೀವ್ರ ಕುಸಿತ ಕಂಡ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ; ಇದಕ್ಕೇನು ಕಾರಣ? ಹೂಡಿಕೆದಾರರು ಏನ್ ಮಾಡ್ಬೇಕು?

By Suvarna NewsFirst Published May 10, 2022, 8:26 PM IST
Highlights

*ಟಾಪ್ ಕ್ರಿಪ್ಟೋಕರೆನ್ಸಿಗಳ ಬೆಲೆಯಲ್ಲಿ ಗಣನೀಯ ಇಳಿಕೆ 
*ಕ್ರಿಪ್ಟೋ ಕರೆನ್ಸಿ ಮಾರಾಟ ಮಾಡಿ ಬೇರೆ ಕಡೆ ಹೂಡಿಕೆ ಮಾಡಲು ಪ್ರಯತ್ನಿಸುತ್ತಿರುವ ಹೂಡಿಕೆದಾರರು
*31,008 ಡಾಲರ್ ನಲ್ಲಿ ವಹಿವಾಟು ನಡೆಸುತ್ತಿರುವ ಬಿಟ್ ಕಾಯಿನ್ 
 

Business Desk:ಕ್ರಿಪ್ಟೋ ಕರೆನ್ಸಿ (cryptocurrency) ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಕಂಡುಬಂದಿದ್ದು, ಕಳೆದ ಕೆಲವು ಗಂಟೆಗಳಲ್ಲಿ ಟಾಪ್ ಕ್ರಿಪ್ಟೋಕರೆನ್ಸಿಗಳ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿರುವುದು ಹೂಡಿಕೆದಾರರನ್ನು (Investors) ಚಿಂತೆಗೀಡು ಮಾಡಿದೆ. ಜಾಗತಿಕವಾಗಿ ಏರಿಕೆಯಾಗುತ್ತಿರುವ ಹಣದುಬ್ಬರದ (Inflation) ಹಿನ್ನೆಲೆಯಲ್ಲಿ ಕೇಂದ್ರೀಯ ಬ್ಯಾಂಕುಗಳು (Central Banks) ಬಡ್ಡಿದರ (Interest) ಏರಿಕೆ ಮಾಡಿರುವುದು ಹಾಗೂ ರಷ್ಯಾ (Russia) -ಉಕ್ರೇನ್ (Ukraine) ಸುದೀರ್ಘ ಯುದ್ಧದ ಪರಿಣಾಮ ಕ್ರಿಪ್ಟೋ ಕರೆನ್ಸಿ ಜಾಗತಿಕ ಮಾರುಕಟ್ಟೆ ಕುಸಿತ ಕಂಡಿದೆ.

ಬಿಟ್ ಕಾಯಿನ್ ಮೌಲ್ಯ ಕುಸಿತ
ಕಳೆದ 24 ಗಂಟೆಗಳಲ್ಲಿ ಜಾಗತಿಕ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯಲ್ಲಿ ಹಿಂದಿನ ದಿನಕ್ಕಿಂತ ಶೇ.9.83 ರಷ್ಟು ಕುಸಿತ ಕಂಡುಬಂದಿದ್ದು, 1.40 ಟ್ರಿಲಿಯನ್ ಡಾಲರ್ ಗೆ ಇಳಿಕೆಯಾಗಿದೆ. ಬಿಟ್ ಕಾಯಿನ್ 31,008 ಡಾಲರ್ ನಲ್ಲಿ ವಹಿವಾಟು ನಡೆಸುತ್ತಿದ್ದು, ಬೆಂಬಲ ಮಟ್ಟಕ್ಕಿಂತ ಶೇ.8.54 ಇಳಿಕೆಯಾಗಿದೆ. 69,000 ಡಾಲರ್ ಬಿಟ್ ಕಾಯಿನ್ ಸರ್ವಕಾಲಿಕ ಅಧಿಕ ದರವಾಗಿದೆ. ಮಂಗಳವಾರ (ಮೇ 10) ಪ್ರಾರಂಭದ ಅವಧಿಯಲ್ಲಿ ಕ್ರಿಪ್ಟೋಕರೆನ್ಸಿ 30,000 ಡಾಲರ್ ಗಿಂತ ಕೆಳಗಿಳಿದಿತ್ತು. ಆದರೆ, ಆ ಬಳಿಕ ನಿಧಾನ ಚೇತರಿಕೆ ಕಂಡಿತ್ತು.

ಸತತ ಮೂರನೇ ತ್ರೈಮಾಸಿಕದಲ್ಲಿ ಭಾರತದ ಸ್ಮಾರ್ಟ್‌ಫೋನ್ ಮಾರಾಟ ಕುಸಿತ: ಅಗ್ರಸ್ಥಾನ ಕಾಯ್ದುಕೊಂಡ ಶಾಓಮಿ

ಇತರ ಕ್ರಿಪ್ಟೋಕರೆನ್ಸಿಗಳ ಮೌಲ್ಯ ಕುಸಿತ
ಎರಡನೇ ಅತೀದೊಡ್ಡ ಕ್ರಿಪ್ಟೋಕರೆನ್ಸಿ ಇಥೆರಿಯಂ ಕೂಡ ಶೇ.7.06 ರಷ್ಟು ಇಳಿಕೆ ಕಂಡು 2,317 ಡಾಲರ್ ನಲ್ಲಿ ವಹಿವಾಟು ನಡೆಸಿತ್ತು. ADA ಶೇ.14.17 ಕುಸಿತ ದಾಖಲಿಸಿದ್ರೆ, SOL ಶೇ.14.77ರಷ್ಟು ಇಳಿಕೆ ಕಂಡಿತು.

ಕುಸಿತಕ್ಕೆ ಕಾರಣ ಏನು?
'2021 ರ ಜುಲೈ ಬಳಿಕ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಇದೇ ಮೊದಲ ಬಾರಿಗೆ 30,000 ಡಾಲರ್ ಗಿಂತ ಕಡಿಮೆ ಮಟ್ಟದಲ್ಲಿ ವಹಿವಾಟು ನಡೆಸಿದೆ. ಅಲ್ಲದೆ, ಕಳೆದ ವರ್ಷದ ನವೆಂಬರ್ ನಲ್ಲಿ ಬಿಟ್ ಕಾಯಿನ್ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದು, ಅದರ ಶೇ.56ಕ್ಕೆ ಕುಸಿತ ಕಂಡಿದೆ' ಎಂದು ಬೈ ಕಾಯಿನ್ ( BuyUcoin) ಸಿಇಒ ಶಿವಂ ಥಕ್ರಾಲ್ (Shivam Thakral) ತಿಳಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಹಣದುಬ್ಬರ ಏರಿಕೆ, ಕೇಂದ್ರ ಬ್ಯಾಂಕುಗಳು ಬಡ್ಡಿದರ ಏರಿಕೆ ಮಾಡಿರುವುದು, ರಷ್ಯಾ-ಉಕ್ರೇನ್ ಯುದ್ಧ, ರೂಪಾಯಿ ಮೌಲ್ಯ ಕುಸಿತ ಮುಂತಾದ ಕಾರಣಗಳು ಕ್ರಿಪ್ಟೋ ಮಾರುಕಟ್ಟೆ ಮೇಲೆ ಒತ್ತಡ ಹೇರುತ್ತಿವೆ. ಪರಿಣಾಮ ಹೂಡಿಕೆದಾರರು ಕ್ರಿಪ್ಟೋ ಕರೆನ್ಸಿಗಳನ್ನು ಮಾರಾಟ ಮಾಡಿ ಬೇರೆ ಕಡೆ ಹೂಡಿಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎನ್ನುತ್ತಾರೆ ಶಿವಂ ಥಕ್ರಾಲ್.

ಉತ್ತಮ ಖರೀದಿ ಅವಕಾಶ 
'ಕ್ರಿಪ್ಟೋ ಮಾರುಕಟ್ಟೆಯಲ್ಲಿ ಇನ್ನು ಮುಂದೆಯೂ ಸಾಕಷ್ಟು ನೋವುಗಳು ಎದುರಾಗಲಿವೆ. ಆದರೆ, ಮಾರುಕಟ್ಟೆಗಳನ್ನು ದೂರದೃಷ್ಟಿಯಿಂದ ಅವಲೋಕಿಸಿದರೆ ಹೂಡಿಕೆದಾರರಿಗೆ ಕ್ರಿಪ್ಟೋಕರೆನ್ಸಿಗಳನ್ನು ಖರೀದಿಸಲು ಇದು ಒಳ್ಳೆಯ ಸಮಯ. ಏಕೆಂದ್ರೆ ಬಿಟ್ ಕಾಯಿನ್ ಸುದೀರ್ಘ ಮೂಲತತ್ವಗಳನ್ನು ಹೊಂದಿದೆ' ಎನ್ನುತ್ತಾರೆ ಕ್ರಿಪ್ಟೋ ತಜ್ಞ ಶರತ್ ಚಂದ್ರ. 

Discount On iPhone:ಐಫೋನ್ ಖರೀದಿಸೋರಿಗೆ ಗುಡ್ ನ್ಯೂಸ್; ಅಮೆಜಾನ್ ನಲ್ಲಿ iPhone 12 ಖರೀದಿ ಮೇಲೆ 12000ರೂ. ಡಿಸ್ಕೌಂಟ್

ಕ್ರಿಪ್ಟೋ ಮೇಲೆ ನಿಯಂತ್ರಣ
ಜಗತ್ತಿನ ಬಹುತೇಕ ರಾಷ್ಟ್ರಗಳು ಕ್ರಿಪ್ಟೋ ಕರೆನ್ಸಿಗಳ ಮೇಲೆ ನಿಯಂತ್ರಣ ಹೇರಲು ಪ್ರಯತ್ನಿಸುತ್ತಿವೆ. ಆದರೂ ಕ್ರಿಪ್ಟೋ ಕರೆನ್ಸಿಗಳ ಬೆಲೆಯಲ್ಲಿ ಏರಿಕೆಯಾಗಿತ್ತು. ಭಾರತದಲ್ಲಿ ಕ್ರಿಪ್ಟೋ ಕರೆನ್ಸಿ ಸೇರಿದಂತೆ ಡಿಜಿಟಲ್‌ ಕರೆನ್ಸಿಗಳ ವರ್ಗಾವಣೆ ಮೇಲೆ ಶೇ.30ರಷ್ಟು ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಈ ಹಿಂದೆಯೇ ನಿರ್ಧಾರ ಕೈಗೊಂಡಿದೆ. ಇನ್ನು ಸರಕು ಮತ್ತು ಸೇವಾ ತೆರಿಗೆ ಮಂಡಳಿ (GST Council) ಕೂಡ ಕ್ರಿಪ್ಟೋ ಕರೆನ್ಸಿಗಳ ಮೇಲೆ ಶೇ.28ರಷ್ಟು ತೆರಿಗೆ ವಿಧಿಸುವ ಸಾಧ್ಯತೆಯಿದ್ದು, ಮಂಡಳಿಯ ಮುಂದಿನ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳುವ ಸಾಧ್ಯತೆಯಿದೆ. ಲಾಟರಿ, ಕ್ಯಾಸಿನೋ, ಬೆಟ್ಟಿಂಗ್ ಹಾಗೂ ರೇಸ್ ಕೋರ್ಸ್ ವರ್ಗದಲ್ಲೇ ಸರ್ಕಾರ ಕ್ರಿಪ್ಟೋ ವಹಿವಾಟನ್ನು ಕೂಡ ಪರಿಗಣಿಸುವ ಸಾಧ್ಯತೆಯಿದೆ.  ಕ್ರಿಪ್ಟೋ ರೆನ್ಸಿ ಆಧುನಿಕ ಡಿಜಿಟಲ್ ಕರೆನ್ಸಿಯಾಗಿದ್ದು, ಇದು ಭೌತಿಕ ರೂಪದಲ್ಲಿ ಲಭ್ಯವಿರುವುದಿಲ್ಲ. ಬದಲಿಗೆ ಎಲೆಕ್ಟ್ರಾನಿಕ್ ರೂಪದಲ್ಲಿರುತ್ತದೆ. ಇದರ ವಹಿವಾಟಿಗೆ ನಿರ್ದಿಷ್ಟ ಕಾನೂನಿನ ಚೌಕಟ್ಟಿಲ್ಲ. ಅಲ್ಲದೆ, ದೇಶ, ಭಾಷೆ ಹಾಗೂ ಬ್ಯಾಂಕಿನ ಪರಿಧಿಯೂ ಇಲ್ಲ. 

click me!