ಯುಪಿಐ ವಹಿವಾಟಿಗೆ ಶುಲ್ಕ: ಬ್ಯಾಂಕ್, ಪೇಮೆಂಟ್‌ ಆಪ್‌ಗಳಿಗೆ ತಿಂಗಳಿಗೆ ₹2,400 ಕೋಟಿ ಲಾಭದ ನಿರೀಕ್ಷೆ

Published : Sep 15, 2026, 10:56 PM IST
New UPI Charge From October 15: What Is Merchant Discount Rate And How Will It Work?

ಸಾರಾಂಶ

₹2,000 ಕ್ಕಿಂತ ಹೆಚ್ಚಿನ ಮೌಲ್ಯದ ಯುಪಿಐ ವರ್ತಕರ ಪಾವತಿಗಳ ಮೇಲೆ ಶುಲ್ಕ ವಿಧಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ನಿರ್ಧಾರದಿಂದ ಬ್ಯಾಂಕ್‌ಗಳು ಮತ್ತು ಪೇಮೆಂಟ್ ಆಪ್‌ಗಳಿಗೆ ಭಾರಿ ಆದಾಯ ಬರುವ ನಿರೀಕ್ಷೆಯಿದೆ,.

ಬೆಂಗಳೂರು (ಸೆ.15): ಭಾರತದಲ್ಲಿ ₹2,000 ಕ್ಕಿಂತ ಹೆಚ್ಚಿನ ಮೌಲ್ಯದ ಯುಪಿಐ (UPI) ವರ್ತಕರ (Merchant) ಪಾವತಿಗಳ ಮೇಲೆ ನಿರ್ದಿಷ್ಟ ಶುಲ್ಕವನ್ನು (MDR) ವಿಧಿಸಲು ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಮನಿ ಕಂಟ್ರೋಲ್ ನಡೆಸಿದ ಅಧ್ಯಯನ ವರದಿಯ ಪ್ರಕಾರ, ಈ ಶುಲ್ಕ ವ್ಯಾಪ್ತಿಗೆ ಬರುವ ವಹಿವಾಟುಗಳ ಸಂಖ್ಯೆಯು ಒಟ್ಟು ಯುಪಿಐ ವಹಿವಾಟುಗಳ ಪೈಕಿ ಕೇವಲ ಶೇ. 2.5 ರಷ್ಟು ಮಾತ್ರ ಇದೆ. ಆದರೆ, ಈ ವಹಿವಾಟುಗಳು ಅತ್ಯಂತ ಹೆಚ್ಚಿನ ಮೌಲ್ಯವನ್ನು ಹೊಂದಿರುವುದರಿಂದ, ಇವುಗಳಿಂದ ಬ್ಯಾಂಕ್‌ಗಳು ಮತ್ತು ಪೇಮೆಂಟ್‌ ಆಪ್‌ಗಳಿಗೆ (Payment Apps) ಮಾಸಿಕ ಅಂದಾಜು ₹2,400 ಕೋಟಿ ವರೆಗೆ ಆದಾಯ ಹರಿದುಬರುವ ಸಾಧ್ಯತೆಯಿದೆ.

ಯುಪಿಐ ವಹಿವಾಟುಗಳ ಒಟ್ಟು ಸಂಖ್ಯೆಗೆ ಹೋಲಿಸಿದರೆ ಹೆಚ್ಚಿನ ಮೌಲ್ಯದ ವಹಿವಾಟುಗಳ ಪ್ರಮಾಣ ಕಡಿಮೆಯಿದ್ದರೂ, ಹರಿಯುವ ಹಣದ ಪ್ರಮಾಣದಲ್ಲಿ ಇವುಗಳದ್ದು ಸಿಂಹಪಾಲಾಗಿದೆ. ವರದಿಯಲ್ಲಿ ವಿಶ್ಲೇಷಿಸಲಾದ ಒಟ್ಟು ₹8.95 ಲಕ್ಷ ಕೋಟಿ ಮೌಲ್ಯದ 'ವ್ಯಕ್ತಿಯಿಂದ ವರ್ತಕನಿಗೆ' (P2M) ನಡೆದ ಯುಪಿಐ ವಹಿವಾಟುಗಳ ಪೈಕಿ, ₹2,000 ಕ್ಕಿಂತ ಹೆಚ್ಚಿನ ಮೌಲ್ಯದ ವಹಿವಾಟುಗಳ ಮೌಲ್ಯವೇ ಬರೋಬ್ಬರಿ ₹6 ಲಕ್ಷ ಕೋಟಿ (ಶೇ. 67 ಕ್ಕಿಂತ ಹೆಚ್ಚು) ಆಗಿದೆ.

ಎಂಡಿಆರ್ (MDR) ಲೆಕ್ಕಾಚಾರ ಮತ್ತು ಆದಾಯದ ಅಂದಾಜು

ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಅನ್ನು 25 ಬೇಸಿಸ್ ಪಾಯಿಂಟ್ಸ್ (ಶೇ. 0.25) ನಿಗದಿಪಡಿಸಿದರೆ ದೊಡ್ಡ ಮೊತ್ತ ಹರಿದುಬರಲಿದೆ. ಅದೇ 40 ಬೇಸಿಸ್ ಪಾಯಿಂಟ್ಸ್ (ಶೇ. 0.40) ದರವನ್ನು ಅನ್ವಯಿಸಿದರೆ, ₹2,000 ಕ್ಕಿಂತ ಹೆಚ್ಚಿನ ಎಲ್ಲಾ ವಹಿವಾಟುಗಳಿಂದ ತಿಂಗಳಿಗೆ ಸರಿಸುಮಾರು ₹2,399 ಕೋಟಿ ಗಳಿಕೆಯಾಗಬಹುದು.ಆದರೆ, ಸರ್ಕಾರವು ಪ್ರಕಟಿಸುವ ಅಂತಿಮ ಮಿತಿಗಳು, ಸಣ್ಣ ವರ್ತಕರಿಗೆ ನೀಡಲಾಗುವ ಶುಲ್ಕ ವಿನಾಯಿತಿ ಹಾಗೂ ಕಂಪನಿಗಳ ಒಟ್ಟು ವಹಿವಾಟು (Turnover) ಆಧಾರದ ಮೇಲೆ ಪ್ರತ್ಯಕ್ಷವಾಗಿ ಸಂಗ್ರಹವಾಗುವ ಮೊತ್ತದಲ್ಲಿ ವ್ಯತ್ಯಾಸವಿರಬಹುದು. ಹೈ-ವ್ಯಾಲ್ಯೂ ವಹಿವಾಟುಗಳು ಹಾಗೂ ಬೃಹತ್ ವಾಣಿಜ್ಯ ಸಂಸ್ಥೆಗಳ ಮೇಲೆ 25 ರಿಂದ 30 ಬೇಸಿಸ್ ಪಾಯಿಂಟ್ಸ್ ಎಂಡಿಆರ್ ವಿಧಿಸಬಹುದು ಎಂದು ಆಗಸ್ಟ್‌ನಲ್ಲಿ ವರದಿಯಾಗಿತ್ತು, ಆದರೆ ಇತ್ತೀಚಿನ ಚರ್ಚೆಗಳಲ್ಲಿ ಸಣ್ಣ ವರ್ತಕರಿಗೆ ವಿನಾಯಿತಿ ನೀಡಿ 40 ಬೇಸಿಸ್ ಪಾಯಿಂಟ್ಸ್‌ಗಳಷ್ಟು ಎಂಡಿಆರ್ ವಿಧಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ.

ಹಣಕಾಸು ಸೇವೆಗಳ ವಿಭಾಗಕ್ಕೇ ಹೆಚ್ಚು ತಾಪತ್ರಯ!

ಈ ನೂತನ ಶುಲ್ಕದ ಪ್ರಭಾವವು ಎಲ್ಲಾ ವಲಯದ ವರ್ತಕರ ಮೇಲೆ ಒಂದೇ ರೀತಿ ಇರುವುದಿಲ್ಲ. ಹಣಕಾಸು ಸೇವೆಗಳ (Financial Services) ವಹಿವಾಟಿನ ಸರಾಸರಿ ಮೊತ್ತವು ಅತ್ಯಂತ ಹೆಚ್ಚಿರುವುದರಿಂದ ಈ ವಲಯವೇ ಪ್ರಮುಖವಾಗಿ ಈ ನಿಯಮಕ್ಕೆ ಒಳಪಡಲಿದೆ.

ಸ್ಟಾಕ್ ಮಾರುಕಟ್ಟೆ ಹಾಗೂ ಬ್ರೋಕರ್‌ಗಳು: ಸೆಕ್ಯುರಿಟೀಸ್ ಬ್ರೋಕರ್‌ಗಳು ಮತ್ತು ಡೀಲರ್‌ಗಳಿಗೆ ನಡೆದ ಯುಪಿಐ ಪಾವತಿಯ ಸರಾಸರಿ ಮೌಲ್ಯ 2026 ರಲ್ಲಿ ಪ್ರತಿ ವಹಿವಾಟಿಗೆ ₹8,963 ತಲುಪಿದೆ (ಕಳೆದ ವರ್ಷ ₹8,512 ಇತ್ತು - ಶೇ 5.3 ರಷ್ಟು ಏರಿಕೆ). ಇದು ಪ್ರಸ್ತಾವಿತ ₹2,000 ದ ಮಿತಿಗಿಂತ ನಾಲ್ಕು ಪಟ್ಟು ಹೆಚ್ಚಾಗಿದೆ.

ಸಾಲ ಮರುಪಾವತಿ ಏಜೆನ್ಸಿಗಳು: ಸಾಲ ವಸೂಲಾತಿ ಏಜೆನ್ಸಿಗಳಲ್ಲಿ ಸರಾಸರಿ ವಹಿವಾಟು ಮೌಲ್ಯ ₹3,416 ರಷ್ಟಿದೆ (ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 43.8 ರಷ್ಟು ಕುಸಿತ ಕಂಡಿದ್ದರೂ ಇದು ₹2,000 ಕ್ಕಿಂತ ಹೆಚ್ಚಿದೆ).

ಸಾಮಾನ್ಯ ಗ್ರಾಹಕ ಉತ್ಪನ್ನಗಳ ಸರಾಸರಿ ಯುಪಿಐ ಮೌಲ್ಯ ಎಷ್ಟು?

ದೈನಂದಿನ ಚಿಲ್ಲರೆ ವ್ಯಾಪಾರ ವಲಯದಲ್ಲಿ ಸರಾಸರಿ ವಹಿವಾಟು ಮೌಲ್ಯವು ₹2,000 ಕ್ಕಿಂತ ಕಡಿಮೆಯಿದೆ. ಆದರೆ, ಕೆಲವು ವಲಯಗಳು ಈ ಶುಲ್ಕದ ವ್ಯಾಪ್ತಿಗೆ ಹತ್ತಿರದಲ್ಲಿವೆ:

ಎಲೆಕ್ಟ್ರಾನಿಕ್ಸ್ ಮಳಿಗೆಗಳು: ಸರಾಸರಿ ವಹಿವಾಟು ಮೌಲ್ಯ ₹1,404 (ಶೇ 5.3 ರಷ್ಟು ಏರಿಕೆ).

ಯುಟಿಲಿಟಿ ಬಿಲ್‌ಗಳು (ವಿದ್ಯುತ್, ಗ್ಯಾಸ್, ನೀರು): ಸರಾಸರಿ ವಹಿವಾಟು ಮೌಲ್ಯ ₹1,382 (ಶೇ 19.3 ರಷ್ಟು ಭಾರಿ ಏರಿಕೆ ಕಂಡಿದೆ).

ಬಟ್ಟೆ ಮಳಿಗೆಗಳು: ಗಂಡಸರ ಮತ್ತು ವಿಮೆನ್ಸ್ ಉಡುಪುಗಳ ಮಳಿಗೆಯಲ್ಲಿ ಸರಾಸರಿ ₹1,132 ಹಾಗೂ ಯೂನಿಫಾರ್ಮ್ ಅಂಗಡಿಗಳಲ್ಲಿ ₹1,030 ಸರಾಸರಿ ಮೌಲ್ಯವಿದೆ.

ದೈನಂದಿನ ಖರ್ಚುಗಳು (ಬಹಳ ಕಡಿಮೆ): ಕಿರಾಣಿ ಅಂಗಡಿಗಳಲ್ಲಿ ಸರಾಸರಿ ಯುಪಿಐ ವಹಿವಾಟು ಕೇವಲ ₹220, ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ₹170, ಬೇಕರಿಗಳಲ್ಲಿ ₹145 ಮತ್ತು ಫಾಸ್ಟ್ ಫುಡ್ ಸೆಂಟರ್‌ಗಳಲ್ಲಿ ಕೇವಲ ₹118 ಆಗಿದೆ.

ಬ್ಯಾಂಕ್‌ಗಳ ಸರಾಸರಿ ಯುಪಿಐ ವಹಿವಾಟು ಮೌಲ್ಯದ ಅಂಕಿ-ಅಂಶ

ಅಧ್ಯಯನಕ್ಕೊಳಪಟ್ಟ ಬ್ಯಾಂಕ್‌ಗಳ ಪೈಕಿ ಖಾಸಗಿ ವಲಯದ 'ಎಚ್‌ಡಿಎಫ್‌ಸಿ ಬ್ಯಾಂಕ್' (HDFC Bank) ಅತ್ಯಂತ ಹೆಚ್ಚಿನ ಅಂದರೆ ಪ್ರತಿ ವಹಿವಾಟಿಗೆ ಸರಾಸರಿ ₹1,854 ಯುಪಿಐ ಮೌಲ್ಯವನ್ನು ಹೊಂದಿದೆ.

  • ಕರೂರ್ ವೈಶ್ಯ ಬ್ಯಾಂಕ್: ₹1,797
  • ಐಸಿಐಸಿಐ ಬ್ಯಾಂಕ್: ₹1,796
  • ಬಂಧನ್ ಬ್ಯಾಂಕ್: ₹1,769
  • ಸಿಟಿ ಯೂನಿಯನ್ ಬ್ಯಾಂಕ್: ₹1,704
  • ಆಕ್ಸಿಸ್ ಬ್ಯಾಂಕ್: ₹1,557
  • ಯೆಸ್ ಬ್ಯಾಂಕ್: ₹1,542
  • ಐಡಿಎಫ್‌ಸಿ ಬ್ಯಾಂಕ್: ₹1,483
  • ಕೊಟಕ್ ಮಹೀಂದ್ರಾ ಬ್ಯಾಂಕ್: ₹1,056

ಇನ್ನು ಸಾರ್ವಜನಿಕ ವಲಯದ ಬೃಹತ್ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸರಾಸರಿ ₹1,230 ಯುಪಿಐ ಮೌಲ್ಯ ಹೊಂದಿದೆ. ಕೆನರಾ ಬ್ಯಾಂಕ್ ₹1,267, ಬ್ಯಾಂಕ್ ಆಫ್ ಬರೋಡಾ ₹1,100, ಪಂಜಾಬ್ ನ್ಯಾಷನಲ್ ಬ್ಯಾಂಕ್ ₹1,077 ಮತ್ತು ಇಂಡಿಯನ್ ಬ್ಯಾಂಕ್ ₹1,061 ಸರಾಸರಿ ಮೌಲ್ಯವನ್ನು ದಾಖಲಿಸಿವೆ.

ಸರ್ಕಾರದ ಸ್ಪಷ್ಟನೆ ಹಾಗೂ ಸಮಾಧಾನಕರ ಸಂಗತಿ

ಕಳೆದ ಆಗಸ್ಟ್‌ನಲ್ಲಿ ನೀಡಿದ ಸ್ಪಷ್ಟನೆಯಲ್ಲಿ ಕೇಂದ್ರ ಸರ್ಕಾರವು, "ಕಾನೂನಿನಲ್ಲಿ ಎಂಡಿಆರ್ ಅನುಮತಿಸುವ ತಿದ್ದುಪಡಿ ಮಾಡಿದ ತಕ್ಷಣವೇ ನೇರವಾಗಿ ಶುಲ್ಕ ಜಾರಿಯಾಗುವುದಿಲ್ಲ. ಒಂದು ವೇಳೆ ಶುಲ್ಕ ವಿಧಿಸಿದರೂ ಅದು ಅತ್ಯಂತ ನಾಮಮಾತ್ರವಾಗಿರಲಿದ್ದು, ನಿಗದಿಪಡಿಸಿದ ಪರಿಮಿತಿಯ ವರ್ತಕರ ಪಾವತಿಗಳಿಗಷ್ಟೇ ಅನ್ವಯವಾಗಲಿದೆ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ ವಿಧಿಸುವ ಎಂಡಿಆರ್ ಶುಲ್ಕಕ್ಕಿಂತ ಇದು ಅತ್ಯಂತ ಕಡಿಮೆಯಿರಲಿದೆ" ಎಂದು ಹೇಳಿತ್ತು. ಹೀಗಾಗಿ ಸಾಮಾನ್ಯ ಬಳಕೆದಾರರು ಹಾಗೂ ಸಣ್ಣ ವ್ಯಾಪಾರಿಗಳು ಆತಂಕಪಡುವ ಅಗತ್ಯವಿಲ್ಲ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

UPI: ವ್ಯಾಪಾರಿಗಳ ಗಮನಕ್ಕೆ; ಯುಪಿಐ ಪಾವತಿ ಮೇಲೆ ಎಂ‌ಡಿ‌ಆರ್ ಕಡಿತವಾಗದಂತೆ ತಡೆಯಲು ಈ 5 ಟಿಪ್ಸ್ ಬಳಸಿ!
ವೈಟ್‌ಫೀಲ್ಡ್‌ನಲ್ಲಿ ತಲೆಎತ್ತಲಿದೆ ಮುಂಬೈನ ಜಿಯೋ ವರ್ಲ್ಡ್‌ಗಿಂತ ಬೃಹತ್ ಕನ್ವೆನ್ಶನ್‌ ಸೆಂಟರ್‌: 48.35 ಎಕರೆ ಕೆಟಿಪಿಒ ಜಾಗ ಬಳಕೆ