ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ ಎಂಬ ಪ್ರತಿಪಕ್ಷಗಳ ನಿರಂತರ ಆರೋಪದ ನಡುವೆಯೇ ಕೇಂದ್ರ ಸರ್ಕಾರ ಹೊಸದಾಗಿ 3 ಉದ್ಯೋಗ ಆಧರಿತ ಪ್ರೋತ್ಸಾಹ ಯೋಜನೆಗಳನ್ನು ಘೋಷಿಸಿದೆ.
ನವದೆಹಲಿ: ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ ಎಂಬ ಪ್ರತಿಪಕ್ಷಗಳ ನಿರಂತರ ಆರೋಪದ ನಡುವೆಯೇ ಕೇಂದ್ರ ಸರ್ಕಾರ ಹೊಸದಾಗಿ 3 ಉದ್ಯೋಗ ಆಧರಿತ ಪ್ರೋತ್ಸಾಹ ಯೋಜನೆಗಳನ್ನು ಘೋಷಿಸಿದೆ.
ಸ್ಕೀಮ್ 1: ಮೊದಲ ಸಂಬಳ ಸರ್ಕಾರದ್ದು: ಎಲ್ಲ ಬಗೆಯ ಉದ್ಯೋಗಕ್ಕೆ ಹೊಸದಾಗಿ ಸೇರ್ಪಡೆಯಾಗುವ ನೌಕರರಿಗೆ ಕೇಂದ್ರ ಸರ್ಕಾರವೇ ಮೊದಲ 1 ತಿಂಗಳ ವೇತನವನ್ನು ಭರಿಸಲಿದೆ. ಇದನ್ನು ಪಡೆಯಲು ಉದ್ಯೋಗಕ್ಕೆ ಸೇರಿದವರು ಇಪಿಎಫ್‌ಒದಲ್ಲಿ ನೋಂದಣಿಯಾಗಿರಬೇಕು. ಮೊದಲ ತಿಂಗಳ ಸಂಬಳ 3 ಕಂತುಗಳಲ್ಲಿ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗಲಿದೆ. ಗರಿಷ್ಠ 15 ಸಾವಿರ ರು. ವೇತನ ಸಿಗಲಿದೆ. ಮಾಸಿಕ 1 ಲಕ್ಷ ರು. ವರೆಗಿನ ಸಂಬಳದ ಉದ್ಯೋಗಕ್ಕೆ ಸೇರ್ಪಡೆ ಯಾದವರು ಈ ಯೋಜನೆಗೆ ಅರ್ಹರು. 2.1 ಕೋಟಿ ಯುವಕರಿಗೆ ಪ್ರಯೋಜನವಾಗಲಿದೆ.
undefined
ಸ್ಕೀಮ್ 2: ಉದ್ಯೋಗಿ, ಉದ್ಯೋಗದಾತಗೆ ನೆರವು: ಉತ್ಪಾದನಾ ವಲಯದಲ್ಲಿ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಲು ಆರಂಭಿಸಲಾಗಿರುವ ಯೋಜನೆ ಇದು. ಯಾರಾದರೂ ಹೊಸದಾಗಿ ಕೆಲಸಕ್ಕೆ ಸೇರಿದರೆ, ನಾಲ್ಕು ವರ್ಷಗಳ ಕಾಲ ಅವರು ಇಪಿಎಫ್‌ಒಗೆ ನೀಡುವ ಕೊಡುಗೆಯನ್ನು ಪರಿಗಣಿಸಿದ ಉದ್ಯೋಗಿ ಹಾಗೂ ಉದ್ಯೋಗದಾತ ಸಂಸ್ಥೆಗೆ ನೇರವಾಗಿ ನಿರ್ದಿಷ್ಟ ಪ್ರಮಾಣದ ಹಣಕಾಸು ನೆರವನ್ನು ಒದಗಿಸಲಾಗುತ್ತದೆ. ಹೊಸದಾಗಿ ಕೆಲಸಕ್ಕೆ ಸೇರ್ಪಡೆಯಾದ 30 ಲಕ್ಷ ಯುವಕರು ಹಾಗೂ ಅವರಿಗೆ ಕೆಲಸ ಕೊಡುವ ಉದ್ಯೋಗದಾತ ಸಂಸ್ಥೆಗಳಿಗೆ ಇದರಿಂದ ಅನುಕೂಲವಾಗುವ ನಿರೀಕ್ಷೆ ಇದೆ.
ಸ್ಕೀಮ್ 3: ಕಂಪನಿಗಳಿಗೆ ಪಿಎಫ್ ವಾಪಸ್: ಮಾಸಿಕ 1 ಲಕ್ಷ ರು.ವರೆಗೆ ಸಂಬಳ ಹೊಂದಿರುವ ಹೆಚ್ಚುವರಿ ಉದ್ಯೋಗ ಸೃಷ್ಟಿಸುವ ಕಂಪನಿಗಳಿಗೆ ಈ ಯೋಜನೆಯ ಲಾಭ ಸಿಗಲಿದೆ. ಪ್ರತಿ ಕೆಲಸ ಕೊಡುವ ಕಂಪನಿಗಳು 2 ವರ್ಷಗಳ ಕಾಲ ಇಪಿಎಫ್‌ಒಗೆ ನೀಡುವ 3000 ರು.ವರೆಗಿನ ಕೊಡುಗೆಯನ್ನು ಕೇಂದ್ರ ಸರ್ಕಾರ ಮರಳಿಸಲಿದೆ. ಇದರಿಂದ 50 ಲಕ್ಷ ವ್ಯಕ್ತಿಗಳಿಗೆ ಉದ್ಯೋಗ ಸಿಗುವುದಕ್ಕೆ ಪ್ರೋತ್ಸಾಹ ದೊರೆಯಲಿದೆ.
ಮಹಿಳಾ ಉದ್ಯೋಗಿಗಳಿಗೆ ಹಾಸ್ಟೆಲ್
ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಭಾಗೀದಾರಿಕೆಯನ್ನು ಉತ್ತೇಜಿಸುವ ಸಲುವಾಗಿ ಉದ್ದಿಮೆಗಳ ಸಹಯೋಗದೊಂದಿಗೆ ಉದ್ಯೋಗಸ್ಥ ಮಹಿಳೆಯರ ಹಾಸ್ಟೆಲ್‌ಗಳು ಹಾಗೂ ವಿಶ್ರಾಂತಿ ಕೇಂದ್ರಗಳನ್ನು ತೆರೆಯುವುದಾಗಿ ಸರ್ಕಾರ ತಿಳಿಸಿದೆ. ಇದರ ಜತೆಗೆ ಮಹಿಳಾ ಕೇಂದ್ರಿತ ಕೌಶಲ್ಯ ಕಾರ್ಯಕ್ರಮ ಹಾಗೂ ಮಹಿಳಾ ಸ್ವಉದ್ಯೋಗ ಉದ್ದಿಮೆಗಳಿಗೆ ಮಾರುಕಟ್ಟೆ ಸಂಪರ್ಕಕ್ಕೆ ಉದ್ದಿಮೆಗಳ ಪಾಲುದಾರಿಕೆಯಲ್ಲಿ ನೆರವಾಗುವ ಪ್ರಸ್ತಾಪ ಇದೆ.
1000 ಐಟಿಐ ಮೇಲ್ದರ್ಜೆಗೆ
ಹೊಸ ಪಠ್ಯ ರಾಜ್ಯ ಸರ್ಕಾರಗಳು ಹಾಗೂ ಉದ್ದಿಮೆಗಳ ಸಹಯೋಗದೊಂದಿಗೆ ಮುಂದಿನ 5 ವರ್ಷಗಳ ಅವಧಿಯಲ್ಲಿ 20 ಲಕ್ಷಯುವಕರಿಗೆ ಕೌಶಲ್ಯ ತರಬೇತಿ ನೀಡುವುದಾಗಿ ನಿರ್ಮಲಾ ಪ್ರಕಟಿಸಿದ್ದಾರೆ. 1000 ಐಟಿಐ (ಕೈಗಾರಿಕಾ ತರಬೇತಿ ಸಂಸ್ಥೆ)ಗಳನ್ನು ಹಬ್ ಮತ್ತು ಸ್ಪೋಕ್ ವ್ಯವಸ್ಥೆಯಡಿ ಮೇಲ್ದರ್ಜೆಗೇರಿಸಲಾಗುತ್ತದೆ. ಉದ್ದಿಮೆಗಳ ಕೌಶಲ್ಯ ಬೇಡಿಕೆಗೆ ತಕ್ಕಂತೆ ಐಟಿಐಗಳ ಪಠ್ಯ ಹಾಗೂ ವಿನ್ಯಾಸವನ್ನು ಮರು ಹೊಂದಿಸಲಾಗುತ್ತದೆ. ಈಗಿನ ಬೇಡಿಕೆಗಳಿಗೆ ತಕ್ಕಂತೆ ಹೊಸ ಕೋರ್ಸ್ ಗಳನ್ನು ಅಳವಡಿಸಲಾಗುತ್ತದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.
ಸ್ವದೇಶದಲ್ಲಿ ಉನ್ನತ ಶಿಕ್ಷಣ
ಇ-ವೋಚರ್ ಸರ್ಕಾರದ ಯೋಜನೆಗಳು ಹಾಗೂ ನೀತಿಗಳಿಂದ ಯಾವೊಂದೂ ಸೌಲಭ್ಯ ಪಡೆಯದ ಯುವಕರಿಗೆ ಶೈಕ್ಷಣಿಕ ಸಾಲ ಯೋಜನೆ ಪ್ರಕಟಿಸಲಾಗಿದೆ. ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ 10 ಲಕ್ಷ ರು.ವರೆಗೆ ಸಾಲ ಒದಗಿಸುವುದಾಗಿ ನಿರ್ಮಲಾ ಪ್ರಕಟಿಸಿದ್ದಾರೆ. ಈ ಉದ್ದೇಶಕ್ಕಾಗಿ ಶೇ.3ರ ಬಡ್ಡಿರಿಯಾಯಿತಿ ಯೋಜನೆಯೊಂದಿಗೆ ವಾರ್ಷಿಕ 1 ಲಕ್ಷ ವಿದ್ಯಾರ್ಥಿಗಳಿಗೆ ಇ-ವೋಚರ್ ನೀಡುವುದಾಗಿ ಬಜೆಟ್‌ನಲ್ಲಿ ಹೇಳಿದ್ದಾರೆ.