ಇಂದು ಯುಪಿಐ ಜನಪ್ರಿಯ ಪಾವತಿ ವ್ಯವಸ್ಥೆಯಾಗಿದೆ. ಈಗ ಇದರ ಬಳಕೆ ಇನ್ನಷ್ಟು ಹೆಚ್ಚುವಂತಹ ನಿರ್ಧಾರವನ್ನು ಆರ್ ಬಿಐ ಪ್ರಕಟಿಸಿದೆ. ಯುಪಿಐಗೆ ಪ್ರಿ-ಸ್ಯಾಂಕ್ಷನ್ಡ್ ಕ್ರೆಡಿಟ್ ಲೈನ್ ಸೌಲಭ್ಯ ಕಲ್ಪಿಸಿದೆ. ಹೀಗಾಗಿ ಇನ್ಮುಂದೆ ಕ್ರೆಡಿಟ್ ಕಾರ್ಡ್ ಮಾದರಿಯಲ್ಲಿ ಖಾತೆಯಲ್ಲಿ ಹಣವಿಲ್ಲದಿದ್ದರೂ ಪಾವತಿ ಮಾಡಲು ಸಾಧ್ಯವಾಗಲಿದೆ.
ಮುಂಬೈ (ಸೆ.5): ಇಂದು ಯುಪಿಐ ಅತ್ಯಂತ ಪ್ರಮುಖ ಪಾವತಿ ವ್ಯವಸ್ಥೆಯಾಗಿ ಬೆಳೆದಿದೆ. ದೇಶದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದೆ ಎಂದರೂ ತಪ್ಪಿಲ್ಲ. ಹೀಗಿರುವಾಗ ಯುಪಿಐ ಬಳಕೆದಾರರಿಗೆ ಆರ್ ಬಿಐ ಶುಭಸುದ್ದಿಯೊಂದನ್ನು ನೀಡಿದೆ. ಕ್ರೆಡಿಟ್ ಕಾರ್ಡ್ ಮಾದರಿಯಲ್ಲೇ ಯುಪಿಐಯಲ್ಲಿ ಪೂರ್ವ ಮಂಜೂರಾದ (ಪ್ರಿ-ಸ್ಯಾಂಕ್ಷನ್ಡ್) ಕ್ರೆಡಿಟ್ ಲೈನ್ ಸೌಲಭ್ಯವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಒದಗಿಸಿದೆ. ಪ್ರಸ್ತುತ ಯುಪಿಐ ವ್ಯವಸ್ಥೆಯಲ್ಲಿ ಬ್ಯಾಂಕ್ ಖಾತೆಯಲ್ಲಿರುವ ಹಣ ಬಳಸಿಕೊಂಡು ವಹಿವಾಟು ನಡೆಸಬಹುದು. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣವಿದ್ರೆ ಮಾತ್ರ ಯುಪಿಐ ಪಾವತಿ ಸಾಧ್ಯ. ಆದರೆ, ಬ್ಯಾಂಕಿನ ಪೂರ್ವ ಮಂಜೂರಾತಿ ಹೊಂದಿರುವ ಕ್ರೆಡಿಟ್ ಲೈನ್ ಸೌಲಭ್ಯವಿದ್ರೆ ಖಾತೆಯಲ್ಲಿ ಹಣವಿಲ್ಲದಿದ್ದರೂ ಅಥವಾ ಆ ಹಣ ಬಳಸಿಕೊಳ್ಳದೆ ಪಾವತಿ ಮಾಡಬಹುದು. ಅಂದರೆ ಕ್ರೆಡಿಟ್ ಕಾರ್ಡ್ ಮಾದರಿಯಲ್ಲೇ ಪಾವತಿ ಮಾಡಬಹುದು. ಏಪ್ರಿಲ್ ನಲ್ಲಿ ಬ್ಯಾಕ್ ಗಳಲ್ಲಿ ಪೂರ್ವ ಅನುಮೋದಿತ ಕ್ರೆಡಿಟ್ ಲೈನ್ಸ್ ಮೂಲಕ ಆರ್ ಬಿಐ ಯುಪಿಐ ಪ್ರಾಮುಖ್ಯತೆಯನ್ನು ವಿಸ್ತರಿಸಲು ಪ್ರಸ್ತಾಪಿಸಿತ್ತು. ಈಗ ಅದನ್ನು ಕಾರ್ಯರೂಪಕ್ಕೆ ತಂದಿದ್ದು, ಈ ಸಂಬಂಧ ಇಂದು (ಸೆ.5) ಸುತ್ತೋಲೆ ಹೊರಡಿಸಿದೆ.
'ಈಗಾಗಲೇ ಘೋಷಣೆ ಮಾಡಿರುವಂತೆ ಫಂಡಿಂಗ್ ಖಾತೆಯಾಗಿ ಕ್ರೆಡಿಟ್ ಲೈನ್ ಸೌಲಭ್ಯವನ್ನು ಕಲ್ಪಿಸುವ ಮೂಲಕ ಯುಪಿಐ ಬಳಕೆಯನ್ನು ಈಗ ಮತ್ತಷ್ಟು ವಿಸ್ತರಿಸಲಾಗಿದೆ' ಎಂದು ಸುತ್ತೋಲೆಯಲ್ಲಿ ಆರ್ ಬಿಐ ತಿಳಿಸಿದೆ. ಈ ಸೌಲಭ್ಯದಡಿಯಲ್ಲಿ ಗ್ರಾಹಕನ ಪೂರ್ವಸಮ್ಮತಿಯೊಂದಿಗೆ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್ ನೀಡಿರುವ ಪೂರ್ವ ಅನುಮೋದಿತ ಕ್ರೆಡಿಟ್ ಲೈನ್ ಬಳಸಿಕೊಂಡು ಯುಪಿಐ ಮೂಲಕ ಪಾವತಿ ಮಾಡಲು ಅವಕಾಶ ನೀಡಲಾಗಿದೆ. ಇನ್ನು ಕ್ರೆಡಿಟ್ ಲೈನ್ಸ್ ಬಳಕೆಗೆ ಸಂಬಂಧಿಸಿ ಬ್ಯಾಂಕ್ ಗಳು ಮಂಡಳಿ ಅನುಮೋದಿತ ಪಾಲಿಸಿಗಳು, ಷರತ್ತುಗಳು ಹಾಗೂ ಕಂಡೀಷನ್ಸ್ ಬಳಸಿಕೊಳ್ಳುತ್ತವೆ. ಇನ್ನು ಷರತ್ತುಗಳು ಕ್ರೆಡಿಟ್ ಲಿಮಿಟ್, ಪಿರಿಯಡ್ ಆಫ್ ಕ್ರೆಡಿಟ್, ಬಡ್ಡಿದರ ಇತ್ಯಾದಿಗಳನ್ನು ಒಳಗೊಂಡಿರಬಹುದು.
ಡಿಜಿಟಲ್ ಪಾವತಿಯಲ್ಲಿ ಮರ್ಚೆಂಟ್ UPI ಪ್ಲಗಿನ್ ಕ್ರಾಂತಿ, ಬಳಕೆ ಎಷ್ಟು ಸುರಕ್ಷಿತ?
ಪ್ರಸ್ತುತ ಉಳಿತಾಯ ಖಾತೆಗಳು, ಓವರ್ ಡ್ರಾಫ್ಟ್ ಖಾತೆಗಳು, ಪ್ರೀಪೇಯ್ಡ್ ವ್ಯಾಲೆಟ್ಸ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ಯುಪಿಐಗೆ ಲಿಂಕ್ ಮಾಡಬಹುದಾಗಿದೆ. ಈಗ ಕ್ರೆಡಿಟ್ ಲೈನ್ ಸೌಲಭ್ಯವನ್ನು ಕೂಡ ಒದಗಿಸಿರೋದ್ರಿಂದ ಭಾರತದ ಮಾರುಕಟ್ಟೆಯಲ್ಲಿ ಇದು ಮತ್ತೊಂದು ಕ್ರಾಂತಿಕಾರಿ ಬೆಳವಣಿಗೆಗೆ ಸಾಕ್ಷಿಯಾಗುವ ಸಾಧ್ಯತೆಯಿದೆ.
ಈಗಾಗಲೇ ಭಾರತದಲ್ಲಿ ಯುಪಿಐ ಪಾವತಿ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಮೊಬೈಲ್ ಮೂಲಕ ಯುಪಿಐ ಬಳಸಿಕೊಂಡು ತಕ್ಷಣ ಹಣ ವರ್ಗಾಯಿಸಬಹುದಾದ ಕಾರಣ ಇದು ಬಹುತೇಕರ ನೆಚ್ಚಿನ ಪಾವತಿ ವಿಧಾನವಾಗಿದೆ. ಪ್ರಸ್ತುತ ದೇಶದಲ್ಲಿ ಶೇ.75ರಷ್ಟು ರಿಟೇಲ್ ಡಿಜಿಟಲ್ ಪಾವತಿಗಳನ್ನು ಇದು ನಿರ್ವಹಣೆ ಮಾಡುತ್ತದೆ. ಇತ್ತೀಚೆಗಷ್ಟೇ ರುಪೇ ಕ್ರೆಡಿಟ್ ಕಾರ್ಡ್ ಗಳನ್ನು ಯುಪಿಐಗೆ ಲಿಂಕ್ ಮಾಡಲು ಅನುಮತಿ ನೀಡಲಾಗಿತ್ತು.
ಯುಪಿಐಗೆ ಎಸ್ ಬಿಐ ರುಪೇ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡೋದು ಹೇಗೆ? ಇಲ್ಲಿದೆ ಸರಳ ವಿಧಾನ
ಆಗಸ್ಟ್ ನಲ್ಲಿ 10 ಕೋಟಿಗಿಂತ ಹೆಚ್ಚಿನ ಯುಪಿಐ ವಹಿವಾಟುಗಳು ನಡೆದಿವೆ. ಯುಪಿಐ ವ್ಯವಸ್ಥೆ ಪ್ರಾರಂಭವಾದ 7 ವರ್ಷಗಳಲ್ಲಿ ಇಷ್ಟು ಪ್ರಮಾಣದ ವಹಿವಾಟು ಇದೇ ಮೊದಲು. ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ (ಎನ್‌ಪಿಸಿಐ) ಬಿಡುಗಡೆ ಮಾಡಿರುವ ವರದಿ ಪ್ರಕಾರ ಆ.1ರಿಂದ 30ರವರೆಗೆ ದೇಶದಲ್ಲಿ 15.18 ಲಕ್ಷ ಕೋಟಿ ರೂ. ಮೌಲ್ಯದ 10.24 ಕೋಟಿ ವಹಿವಾಟುಗಳು ದಾಖಲಾಗಿದವೆ. . ಈ ಪೈಕಿ ಫೋನ್ ಪೇ ಶೇ.47, ಗೂಗಲ್ ಪೇ ಶೇ.35 ಮತ್ತು ಪೇಟಿಎಂ ಶೇ.13ರಷ್ಟುಪಾಲನ್ನು ಹೊಂದಿದ್ದು ಉಳಿದ ಪ್ರಮಾಣದಲ್ಲಿ ಇತರ ಪ್ಲ್ಯಾಟ್‌ಫಾರ್ಮ್‌ಗ ಳಲ್ಲಿ ವಹಿವಾಟು ನಡೆದಿದೆ. ಜುಲೈನಲ್ಲಿ ಯುಪಿಐ ವಹಿವಾಟು 9.96 ಬಿಲಿಯನ್ ಆಗಿದ್ದರೆ, ಜೂನ್ ನಲ್ಲಿ 9.33 ಬಿಲಿಯನ್ ತಲುಪಿತ್ತು.2019ರ ಅಕ್ಟೋಬರ್‌ನಲ್ಲಿ ಮೊದಲ ಬಾರಿ 1 ಕೋಟಿ ಯುಪಿಐ ಪಾವತಿ ದಾಖಲಾಗಿದ್ದವು.