ಇಂದು ಕೇಂದ್ರ ಬಜೆಟ್: ಆರ್ಥಿಕತೆಗೆ ಟಾನಿಕ್?| ತೆರಿಗೆ ವಿನಾಯ್ತಿ ಮಿತಿ ಹೆಚ್ಚಳ, ಜಿಎಸ್‌ಟಿ ದರ ಕಡಿತ?| ಗ್ರಾಮೀಣ, ಕೃಷಿ, ಉದ್ಯಮ ಕ್ಷೇತ್ರಕ್ಕೆ ಭಾರೀ ಕೊಡುಗೆ?
ನವದೆಹಲಿ[ಫೆ.01]: ದಶಕದಲ್ಲೇ ಅತ್ಯಂತ ಗಂಭೀರ ಆರ್ಥಿಕ ಹಿಂಜರಿತ, ಉದ್ಯೋಗ ಕುಸಿತ, ಮುಂದುವರೆದ ಕೃಷಿ ವಲಯದ ಸಂಕಷ್ಟಗಳು ಸರ್ಕಾರದ ಪಾಲಿಗೆ ಕಗ್ಗಂಟಾಗಿರುವ ಬೆನ್ನಲ್ಲೇ, ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಬಹುನಿರೀಕ್ಷಿತ ಕೇಂದ್ರ ಮುಂಗಡ ಪತ್ರ ಮಂಡನೆಗೆ ಸಜ್ಜಾಗಿದ್ದಾರೆ. ಬೆಳಗ್ಗೆ 11 ಗಂಟೆಗೆ ಸಂಸತ್ತಿನಲ್ಲಿ ಮಂಡನೆಯಾಗಲಿರುವ ಮುಂಗಡ ಪತ್ರದಲ್ಲಿ, ಆರ್ಥಿಕತೆಗೆ ‘ಟಾನಿಕ್’ ನೀಡುವಂಥ ಹಲವು ಕ್ರಮಗಳನ್ನು ಘೋಷಿಸುವ ನಿರೀಕ್ಷೆ ಇದೆ.
ಆರ್ಥಿಕತೆ ಉತ್ತೇಜನಕ್ಕೆ ಉದ್ಯಮ ಕ್ಷೇತ್ರ, ಗ್ರಾಮೀಣಾಭಿವೃದ್ಧಿ, ಕೃಷಿ ಕ್ಷೇತ್ರಕ್ಕೆ, ಮೂಲಸೌಕರ್ಯ ವಲಯಕ್ಕೆ ಅವರು ಭರ್ಜರಿ ಕೊಡುಗೆ ಪ್ರಕಟಿಸುವ ನಿರೀಕ್ಷೆಯಿದೆ. ಅಂತೆಯೇ ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಿಸಿ ತೆರಿಗೆದಾರ ಸ್ನೇಹಿ ಕ್ರಮ ಘೋಷಿಸುವ ಸಾಧ್ಯತೆ ಇದೆ. ಅಲ್ಲದೆ 2025ರ ವೇಳೆಗೆ 5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯ ಗುರಿ ಮುಟ್ಟುವ ನಿಟ್ಟಿನಲ್ಲಿ ನೀಲನಕ್ಷೆ ಪ್ರಕಟಿಸುವ ಸಾಧ್ಯತೆ ಇದೆ.
ಏಪ್ರಿಲ್ ಬಳಿಕ ಆರ್ಥಿಕತೆ ಚೇತರಿಕೆ, ಜಿಡಿಪಿ ಶೇ.6.5ಕ್ಕೆ: ಆರ್ಥಿಕ ಸಮೀಕ್ಷಾ ವರದಿ ಭವಿಷ್ಯ
ಕಾರ್ಪೊರೆಟ್ ತೆರಿಗೆ ಕಡಿತ ಸೇರಿದಂತೆ ಇತರೆ ಕೆಲ ಉತ್ತೇಜನಾ ಕ್ರಮಗಳ ಹೊರತಾಗಿಯೂ ಹೂಡಿಕೆಯಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿಲ್ಲ. ಹೀಗಾಗಿ ಬಂಡವಾಳ ಆಕರ್ಷಿಸಲು ಇನ್ನಷ್ಟುಹೊಸ ಯೋಜನೆ ಘೋಷಣೆ ನಿರೀಕ್ಷೆ ಇದೆ. ಇದರ ಜೊತೆಗೆ ಶೇ.5ರಷ್ಟುಆದಾಯ ತೆರಿಗೆ ಸ್ತರವನ್ನು ಈಗಿನ 5 ಲಕ್ಷ ರು. ಬದಲಾಗಿ 7 ಲಕ್ಷ ರು.ವರೆಗೆ ವಿಸ್ತರಿಸುವ ಸಾಧ್ಯತೆ ಇದೆ. 80ಸಿ ಅಡಿಯಲ್ಲಿ ತೆರಿಗೆ ಉಳಿತಾಯ ಮಾಡುವ ಮಿತಿ ಈಗಿನ .1.5 ಲಕ್ಷದಿಂದ .2.5 ಲಕ್ಷಕ್ಕೆ ಹೆಚ್ಚಳ ಸಾಧ್ಯತೆ ಇದೆ.
ಗ್ರಾಮೀಣ, ಕೃಷಿಗೆ ಹೆಚ್ಚು ಹಣ:
ಗ್ರಾಮೀಣ ಜನರ ಆದಾಯ ಹೆಚ್ಚಳವಾಗಿ ಅವರು ಹೆಚ್ಚು ಖರೀದಿಸಲು ಶಕ್ತರಾದಲ್ಲಿ ಆರ್ಥಿಕ ಪ್ರಗತಿ ಆಗಬಹುದು ಎಂಬುದು ಸರ್ಕಾರದ ಲೆಕ್ಕಾಚಾರ. ಇದಕ್ಕೆ ಅನುಗುಣವಾಗಿ ಗ್ರಾಮೀಣ ಅಭಿವೃದ್ಧಿ ಹಾಗೂ ಕೃಷಿ ವಲಯಕ್ಕೆ ಹೆಚ್ಚು ಹಣ ನೀಡುವ ನಿರೀಕ್ಷೆಯಿದೆ. ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಪ್ರತಿ ರೈತರಿಗೆ ವರ್ಷಕ್ಕೆ ನೀಡಲಾಗುವ 6 ಸಾವಿರ ರು. ಸಹಾಯಧನ ಹೆಚ್ಚಳ ಮತ್ತು ಯೋಜನೆಯ ವ್ಯಾಪ್ತಿಗೆ ಇನ್ನಷ್ಟುರೈತರನ್ನು ತರುವ ಸಾಧ್ಯತೆ ಇದೆ.
ಜಿಎಸ್‌ಟಿ ಸರಳೀಕರಣ:
ಪ್ರಸಕ್ತ ವಿವಿಧ ವಸ್ತುಗಳ ಹಾಗೂ ಸೇವೆಗಳ ಮೇಲೆ ಶೇ.5, ಶೇ.12, ಶೇ.18 ಹಾಗೂ ಶೇ.28 ಜಿಎಸ್‌ಟಿ ವಿಧಿಸಲಾಗುತ್ತದೆ. ಇದನ್ನು ಸರಳೀಕರಿಸಿ ಶೇ.18 ಹಾಗೂ ಶೇ.28 ಜಿಎಸ್‌ಟಿ ಹೇರಲಾಗುವ ವಸ್ತುಗಳು ಹಾಗೂ ಸೇವೆಗಳಿಗೆ ಒಂದೇ ದರದ ತೆರಿಗೆ ವಿಧಿಸುವ ಸಾಧ್ಯತೆ ಇದೆ. ಆಟೋಮೊಬೈಲ್ ಉದ್ಯಮದ ಬೇಡಿಕೆಯಂತೆ ವಾಹನಗಳ ಮೇಲಿನ ಜಿಎಸ್‌ಟಿ ಶೇ.28ರಿಂದ ಶೇ.18ಕ್ಕೆ ಇಳಿಕೆ ನಿರೀಕ್ಷೆ ಇದೆ.
ಭಾರತದ ಭವಿಷ್ಯ ಬದಲಿಸಿದ 10 ಬಜೆಟ್‌ಗಳು
ಇದಲ್ಲದೆ ಜನರಲ್ಲಿ ಖರೀದಿ ಉತ್ಸಾಹ ಹೆಚ್ಚಿಸುವ ನಿಟ್ಟಿನಲ್ಲಿ ಮನೆ ಮತ್ತು ವಾಹನ ಖರೀದಿಗೆ ನೀಡುವ ಸಾಲದಲ್ಲಿ ರಿಯಾಯಿತಿ, ರಫ್ತು ಹೆಚ್ಚಿಸಲು ಉತ್ತೇಜನಾ ಕ್ರಮ, ರಿಯಲ್ ಎಸ್ಟೇಟ್ ಉದ್ಯಮಕ್ಕೆ ನೆರವು, ಇಂಧನ, ಇ ವಾಹನಗಳ ಬಳಕೆ ಉತ್ತೇಜಿಸಲು ಪ್ರೋತ್ಸಾಹಕ, ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಇನ್ನಷ್ಟುಬಂಡವಾಳ ಹೂಡಿಕೆ, ಸರ್ಕಾರೇತರ ಹಣಕಾಸು ಸಂಸ್ಥೆಗಳ ಆರ್ಥಿಕ ಸ್ಥಿತಿಗತಿ ಸುಧಾರಿಸಲು ಹಣಕಾಸಿನ ನೆರವು, ಡಿವಿಡೆಂಡ್ ಟ್ಯಾಕ್ಸ್ ಮತ್ತು ಲಾಂಗ್‌ಟಮ್‌ರ್ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ರದ್ದು, ಮೂಲ ಸೌಕರ್ಯ ವಲಯದಲ್ಲಿ ಹೆಚ್ಚಿನ ಹಣ ವಿನಿಯೋಗಕ್ಕೆ ಒತ್ತು, ಗ್ರಾಮಿಣ ವಿದ್ಯುದೀಕರಣ, ನರೇಗಾ, ಆರೋಗ್ಯ ಸೇವೆಗಳು, ಕೌಶಲ್ಯ ತರಬೇತಿ ಬಗ್ಗೆ ಸರ್ಕಾರ ಬಜೆಟ್‌ನಲ್ಲಿ ಒತ್ತು ನೀಡುವ ಸಾಧ್ಯತೆ ಇದೆ.
ಆರ್ಥಿಕ ಸಮೀಕ್ಷೆ ಬಹಿರಂಗ: ಅಭಿವೃದ್ಧಿ ಮೋದಿ ಸರ್ಕಾರದ ಅಂಗ!
ನಿರೀಕ್ಷೆಗಳು
- ಶೇ.4.5ರಷ್ಟುಮಂದಗತಿಯ ಬೆಳವಣಿಗೆ ಕಂಡಿರುವ ಜಿಡಿಪಿ ಬೆಳವಣಿಗೆಯನ್ನು ಶೇ.5ಕ್ಕೆ ಏರಿಸುವ ಗುರಿ
- ಶೇ.5ರ ಆದಾಯ ತೆರಿಗೆ ಸ್ತರ 5 ಲಕ್ಷ ರು.ನಿಂದ 7 ಲಕ್ಷ ರು.ಹೆಚ್ಚಳ ಸಾಧ್ಯತೆ
- 80ಸಿ ಅಡಿಯಲ್ಲಿ ತೆರಿಗೆ ಉಳಿತಾಯ ಮಾಡುವ ಮಿತಿ ಈಗಿನ .1.5 ಲಕ್ಷದಿಂದ .2.5 ಲಕ್ಷಕ್ಕೆ ಹೆಚ್ಚಳ ಸಾಧ್ಯತೆ
- ಇನ್‌ಫ್ರಾಸ್ಟ್ರಕ್ಚರ್ ಬಾಂಡ್ ಬಿಡುಗಡೆ ಮಾಡಿ ಮೂಲಸೌಕರ್ಯ ಯೋಜನೆಗಳಿಗೆ ಹಣ ತೊಡಗಿಸುವಿಕೆ
- ಆಟೋಮೊಬೈಲ್ ಉದ್ಯಮದ ಜಿಎಸ್‌ಟಿ ಶೇ.28ರಿಂದ ಶೇ.18ಕ್ಕೆ ಇಳಿಕೆ
- ಶೇ.18 ಹಾಗೂ ಶೇ.28 ಜಿಎಸ್‌ಟಿ ಹೊಂದಿರುವ ಸರಕುಗಳ ಮೇಲೆ ಒಂದೇ ದರದ ಜಿಎಸ್‌ಟಿ
- ಪಿಎಂ ಕಿಸಾನ್ ಯೋಜನೆ ಅಡಿ ಪ್ರತಿ ರೈತರಿಗೆ ವರ್ಷಕ್ಕೆ ನೀಡಲಾಗುವ 6 ಸಾವಿರ ರು. ಸಹಾಯಧನ ಹೆಚ್ಚಳ
- ಗ್ರಾಮೀಣಾಭಿವೃದ್ಧಿಗೆ 40 ಸಾವಿರ ಕೋಟಿ ರು. ಹೆಚ್ಚು ಹಣ ನಿರೀಕ್ಷೆ. ಇದರಿಂದ ಗ್ರಾಮೀಣ ಆರ್ಥಿಕತೆಗೆ ಚೇತರಿಕೆ
- ವಿದೇಶಗಳಲ್ಲಿ ಬೇಡಿಕೆ ಹೆಚ್ಚಿರುವ ಉತ್ಪನ್ನಗಳನ್ನು ಗುರುತಿಸಿ ಅಂಥ ಉತ್ಪನ್ನಗಳ ರಫ್ತಿಗೆ ಉತ್ತೇಜನ