
ಕೋವಿಡ್ ಎನ್ನೋ ಮಹಾಮಾರಿ 2019ರಿಂದ ಎರಡು ವರ್ಷಗಳ ಕಾಲ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದು ಈಗ ಇತಿಹಾಸ. ಆ ಮಹಾಮಾರಿಯಿಂದ ಜೀವ ಕಳೆದುಕೊಂಡವರು ಅದೆಷ್ಟೋ ಮಂದಿಯಾದರೆ, ಸಂಪೂರ್ಣ ನಷ್ಟ ಅನುಭವಿಸಿ ಬೀದಿ ಪಾಲಾದವರೂ ಅಷ್ಟೇ ಮಂದಿ. ಐದಾರು ವರ್ಷಗಳ ಬಳಿಕವೂ ಇಂದಿಗೂ ಬಿಜಿನೆಸ್ನಲ್ಲಿ ಸುಧಾರಿಸಿಕೊಳ್ಳಲು ಆಗದೇ ದಿಕ್ಕೆಟ್ಟವರೂ ಇದ್ದಾರೆ, ಅಂದು ಅನುಭವಿಸಿದ ನಷ್ಟದಿಂದ ಇನ್ನೂ ಚೇತರಿಸಿಕೊಳ್ಳದವರೂ ಇದ್ದಾರೆ. ಆದರೆ ಇದೇ ಮಹಾಮಾರಿ ಅದೆಷ್ಟೋ ಮಂದಿಗೆ ಬದುಕನ್ನು ಕಟ್ಟಿಕೊಟ್ಟಿದೆ. ಕೈಯಲ್ಲಿ ಕಾಸಿಲ್ಲದವರನ್ನು ಲಕ್ಷಾಧೀಶ್ವರನ್ನಾಗಿಸಿದೆ, ಮನೆಯಲ್ಲಿ ಕುಳಿತು ಮೊಬೈಲ್ ನೋಡ್ತಿರೋರಿಗೂ ಉತ್ತಮ ಆದಾಯ ಗಳಿಸಿಕೊಟ್ಟಿದೆ. ಅಂಥವರಲ್ಲಿ ಒಬ್ಬಾತ 16ರ ಬಾಲಕ ದಿಗ್ವಿಜಯ ಸಿಂಗ್.
16ನೇ ವಯಸ್ಸಿನಲ್ಲಿ ಕೋವಿಡ್ ವೇಳೆ ರೀಲ್ಸ್ ನೋಡುತ್ತಾ ಕುಳಿತ ಈ ಬಾಲಕ ಈಗ 21ರ ತರುಣ. ಅದೇ ರೀಲ್ಸ್ ಈತನ ಲೈಫ್ ಚೇಂಜ್ ಮಾಡಿದೆ. 21ನೇ ವಯಸ್ಸಿನಲ್ಲಿಯೇ ಕೋಟಿ ಕೋಟಿ ವ್ಯವಹಾರ ನಡೆಸುತ್ತಾ ದೊಡ್ಡ ಬಿಜಿನೆಸ್ಮ್ಯಾನ್ ಆಗಿದ್ದಾನೆ ಈ ಯುವಕ. ಇದೇನು ಸಿನಿಮಾನೋ, ಸೀರಿಯಲ್ಲೋ ಅಲ್ಲ, ರಿಯಲ್ ಲೈಫ್ನ ರೋಚಕ ಸ್ಟೋರಿ ಇದು. ಕೋವಿಡ್ನಲ್ಲಿ ಈತನಿಗೆ ಸರಿಸುಮಾರು 16 ವರ್ಷ ವಯಸ್ಸು. ರಾಯಸ್ಥಾನದ ಉದಯಪುರದ ಈ ಬಾಲಕ ದಿಗ್ವಿಜಯ ಸಿಂಗ್ ಎಲ್ಲರಂತೆ ಕಾಲ ಕಳೆಯಲು ಮೊಬೈಲ್ ನೋಡುತ್ತಾ ಕುಳಿತ. ಅವನಿಗೆ ಕಂಡದ್ದು ಮನೆಯಲ್ಲಿಯೇ ಚಾಕಲೆಟ್ ಮಾಡುವ ವಿಡಿಯೋ. ಇದನ್ನು ಬಹುತೇಕ ಎಲ್ಲರೂ ನೋಡಿಯೇ ಇರುತ್ತಾರೆ, ರೀಲ್ಸ್ ನೋಡುವವರು, ಯುಟ್ಯೂಬ್ ನೋಡುವವರಿಗೆ ಮನೆಯಲ್ಲಿಯೇ ವಿವಿಧ ರೀತಿಯ ಆಹಾರ, ಚಾಕಲೇಟ್ ತಯಾರಿಸುವ ವಿಡಿಯೋಗಳು ಕಂಡೇ ಇರುತ್ತವೆ. ಹೆಚ್ಚಿನವರು ಎಲ್ಲರೂ ಸ್ಕ್ರೋಲ್ ಮಾಡಿ ಮುಂದಕ್ಕೆ ಹೋಗ್ತೇವೆ. ಆದರೆ ಬಾಲಕ ದಿಗ್ವಿಜಯ ಸಿಂಗ್ ತಲೆಯಲ್ಲಿ ಹೊಳೆದದ್ದೇ ಬೇರೆ. ನಾನ್ಯಾಕೆ ಈ ಬಿಡುವಿನ ವೇಳೆಯನ್ನು ಇದಕ್ಕಾಗಿ ಬಳಸಿಕೊಳ್ಳಬಾರದು ಎಂದು ಯೋಚನೆ ಮಾಡಿದ.
ಸುಮ್ಮನೇ ಮನೆಯಲ್ಲಿ ಆತ ಚಾಕಲೆಟ್ ತಯಾರಿಕೆ ಆರಂಭಿಸಿದ. ಅದನ್ನೇನು ಆತ ಬಿಜಿನೆಸ್ ಸ್ಟಾರ್ಟ್ ಮಾಡಬೇಕು ಎಂದು ಮಾಡಿದವನಲ್ಲ. ಸುಮ್ಮನೇ ಟ್ರೈ ಮಾಡಿದ ಅಷ್ಟೇ. ಅದನ್ನು ಟೇಸ್ಟ್ ಮಾಡಿದ ಮನೆಯವರೆಲ್ಲರೂ ವ್ಹಾವ್ ಸಕತ್ ಟೇಸ್ಟಿಯಾಗಿದೆ ಅಂದರು. ಅದೇ ಖುಷಿಯಲ್ಲಿ ಆತ ಚಾಕಲೆಟ್ ತಯಾರಿಸಿ ಫ್ರೆಂಡ್ಸ್, ಕುಟುಂಬದ ಸದಸ್ಯರು, ನೆಂಟರಿಷ್ಟರು ಕ್ರಮೇಣ ನೆರೆಹೊರೆಯವರಿಗೂ ಕೊಡಲು ಶುರು ಮಾಡಿದಾಗ, ಎಲ್ಲರೂ ಅದನ್ನು ಕೊಂಡಾಡಿದ್ದೇ ಕೊಂಡಾಡಿದ್ದು.
ಈ ಪರಿಯ ಜನಪ್ರಿಯತೆ ಕಂಡ ಆ ಬಾಲಕನಿಗೆ ತಾನ್ಯಾಕೆ ಇದನ್ನು ಗಿಫ್ಟ್ಪ್ಯಾಕ್ ಮಾಡಿ ಮಾರಾಟ ಮಾಡಬಾರದು ಎನ್ನಿಸಿತು. ಮನೆಯವರ ಜೊತೆ ಚರ್ಚಿಸಿದ. ಅದು ದೀಪಾವಳಿಯ ಸಮಯ. ಹಾಗೆಯೇ ಚಾಕಲೆಟ್ ಮಾಡಿ, ಪ್ಯಾಕ್ ಮಾಡಿದ. ಆದರೆ ಮಾರಾಟ ಮಾಡುವುದು ಹೇಗೆ? ಯಾರಿಗೆ ಕೊಡುವುದು ಎಂದು ತಿಳಿಯಲಿಲ್ಲ. ಕೊನೆಗೆ ಅವನ ಮನೆಯ ಸಮೀಪದ ಕಾರಿನ ಷೋರೂಮ್ನಲ್ಲಿ ಜನರನ್ನು ಸೆಳೆಯುವುದಕ್ಕಾಗಿ ಆಫರ್ ಬಿಟ್ಟಿದ್ದರು. ಷೋರೂಮ್ ಸಂಪರ್ಕಿಸಿದ ಬಾಲಕ, ಆ ಉಡುಗೊರೆ ಜೊತೆ, ಚಾಕೊಲೇಟ್ ಪ್ಯಾಕ್ ಅನ್ನೂ ನೀಡಲು ವಿನಂತಿಸಿ, ಅವರನ್ನು ಒಪ್ಪಿಸಿದ.ಅಷ್ಟೇ.
ಷೋರೂಮ್ನವರು ಚಾಕಲೆಟ್ ಟೇಸ್ಟ್ ಮಾಡಿ ಅದಕ್ಕೆ ಮಾರು ಹೋಗಿ 2021 ರಲ್ಲಿ, ಅವರು ಒಂದು ಸಾವಿರ ಚಾಕೊಲೇಟ್‌ಗಳ ಮೊದಲ ಬೃಹತ್ ಆರ್ಡರ್ ಅನ್ನು ಪಡೆದರು. ಹಾಗೆಯೇ ಕೊಡುವುದು ಬೇಡ, ಒಂದು ಹೆಸರಿಟ್ಟು ಕೊಡೋಣ ಎಂದುಕೊಂಡ ದಿಗ್ವಿಜಯ ಅದಕ್ಕೆ ಸಾರಮ್ ಎಂದು ಹೆಸರಿಸಿ ಆ ಬ್ರ್ಯಾಂಡ್ನಲ್ಲಿ ಚಾಕಲೇಟ್ ಕೊಟ್ಟ. ಅಲ್ಲಿಂದ ಆರಂಭವಾದದ್ದು ಇದೀಗ ಬೃಹತ್ ಉದ್ಯಮವಾಗಿ ಬೆಳೆದಿದೆ. ಇಂದು, ಸಾರಮ್ ಉತ್ತಮವಾದ ಬೀನ್-ಟು-ಬಾರ್ ಚಾಕೊಲೇಟ್‌ಗಳನ್ನು ಉತ್ಪಾದಿಸುತ್ತದೆ, ದೆಹಲಿ, ಬೆಂಗಳೂರು, ಜೈಪುರ ಮತ್ತು ಉದಯಪುರದಂತಹ ನಗರಗಳಲ್ಲಿ ಎರಡು ಟನ್‌ಗಳಿಗಿಂತ ಹೆಚ್ಚು ಮಾರಾಟ ಮಾಡುತ್ತದೆ. ಈ ಬಾಲಕನಿಗೆ ಈಗ 21 ವರ್ಷ. ಹವ್ಯಾಸವಾಗಿ ಪ್ರಾರಂಭವಾದದ್ದು ಈಗ 1 ಕೋಟಿ ರೂಪಾಯಿ ಬ್ರ್ಯಾಂಡ್ ಆಗಿದೆ. ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಸುತ್ತಿದ್ದಾನೆ ಈ ಯುವಕ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.