
ನವದೆಹಲಿ(ಏ.01): ಇಂದಿನಿಂದ(ಏ.1)ನೂತನ ಆರ್ಥಿಕ ವರ್ಷ ಆರಂಭವಾಗುತ್ತಿದೆ. ಹೀಗಾಗಿ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಈ ಬಾರಿ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ಹೊಸ ನಿಯಮಗಳು ಏ.1ರಿಂದ ಜಾರಿಗೆ ಬರಲಿವೆ. ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಬದಲಾವಣೆ, ಆದಾಯ ತೆರಿಗೆ ಮಿತಿ ಏರಿಕೆ, ಕೆಲವು ಮ್ಯೂಚುವಲ್ ಫಂಡ್‌ಗಳ ಮೇಲಿನ ಲಾಭದಲ್ಲಿ ಬದಲಾವಣೆ ಸೇರಿದಂತೆ ಈ ಬಾರಿ ಹಲವು ಹೊಸ ನಿಯಮಗಳನ್ನು ಸರ್ಕಾರ ಘೋಷಿಸಿದೆ. ಹಾಗಾಗಿ ಆದಾಯ ತೆರಿಗೆ ಪಾವತಿದಾರರು ಈ ಬಾರಿ ಬಹಳಷ್ಟು ಹೊಸದನ್ನು ಅರಿತುಕೊಳ್ಳಬೇಕಿದೆ. ಚಿನ್ನಕ್ಕೆ ಹಾಲ್‌ಮಾರ್ಕ್ ನಂಬರ್ ಕಡ್ಡಾಯ, ಫೋನ್ ವ್ಯಾಲೆಟ್‌ಗಳಿಗೆ ಅಂತರ್ಬಳಕೆ ಶುಲ್ಕ, ವಾಹನಗಳು ತುಟ್ಟಿ ಸೇರಿ ಮತ್ತಷ್ಟು ಬದಲಾವಣೆಯಾಗಲಿದೆ. ಈ ಹಿನ್ನೆಲೆಯಲ್ಲಿ ಆರ್ಥಿಕ ವರ್ಷದ ಆರಂಭದಿಂದ ಏನೆಲ್ಲಾ ಬದಲಾವಣೆಯಾಗಲಿದೆ ಎಂಬುದರ ಕಿರುನೋಟ ಇಲ್ಲಿದೆ.
ಹಳೆ ಆದಾಯ ತೆರಿಗೆ ನೀತಿ ಬೇಕೋ ಹೊಸದೋ? ನೀವೇ ನಿರ್ಧರಿಸಿ
ಹೊಸ ತೆರಿಗೆ ಪದ್ಧತಿಯನ್ನು 2020ರಲ್ಲಿ ಜಾರಿ ಮಾಡಲಾಯಿತು. ಇದರಡಿಯಲ್ಲಿ ತೆರಿಗೆದಾರ ಮಾಡುವ ಹೂಡಿಕೆಗಳನ್ನು ವಿನಾಯಿತಿಗೆ ಪರಿಗಣಿಸುವುದಿಲ್ಲ. ಪಿಎಫ್, ಎಲ್‌ಐಸಿ, ಶಾಲಾ ಫೀಸು, ಮನೆ ಸಾಲದ ಮೇಲಿನ ಬಡ್ಡಿ ಮುಂತಾದವುಗಳನ್ನು ಅದಾಯದಿಂದ ಕಡಿತಗೊಳಿಸಲು ಅವಕಾಶವಿಲ್ಲ. ಈ ಮೊದಲು ಈ ಹೊಸ ಪದ್ಧತಿಯನ್ನು ನಾವು ಆಯ್ಕೆ ಮಾಡಿಕೊಳ್ಳಬೇಕಿತ್ತು. ಆದರೆ ಈ ಸಾಲಿನಿಂದ ಬೇಕಿದ್ದರೆ ತೆರಿಗೆದಾರ ಹಳೆ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಹೊಸ ಪದ್ಧತಿಯಲ್ಲಿ ತನ್ನಿಂತಾನೇ ತೆರಿಗೆ ಲೆಕ್ಕಾಚಾರವಾಗುತ್ತದೆ.
SBI ಗ್ರಾಹಕರೇ ಗಮನಿಸಿ; ಬ್ಯಾಂಕ್ ಖಾತೆಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಲು ಹೀಗೆ ಮಾಡಿ
7.5 ಲಕ್ಷ ರು.ವರೆಗೆ ಆದಾಯ ಇದ್ದರೆ ಈ ವರ್ಷ ನೀವು ತೆರಿಗೆ ಕಟ್ಟಬೇಕಿಲ್ಲ
ಈ ಬಾರಿಯ ಬಜೆಟ್‌ನಲ್ಲಿ ಮೂಲ ತೆರಿಗೆ ವಿನಾಯ್ತಿ ಮಿತಿಯನ್ನು 2.5 ಲಕ್ಷ ರು.ನಿಂದ 3 ಲಕ್ಷ ರು.ಗೆ ಏರಿಕೆ ಮಾಡಲಾಗಿದೆ. ಅಂದರೆ ವಾರ್ಷಿಕ ಆದಾಯ 7 ಲಕ್ಷ ರು.ಗಿಂತ ಕಡಿಮೆ ಇದ್ದರೆ ಯಾವುದೇ ತೆರಿಗೆಯನ್ನು ಪಾವತಿಸಬೇಕಿಲ್ಲ. ಇದಕ್ಕೆ 50 ಸಾವಿರ ರು. ಸ್ಟಾಂಡರ್ಡ್ ಡಿಡಕ್ಷನ್ ಸೇರಿದರೆ 7.5 ಲಕ್ಷ ರು.ವರೆಗೆ ತೆರಿಗೆ ಇರುವುದಿಲ್ಲ. ಒಂದು ವೇಳೆ ಆದಾಯ 7 ಲಕ್ಷ ರು. ಮೀರಿದರೆ ಆಗ 3 ಲಕ್ಷ ರು.ನಿಂದಲೇ ತೆರಿಗೆ ಪಾವತಿಸಬೇಕಾಗುತ್ತದೆ.
ಸ್ಟಾಂಡರ್ಡ್ ಡಿಡಕ್ಷನ್ ಸೌಲಭ್ಯ ಬಳಸಿ 52500 ರು. ಉಳಿಸಿಕೊಳ್ಳಿ
ಈ ಬಾರಿ ತೆರಿಗೆ ಪಾವತಿ ವೇಳೆ 50 ಸಾವಿರ ರು. ಸ್ಟಾಂಡರ್ಡ್ ಡಿಡಕ್ಷನ್‌ಗೆ ಅವಕಾಶ ನೀಡಲಾಗಿದೆ. ಇದರಿಂದ ತಮ್ಮ ಹೂಡಿಕೆಗಳ ಮೇಲೆ ಯಾವುದೇ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿಲ್ಲದ ತೆರಿಗೆದಾರಿಗೆ ಇದರಿಂದ ಅನುಕೂಲವಾಗಲಿದೆ. ವಾರ್ಷಿಕ ಡಿಡಕ್ಷನ್ ಘೋಷಿಸಿರುವುದರಿಂದ 15 ಲಕ್ಷ ರು.ಗಿಂತಲೂ ಹೆಚ್ಚು ಆದಾಯ ಪಡೆಯುವವರಿಗೆ 52,500 ರು. ಉಳಿತಾಯವಾಗಲಿದೆ. ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ಈ ಅನುಕೂಲವನ್ನು ತೆರಿಗೆ ಪಾವತಿಸುವ ಉದ್ಯೋಗಿಗಳಿಗೆ ಮಾತ್ರ ನೀಡಲಾಗಿತ್ತು.
ಆದಾಯ ತೆರಿಗೆ ಸ್ತರ 6ರಿಂದ 5ಕ್ಕೆ ಇಳಿಕೆ: ಯಾರಿಗೆ ಎಷ್ಟು ತೆರಿಗೆ?
ಈ ಹಿಂದೆ ಇದ್ದ 6 ತೆರಿಗೆ ಸ್ಲಾ್ಯಬ್‌ಗಳನ್ನು ಈ ಬಾರಿ 5ಕ್ಕೆ ಇಳಿಕೆ ಮಾಡಲಾಗಿದೆ. 3 ಲಕ್ಷ ರು.ವರೆಗೆ ಯಾವುದೇ ತೆರಿಗೆ ಇಲ್ಲ. 3ರಿಂದ 6 ಲಕ್ಷ ರು.ವರೆಗೆ ಶೇ.5ರಷ್ಟು, 6ರಿಂದ 9 ಲಕ್ಷ ರು.ವರೆಗೆ ಶೇ.10ರಷ್ಟು, 9ರಿಂದ 12 ಲಕ್ಷ ರು.ವರೆಗೆ ಶೇ.15ರಷ್ಟುಮತ್ತು 12ರಿಂದ 15 ಲಕ್ಷ ರು.ವರೆಗೆ ಶೇ.20ರಷ್ಟು ತೆರಿಗೆ ನಿಗದಿಪಡಿಸಲಾಗಿದೆ. 15 ಲಕ್ಷ ರು.ಗಿಂತ ಹೆಚ್ಚು ಆದಾಯವಿದ್ದರೆ ಶೇ.30ರಷ್ಟು ತೆರಿಗೆಯನ್ನು ವಿಧಿಸಲಾಗುತ್ತದೆ. ಅಲ್ಲದೇ ಮೇಲ್ತೆರಿಗೆ ದರವನ್ನು ಶೇ.37ರಿಂದ ಶೇ.25ಕ್ಕೆ ಇಳಿಸಲಾಗಿದೆ. ಇದರಿಂದಾಗಿ ಗರಿಷ್ಠ ತೆರಿಗೆ ದರ ಶೇ.39ಕ್ಕೆ ಇಳಿಕೆಯಾಗಿದೆ.
ವರ್ಷಕ್ಕೆ 5 ಲಕ್ಷಕ್ಕಿಂತ ಹೆಚ್ಚಿನ ಪ್ರೀಮಿಯಂ ಕಟ್ಟುತ್ತಿದ್ದರೆ ಅದಕ್ಕಿನ್ನು ತೆರಿಗೆ ಕಟ್ಟಬೇಕು!
ವರ್ಷಕ್ಕೆ 5 ಲಕ್ಷ ರು.ಗಿಂತ ಅಧಿಕ ಪ್ರೀಮಿಯಂ ಪಾವತಿಸುವ ಜೀವ ವಿಮಾ ಪಾಲಿಸಿಗಳ ಅವಧಿ ಮುಕ್ತಾಯವಾದ ಬಳಿಕ ಪಾಲಿಸಿದಾರರಿಗೆ ಸಿಗುವ ವಿಮಾ ಮೊತ್ತಕ್ಕೆ ಇನ್ನು ಮುಂದೆ ತೆರಿಗೆ ಪಾವತಿಸಬೇಕಾಗುತ್ತದೆ. ಈ ವರ್ಷದ ಏ.1ರ ನಂತರ ಖರೀದಿಸುವ ಜೀವವಿಮಾ ಪಾಲಿಸಿಗಳು ಮೆಚೂರ್ ಆದ ಬಳಿಕ ಸಿಗುವ ಹಣಕ್ಕೆ ತೆರಿಗೆ ವಿಧಿಸಲಾಗುತ್ತದೆ.
ಹಿರಿಯರ ಉಳಿತಾಯ ಯೋಜನೆ ಮಿತಿ 15ರಿಂದ 30 ಲಕ್ಷಕ್ಕೆ ಏರಿಕೆ
ಹಿರಿಯರಿಗೆ ಉಳಿತಾಯದಲ್ಲಿ ಬಾರಿ ಅನುಕೂಲ ಮಾಡಿಕೊಡಲಾಗಿದೆ. ಉಳಿತಾಯ ಯೋಜನೆಯಡಿ ಇರಿಸಬಹುದಾದ ಠೇವಣಿಯ ಮೊತ್ತವನ್ನು ಈಗಿರುವ 15 ಲಕ್ಷ ರು.ನಿಂದ 30 ಲಕ್ಷ ರು.ಗೆ ಹೆಚ್ಚಳ ಮಾಡಲಾಗಿದೆ. ಈ ಯೋಜನೆಯಲ್ಲಿ ಹಿರಿಯ ನಾಗರಿಕರು ಠೇವಣಿ ಇರಿಸಿದರೆ ಅದಕ್ಕೆ ಸರ್ಕಾರ ಅತ್ಯಂತ ಗರಿಷ್ಠ ಬಡ್ಡಿ ನೀಡುತ್ತದೆ. ಅಲ್ಲದೇ ಇದರಡಿ ನೀಡುವ ಬಡ್ಡಿಗೆ ವರ್ಷಕ್ಕೆ 50 ಸಾವಿರದವರೆಗೆ ಸಂಪೂರ್ಣ ತೆರಿಗೆ ವಿನಾಯಿತಿ ಇದೆ.
ಚಿನ್ನಕ್ಕೆ ಹಾಲ್‌ಮಾರ್ಕ್ ಕಡ್ಡಾಯ: ಮಾರ್ಕ್ ಇಲ್ಲದ ಚಿನ್ನ ಅಕ್ರಮ
ಚಿನ್ನದ ಮಾರಾಟಕ್ಕೆ ಸಂಖ್ಯೆ ಮತ್ತು ಆಲ್ಫಾಬೆಟ್‌ಗಳ ಮಿಶ್ರಣ ಒಳಗೊಂಡ 6 ಅಂಕೆಗಳ ಹಾಲ್‌ಮಾರ್ಕ್ ಅನ್ನು ಕಡ್ಡಾಯಗೊಳಿಸಲಾಗಿದೆ. ಇದನ್ನು ಹಾಲ್‌ಮಾರ್ಕ್ ಯುನೀಕ್ ಐಡೆಂಟಿಫಿಕೇಶನ್ ಎಂದು ಕರೆಯಲಾಗಿದ್ದು, ಈ ಮಾರ್ಕ್ ಇಲ್ಲದ ಚಿನ್ನದ ಮಾರಾಟವನ್ನು ಅಕ್ರಮ ಎಂದು ಪರಿಗಣಿಸಲಾಗುತ್ತದೆ. ಇದು ಕೇವಲ ಚಿನ್ನದ ಮಾರಾಟಗಾರರಿಗೆ ಅನ್ವಯವಾಗಲಿದ್ದು, ಗ್ರಾಹಕರು ಈಗಾಗಲೇ ಖರೀದಿಸಿರುವ ಚಿನ್ನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಳಪೆ ಗುಣಮಟ್ಟದ ಮತ್ತು ನಕಲಿ ಚಿನ್ನದ ಮಾರಾಟವನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ.
ಯುಪಿಐ ವ್ಯಾಲೆಟ್ ಮೂಲಕ ಪಿಪಿಐ ವಹಿವಾಟಿಗೆ ಇನ್ನು ಮುಂದೆ ಶುಲ್ಕ
ಯಾವುದೇ ಯುಪಿಐ ವ್ಯಾಲೆಟ್ ಬಳಸಿಕೊಂಡು ಪಿಪಿಐ (ಪ್ರೀಪೇಯ್ಡ್ ಪೇಮೆಂಟ್ ಇನ್‌ಸ್ಟು್ರಮೆಂಟ್)ಗೆ ಮಾಡುವ 2000 ರು.ಗಿಂತ ಹೆಚ್ಚಿನ ವಹಿವಾಟಿಗೆ ಇನ್ನು ಮುಂದೆ ಶೇ.1.1ರಷ್ಟುಅಂತರ್ಬಳಕೆ ಶುಲ್ಕವನ್ನು ವಿಧಿಸಲಾಗುತ್ತದೆ. ಎಲ್ಲಾ ಬ್ಯಾಂಕ್ ಖಾತೆಯಿಂದ ಇನ್ನೊಂದು ಬ್ಯಾಂಕ್ ಖಾತೆ, ಯುಪಿಐನಿಂದ ಮಾಡುವ ಇತರೆ ಖರೀದಿಗೆ ಈ ಶುಲ್ಕ ಅನ್ವಯವಾಗದು. ಆದರೆ ಇದು ಗ್ರಾಹಕರಿಗೆ ಹೊರೆ ಆಗದು. ವ್ಯಾಪಾರಿಗಳಿಗೆ ಅನ್ವಯವಾಗಲಿದೆ.
ಅಗತ್ಯ ಔಷಧಗಳ ಬೆಲೆ ದಾಖಲೆ ಶೇ.12ರಷ್ಟು ಹೆಚ್ಚಳ, ಹೊಸ ಬಿಸಿ
ಕೇಂದ್ರ ಔಷಧ ಪ್ರಾಧಿಕಾರದ ದರ ನಿಯಂತ್ರಣ ಪಟ್ಟಿಯಲ್ಲಿರುವ 380ಕ್ಕೂ ಹೆಚ್ಚು ಔಷಧಗಳ ಬೆಲೆಯನ್ನು ದಾಖಲೆಯ ಶೇ.12.12ರಷ್ಟುಏರಿಕೆ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದರಿಂದಾಗಿ ನೋವು ನಿವಾರಕ, ಆ್ಯಂಟಿಬಯಾಟಿಕ್ಸ್, ಸೋಂಕು ನಿವಾರಕ ಸೇರಿದಂತೆ ಹಲವು ಅಗತ್ಯ ಔಷಧಗಳ ಬೆಲೆ ಹೆಚ್ಚಳವಾಗಲಿದೆ.
ಕಚ್ಚಾವಸ್ತು ಬೆಲೆ, ನಿರ್ದಿಷ್ಟ ಮಾನದಂಡ ನಿಯಮ ಹಿನ್ನೆಲೆ ಕಾರುಗಳು ತುಟ್ಟಿ
ಹಲವು ಕಚ್ಚಾವಸ್ತುಗಳ ಬೆಲೆ ಏರಿಕೆಯಾಗಿರುವುದರಿಂದ ಮತ್ತು ಸರ್ಕಾರದ ಸೂಚನೆ ಅನ್ವಯ ಕೆಲವೊಂದು ನಿರ್ದಿಷ್ಟಸುರಕ್ಷತಾ ಮಾನದಂಡ ಪಾಲನೆ ಕಡ್ಡಾಯವಾದ ಹಿನ್ನೆಲೆಯಲ್ಲಿ ಹಲವು ಕಾರು ಕಂಪನಿಗಳು ಕಾರುಗಳ ಬೆಲೆಯನ್ನು ಹೆಚ್ಚಳ ಮಾಡಲು ನಿರ್ಧರಿಸಿವೆ. ಇದರಲ್ಲಿ ಬಹುತೇಕ ಹೊಸ ಬೆಲೆಗಳು ಏ.1ರಿಂದಲೇ ಜಾರಿಗೆ ಬರುವುದರಿಂದ ಮಾರುತಿ ಸುಜುಕಿ, ಹೋಂಡಾ, ಟೊಯೋಟಾ, ಹ್ಯುಂಡೈ, ಟಾಟಾ ಮೋಟರ್ಸ್, ಮರ್ಸಿಡೆಸ್ ಬೆಂಜ್, ಆಡಿ ಕಂಪನಿಗಳ ಕಾರುಗಳು ಮತ್ತಷ್ಟುದುಬಾರಿಯಾಗಲಿವೆ.
ಚಿನ್ನ ಪರಿವರ್ತನೆಗೆ ಇನ್ನುಮುಂದೆ ಕ್ಯಾಪಿಟಲ್ ಗೇನ್ಸ್ ತೆರಿಗೆ ವಿಧಿಸಲ್ಲ
ಎಲೆಕ್ಟ್ರಾನಿಕ್ ರೂಪದಲ್ಲಿರುವ ಚಿನ್ನವನ್ನು ಭೌತಿಕ ಚಿನ್ನವಾಗಿ ಪರಿವರ್ತಿಸಿದರೆ ಅಥವಾ ಭೌತಿಕ ರೂಪದಲ್ಲಿರುವ ಚಿನ್ನವನ್ನು ಎಲೆಕ್ಟ್ರಾನಿಕ್ ರೂಪಕ್ಕೆ ಬದಲಾಯಿಸಿದರೆ ಅದಕ್ಕೆ ತಗಲುವ ಕ್ಯಾಪಿಟಲ್ ಗೇನ್ಸ್‌ಗೆ ತೆರಿಗೆ ವಿಧಿಸದಿರಲು ನಿರ್ಧರಿಸಲಾಗಿದೆ. ಷೇರು ಮಾರುಕಟ್ಟೆಯಲ್ಲಿ ಇಜಿಆರ್ ರೂಪದಲ್ಲಿ ಚಿನ್ನದ ವಹಿವಾಟು ನಡೆಯುತ್ತದೆ. ಜನರು ಅಲ್ಲಿ ಡಿಜಿಟಲ್ ರೂಪದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಬಹುದು ಹಾಗೆ ಹೂಡಿಕೆ ಮಾಡಿದ ಹಣದಿಂದ ಭೌತಿಕ ಚಿನ್ನವನ್ನು ಖರೀದಿಸಿದರೆ ಅದಕ್ಕೆ ಕ್ಯಾಪಿಟಲ್ ಗೇನ್ಸ್ ತೆರಿಗೆ ಅನ್ವಯಿಸುವುದಿಲ್ಲ.
ನೀವು ಪಿಂಚಣಿ ಪಡಯುತ್ತಿದ್ದೀರಾ? ಹಾಗಾದ್ರೆ ನೀವು ಕೂಡ ಐಟಿಆರ್ ಸಲ್ಲಿಕೆ ಮಾಡ್ಬೇಕು, ಹೇಗೆ? ಇಲ್ಲಿದೆ ಮಾಹಿತಿ
ಆನ್ಲೈನ್ ಗೇಮ್‌ನಲ್ಲಿ 10000ಕ್ಕಿಂತ ಹೆಚ್ಚಿನ ಹಣ ಗೆದ್ದರೆ ಕಟ್ಟಬೇಕು ತೆರಿಗೆ
ಆನ್ಲೈನ್ ಗೇಮ್‌ಗಳಲ್ಲಿ 10 ಸಾವಿರ ರು. ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ಗೆದ್ದರೆ ಅದಕ್ಕೆ ಶೇ.30ರಷ್ಟುತೆರಿಗೆ ವಿಧಿಸಲಾಗುತ್ತದೆ. ಆದಾಯ ತೆರಿಗೆ ನಿಯಮದ ಪ್ರಕಾರ ಆನ್ಲೈನ್ ಗೇಮ್‌ಗಳಲ್ಲಿ ಗಳಿಸುವ ಹಣವನ್ನು ಇತರೆ ಆದಾಯ ಮೂಲಗಳ ಅಡಿಯಲ್ಲಿ ನಮೂದು ಮಾಡುವುದು ಕಡ್ಡಾಯವಾಗಿದೆ. 10 ಸಾವಿರಕ್ಕಿಂತ ಹೆಚ್ಚು ಗೆದ್ದಾಗೆಲ್ಲಾ ಹೂಡಿಕೆ ಮಾಡಿದ ಹಣ ಬಿಟ್ಟು ಉಳಿದ ಹಣದಲ್ಲಿ ಶೇ.30ರಷ್ಟುತೆರಿಗೆ ಕಟ್ಟಬೇಕಾಗುತ್ತದೆ.
ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಶೇ.0.7ರವರೆಗೂ ಏರಿಕೆ
ಏಪ್ರಿಲ್- ಜೂನ್ ತ್ರೈಮಾಸಿಕಕ್ಕೆ ಅನ್ವಯವಾಗುವಂತೆ ಕೇಂದ್ರ ಸರ್ಕಾರ ವಿವಿಧ ಸಣ್ಣ ಉಳಿತಾಯ ಖಾತೆ ಠೇವಣಿಗಳ ಬಡ್ಡಿದರವನ್ನು ಶೇ.0.1ರಿಂದ ಶೇ.0.7ರವರೆಗೂ ಹೆಚ್ಚಳ ಮಾಡಿದೆ. ರಾಷ್ಟ್ರೀಯ ಉಳಿತಾಯ ಪತ್ರದ ಬಡ್ಡಿ ದರ ಶೇ.7.5ಕ್ಕೆ, ಸುಕನ್ಯಾ ಸಮೃದ್ಧಿ ಬಡ್ಡಿದರ ಶೇ.8ಕ್ಕೆ, ಹಿರಿಯ ನಾಗರಿಕ ಉಳಿತಾಯ ಖಾತೆ ಬಡ್ಡಿದರ ಶೇ.8.2ಕ್ಕೆ, ಕಿಸಾನ್ ವಿಕಾಸ್ ಪತ್ರದ ಬಡ್ಡಿದರ ಶೇ.7.6ಕ್ಕೆ, ಅಂಚೆ ಇಲಾಖೆಯ 1 ವರ್ಷದ ಅವಧಿಯ ಠೇವಣಿಯ ಬಡ್ಡಿದರ ಶೇ.6.8ಕ್ಕೆ, 2 ವರ್ಷಗಳ ಠೇವಣಿ ಬಡ್ಡಿದರ ಶೇ.6.9ಕ್ಕೆ, 3 ವರ್ಷದ ಠೇವಣಿ ಬಡ್ಡಿದರ ಶೇ.7ಕ್ಕೆ, 5 ವರ್ಷಗಳ ಠೇವಣಿ ಬಡ್ಡಿದರ ಶೇ.7.5ಕ್ಕೆ, ಮಾಸಿಕ ಆದಾಯ ಯೋಜನೆ ಬಡ್ಡಿದರ ಶೇ.7.4ಕ್ಕೆ ಹೆಚ್ಚಿಸಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.