
ನವದೆಹಲಿ (ಸೆ.25): ಚಿನ್ನದ ಬೆಲೆ ದಿನೇದಿನೆ ಬಾನೆತ್ತರಕ್ಕೆ ಏರತ್ತಲೇ ಇದೆ. ಭಾರತದಲ್ಲಿ ಇಂದು 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹15,284 ಇದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹14,010 ಹಾಗೂ 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹11,463 ಇದೆ ಎಂದು ಗುಡ್‌ರಿಟರ್ನ್ಸ್ ವರದಿ ತಿಳಿಸಿದೆ.
2026ರ ಸೆಪ್ಟೆಂಬರ್ 25ರಂದು ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹15,284ಕ್ಕೆ ತಲುಪಿದೆ. ಸೆಪ್ಟೆಂಬರ್ 24ರ ಬೆಲೆಗೆ ಹೋಲಿಸಿದರೆ ಇಂದು ಮತ್ತೆ ₹16 ಏರಿಕೆಯಾಗಿದೆ. ಅದೇ ರೀತಿ, 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹14,010 ಮತ್ತು 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹11,463 ಇದೆ. ಸೆಪ್ಟೆಂಬರ್ 24ಕ್ಕೆ ಹೋಲಿಸಿದರೆ 22 ಕ್ಯಾರೆಟ್ ಚಿನ್ನದ ಬೆಲೆ ₹15 ಹಾಗೂ 18 ಕ್ಯಾರೆಟ್ ಚಿನ್ನದ ಬೆಲೆ ₹12 ಏರಿಕೆಯಾಗಿದೆ.
ಜಿಯೋಟಸ್ ಡಾಟ್‌ಕಾಮ್‌ನ ಸಿಇಒ ವಿಕ್ರಮ್ ಸುಬ್ಬರಾಜ್ ಚಿನ್ನ, ಬೆಳ್ಳಿ ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯಿಸಿದ್ದು, ಬೆಲೆ ಏರಿಳಿತದಿಂದ ಕೂಡಿದ ವಾರದ ಬಳಿಕ ಭಾರತೀಯ ಚಿನ್ನದ ಮಾರುಕಟ್ಟೆಯಲ್ಲಿ ಒತ್ತಡ ಮುಂದುವರಿದಿದೆ. ಸೆಪ್ಟೆಂಬರ್ 25ರ ಆರಂಭಿಕ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಅಕ್ಟೋಬರ್ ಚಿನ್ನದ ಬೆಲೆ 10 ಗ್ರಾಂಗೆ ಸುಮಾರು ₹1,50,841ರಷ್ಟಿತ್ತು. ಡಿಸೆಂಬರ್ ಬೆಳ್ಳಿ ಪ್ರತಿ ಕೆಜಿಗೆ ಸುಮಾರು ₹2,34,030ರಷ್ಟಿತ್ತು. ಎರಡೂ ಒಪ್ಪಂದಗಳ ವಹಿವಾಟು ಇಳಿಕೆಯಲ್ಲಿತ್ತು. ಜಾಗತಿಕ ಬಡ್ಡಿದರದ ನಿರೀಕ್ಷೆಯೇ ಈ ದುರ್ಬಲತೆಗೆ ಪ್ರಮುಖ ಕಾರಣವಾಗಿದೆ. ಈ ತಿಂಗಳ ಆರಂಭದಲ್ಲಿ ಅಮೆರಿಕದ ಫೆಡರಲ್ ರಿಸರ್ವ್ ತನ್ನ ನೀತಿ ಬಡ್ಡಿದರವನ್ನು ಶೇ.3.75ರಿಂದ ಶೇ.4.00ಕ್ಕೆ ಹೆಚ್ಚಿಸಿತ್ತು. ಇದೀಗ ಮುಂದಿನ ದಿನಗಳಲ್ಲಿ ಮತ್ತಷ್ಟು ಬಡ್ಡಿದರ ಏರಿಕೆಯಾಗಬಹುದೇ ಎಂಬುದನ್ನು ಮಾರುಕಟ್ಟೆಗಳು ಪರಿಶೀಲಿಸುತ್ತಿವೆ ಎಂದು ಹೇಳಿದ್ದಾರೆ.
ಸಾಲ ಪಡೆದು ಅಥವಾ ಹೆಚ್ಚಿನ ಲಿವರೇಜ್ ಬಳಸಿ ವಹಿವಾಟು ನಡೆಸುವವರು ಹೆಚ್ಚು ಎಚ್ಚರಿಕೆ ವಹಿಸಬೇಕು. ಇತ್ತೀಚಿನ ಬೆಲೆ ಏರಿಳಿತಗಳು ಮಾರುಕಟ್ಟೆಯಲ್ಲಿ ಬೆಲೆಗಳು ವೇಗವಾಗಿ ಮತ್ತು ದೊಡ್ಡ ಪ್ರಮಾಣದಲ್ಲಿ ಬದಲಾಗಬಹುದು ಎಂಬುದನ್ನು ತೋರಿಸಿವೆ. ಹೀಗಾಗಿ ಹೂಡಿಕೆಯ ಪ್ರಮಾಣವನ್ನು ನಿಯಂತ್ರಣದಲ್ಲಿಡಬೇಕು. ವಹಿವಾಟು ಆರಂಭಿಸುವ ಮುನ್ನವೇ ಸ್ಟಾಪ್-ಲಾಸ್ ಮಿತಿಯನ್ನು ಸ್ಪಷ್ಟವಾಗಿ ನಿಗದಿಪಡಿಸಿಕೊಳ್ಳಬೇಕು. ಅಮೆರಿಕದ ಬಡ್ಡಿದರದ ನಿರೀಕ್ಷೆ, ಡಾಲರ್ ಮೌಲ್ಯ ಮತ್ತು ಭೌಗೋಳಿಕ ರಾಜಕೀಯ ಬೆಳವಣಿಗೆಗಳು ಮುಂದಿನ ಪ್ರಮುಖ ಅಂಶಗಳಾಗಿವೆ ಎಂದಿದ್ದಾರೆ.
ಸೌದಿ ಅರೇಬಿಯಾ, ಟರ್ಕಿಯೆ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥರು ತುರ್ತು ಸಭೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಸೌದಿ ಅರೇಬಿಯಾ ಮೇಲೆ ಇತ್ತೀಚೆಗೆ ನಡೆದ ಹೌತಿ ದಾಳಿಗಳ ಹಿನ್ನೆಲೆಯಲ್ಲಿ ಈ ಸಭೆ ನಡೆಯಲಿದೆ ಎಂದು ಸೌದಿ ವಿದೇಶಾಂಗ ಸಚಿವಾಲಯ ತಿಳಿಸಿದೆ. ಇದೇ ವೇಳೆ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಮಾತನಾಡಿದ್ದು, ಅಮೆರಿಕವು ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಗೂ ಮುನ್ನ ತಿಳುವಳಿಕೆ ಒಪ್ಪಂದಕ್ಕೆ (Memorandum of Understanding) ಮರಳಬೇಕೆಂಬ ಇರಾನ್‌ನ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಈ ಎರಡೂ ಬೆಳವಣಿಗೆಗಳು ಪಶ್ಚಿಮ ಏಷ್ಯಾದಲ್ಲಿ ಪ್ರಾದೇಶಿಕ ಭದ್ರತೆಯ ಆತಂಕ ಮತ್ತು ಮಹತ್ವದ ರಾಜತಾಂತ್ರಿಕ ಪ್ರಯತ್ನಗಳು ಒಂದೇ ಸಮಯದಲ್ಲಿ ನಡೆಯುತ್ತಿರುವುದನ್ನು ತೋರಿಸುತ್ತವೆ ಎಂದು ಅಲ್ ಜಜೀರಾ ವರದಿ ಮಾಡಿದೆ.
2026ರ ಜೂನ್ ಮಧ್ಯಭಾಗದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ 60 ದಿನಗಳ ಕದನ ವಿರಾಮ ಏರ್ಪಟ್ಟಿತ್ತು. ವಾಣಿಜ್ಯ ಹಡಗುಗಳ ಸಾಗರ ಮಾರ್ಗಗಳನ್ನು ಸುರಕ್ಷಿತವಾಗಿಡುವುದು ಇದರ ಉದ್ದೇಶವಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಗುರಿಯಾಗಿಸಿಕೊಂಡ ಕ್ಷಿಪಣಿ ದಾಳಿಗಳು ಮತ್ತು ವಾಣಿಜ್ಯ ಹಡಗುಗಳಿಗೆ ಎದುರಾದ ಅಪಾಯಗಳಿಂದಾಗಿ ಈ ಕದನ ವಿರಾಮ ಕುಸಿಯಿತು. ಎರಡೂ ದೇಶಗಳು ಈ ದುರ್ಬಲ ಒಪ್ಪಂದವನ್ನು ಅಧಿಕೃತವಾಗಿ ಕೈಬಿಟ್ಟು ಮತ್ತೆ ನೇರ ಸಂಘರ್ಷಕ್ಕೆ ಇಳಿದ ಬಳಿಕ ರಾಜತಾಂತ್ರಿಕ ಸಂಪರ್ಕವೂ ಸಂಪೂರ್ಣವಾಗಿ ಸ್ಥಗಿತಗೊಂಡಿತು.
ಅಂತರರಾಷ್ಟ್ರೀಯ ಇಂಧನ ಮಾರುಕಟ್ಟೆಯಲ್ಲಿ ಈ ಬೆಳವಣಿಗೆಗಳಿಂದಾಗಿ ತೀವ್ರ ಏರಿಳಿತ ಉಂಟಾಯಿತು. ಇದರಿಂದ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನದತ್ತ ಮುಖ ಮಾಡಿದರು. ಜಾಗತಿಕ ಮಾರುಕಟ್ಟೆಯಲ್ಲಿನ ಚಿನ್ನದ ಬೆಲೆ, ಪರಿಷ್ಕೃತ ಆಮದು ಸುಂಕ ನೀತಿಗಳು ಹಾಗೂ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿನ ಏರಿಳಿತಗಳ ಜೊತೆಗೆ ಭಾರತದಲ್ಲಿಯೂ ಚಿನ್ನದ ಬೆಲೆ ಏರಿಕೆಯಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.