ವೇತನದಲ್ಲಿ ನಂ 1: ಬೆಂಗಳೂರಿನಲ್ಲೇಕೆ ನೌಕರರಿಗೆ ಸಂಬಳ ಹೆಚ್ಚು?

By Suvarna News  |  First Published Dec 21, 2019, 2:44 PM IST

ಬೆಂಗಳೂರು ಅತಿ ಹೆಚ್ಚು ಸಂಬಳ ನೀಡುವ ನಗರ ಎಂಬ ಖ್ಯಾತಿಗೆ ಪಾತ್ರವಾಗಿರುವುದು ಇದೇ ಮೊದಲೇನಲ್ಲ. ಉದ್ಯಾನ ನಗರಿ ಬೆಂಗಳೂರು ಸತತ 3 ವರ್ಷಗಳಿಂದ ಈ ಹಿರಿಮೆಗೆ ಪಾತ್ರವಾಗುತ್ತಿದೆ. 2017 ಹಾಗೂ 2018ರ ಪಟ್ಟಿಯಲ್ಲೂ ಬೆಂಗಳೂರು ಪ್ರಥಮ ಸ್ಥಾನ ಪಡೆದಿತ್ತು. 


ಬೆಂಗಳೂರು (ಡಿ. 21): ಕರ್ನಾಟಕದ ರಾಜಧಾನಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಹೆಸರು ಪಡೆದುಕೊಂಡಿದೆ. ಸೆಲೆಬ್ರಿಟಿಗಳ, ರಾಜಕಾರಣಿಗಳ ನೆಚ್ಚಿನ ಸ್ಥಳವೂ ಹೌದು. ಜೊತೆಗೆ ಐಟಿ ಹಬ್‌ ಬೆಂಗಳೂರು ಉದ್ಯೋಗಿಗಳ ನೆಚ್ಚಿನ ಸ್ಥಳವೂ ಹೌದು.

ಇದೀಗ ದೇಶದಲ್ಲಿಯೇ ಬೆಂಗಳೂರಿನ ಉದ್ಯೋಗಿಗಳು ಹೆಚ್ಚು ವೇತನ ಪಡೆಯುತ್ತಾರೆಂದು ಸಮೀಕ್ಷೆಯೊಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಯಾವ ಯಾವ ವಲಯದ ಉದ್ಯೋಗಿಗಳು ಎಷ್ಟು ಸಂಬಳ ಪಡೆಯುತ್ತಾರೆ, ಬೆಂಗಳೂರಿಗರು ಏಕೆ ಜಾಸ್ತಿ ಸಂಬಳ ಪಡೆಯುತ್ತಾರೆ, ಸಮೀಕ್ಷೆ ಹೇಗೆ ನಡೆದಿದೆ, ಇದರಿಂದ ಕನ್ನಡಿಗರಿಗೇನು ಸಮಸ್ಯೆ ಇತ್ಯಾದಿ ವಿವರ ಇಲ್ಲಿದೆ.

Tap to resize

Latest Videos

undefined

ಮಹೀಂದ್ರಾ ಕಂಪನಿ ಅಧ್ಯಕ್ಷ ಹುದ್ದೆಗೆ ಆನಂದ್‌ ಮಹೀಂದ್ರಾ ವಿದಾಯ!

ಮುಂಬೈ, ದಿಲ್ಲಿಗಿಂತ ಬೆಂಗಳೂರಲ್ಲೇ ವೇತನ ಜಾಸ್ತಿ

ವಿವಿಧ ಕ್ಷೇತ್ರಗಳ ಉದ್ಯೋಗಿಗಳಿಗೆ ದೇಶದಲ್ಲೇ ಅತಿ ಹೆಚ್ಚು ಸಂಬಳ ಕೊಡುವ ನಗರ ಬೆಂಗಳೂರು ಎಂದು ಸಮೀಕ್ಷೆಯೊಂದು ತನ್ನ ವರದಿಯಲ್ಲಿ ಹೇಳಿದೆ. ಐಟಿ ಉದ್ಯಮಗಳ ಹಬ್‌ ಆಗಿರುವ ಬೆಂಗಳೂರಿನಲ್ಲಿ ಕಿರಿಯ ಶ್ರೇಣಿಯವರಿಗೆ ವಾರ್ಷಿಕ ಸರಾಸರಿ .5.27 ಲಕ್ಷ, ಮಧ್ಯಮ ಶ್ರೇಣಿಯವರಿಗೆ .16.46 ಲಕ್ಷ ಹಾಗೂ ಹಿರಿಯ ಶ್ರೇಣಿಯವರಿಗೆ .35.45 ಲಕ್ಷ ವೇತನ (ಕಾಸ್ಟ್‌ ಟು ಕಂಪನಿ- ಸಿಟಿಸಿ) ದೊರೆಯುತ್ತಿದೆ. ಇಷ್ಟೊಂದು ವೇತನ ದೇಶದ ಯಾವುದೇ ನಗರದಲ್ಲೂ ಸಿಗುತ್ತಿಲ್ಲ.

ಕಿರಿಯ ಶ್ರೇಣಿಯವರ ವೇತನದಲ್ಲಿ ಬೆಂಗಳೂರು ನಂತರದ ಸ್ಥಾನದಲ್ಲಿ ಹೈದರಾಬಾದ್‌ (.5 ಲಕ್ಷ) ಹಾಗೂ ಮುಂಬೈ (.4.59 ಲಕ್ಷ) ಇವೆ. ಮಧ್ಯಮ ಶ್ರೇಣಿಯವರ ವೇತನದಲ್ಲಿ ಮುಂಬೈ (.15.07 ಲಕ್ಷ) ಹಾಗೂ ರಾಷ್ಟ್ರ ರಾಜಧಾನಿ ವಲಯ (.14.5 ಲಕ್ಷ) ಬೆಂಗಳೂರು ನಂತರದ ರಾರ‍ಯಂಕ್‌ ಪಡೆದಿವೆ. ಹಿರಿಯ ಶ್ರೇಣಿಯ ವೇತನದಲ್ಲಿ ಮತ್ತೆ ಮುಂಬೈ (.33.95 ಲಕ್ಷ) ಹಾಗೂ ಪುಣೆ (.32.68 ಲಕ್ಷ) ನಗರಗಳು ಬೆಂಗಳೂರು ಬಳಿಕ ಕ್ರಮವಾಗಿ 2 ಮತ್ತು ಮೂರನೇ ಸ್ಥಾನದಲ್ಲಿವೆ.

ಐಟಿ ಉದ್ಯೋಗಿಗಳಿಗೆ ಅತಿ ಹೆಚ್ಚು ವೇತನ

ಬೆಂಗಳೂರಿನಲ್ಲಿ ಬೇರೆಲ್ಲಾ ಕ್ಷೇತ್ರಗಳ ಉದ್ಯೋಗಿಗಳಿಗಿಂತ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳು ಹೆಚ್ಚು ವೇತನ ಪಡೆಯುತ್ತಾರಂತೆ. ಅವರಲ್ಲಿ ಕಿರಿಯ ಶ್ರೇಣಿಯವರು ವಾರ್ಷಿಕ 4.96 ಲಕ್ಷ ಸಂಬಳ ಪಡೆದರೆ, ಹಿರಿಯ ಶ್ರೇಣಿಯವರು 35.84 ಲಕ್ಷದವರೆಗೆ ವೇತನ ಪಡೆಯುತ್ತಾರಂತೆ.

2020 ರಲ್ಲಿ ಭಾರತದ ಆರ್ಥಿಕತೆ ಸುಧಾರಿಸುತ್ತಾ?

ಇನ್ನು ಜಿಎಸ್‌ಟಿ ತಜ್ಞರು, ಅಕೌಂಟ್ಸ್‌, ಮ್ಯಾನೇಜ್‌ಮೆಂಟ್‌ ಕನ್ಸಲ್ಟೆಂಟ್‌ಗಳು ಮತ್ತು ವಕೀಲಿಕೆ ಕ್ಷೇತ್ರ ಸೇರಿದಂತೆ ಇನ್ನಿತರ ವೃತ್ತಿಪರ ಸೇವಾ ಕ್ಷೇತ್ರದ ಉದ್ಯೋಗಿಗಳು ಹೆಚ್ಚು ವೇತನ ಪಡೆಯುವುದರಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಹಾಗೆಯೇ ಡಿಜಿಟಲ್‌ ಮಾರ್ಕೆಟರ್‌ಗಳು ಇತ್ತೀಚೆಗೆ ಹೆಚ್ಚು ವೇತನ ಪಡೆಯುತ್ತಿದ್ದಾರಂತೆ.

3 ನೇ ಬಾರಿಗೆ ಬೆಂಗಳೂರಿಗೆ ಈ ಹಿರಿಮೆ

ಬೆಂಗಳೂರು ಅತಿ ಹೆಚ್ಚು ಸಂಬಳ ನೀಡುವ ನಗರ ಎಂಬ ಖ್ಯಾತಿಗೆ ಪಾತ್ರವಾಗಿರುವುದು ಇದೇ ಮೊದಲೇನಲ್ಲ. ಉದ್ಯಾನ ನಗರಿ ಬೆಂಗಳೂರು ಸತತ 3 ವರ್ಷಗಳಿಂದ ಈ ಹಿರಿಮೆಗೆ ಪಾತ್ರವಾಗುತ್ತಿದೆ. 2017 ಹಾಗೂ 2018ರ ಪಟ್ಟಿಯಲ್ಲೂ ಬೆಂಗಳೂರು ಪ್ರಥಮ ಸ್ಥಾನ ಪಡೆದಿತ್ತು. ಕಳೆದ ವರ್ಷ ಲಿಂಕ್ಡ್ ಇನ್‌ ಸಂಸ್ಥೆ ವಿವಿಧ ನಗರಗಳ ಉದ್ಯೋಗಿಗಳ ವೇತನ ಕುರಿತ ಸಮೀಕ್ಷೆ ನಡೆಸಿತ್ತು.

ಆಗಲೂ ಬೆಂಗಳೂರು ನಂ.1 ಸ್ಥಾನ ಪಡೆದಿತ್ತು. ಆದರೆ ಆಗ ಟೆಕ್ಕಿಗಳಿಗಿಂತ ಹಾರ್ಡ್‌ವೇರ್‌ ಮತ್ತು ನೆಟ್‌ವರ್ಕಿಂಗ್‌ ಕ್ಷೇತ್ರದಲ್ಲಿ ಪರಿಣತರಾದ ಉದ್ಯೋಗಿಗಳು ಹೆಚ್ಚು ವೇತನ ಪಡೆಯುತ್ತಾರೆ ಎನ್ನಲಾಗಿತ್ತು. ಆದರೆ ಈ ಬಾರಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳು ಹೆಚ್ಚು ವೇತನ ಪಡೆಯುತ್ತಾರೆ ಎನ್ನಲಾಗಿದೆ.

ಯಾರಿಗೆ ವೇತನ ಹೆಚ್ಚು? ಅದಕ್ಕೆ ಕಾರಣವೇನು?

ಕಾಲ ಬದಲಾಗುತ್ತಿದೆ, ಕ್ಷಣಕ್ಷಣಕ್ಕೂ ಅಪ್‌ಡೇಟೆಡ್‌ ಆಗುತ್ತಿರಬೇಕು. ಅಂತಹವರಿಗೆ ಮಾತ್ರ ಒಳ್ಳೆಯ ಕಂಪನಿಗಳಲ್ಲಿ ಅತ್ಯುತ್ತಮ ಸಂಬಳದ ಉದ್ಯೋಗ ಗಿಟ್ಟಿಸಿಕೊಳ್ಳಲು ಸಾಧ್ಯ. ಈ ಸಮೀಕ್ಷೆ ಕೂಡ ಇದೇ ಅಂಶವನ್ನು ಒತ್ತಿ ಹೇಳಿದೆ. ಬಹುತೇಕ ಕಂಪನಿಗಳಲ್ಲಿ ಕೌಶಲ್ಯ ಹೊಂದಿರುವ 6-10 ವರ್ಷ ಅನುಭವಿಗಳಿಗೆ ಹೆಚ್ಚು ಬೇಡಿಕೆ ಇದ್ದು, ಹಾಗೆಯೇ ಇಂಥವರು ಅತಿ ಹೆಚ್ಚು ವೇತನ ಪಡೆಯುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

8 ವರ್ಷದ ಈ ಬಾಲಕನ ಆದಾಯ 185 ಕೋಟಿ ರೂ..!

ಸಮೀಕ್ಷೆ ನಡೆಸಿದ್ದು ಹೇಗೆ?

ರಾರ‍ಯಂಡ್‌ಸ್ಟರ್‌ ಇನ್‌ಸೈಟ್ಸ್‌ ಸಂಸ್ಥೆಯ ‘ಸ್ಯಾಲರಿ ಟ್ರೆಂಡ್ಸ್‌ ರಿಪೋರ್ಟ್‌ 2019’ ಈ ಸಮೀಕ್ಷೆ ನಡೆಸಿದ್ದು, ಅದರಲ್ಲಿ 15 ಕೈಗಾರಿಕಾ ಕ್ಷೇತ್ರಗಳ 1,00,000 ಉದ್ಯೋಗಿಗಳು ಭಾಗಿಯಾಗಿದ್ದರು.

ಬೆಂಗಳೂರಿನ ಬಗ್ಗೆ ಜಗತ್ತಿಗೆ ಏಕೆ ಆಕರ್ಷಣೆ ಹೆಚ್ಚು?

ಸಿಲಿಕಾನ್‌ ಸಿಟಿ ಬೆಂಗಳೂರು ಅತಿ ವೇಗವಾಗಿ ಬೆಳೆಯುತ್ತಿರುವ ನಗರ. ಐಟಿ ಬಿಟಿ ಸೇರಿದಂತೆ ಹಲವು ವರ್ಗಗಳ ಕಂಪನಿಗಳಿಗೆ ಅತ್ಯಂತ ಪ್ರಿಯ ನಗರ. ಉದ್ಯೋಗಾವಕಾಶದ ಜೊತೆಗೆ ಇಲ್ಲಿನ ಹವಾಮಾನ, ಪರಿಸರ, ಸ್ವಚ್ಛತೆ ಇತ್ಯಾದಿಗಳು ಜನರನ್ನು ಆಕರ್ಷಿಸುತ್ತದೆ. ಮಾಹಿತಿಯೊಂದರ ಪ್ರಕಾರ ದೇಶದಲ್ಲಿಯೇ ಅತಿ ಹೆಚ್ಚು ಪ್ರಮಾಣದ ವಿದ್ಯಾರ್ಥಿಗಳು ಶೈಕ್ಷಣಿಕ ಕಾರಣದಿಂದ ವಲಸೆ ಬರುತ್ತಾರೆ.

ಜೊತೆಗೆ ಬಂಡವಾಳ ಹೂಡಿಕೆಗೆ ಪ್ರಶಸ್ತವಾದ ಸ್ಥಳವಾದ್ದರಿಂದ ವಿದೇಶಿ ಕಂಪನಿಗಳು ಲಗ್ಗೆ ಇಟ್ಟಿವೆ. ಅವು ಸ್ಪರ್ಧೆಗೆ ಬಿದ್ದು ಪರಿಣತ ಕೌಶಲ್ಯ ಹೊಂದಿರುವವರನ್ನು ಹೆಚ್ಚು ಸಂಬಳ ನೀಡಿ ಉದ್ಯೋಗಕ್ಕೆ ಆಯ್ಕೆ ಮಾಡಿಕೊಳ್ಳುತ್ತಿವೆ. ಹೀಗಾಗಿ ಉದ್ಯೋಗಾವಕಾಶ ಹೆಚ್ಚುತ್ತಿದೆ. ಅನ್ಯ ರಾಜ್ಯಗಳಿಂದ ವಲಸೆ ಬರುವವರ ಸಂಖ್ಯೆಯೂ ಹೆಚ್ಚಿದೆ.

ಆದರೆ ಕರ್ನಾಟಕದಲ್ಲಿ ಕನ್ನಡಿಗರಿಗೇ ಉದ್ಯೋಗ ಕಡಿಮೆ!

ದೇಶದಲ್ಲಿ ಗ್ರಾಮೀಣ ಪ್ರದೇಶದಿಂದ ಪ್ರತಿ ನಿಮಿಷಕ್ಕೆ 25-30 ಜನರು ಉತ್ತಮ ಜೀವನ, ಉದ್ಯೋಗಾವಕಾಶ ಅರಸಿ ನಗರಗಳತ್ತ ಮುಖ ಮಾಡುತ್ತಿದ್ದಾರೆ. ಹೀಗೇ ಮುಂದುವರೆದರೆ 2030ರ ವೇಳೆಗೆ ನಗರ ಪ್ರದೇಶದ ಜನಸಂಖ್ಯೆ 60 ಕೋಟಿ ದಾಟಲಿದೆ ಎಂಬ ಅಂದಾಜಿದೆ. ಕೇವಲ ಗ್ರಾಮೀಣ ಪ್ರದೇಶದಿಂದ ನಗರಕ್ಕೆ ವಲಸೆ ಮಾತ್ರವಲ್ಲದೆ ಅಂತಾರಾಜ್ಯ ವಲಸೆಯೂ ಹೆಚ್ಚುತ್ತಿದೆ. 2016-17ರ ಅಂಕಿ ಅಂಶವೊಂದರ ಪ್ರಕಾರ 5 ವರ್ಷದಲ್ಲಿ ಸುಮಾರು 9 ಕೋಟಿ ಜನರು ರಾಜ್ಯದಿಂದ ರಾಜ್ಯಕ್ಕೆ ವಲಸೆ ಬಂದಿದ್ದಾರೆ.

ಅದರಲ್ಲಿ ದೆಹಲಿ, ಗುರುಗ್ರಾಮ, ಗೌತಮ ಬುದ್ಧ ನಗರಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಿರುವುದರಿಂದ ಅಲ್ಲಿಗೆ ವಲಸೆ ಹೋಗುವವರ ಪ್ರಮಾಣ ಹೆಚ್ಚಿದೆ. ಗಾರ್ಡ್‌ನ್‌ ಸಿಟಿ ಬೆಂಗಳೂರಿನಲ್ಲಿ ಐಟಿ ಬಿಟಿ ಕಂಪನಿಗಳು ಸಾಲುಸಾಲಾಗಿ ಸ್ಥಾಪನೆಯಾಗಿ, ಪರಿಣತರಿಗೆ ಅವಕಾಶಗಳೂ ಹೆಚ್ಚುತ್ತಿದೆ.

ಉತ್ತಮ ವೇತನ ಹಾಗೂ ಉದ್ಯೋಗಾವಕಾಶಗಳು ಹೆಚ್ಚುತ್ತಿರುವುದರಿಂದ ಉದ್ಯಾನ ನಗರಿ ಬೆಂಗಳೂರಿಗೆ ಬೇರೆ ರಾಜ್ಯಗಳಿಂದ ವಲಸೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಕನ್ನಡಿಗರಿಗೆ ಉದ್ಯೋಗದ ಸಮಸ್ಯೆ ಎದುರಾಗುತ್ತಿದೆ. ಇದೇ ಕಾರಣದಿಂದಾಗಿ ಸದ್ಯ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಬೇಕು ಎಂಬ ಕೂಗು ಹೆಚ್ಚುತ್ತಿದೆ.

ದೇಶದ ಅತಿ ದುಬಾರಿ ನಗರಗಳಲ್ಲಿ ಬೆಂಗಳೂರೂ ಒಂದು

ಭಾರತದ ಅತ್ಯಂತ ದುಬಾರಿ ನಗರ ಮುಂಬೈ. ಕಳೆದ ವರ್ಷ ನ್ಯೂಯಾರ್ಕ್ ಮೂಲದ ಜಾಗತಿಕ ಸಲಹಾ ಸಂಸ್ಥೆ ಮರ್ಸರ್‌ ನಡೆಸಿದ ಸಮೀಕ್ಷೆಯಲ್ಲಿ, ಮುಂಬೈ ವಿಶ್ವದ ಅತ್ಯಂತ ದುಬಾರಿ ನಗರಗಳ ಪೈಕಿ 55ನೇ ಸ್ಥಾನ ಪಡೆದು ಭಾರತದಲ್ಲಿ ಮೊದಲನೇ ಸ್ಥಾನ ಪಡೆದಿತ್ತು. ನವದೆಹಲಿ 103ನೇ ರ್ಯಾಂಕ್ ಹಾಗೂ ಬೆಂಗಳೂರು 170ನೇ ರ್ಯಾಂಕ್ ಪಡೆದು ವಿಶ್ವದ ದುಬಾರಿ ನಗರಗಳೆನಿಸಿಕೊಂಡಿದ್ದವು. ಇಲ್ಲಿ ಆಹಾರ, ಮದ್ಯ ಮತ್ತು ಗೃಹಬಳಕೆಯ ವಸ್ತುಗಳು, ರಸ್ತೆ ತೆರಿಗೆ ಸೇರಿದಂತೆ ಪ್ರಯಾಣ ದರ ದುಬಾರಿಯಾದ್ದರಿಂದ ಇಲ್ಲಿನ ಜೀವನವೂ ದುಬಾರಿ.

ಈ ಸಮೀಕ್ಷೆಯಲ್ಲಿ 5 ಖಂಡಗಳ ಸುಮಾರು 209 ನಗರಗಳಲ್ಲಿನ 200ಕ್ಕೂ ಹೆಚ್ಚು ವಸ್ತುಗಳೊಂದಿಗೆ ತುಲನೆ ಮಾಡಲಾಗಿತ್ತು. ದೇಶದ ಅತಿ ದುಬಾರಿ ನಗರಗಳಲ್ಲಿ ಮುಂಬೈ, ದೆಹಲಿ, ಚೆನ್ನೈ, ಬೆಂಗಳೂರು, ಕೊಲ್ಕತ್ತಾ, ಪುಣೆ, ಹೈದರಾಬಾದ್‌, ಅಹಮದಾಬಾದ್‌ ಮೊದಲ ಸ್ಥಾನ ಪಡೆದಿವೆ. ಈ ನಗರಗಳು ದೇಶದ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ, ಸೌಲಭ್ಯಗಳನ್ನು ಒಳಗೊಂಡಿರುವ ನಗರ ಎಂದೆನಿಸಿಕೊಂಡಿವೆ. ಜಗತ್ತಿನ ಅಭಿವೃದ್ಧಿ ಹೊಂದಿದ ನಗರಗಳ ಪೈಕಿ ಬೆಂಗಳೂರು 84 ನೇ ರ್ಯಾಂಕ್ ಪಡೆದಿದೆ.

3 ವಿಭಾಗದಲ್ಲೂ ಬೆಂಗಳೂರು ನಂ.1

ಕಿರಿಯ ಹುದ್ದೆ

ರಾರ‍ಯಂಕ್‌ ನಗರ ವೇತನ

1 ಬೆಂಗಳೂರು .5.27 ಲಕ್ಷ

2 ಹೈದರಾಬಾದ್‌ .5 ಲಕ್ಷ

3 ಮುಂಬೈ .4.59 ಲಕ್ಷ

ಮಧ್ಯಮ ಹುದ್ದೆ

ರಾರ‍ಯಂಕ್‌ ನಗರ ವೇತನ

1 ಬೆಂಗಳೂರು .16.45 ಲಕ್ಷ

2 ಮುಂಬೈ .15.07 ಲಕ್ಷ

3. ಎನ್‌ಸಿಆರ್‌ .14.5 ಲಕ್ಷ

ಉನ್ನತ ಹುದ್ದೆ

 ನಗರ ವೇತನ

1 ಬೆಂಗಳೂರು .35.45 ಲಕ್ಷ

2 ಮುಂಬೈ .33.95 ಲಕ್ಷ

3 ಪುಣೆ .32.68 ಲಕ್ಷ

click me!