* ಮದುವೆ ನಂತ್ರ ನಾನು ಸರ್ನೇಮ್ ಬದಲಿಸಲ್ಲ ಅಂತಾ ಅನೇಕ ಹುಡುಗಿಯರು
* ಕೆಲವೊಮ್ಮೆ ಮದುವೆ ಸಂದರ್ಭದಲ್ಲಿ ಸರ್ನೇಮ್ ಇರಲಿ ಹುಡುಗಿ ಹೆಸರನ್ನೇ ಬದಲಿಸಲಾಗುತ್ತೆ
* ಮದುವೆಯಾದ್ಮೇಲೆ ಸರ್ನೇಮ್ ಬದಲಿಸದೆ ಹೋದ್ರೂ ಕೆಲವೊಂದು ದಾಖಲೆ ಬದಲಾಗಬೇಕು.
ಮದುವೆ (Marriage )ಜೀವನದ ಮಹತ್ವದ ಘಟ್ಟ. ಮದುವೆ ನಂತ್ರ ಮನೆ,ಕೆಲಸ,ಜವಾಬ್ದಾರಿ ಎಲ್ಲವೂ ಬದಲಾಗುತ್ತದೆ. ಹೊಸ ಜನರ ಜೊತೆ ಬಾಳ್ವೆ ಮಾಡಬೇಕಾಗುತ್ತದೆ.ವಿವಾಹದ ನಂತ್ರ ಹೊಸ ಜೀವನಕ್ಕೆ ಹೊಂದಿಕೊಳ್ಳುವುದು ಮಾತ್ರವಲ್ಲ ಕೆಲವೊಂದು ದಾಖಲೆ (Document)ಗಳಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ವಿವಾಹದ ನಂತ್ರ ಗಂಡನ ಸರ್ ನೇಮ್ ಇಟ್ಟುಕೊಳ್ಳುವ ಕಾಲ ಈಗಿಲ್ಲ. ಅನೇಕ ಮಹಿಳೆಯರು ಹಳೆ ಸರ್ ನೇಮ್ ಮುಂದುವರೆಸುತ್ತಾರೆ. ಕೆಲವರಿ ಸರ್ ನೇಮ್ ಬದಲಿಸಲು ಇಚ್ಛಿಸುತ್ತಾರೆ. ಸರ್ ನೇಮ್ ಬದಲಾವಣೆ ಜೊತೆಗೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಇನ್ನೂ ಅನೇಕ ದಾಖಲೆಗಳಲ್ಲಿ ಹೆಸರು ಮತ್ತು ವಿಳಾಸವನ್ನು ಬದಲಾಯಿಸಬೇಕಾಗಿದೆ. ಇತ್ತೀಚೆಗಷ್ಟೆ ಮದುವೆಯಾಗಿದ್ದರೆ ಅಥವಾ ಮದುವೆಯಾಗುವ ತಯಾರಿಯಲ್ಲಿದ್ದರೆ ಹುಡುಗಿಯರು ಮದುವೆ ನಂತ್ರ ಯಾವ ದಾಖಲೆಗಳನ್ನು ನವೀಕರಿಸಬೇಕು ಎಂಬುದನ್ನು ತಿಳಿದಿರಬೇಕು. ಮದುವೆ ನಂತ್ರ ಯಾವೆಲ್ಲ ದಾಖಲೆ ಬದಲಾಗಬೇಕು ಎಂಬ ಮಾಹಿತಿಯನ್ನು ಇಲ್ಲಿ ನೀಡ್ತೆವೆ.
ಮತದಾರರ ಗುರುತಿನ ಚೀಟಿ (Voter ID card): ಭಾರತದ ಪ್ರತಿಯೊಬ್ಬ ಪ್ರಜೆ ಚುನಾವಣೆಯಲ್ಲಿ ಹಕ್ಕು ಚಲಾಯಿಸಲು ಮತದಾರರ ಚೀಟಿ ಹೊಂದಿರುತ್ತಾನೆ. 18 ವರ್ಷವಾಗ್ತಿದ್ದಂತೆ ವೋಟರ್ ಐಡಿ ಸಿಗುತ್ತದೆ. ಇದರಲ್ಲಿ ಮತದಾರನ ವಿಳಾಸವಿರುತ್ತದೆ. ಆ ಕ್ಷೇತ್ರದಲ್ಲಿ ಆತ ಮತದಾನ ಮಾಡಬೇಕಾಗುತ್ತದೆ. ಮದುವೆಯ ನಂತರ ಹೆಣ್ಣುಮಕ್ಕಳು ತಮ್ಮ ತಾಯಿಯ ಮನೆಯನ್ನು ತೊರೆದು ತಮ್ಮ ಗಂಡನೊಂದಿಗೆ ವಾಸ ಶುರುಮಾಡ್ತಾರೆ. ಆಗ ವಿಳಾಸ ಬದಲಾಗುತ್ತದೆ. ಹಾಗಾಗಿ ನೀವು ಮತದಾರರ ಗುರುತಿನ ಚೀಟಿಯನ್ನು ಬದಲಾಯಿಸಬೇಕಾಗುತ್ತದೆ. ವಿಳಾಸವನ್ನು ಬದಲಾಯಿಸದಿದ್ದರೆ, ಹಳೆಯ ವಿಳಾಸದ ಕ್ಷೇತ್ರಕ್ಕೆ ಹೋಗಿ ಮತದಾನ ಮಾಡಬೇಕಾಗುತ್ತದೆ.ಬರೀ ಇದೊಂದೇ ಕಾರಣವಲ್ಲ. ಮತದಾರರ ಚೀಟಿ,ಅನೇಕ ಕೆಲಸಗಳಿಗೆ ದಾಖಲೆಗಳಾಗಿವೆ. ಅದರಲ್ಲಿರುವ ವಿಳಾಸ ಬದಲಾಗದೆ ಹೋದಲ್ಲಿ ಸಮಸ್ಯೆಯಾಗುತ್ತದೆ.
ಆಧಾರ್ ಕಾರ್ಡ್ (Aadhaar Card): ಭಾರತದ ನಾಗರಿಕರಿಗೆ ಆಧಾರ್ ಕಾರ್ಡ್ ಅತ್ಯಂತ ಪ್ರಮುಖ ದಾಖಲೆಯಾಗಿದೆ. ಆಧಾರ್ ಕಾರ್ಡನ್ನು ವಿಳಾಸ ಪುರಾವೆಯಾಗಿಯೂ ಬಳಸಲಾಗುತ್ತದೆ. ಮದುವೆಯ ನಂತರ ಹುಡುಗಿಯರ ವಿಳಾಸ ಬದಲಾಗುವುದು ಸರ್ವೆ ಸಾಮಾನ್ಯ. ಕೆಲವೊಮ್ಮೆ ಉಪನಾಮವನ್ನು ಸಹ ಬದಲಾಯಿಸಿರುತ್ತಾರೆ. ಇಂಥ ಸಂದರ್ಭದಲ್ಲಿ ಮದುವೆಯ ನಂತರ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಹೆಸರು ಮತ್ತು ವಿಳಾಸವನ್ನು ಬದಲಾಯಿಸಿಕೊಳ್ಳಬೇಕು. ಇದರಿಂದ ಭವಿಷ್ಯದಲ್ಲಿ ನಿಮಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಇದಕ್ಕಾಗಿ ಹೊಸ ಆಧಾರ್ ಪಡೆಯಬೇಕಾಗಿಲ್ಲ. ಆಧಾರ್ ನವೀಕರಣ ಮಾಡಿಕೊಳ್ಳಬೇಕಾಗುತ್ತದೆ. ಆಧಾರ್ ಕೇಂದ್ರಗಳಲ್ಲಿ ಆಧಾರ್ ನವೀಕರಿಸಬಹುದು.
ಪಾನ್ ಕಾರ್ಡ್ (PAN Card): ಶಾಶ್ವತ ಖಾತೆ ಸಂಖ್ಯೆ (PAN) ಬಹಳ ಮುಖ್ಯವಾದ ದಾಖಲೆಯಾಗಿದೆ. ಮದುವೆಯ ನಂತರ, ನೀವು ಆನ್‌ಲೈನ್ ಮೂಲಕ ಇದನ್ನು ನವೀಕರಿಸಬೇಕು. ಸಂಬಳ ಪಡೆಯುವ ಮಹಿಳೆಯರು ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಅದಕ್ಕೆ ಪಾನ್ ಅಗತ್ಯ. ಮದುವೆಯ ನಂತರ ಉಪನಾಮ ಬದಲಿಸಿದ್ದರೆ ನವೀಕರಿಸಿದ ಪಾನ್ ಕಾರ್ಡ್ ಸಲ್ಲಿಸಬೇಕಾಗುತ್ತದೆ.
Women Health: ಗರ್ಭಿಣಿಯರೇ, ಖಿನ್ನರಾಗಬೇಡಿ ಖುಷಿ ಖುಷಿಯಾಗಿರಿ
ಬ್ಯಾಂಕ್ (Bank) ದಾಖಲೆಗಳು : ಬ್ಯಾಂಕ್ ಗೆ ವಿಳಾಸ ಸೇರಿದಂತೆ ಅನೇಕ ದಾಖಲೆಗಳನ್ನು ನೀಡಿರುತ್ತೇವೆ. ಅದ್ರಲ್ಲಿ ಪಾನ್ ಮತ್ತು ಆಧಾರ್ ಕೂಡ ಸೇರಿದೆ. ವಿವಾಹದ ನಂತರ ನೀವು ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ವಿಳಾಸ ಬದಲಿಸಿದ್ದರೆ ನವೀಕರಿಸಿದ ದಾಖಲೆಯನ್ನು ಬ್ಯಾಂಕ್ ಗೆ ನೀಡಬೇಕಾಗುತ್ತದೆ. ಇದ್ರ ಜೊತೆಗೆ ವಿಳಾಸ ಬದಲಾವಣೆ ದಾಖಲೆಯನ್ನೂ ನೀಡಬೇಕಾಗುತ್ತದೆ. ಇಲ್ಲವಾದಲ್ಲಿ ಬ್ಯಾಂಕ್ ವ್ಯವಹಾರಕ್ಕೆ ತೊಂದರೆಯಾಗಬಹುದು. ಬ್ಯಾಂಕ್ ನಿಂದ ನಿಮಗೆ ಬರಬೇಕಾದ ದಾಖಲೆಗಳು ಹಳೆ ವಿಳಾಸಕ್ಕೆ ಹೋಗುತ್ತವೆ.
Woman Health: ಕಬ್ಬಿಣಾಂಶ ಕೊರತೆಯಾಗಿರೋದನ್ನ ಗುರುತಿಸೋದು ಹೇಗೆ?
ಪಾಸ್ಪೋರ್ಟ್ (Passport): ಮದುವೆಯ ನಂತರ ಹೆಸರನ್ನು ಬದಲಾಯಿಸುವುದು ಪಾಸ್‌ಪೋರ್ಟ್‌ನಲ್ಲಿ ಕಡ್ಡಾಯವಲ್ಲ. ನೀವು ಮೊದಲ ಹೆಸರಿನೊಂದಿಗೆ ಪ್ರಯಾಣಿಸಬಹುದು,.ಏಕೆಂದರೆ ಹೆಸರನ್ನು ಬದಲಾಯಿಸುವ ಪ್ರಕ್ರಿಯೆಯು ಸಮಯ ತೆಗೆದುಕೊಳ್ಳುತ್ತದೆ. ಪಾಸ್ಪೋರ್ಟ್ ನಲ್ಲಿಯೂ ಉಪನಾಮವನ್ನು ಬದಲಾಯಿಸಲು ಬಯಸಿದರೆ, ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಬದಲಾದ ಹೆಸರಿನ ಪಾಸ್ಪೋರ್ಟ್ ನಿಮಗೆ ಸಿಗುತ್ತದೆ.