ಪೆಟ್ರೋಲ್ ತೆರಿಗೆ ವಿರುದ್ಧ ದಂಗೆ: ಪೊಲೀಸರನ್ನೇ ಬಡಿದರೆ ಹೆಂಗೆ?

By Web DeskFirst Published Dec 2, 2018, 12:16 PM IST
Highlights

ತೈಲದರ ಹೆಚ್ಚಳ, ತೈಲ ತೆರಿಗೆ ಹೆಚ್ಚಳದ ವಿರುದ್ಧ ಜನರ ದಂಗೆ! ಹಿಂಸಾತ್ಮಕ ಪ್ರತಿಭಟನೆಗೆ ಸಾಕ್ಷಿಯಾಯ್ತು ನಗರದ ರಸ್ತೆಗಳು! ಅಕ್ಷರಶ: ರಣಾಂಗಣವಾದ ಫ್ರಾನ್ಸ್  ರಾಜಧಾನಿ ಪ್ಯಾರಿಸ್! ಪೊಲೀಸರು, ಪ್ರತಿಭಟನಾಕಾರರ ನಡುವೆ ಭಾರೀ ಕಾಳಗ! ಶಾಂತಿ ಕಾಪಾಡುವಂತೆ ಜನತೆಗೆ ಮನವಿ ಮಾಡಿದ ಫ್ರಾನ್ಸ್ ಸರ್ಕಾರ 

ಪ್ಯಾರಿಸ್(ಡಿ.02): ಭಾರತದಲ್ಲಿ ತೈಲದರ ನಿತ್ಯವೂ ಹಾವು ಏಣಿ ಆಟದಲ್ಲಿ ನಿರತವಾಗಿದೆ. ಒಮ್ಮೆ ತೈಲದರ ಹೆಚ್ಚಾದರೆ ಮಗದೊಮ್ಮೆ ಕಡಿಮೆಯಾಗಿರುತ್ತದೆ. ಆದರೆ ಈ ಎಲ್ಲ ಬೆಳವಣಿಗೆಯನ್ನು ಭಾರತೀಯ ಶಾಂತ ಚಿತ್ತದಿಂದ ಗಮನಿಸುತ್ತಿದ್ದಾನೆ. ಅಲ್ಲದೇ ತೈಲದರದಲ್ಲಿ ನಿಯಂತ್ರಣ ಸಾಧಿಸಲು ಕೇಂದ್ರ ಸರ್ಕಾರದ ಹಿಂದೆ ಬಂಡೆಯಂತೆ ಗಟ್ಟಿಯಾಗಿ ನಿಂತಿದ್ದಾನೆ.

ಆದರೆ ಫ್ರಾನ್ಸ್‌ನಲ್ಲಿ ತೈಲದರ ಹೆಚ್ಚಳದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಭಾರೀ ಕಾಳಗ ನಡೆದಿದೆ.

ಫ್ರಾನ್ಸ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರಿದ್ದು, ಗಾಯದ ಮೇಲೆ ಬರೆ ಎಳೆದಂತೆ ಸರ್ಕಾರ ತೈಲ ತೆರಿಗೆಯನ್ನು ಕೂಡ ಹೆಚ್ಚಿಸಿದೆ.

ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಜನತೆ, ಬೀದಿಗಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಸಾವಿರಾರು ಪ್ರತಿಭಟನಾಕಾರರು ಹಿಂಸಾಚಾರದಲ್ಲಿ ತೊಡಗಿದ್ದು, ಇಲ್ಲಿನ ಆರ್ಕ್ ಡೆ ಟ್ರಿಯುಂಫ್ ಕಟ್ಟಡಕ್ಕೆ ಬೆಂಕಿ ಇಟ್ಟಿದ್ದಾರೆ.

Situation toujours très tendue près de l’Arc de triomphe. Violents affrontements entre et forces de l’ordre pic.twitter.com/h5vFP6UUJG

— Boris Kharlamoff (@BorisKharlamoff)

ಇನ್ನು ಪ್ರತಿಭಟನಾಕರರನ್ನು ಚದುರಿಸಲು ಪೊಲೀಸರು ಹರಸಹಾಸಪಡುತ್ತಿದ್ದು, ಪ್ರತಿಭಟನಾಕಾರರ ವಿರುದ್ಧ ಲಾಠಿ ಮತ್ತು ಟಿಯರ್ ಗ್ಯಾಸ್  ಬಳಕೆ ಮಾಡಲಾಗಿದೆ.

ಪೊಲೀಸ್ ಮತ್ತು ಪ್ರತಿಭಟನಕಾರರ ನಡುವಿನ ಕಾಳಗದಲ್ಲಿ 17 ಜನ ಪೊಲೀಸರೂ ಸೇರಿದಂತೆ ಇದುವರೆಗೂ ಸುಮಾರು 110 ಜನ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಶಾಂತಿ ಕಾಪಾಡುವಂತೆ ಮನವಿ ಮಾಡಿರುವ ಫ್ರಾನ್ಸ್ ಸರ್ಕಾರ, ಹಿಂಸಾತ್ಮಕ ಪ್ರತಿಭಟನೆಯನ್ನು ಸಹಿಸುವುದಿಲ್ಲ ಎಂಬ ಗಂಭೀರ ಎಚ್ಚರಿಕೆಯನ್ನೂ ನೀಡಿದೆ.

click me!