ಹಣಕಾಸು ಸಚಿವಾಲಯದಲ್ಲಿ ಹಲ್ವಾ ತಯಾರಿ| ಈ ಬಾರಿ ಬಜೆಟ್ ಮುದ್ರಣ ಇಲ್ಲ, ಸಂಸದರಿಗೆ ಡಿಜಿಟಲ್ ಬಜೆಟ್ ಹಂಚಿಕೆ
ನವದೆಹಲಿ(ಜ.24): ಕೇಂದ್ರ ಹಣಕಾಸು ಬಜೆಟ್ ದಾಖಲೆಗಳನ್ನು ಕ್ರೋಢೀಕರಿಸುವ ಕೆಲಸಕ್ಕೆ ಚಾಲನೆ ಸಿಕ್ಕ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವಾಲಯದಿಂದ ಶನಿವಾರ ಸಾಂಪ್ರದಾಯಿಕ ಹಲ್ವಾ ತಯಾರಿಕೆ ಸಮಾರಂಭ ನಡೆಯಿತು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಮತ್ತು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಹಲ್ವಾ ತಯಾರಿಸುವ ಸಮಾರಂಭದಲ್ಲಿ ಭಾಗಿಯಾಗಿದ್ದರು. ಸಾಮಾನ್ಯವಾಗಿ ಹಲ್ವಾ ತಯಾರಿಸಿದ ಅದನ್ನು ಹಣಕಾಸು ಸಚಿವಲಾಯದ ಸಿಬ್ಬಂದಿಗೆ ಹಂಚಿದ ಬಳಿಕ ಬಜೆಟ್ ಪ್ರತಿಗಳನ್ನು ಮುದ್ರಣಕ್ಕೆ ಕಳುಹಿಸಿಕೊಡಲಾಗುತ್ತದೆ.
ಆದರೆ, ಈ ಬಾರಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಬಜೆಟ್ ಪ್ರತಿಗಳನ್ನು ಮುದ್ರಿಸಲಾಗುತ್ತಿಲ್ಲ. ಬದಲಾಗಿ ಸಂಸತ್ ಸದಸ್ಯರಿಗೆ ಡಿಜಿಟಲ್ ರೂಪದಲ್ಲಿ ಬಜೆಟ್ ಪ್ರತಿಗಳನ್ನು ಹಂಚಲಾಗುತ್ತದೆ. ಕಾಗದ ರಹಿತವಾಗಿ ಬಜೆಟ್ ಮಂಡನೆ ಮಾಡುತ್ತಿರುವುದು 1947 ನ.26ರಿಂದ ಆರಂಭವಾದ ಸ್ವತಂತ್ರ ಭಾರತದ ಬಜೆಟ್ ಇತಿಹಾಸದಲ್ಲೇ ಮೊದಲು.