
ನವದೆಹಲಿ: ಜಾಗತಿಕ ಅನಿಶ್ಚಿತತೆ, ಅಮೆರಿಕದ ತೆರಿಗೆ ಸವಾಲಿನ ನಡುವೆಯೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆ.1ರ ಭಾನುವಾರ ಬೆಳಗ್ಗೆ 11 ಗಂಟೆಗೆ ಕೇಂದ್ರ ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ. ಈ ಬಾರಿ ರಕ್ಷಣೆ, ಮೂಲಸೌಕರ್ಯ, ರಫ್ತು, ರೈಲ್ವೆ, ಇಂಧನ, ಅಗ್ಗದ ಮನೆಗಳಿಗೆ ನೆರವು, ಬಂಡವಾಳ ವೆಚ್ಚ ಏರಿಕೆಯತ್ತ ಸರ್ಕಾರ ಗಮನ ಹರಿಸುವ ಸಾಧ್ಯತೆ ಇದೆ. ಇದರ ಜೊತೆಗೆ ವಿಶ್ವದ ಅತಿ ವೇಗದ ಆರ್ಥಿಕತೆಯ ಗತಿ ಕಾಪಾಡಲು ವಿವಿಧ ಕ್ರಮಗಳ ಜೊತೆಗೆ, ಸಾಮಾಜಿಕ ಕಲ್ಯಾಣ ಯೋಜನೆಗಳು ಈ ಬಾರಿಯು ಆದ್ಯತೆ ಪಡೆಯಲಿವೆ. ಇದರ ಜೊತೆಗೆ ಜೊತೆಗೆ ವಿತ್ತೀಯ ಶಿಸ್ತಿನ ಮೇಲೂ ಸರ್ಕಾರ ನಿಗಾ ಇರಿಸಲಿದೆ ಎನ್ನಲಾಗಿದೆ.
ಕೋವಿಡ್ ಸಮಯದಲ್ಲಿ ಶೇ.9.2ಕ್ಕೆ ಏರಿದ್ದ ವಿತ್ತೀಯ ಕೊರತೆಯನ್ನು ಸಮಾಧಾನಕರ ಎನ್ನಬಹುದಾದ ಶೇ.4.4ಕ್ಕೆ ಇಳಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಈ ಬಜೆಟ್‌ನಲ್ಲೂ ಅದು ಮುಂದುವರೆಯುವ ಸಾಧ್ಯತೆ ದಟ್ಟವಾಗಿದೆ.
ಭಾನುವಾರ ಮಂಡನೆಯಾಗಲಿರುವುದು ಮೋದಿ ಸರ್ಕಾರದ ಒಟ್ಟಾರೆ 15ನೇ, ಮೋದಿ 3ನೇ ಅವಧಿ ಸರ್ಕಾರದ 2ನೇ ಪೂರ್ಣಾವಧಿ ಮತ್ತು ನಿರ್ಮಲಾ ಸೀತಾರಾಮನ್ ಮಂಡಿಸುತ್ತಿರುವ ಸತತ 9ನೇ ಬಜೆಟ್ ಕೂಡಾ ಹೌದು. ಈ ಮೂಲಕ ಅತಿ ಬಜೆಟ್ ಮಂಡಿಸಿದ ಮಹಿಳಾ ಹಣಕಾಸು ಸಚಿವೆ ಎಂಬ ಹಿರಿಮೆ ಅವರಿಗೆ ಬುಧವಾರ ಸಿಗಲಿದೆ.
ಕಳೆದ ಬಜೆಟ್‌ನಲ್ಲಿ ಮಧ್ಯಮ ವರ್ಗಕ್ಕೆ ಭಾರೀ ರಿಯಾಯಿತಿ ನೀಡುವ ಮೂಲಕ ಬಳಕೆ ಉತ್ತೇಜಿಸುವ ಕ್ರಮಗಳನ್ನು ಸರ್ಕಾರ ಕೈಗೊಂಡಿತ್ತು. ಆದರೆ, ಪ್ರಸಕ್ತ ಜಾಗತಿಕ ಆರ್ಥಿಕ ಸ್ಥಿತಿಯ ಹಿನ್ನೆಲೆಯಲ್ಲಿ ಈ ಬಜೆಟ್‌ನಲ್ಲಿ ಇಂಥ ಕ್ರಮಗಳು ಸೀಮಿತ ಪ್ರಮಾಣದಲ್ಲಿರಬಹುದು ಎನ್ನಲಾಗಿದೆ.
ಆದ್ಯತೆ:
ಪ್ರಸಕ್ತ ಜಗತ್ತು ಸಾಗುತ್ತಿರುವ ಭೌಗೋಳಿಕ ರಾಜಕೀಯ ಸನ್ನಿವೇಶವನ್ನು ಪರಿಗಣಿಸಿ, ಬಂಡವಾಳ ವೆಚ್ಚ ಹೆಚ್ಚು ಮಾಡುವ ಬಗ್ಗೆ ಸರ್ಕಾರ ಗಮನ ಹರಿಸುವ ಸಾಧ್ಯತೆ ನಿಚ್ಚಳವಾಗಿದೆ.
ರಫ್ತು:
ಭಾರತ ಸರ್ಕಾರ ಈಗಾಗಲೇ ಯುರೋಪಿಯನ್ ಒಕ್ಕೂಟದ ಜೊತೆಗೆ ಮುಕ್ತ ವ್ಯಾಪಾರ ಒಪ್ಪಂದದ ಘೋಷಣೆ ಮಾಡಿದ್ದು, ಅಮೆರಿಕದ ಜೊತೆಗೂ ಒಪ್ಪಂದಕ್ಕೆ ಹಾಕುವ ಸಮಯ ಸನ್ನಿಹಿತವಾಗಿದೆ. ಹೀಗಾಗಿ ಈ ಎರಡೂ ವಿಷಯ ಗಮನದಲ್ಲಿಟ್ಟುಕೊಂಡು ದೇಶೀಯವಾಗಿ ಉತ್ಪಾದನೆ ಹೆಚ್ಚಿಸುವ ಕ್ರಮಗಳಿಗೆ ಉತ್ತೇಜನ ನೀಡಬಹುದು ಎನ್ನಲಾಗಿದೆ.
ಸೆಮಿಕಂಡಕ್ಟರ್:
ಸೆಮಿಕಂಡಕ್ಟರ್ ವಲಯದಲ್ಲಿ ಅಮೆರಿಕ ಮತ್ತು ಚೀನಾ ಮೇಲಿನ ಅವಲಂಬನೆ ಕಡಿಮೆ ಮಾಡಲು, ದೇಶೀಯವಾಗಿ ಸೆಮಿಕಂಡಕ್ಟರ್ ಉತ್ಪಾದನೆ ಹೆಚ್ಚಿಸುವ ಸಂಬಂಧ ಕೆಲವೊಂದು ಪ್ರೋತ್ಸಾಹಕ ಘೋಷಣೆಯ ನಿರೀಕ್ಷೆ ಇದೆ.
ರಿಯಲ್ ಎಸ್ಟೇಟ್:
ಕಳೆದ ವರ್ಷ ರಿಯಲ್ ಎಸ್ಟೇಟ್ ಉದ್ಯಮದ ಬೆಳವಣಿಗೆ ಕುಂಠಿತವಾಗಿತ್ತು. ಹೀಗಾಗಿ ಈ ವಲಯಕ್ಕೆ ಬೂಸ್ಟರ್ ಸಿಗುವ ನಿರೀಕ್ಷೆ ಇದೆ. ಅದರಲ್ಲೂ ಬಡವರು, ಮಧ್ಯಮ ವರ್ಗದವರ ಕನಸು ನನಸಾಗಿಸಲು ಯೋಜನೆ ಘೋಷಣೆ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಆಟೋಮೊಬೈಲ್:
ಕಳೆದ ವರ್ಷ ಆಟೋಮೊಬೈಲ್ ವಲಯ ಉತ್ತಮ ಪ್ರಗತಿ ಕಂಡಿತ್ತು. ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಹೀಗಾಗಿ ಬೆಳವಣಿಗೆ ಗತಿ ಕಾಪಾಡಿಕೊಳ್ಳಲು ಈ ವಲಯಕ್ಕೆ ಅದರಲ್ಲೂ ವಿಶೇಷವಾಗಿ ಎಲೆಕ್ಟ್ರಿಕ್ ವಾಹನ ಉದ್ಯಮಕ್ಕೆ ಹೆಚ್ಚಿನ ನೆರವಿನ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.