
ಬೆಂಗಳೂರು (ಸೆ.26) ವಿಶ್ವದ ಹಲೆವೆಡೆ ಜೆನ್‌ಜಿ ಶಕ್ತಿಗಳ ಕುರಿತು ಭಾರಿ ಚರ್ಚೆಯಾಗುತ್ತಿದೆ. ಭಾರತದಲ್ಲಿ ಜೆನ್‌ಜಿ ಹೋರಾಟ, ಜೆನ್‌ಜಿಗಳ ಆಸಕ್ತಿ ಕುರಿತು ಹಲವು ರೀತಿಯಲ್ಲಿ ಚರ್ಚೆಯಾಗುತ್ತಿದೆ. ಇದೀಗ ಜೆನ್‌ಜಿಗಳ ಹೂಡಿಕೆ, ಸಾಲದ ಕುರಿತು ಅಧ್ಯಯನ ವರದಿಯೊಂದು ಬಹಿರಂಗವಾಗಿದೆ. ಜೆನ್‌ಜಿ ಸಮೂಹ ಆದಾಯಗಳಿಕೆ ಆರಂಭಿಸಿದ ಬೆನ್ನಲ್ಲೇ ಮನೆ ಖರೀದಿಗೆ ಮುಂದಾಗುತ್ತಾರೆ ಎಂದು ಅದ್ಯಯನ ವರದಿ ಹೇಳುತ್ತಿದೆ. ಹೀಗಾಗಿ ಶೇಕಡಾ 86ರಷ್ಟು ಜೆನ್‌ಜಿ ಸಮೂಹ ಗೃಹ ಸಾಲ ಪಡೆಯುತ್ತಾರೆ ಎಂದು ಕೋಟಕ್ ಬ್ಯಾಂಕ್ ವರದಿ ನೀಡಿದೆ.
ಪ್ರಮುಖವಾಗಿ ಜೆನ್‌ಜಿ ಸಮೂಹ ಬಾಡಿಗೆ ಮನೆಯಲ್ಲೇ ಬೆಳೆದು ಬಂದಿರುತ್ತಾರೆ. ಹೀಗಾಗಿ ಅವರಿಗೆ ಸ್ವಂತ ಮನೆಯ ಕನಸು ಅಗಾಧವಾಗಿ ಬೇರೂರಿರುತ್ತದೆ. ಆದಾಯ ಗಳಿಕೆ ಆರಂಭದ ಬೆನ್ನಲ್ಲೇ ಗೃಹ ಸಾಲದ ಮೂಲಕ ಮನೆ ಖರೀದಿಸುತ್ತಾರೆ ಎಂದು ಅಧ್ಯಯನ ವರದಿ ಹೇಳುತ್ತಿದೆ. ಹೀಗಾಗಿ 30ರ ಹರೆಯಕ್ಕೂ ಮುನ್ನವೇ ಸ್ವಂತ ಮನೆ ಖರೀದಿ ಮಾಡುತ್ತಾರೆ ಎನ್ನುತ್ತಿದೆ ವರದಿ.
ಭಾರತೀಯರು ಮನೆ ಖರೀದಿಸುವ ಸರಾಸರಿ ವಯಸ್ಸು ಗಣನೀಯವಾಗಿ ಕಡಿಮೆಯಾಗುತ್ತದೆ. ಗೃಹ ಸಾಲದಲ್ಲಿ ಜೆನ್ಡಜಿ ಸಮೂಹವೇ ಹೆಚ್ಚಾಗುತ್ತಿದೆ. ಜೆನ್‌ಜಿಗಳ ಪೈಕಿ ಶೇಕಡಾ 86ರಷ್ಟು ಮಂದಿ ಗೃಹ ಸಾಲ ಪಡೆದು ಮನೆ ಖರೀದಿಗೆ ಮುಂದಾಗುತ್ತಿದ್ದಾರೆ. ಬ್ಯಾಂಕ್ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, 25 ರಿಂದ 30 ವರ್ಷದೊಳಗಿನ ಗೃಹ ಸಾಲಗಾರರ ಸಂಖ್ಯೆಯು 2023-24ರಿಂದ 2025-26ರ ಹಣಕಾಸು ವರ್ಷಗಳ ನಡುವೆ ಬರೋಬ್ಬರಿ ಶೇ 86ರಷ್ಟು ಭಾರೀ ಏರಿಕೆ ಕಂಡಿದೆ. ಈ ವಯೋಮಾನದ ಸಾಲಗಾರರ ಸಂಖ್ಯೆ 1,234 ರಿಂದ 2,290 ಕ್ಕೆ ತಲುಪಿದೆ. ಇದರೊಂದಿಗೆ, ಕೋಟಕ್ ಬ್ಯಾಂಕ್‌ನ ಒಟ್ಟಾರೆ ವೈಯಕ್ತಿಕ ಗೃಹ ಸಾಲ ವಿಭಾಗದಲ್ಲಿ ಜೆನ್ ಜೀ ಗ್ರಾಹಕರ ಪಾಲು ಕೇವಲ ಎರಡೇ ವರ್ಷಗಳಲ್ಲಿ ಶೇ 6 ರಿಂದ ಶೇ 9 ಕ್ಕೆ ಹೆಚ್ಚಳವಾಗಿದ್ದು, ಕೊಡುಗೆಯಲ್ಲಿ ಶೇ 50ರಷ್ಟು ಏರಿಕೆ ದಾಖಲಿಸಿದೆ. ಪರಿಣಾಮವಾಗಿ, ಬ್ಯಾಂಕಿನ ಗೃಹ ಸಾಲಗಳ ವಹಿವಾಟು ಪಟ್ಟಿಯಲ್ಲಿ ಈ ಯುವ ಸಮುದಾಯ ಅತ್ಯಂತ ವೇಗವಾಗಿ ಮುನ್ನಡೆಯುತ್ತಿರುವ ವರ್ಗವಾಗಿ ಗುರುತಿಸಿಕೊಂಡಿದೆ. ಇದಕ್ಕೆ ಹೋಲಿಸಿದರೆ, ಇದೇ ಅವಧಿಯಲ್ಲಿ 30 ರಿಂದ 45 ವರ್ಷ ವಯಸ್ಸಿನ ಗೃಹ ಸಾಲಗಾರರ ಸಂಖ್ಯೆಯಲ್ಲಿ ಶೇ 26ರಷ್ಟು ಮಾತ್ರ ಬೆಳವಣಿಗೆ ಕಂಡುಬಂದಿದೆ.
ಯುವ ಭಾರತೀಯರು ಸ್ವಂತ ಮನೆ ಹೊಂದುವ ವಿಷಯದಲ್ಲಿ ತಮ್ಮ ಆಲೋಚನಾ ವಿಧಾನವನ್ನು ಆಮೂಲಾಗ್ರವಾಗಿ ಬದಲಾಯಿಸಿಕೊಳ್ಳುತ್ತಿರುವುದಕ್ಕೆ ಈ ಪ್ರವೃತ್ತಿ ಸ್ಪಷ್ಟ ನಿದರ್ಶನವಾಗಿದೆ. ಈ ಹಿಂದಿನ ತಲೆಮಾರುಗಳು ತಮ್ಮ ಜೀವನ ಕೊನೆಯ ಭಾಗದಲ್ಲಿ ಮನೆ ಖರೀದಿಗೆ ಮುಂದಾಗುತ್ತಿತ್ತು. ಆದರೆ ಈ ಮಹತ್ವದ ಆರ್ಥಿಕ ಮೈಲಿಗಲ್ಲನ್ನು ಇಂದಿನ ಯುವಕ-ಯುವತಿಯರು ಜೀವನದ ಆರಂಭದಲ್ಲೇ ಅತ್ಯಂತ ಮುಂಚಿತವಾಗಿ ಸಾಧಿಸುತ್ತಿದ್ದಾರೆ.
ಹಲವು ವರ್ಷಗಳಿಂದಲೂ ಮಾರುಕಟ್ಟೆ ತಜ್ಞರು, ಇಂದಿನ ಯುವ ಪೀಳಿಗೆಯು ದೀರ್ಘಾವಧಿಯವರೆಗೆ ಬಾಡಿಗೆ ಮನೆಯಲ್ಲೇ ಉಳಿಯಲು ಬಯಸುತ್ತದೆ, ದೊಡ್ಡ ಮೊತ್ತದ ಹಣಕಾಸು ಬದ್ಧತೆಗಳನ್ನು ಮುಂದೂಡುತ್ತದೆ ಮತ್ತು ಹೊಂದಿಕೊಳ್ಳುವ ಜೀವನಶೈಲಿಗೆ ಆದ್ಯತೆ ನೀಡುತ್ತದೆ ಎಂದೇ ಭಾವಿಸಿದ್ದರು. ಆದರೆ, ವಸತಿ ವಿಚಾರಕ್ಕೆ ಬಂದಾಗ ಅನೇಕ ಯುವ ಭಾರತೀಯರು ನಿರೀಕ್ಷೆಗಿಂತ ಮುಂಚಿತವಾಗಿಯೇ ದೂರದೃಷ್ಟಿಯ ದೀರ್ಘಕಾಲೀನ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ ಎಂಬುದನ್ನು ಪ್ರಸ್ತುತ ಅಂಕಿ-ಅಂಶಗಳು ಸ್ಪಷ್ಟಪಡಿಸಿವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.