Vodafone Idea : ಸರ್ಕಾರದ ಪಾಲಿಗೆ ಶೇ. 35.8 ಷೇರು, ಮುಂದೇನಾಗಬಹುದು?

By Suvarna NewsFirst Published Jan 11, 2022, 6:28 PM IST
Highlights

ಷೇರು ರೂಪದಲ್ಲಿ ಬಾಕಿ ಪಾವತಿಗೆ ವೊಡಾಫೋನ್ ನಿರ್ಧಾರ
ಸರ್ಕಾರಕ್ಕೆ ಪಾವತಿ ಮಾಡಬೇಕಿರುವ ಬಡ್ಡಿ 16 ಸಾವಿರ ಕೋಟಿ
ಪ್ರತಿ ಷೇರಿಗೆ 10 ರೂಪಾಯಿಯಂತೆ ಸರ್ಕಾರಕ್ಕೆ ಮಾರಾಟ
 

ಬೆಂಗಳೂರು (ಜ. 11): ತರಂಗಾಂತರಗಳ ಬಳಕೆ ಮಾಡಿ ಬಾಕಿ ಸರ್ಕಾರಕ್ಕೆ ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಕಂಪನಿಯ ಷೇರುಗಳನ್ನು ಸರ್ಕಾರಕ್ಕೆ ಹಸ್ತಾಂತರ ಮಾಡುವ ಮೂಲಕ ಪಾವತಿ ಮಾಡುತ್ತೇವೆ ಎಂದು ದೇಶದ ಪ್ರಮುಖ ದೂರಸಂಪರ್ಕ ಸೇವೆಯ ಕಂಪನಿಯಾಗಿರುವ ವೊಡಾಫೋನ್ ಐಡಿಯಾ ಲಿಮಿಟೆಡ್ (Vodafone Idea) ತಿಳಿಸಿತ್ತು. ಮಂಗಳವಾರ ಈ ಕುರಿತಂತೆ ವೊಡಾಫೋನ್ ಐಡಿಯಾದ ನಿರ್ದೇಶಕರ ಮಂಡಳಿ ಇದಕ್ಕೆ ಒಪ್ಪಿಗೆ ನೀಡಿದ್ದು,  ಕಂಪನಿಯಲ್ಲಿ ಸರ್ಕಾರ 35.8ರಷ್ಟು ಪಾಲನ್ನು ಹೊಂದಿರಲಿದೆ. ಅದರೊಂದಿಗೆ ವೊಡಾಫೋನ್ ಗ್ರೂಪ್ (Vodafone Group) ಶೇ. 28.5ರಷ್ಟು ಪಾಲನ್ನು ಹೊಂದಿರಲಿದ್ದರೆ, ಆದಿತ್ಯ ಬಿರ್ಲಾ ಗ್ರೂಪ್ (Aditya Birla Group)ಶೇ. 17.8ರಷ್ಟು ಪಾಲನ್ನು ಹೊಂದಿರಲಿದೆ. ಇದರೊಂದಿಗೆ ಖಾಸಗಿ ದೂರಸಂಪರ್ಕ ಕಂಪನಿಯಲ್ಲಿ ಸರ್ಕಾರವೇ ಗರಿಷ್ಠ ಪಾಲು ಹೊಂದಿರುವ ಅಧಿಕಾರ ಸ್ಥಾಪನೆ ಮಾಡಲಿದೆ.

ತರಂಗಾಂತರಗಳ ಹರಾಜಿನ ಕಂತುಗಳಿಗೆ ಸಂಬಂಧಿಸಿದ ಸಂಪೂರ್ಣ ಬಡ್ಡಿ ಮತ್ತು ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್-AGR) ಬಾಕಿಗಳನ್ನು ಈಕ್ವಿಟಿಯಾಗಿ ಪರಿವರ್ತಿಸಲು ಮಂಡಳಿ ಅನುಮೋದಿಸಿದ್ದಾಗಿ ಟೆಲಿಕಾಂ ಸಂಸ್ಥೆ ಜನವರಿ 11 ರಂದು ಸ್ಟಾಕ್ ಎಕ್ಸ್ ಚೇಂಜ್ ಗೆ ನೀಡಿರುವ ಫೈಲಿಂಗ್ ನಲ್ಲಿ ತಿಳಿಸಿದೆ. ಇದರ ಬೆನ್ನಲ್ಲಿಯೇ ವೊಡಾಫೋನ್ ಐಡಿಯಾ ಕಂಪನಿಯ ಷೇರುಗಳು ಶೇ.20ರಷ್ಟು ಕುಸಿದಿವೆ. ಪ್ರತಿ ಷೇರಿಗೆ 13.40 ರೂಪಾಯಿಯಲ್ಲಿ ಆರಂಭಗೊಂಡಿದ್ದ ಮಂಗಳವಾರದ ವಹಿವಾಟು ದಿನದ ಕೊನೆಯಲ್ಲಿ 11.75 ರೂಪಾಯಿಯೊಂದಿಗೆ ಕೊನೆಗೊಂಡಿದೆ. 

ಕಂಪನಿ ಮಾಡಿರುವ ಅಂದಾಜಿನ ಪ್ರಕಾರ, ವೊಡಾಫೋನ್ ಇಂಡಿಯಾ ಸರ್ಕಾರಕ್ಕೆ ಪಾವತಿ ಮಾಡಬೇಕಿರುವ ಒಟ್ಟಾರೆ ಬಡ್ಡಿಯ ಮೊತ್ತ 16 ಸಾವಿರ ಕೋಟಿ ರೂಪಾಯಿ. ಆದರೆ, ಈ ಮೊತ್ತವನ್ನು ಷೇರುಗಳ ಮೂಲಕ ಪಾವತಿ ಮಾಡಲು ಕಂಪನಿ ನಿರ್ಧಾರ ಮಾಡಿರುವ ಕಾರಣ, ಇಡೀ ಕಂಪನಿಯಲ್ಲಿ ಭಾರತ ಸರ್ಕಾರ ಶೇ.35.8 ಪಾಲನ್ನು ಹೊಂದಿರಲಿದೆ. ಆ ಮೂಲಕ ಕಂಪನಿಯಲ್ಲಿ ಗರಿಷ್ಠ ಪಾಲು ಹೊಂದಿರುವ ಪ್ರವರ್ತಕ ಎನಿಸಿಕೊಳ್ಳಲಿದೆ. ಸರ್ಕಾರಕ್ಕೆ ಏರ್ ಟೆಲ್ ಕಂಪನಿಯೂ ಕೂಡ ಬಾಕಿ ಹಣ ಪಾವತಿ ಮಾಡಬೇಕಿದ್ದು ಇದನ್ನು ಷೇರುಗಳ ರೂಪದಲ್ಲಿ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಮೇಲ್ನೋಟಕ್ಕೆ ವೊಡಾಫೋನ್ ಐಡಿಯಾ ಕಂಪನಿಯ ನಿರ್ಧಾರ ಹಿನ್ನಡೆ ಎನಿಸುವ ರೀತಿ ಕಂಡಿದ್ದರೂ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಂಪನಿಯ ಇತಿಹಾಸ ಗಮನಿಸಿದರೆ ಇದನ್ನು ಧನಾತ್ಮಕವಾಗಿ ಪರಿಗಣನೆ ಮಾಡಬಹುದಾಗಿದೆ. 

ದಿವಾಳಿಯ ಅಂಚಿನಲ್ಲಿ ವೊಡಾಫೋನ್‌ ಕಂಪನಿ!
"ಈ ಬಡ್ಡಿಯ ನಿವ್ವಳ ಪ್ರಸ್ತುತ ಮೌಲ್ಯವು (NPV) ಕಂಪನಿಯ ಉತ್ತಮ ಅಂದಾಜಿನ ಪ್ರಕಾರ ಸುಮಾರು 16,000 ಕೋಟಿ ರೂ.ಗಳಾಗಬಹುದೆಂದು ನಿರೀಕ್ಷಿಸಲಾಗಿದೆ, ದೂರಸಂಪರ್ಕ ಇಲಾಖೆಯ ದೃಢೀಕರಣಕ್ಕೆ ಇದು ಒಳಪಟ್ಟಿರುತ್ತದೆ. ಕಂಪನಿಯ ಷೇರುಗಳ ಸರಾಸರಿ ಬೆಲೆಯಿಂದ 14.08.2021 ರ ಸಂಬಂಧಿತ ದಿನಾಂಕದಂದು ಸಮಾನ ಮೌಲ್ಯಕ್ಕಿಂತ ಕಡಿಮೆಯಿತ್ತು, ಈಕ್ವಿಟಿ ಷೇರುಗಳನ್ನು ಪ್ರತಿ ಷೇರಿಗೆ ರೂ. 10/- ಸಮಾನ ಮೌಲ್ಯದಲ್ಲಿ ಸರ್ಕಾರಕ್ಕೆ ನೀಡಲಾಗುವುದು' ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಕಂಪನಿ ಈ ನಿರ್ಧಾರ ಮಾಡುವ ಮುನ್ನ, ವೊಡಾಫೋನ್ ಶೇ 53.57ರಷ್ಟು ಪಾಲನ್ನು ಹೊಂದಿದ್ದರೆ, ಆದಿತ್ಯ ಬಿರ್ಲಾ ಗ್ರೂಪ್ ಶೇ.18.48ರಷ್ಟು ಪಾಲನ್ನು ಹೊಂದಿತ್ತು.

22100 ಕೋಟಿ ತೆರಿಗೆ ಕೇಸಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವೊಡಾಫೋನ್‌ಗೆ ಗೆಲುವು?
"ಅಲ್ಪ ಅವಧಿಗೆ ವೊಡಾಫೋನ್ ಐಡಿಯಾದ ಷೇರು ದುರ್ಬಲವಾಗುವುದು ಖಂಡಿತ. ಆದರೆ, ಪ್ರತಿ ಯುನಿಟ್ ಗೆ ಸರಾಸರಿ ದರ ಏರಿಕೆಯಾಗುತ್ತಿದ್ದಂತೆ ಪ್ರತಿ ತ್ರೈಮಾಸಿಕದಲ್ಲಿ ಕಂಪನಿ ಪ್ರಗತಿ ಕಾಣುತ್ತಾ ಮುಂದಿನ ದಿನಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಒಟ್ಟಾರೆಯಾಗಿ ಸರ್ಕಾರದ ಈ ಕ್ರಮವು ದೂರಸಂಪರ್ಕ ಕ್ಷೇತ್ರದಲ್ಲಿ ಕೇವಲ ಎರಡೇ ಕಂಪನಿಗಳ ಅಧಿಪತ್ಯದಿಂದ ಉಳಿಸುವ ಕ್ರಮ ಎಂದು ಬಣ್ಣನೆ ಮಾಡಬಹುದಾಗಿದೆ ಎಂದು ಐಐಎಫ್ ಎಲ್ ಸೆಕ್ಯುರಿಟೀಸ್ ನ ಎವಿಪಿ (ರಿಸರ್ಚ್) ಜಯೇಷ್ ಭಾನುಶಾಲಿ (Jayesh Bhanushali, AVP (Research), IIFL Securities)ಹೇಳಿದ್ದಾರೆ.

click me!