ತುರ್ತು ಪರಿಸ್ಥಿತಿಯಲ್ಲಿ ಜನರು ವೈಯಕ್ತಿಕ ಸಾಲ ಪಡೆಯುತ್ತಾರೆ. ಆದ್ರೆ ಸಮಯಕ್ಕೆ ಸರಿಯಾಗಿ ಅದನ್ನು ಮರುಪಾವತಿ ಮಾಡೋಕೆ ಸಾಧ್ಯವಾಗೋದಿಲ್ಲ. ಈ ಸಂದರ್ಭದಲ್ಲಿ ಬ್ಯಾಂಕ್ ಏನು ಮಾಡುತ್ತೆ?
ಹಣದ ಅವಶ್ಯಕತೆ ಇದ್ದಾಗ ಜನರು, ಆಪ್ತರು, ಸಂಬಂಧಿಕರನ್ನು ಕೇಳ್ತಾರೆ. ಅವರಿಂದ ಸಹಾಯ ಸಿಗದೆ ಹೋದಾಗ ಬ್ಯಾಂಕ್ (Bank) ಮೊರೆ ಹೋಗ್ತಾರೆ. ಬ್ಯಾಂಕ್ ನಲ್ಲಿ ನಾನಾ ಬಗೆಯ ಸಾಲ ಲಭ್ಯವಿದೆ. ಅದ್ರಲ್ಲಿ ವೈಯಕ್ತಿಕ ಸಾಲ (personal loan) ಕೂಡ ಸೇರಿದೆ. ಪರ್ಸನಲ್ ಲೋನ್ ಅತಿ ಹೆಚ್ಚು ಬಡ್ಡಿದರ ಹೊಂದಿರುವ ಸಾಲವಾಗಿದೆ. ಹಾಗಾಗಿಯೇ ಜನರು, ಬೇರೆ ಯಾವುದೇ ಆಯ್ಕೆ ಇಲ್ಲದಿದ್ದಾಗ ಮಾತ್ರ ವೈಯಕ್ತಿಕ ಸಾಲ ಆರಿಸ್ಕೊಳ್ಳಬೇಕು. ಬಡ್ಡಿ ಹೆಚ್ಚಿದೆ ಎಂಬುದು ತಿಳಿದೂ ಅನೇಕರು ಬೇರೆ ಬೇರೆ ಕಾರಣಕ್ಕೆ ಬ್ಯಾಂಕ್ ನಿಂದ ವೈಯಕ್ತಿಕ ಸಾಲವನ್ನು ಪಡೆಯುತ್ತಾರೆ. ಆದ್ರೆ ಅದನ್ನು ಸುಲಭವಾಗಿ ತೀರಿಸೋದು ಕಷ್ಟವಾಗುತ್ತದೆ. ವೈಯಕ್ತಿಕ ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿದ್ದರೆ ಬ್ಯಾಂಕ್ ಏನು ಮಾಡುತ್ತೆ ಎಂಬ ಮಾಹಿತಿ ಇಲ್ಲಿದೆ.
ಕಾನೂನು ಕ್ರಮ : ನೀವು ಬ್ಯಾಂಕ್ ನಿಂದ ವೈಯಕ್ತಿಕ ಸಾಲ ಪಡೆದಿದ್ದು, ಅದನ್ನು ಮರುಪಾವತಿ ಮಾಡಿಲ್ಲ ಎಂದಾದ್ರೆ ಬ್ಯಾಂಕ್ ಪದೇ ಪದೇ ಎಚ್ಚರಿಕೆ ನೀಡುತ್ತದೆ. ಆದ್ರೆ ಗ್ರಾಹಕ ಎಚ್ಚರಿಕೆ ನಂತ್ರವೂ ಸಾಲವನ್ನು ಮರುಪಾವತಿಸದಿದ್ದರೆ, ಬ್ಯಾಂಕ್ ಕಾನೂನು ಕ್ರಮ ಕೈಗೊಳ್ಳುತ್ತದೆ. ಕಾನೂನು ಕ್ರಮವಾಗಿ ಗ್ರಾಹಕರ ವಿರುದ್ಧ ಸಿವಿಲ್ ಮೊಕದ್ದಮೆ ಹೂಡುವು ಸಾಧ್ಯತೆ ಇದೆ. ಸಾಲವನ್ನು ಪಾವತಿಸದ ವ್ಯಕ್ತಿಗೆ ಸಾಲವನ್ನು ಮರುಪಾವತಿಸಲು ಕೋರ್ಟ್ ಸೂಚನೆ ನೀಡುತ್ತದೆ. ಕೆಲ ಸಂದರ್ಭದಲ್ಲಿ ಕೋರ್ಟ್, ಸಾಲ ವಸೂಲಿ ಮಾಡಲು ಗ್ರಾಹಕನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸೂಚಿಸುತ್ತದೆ.
ಸಾಲ ಮರುಪಾವತಿ ಏಜೆಂಟ್ : ಸಾಲ ನೀಡುವ ಬ್ಯಾಂಕುಗಳಿಗೆ, ವ್ಯಕ್ತಿಯಿಂದ ಸಾಲದ ಮೊತ್ತವನ್ನು ವಸೂಲಿ ಮಾಡಲು ಸಾಧ್ಯವಾಗಿಲ್ಲ ಅಂದ್ರೆ ಆ ಜವಾಬ್ದಾರಿಯನ್ನು, ಸಾಲ ವಸೂಲಾತಿ ಸಂಸ್ಥೆಗೆ ನೀಡುತ್ತದೆ. ಸಾಲ ವಸೂಲಾತಿ ಸಂಸ್ಥೆಯ ವಸೂಲಾತಿ ಏಜೆಂಟ್‌ಗಳು ಸಾಲಗಾರನ ಮನೆಗೆ ಬರುತ್ತಾರೆ. ಅನೇಕ ಬಾರಿ ಆತನಿಗೆ ಕಿರುಕುಳ ನೀಡುತ್ತಾರೆ. ಇದು ಸಾಲಗಾರನಿಗೆ ಸಾಕಷ್ಟು ಒತ್ತಡ ಮತ್ತು ಆತಂಕವನ್ನುಂಟು ಮಾಡುತ್ತದೆ. ಕೆಲ ಸಂದರ್ಭದಲ್ಲಿ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿರುತ್ತದೆ.
ಹದಗೆಡುವ ಸಿಬಿಲ್ ಸ್ಕೋರ್ : ಬ್ಯಾಂಕ್ ಸಾಲ ಮರುಪಾವತಿ ಸಾಧ್ಯವಾಗದಿದ್ದಾಗ, ಸಿಬಿಲ್ ಸ್ಕೋರ್ ಮೇಲೆ ಇದು ಕೆಟ್ಟ ಪರಿಣಾಮ ಬೀರುತ್ತದೆ. ಮುಂದಿನ ದಿನಗಳಲ್ಲಿ ನೀವು ಬೇರೆ ಬ್ಯಾಂಕ್ ನಿಂದ ಸಾಲ ಪಡೆಯೋದು ಕಷ್ಟವಾಗುತ್ತದೆ. ಕೆಲವೊಮ್ಮೆ ಬ್ಯಾಂಕ್ ಸಾಲ ನೀಡಲು ಮುಂದೆ ಬಂದ್ರೂ ಹೆಚ್ಚಿನ ಬಡ್ಡಿಯನ್ನು ವಿಧಿಸುತ್ತದೆ.
ವೈಯಕ್ತಿಕ ಸಾಲ ತೀರಿಸೋದು ಹೇಗೆ? : ವೈಯಕ್ತಿಕ ಸಾಲವನ್ನು ಮರುಪಾವತಿಸಲು ಹಲವು ಮಾರ್ಗಗಳಿವೆ.
ಬ್ಯಾಂಕ್ ಜೊತೆ ಮಾತನಾಡಿ : ವೈಯಕ್ತಿಕ ಸಾಲ ತೀರಿಸಲು ಸಾಧ್ಯವಾಗ್ತಿಲ್ಲ ಎಂದಾದ್ರೆ ಮೊದಲು ಸಾಲ ಪಡೆದ ಬ್ಯಾಂಕ್ ಸಂಪರ್ಕಿಸಿ. ಮೊದಲು ಅವರ ಜೊತೆ ಮಾತನಾಡಿ. ಬ್ಯಾಂಕಿಗೆ ಇಮೇಲ್ ಮಾಡಿ ಅಥವಾ ಸಾಲ ಪಡೆದಿರುವ ಶಾಖೆಗೆ ಭೇಟಿ ನೀಡಿ. ಬ್ಯಾಂಕ್ ಜೊತೆ ಮಾತನಾಡುವ ಮೂಲಕ, ಸ್ವಲ್ಪ ಸಮಯದವರೆಗೆ ಇಎಂಐನಿಂದ ಪಾವತಿಗೆ ಟೈಂ ಪಡೆಯಿರಿ. ಎಷ್ಟು ಸಮಯ ನಿಮಗೆ ಅಗತ್ಯವಿದೆ ಎಂಬುದನ್ನು ನಿಮ್ಮ ಪರಿಸ್ಥಿತಿಯನ್ನು ಪರಿಗಣಿಸಿ, ಬ್ಯಾಂಕ್ ನಿಮಗೆ ಸಮಯ ನೀಡಬಹುದು.
ಸಾಲವನ್ನು ಪುನರ್ ರಚಿಸಿ : ನಿಮ್ಮ ಬಳಿ ಇಎಂಐ ಪಾವತಿಸಲು ಹಣವಿಲ್ಲದಿದ್ದರೆ, ಬ್ಯಾಂಕಿನೊಂದಿಗೆ ಮಾತನಾಡಿ ಸಾಲವನ್ನು ಪುನರ್ ರಚಿಸಬಹುದು. ಇದರಲ್ಲಿ ಸಾಲದ ಇಎಂಐ ಕಡಿಮೆಯಾಗುತ್ತದೆ. ಆದ್ರೆ ಸಾಲ ಮರುಪಾವತಿ ಅವಧಿ ಹೆಚ್ಚಾಗುತ್ತದೆ.
ಈ ಉಪಾಯ ಪಾಲಿಸಿ : ನೀವು ಬ್ಯಾಂಕ್ ನಿಂದ ಪಡೆದ ಸಾಲ ತೀರಿಸಲು, ನಿಮ್ಮ ಮನೆಯಲ್ಲಿರುವ ಹಳೆ ವಸ್ತುಗಳನ್ನು ಅಥವಾ ನಿರುಪಯುಕ್ತ ವಸ್ತುಗಳನ್ನು ಮಾರಾಟ ಮಾಡಿ, ಸ್ವಲ್ಪ ಹಣವನ್ನು ಹೊಂದಿಸಬಹುದು. ಅಲ್ಲದೆ ನಿಮ್ಮ ಬಳಿ ಇರುವ ಸೇವಿಂಗ್ ಹಣವನ್ನು ಸಾಲ ತೀರಿಸಿಕೊಳ್ಳಲು ಬಳಸಿಕೊಳ್ಳಬಹುದು.