ಆಟಿಕೆ ವಲಯಕ್ಕೆ ಬಜೆಟ್‌ನಲ್ಲಿ ವಿಶೇಷ ನೀತಿ: ಚೀನಾ ಆಟಿಕೆಗೆ ಸಡ್ಡು!

By Suvarna News  |  First Published Jan 25, 2021, 8:45 AM IST

ಆಟಿಕೆ ವಲಯಕ್ಕೆ ಬಜೆಟ್‌ನಲ್ಲಿ ವಿಶೇಷ ನೀತಿ| ಚೀನಾ ಆಟಿಕೆಗೆ ಸಡ್ಡು| ದೇಶೀ ಆಟಿಕೆ ವಲಯ ಉತ್ತೇಜನಕ್ಕೆ ಕೇಂದ್ರದ ನೆರವು ಘೋಷಣೆ ಸಾಧ್ಯತೆ


ನವದೆಹಲಿ(ಜ.25): ಚೀನಾ ಆಟಿಕೆಗಳಿಗೆ ಸಡ್ಡು ಹೊಡೆದು ದೇಶೀಯ ಆಟಿಕೆ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಫೆಬ್ರವರಿ 1ರ ಕೇಂದ್ರ ಬಜೆಟ್‌ನಲ್ಲಿ ಆಟಿಕೆ ವಲಯಕ್ಕೆಂದೇ ಹೊಸ ನೀತಿಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡುವ ಸಾಧ್ಯತೆ ಇದೆ.

ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ದೇಶದ ಮೊದಲ ಆಟಿಕೆ ಕ್ಲಸ್ಟರ್‌ಗೆ ಶಂಕುಸ್ಥಾಪನೆ ನೆರವೇರಿದ ಬೆನ್ನಲ್ಲೇ ಕೇಂದ್ರ ಸರ್ಕಾರದ ಈ ಹೊಸ ಪ್ರಸ್ತಾಪ, ದೇಶದ ಆಟಿಕೆ ವಲಯಕ್ಕೆ ಹೊಸ ಸಾಂಸ್ಥಿಕ ಸ್ವರೂಪ ನೀಡುವ ಸಾಧ್ಯತೆ ಇದೆ.

Tap to resize

Latest Videos

undefined

ಜಾಗತಿಕ ಆಟಿಕೆ ಉತ್ಪಾದನೆ ಮತ್ತು ರಫ್ತು ವಲಯದಲ್ಲಿ ಭಾರತದ ಪಾಲು ಕೇವಲ ಶೇ.0.5ರಷ್ಟುಮಾತ್ರ. ದೇಶದಲ್ಲಿ ಸಣ್ಣ ಮತ್ತು ಮಧ್ಯಮ ಪ್ರಮಾಣದ 4000 ಆಟಿಕೆ ಉತ್ಪಾದನಾ ಘಟಕಗಳಿದ್ದರೂ, ಅವುಗಳಿಗೆಂದೇ ವಿಶೇಷ ನೀತಿ ಇಲ್ಲ. ಜೊತೆಗೆ ಸಾಂಸ್ಥಿಕ ಸ್ವರೂಪವೂ ಇಲ್ಲ. ಹೀಗಾಗಿ ಆಟಿಕೆ ವಲಯ ಒಂದು ಉದ್ಯಮವಾಗಿ ಬೆಳೆಯುವಲ್ಲಿ, ಹೊಸ ಬಂಡವಾಳ ಆಕರ್ಷಿಸುವಲ್ಲಿ ವಿಫಲವಾಗಿದೆ.

ಈ ಹಿನ್ನೆಲೆಯಲ್ಲಿ ಆಟಿಕೆ ವಲಯಕ್ಕೆಂದೇ ಹೊಸ ನೀತಿ ರೂಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

ನೀತಿಯಲ್ಲಿ ಏನಿರಬಹುದು?:

ಹೊಸ ನೀತಿಯಲ್ಲಿ ಆಟಿಕೆ ವಲಯಕ್ಕೆ ಹೊಸ ಚೌಕಟ್ಟು, ಈ ವಲಯದಲ್ಲಿ ಸಂಶೋಧನೆಗೆ ಪ್ರೋತ್ಸಾಹ, ಹೊಸ ಹೊಸ ವಿನ್ಯಾಸ ಕೇಂದ್ರಗಳ ನಿರ್ಮಾಣಕ್ಕೆ ನೆರವು ಮೊದಲಾದ ಕ್ರಮಗಳನ್ನು ಸರ್ಕಾರ ಪ್ರಕಟಿಸುವ ಸಾಧ್ಯತೆ ಇದೆ. ದೇಶೀಯವಾಗಿ ಉತ್ಪಾದನೆ ಹೆಚ್ಚಾದಲ್ಲಿ ಅದು ಸಹಜವಾಗಿಯೇ ರಫ್ತು ಪ್ರಮಾಣ ಹೆಚ್ಚಳಕ್ಕೂ ಕಾರಣವಾಗಿದೆ. ಇದು ಭಾರೀ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೂ ಕಾರಣವಾಗಬಲ್ಲದು ಎಂಬ ನಿರೀಕ್ಷೆಯಲ್ಲಿ ಸರ್ಕಾರ ಇದೆ.

ಚೀನಾ ಪಾಲೇ ಹೆಚ್ಚು:

ಪ್ರಸಕ್ತ ಭಾರತದಲ್ಲಿ ಬಳಕೆಯಾಗುವ ಆಟಿಕೆಗಳ ಪೈಕಿ ಶೇ.85ರಷ್ಟುಆಮದಾಗುತ್ತದೆ. ಇದರಲ್ಲಿ ಬಹುಪಾಲು ಚೀನಾದ್ದು. ಉಳಿದಂತೆ ವಿಯೆಟ್ನಾಂ, ಜರ್ಮನಿ, ಶ್ರೀಲಂಕಾ, ಮಲೇಷ್ಯಾ, ಹಾಂಕಾಂಗ್‌, ಅಮೆರಿಕದಿಂದ ಬರುತ್ತದೆ.

click me!