
ಮುಂಬೈ (ನ.17): ದೇಶದ ಅತಿದೊಡ್ಡ ಉದ್ಯಮ ಕುಟುಂಬಗಳಲ್ಲಿ ಒಂದಾದ ಟಿವಿಎಸ್ (TVS) ಸಮೂಹದ ಕುಟುಂಬಸ್ಥರ ನಡುವೆ ಆಸ್ತಿ ವಿಚಾರವಾಗಿ ಭಾರಿ ಘರ್ಷಣೆ ಆರಂಭವಾಗಿದ್ದು, ಈ ವಿವಾದ ಇದೀಗ ಕಾನೂನು ಸಮರದ ತಿರುವು ಪಡೆದುಕೊಂಡಿದೆ. ಖ್ಯಾತ ಉದ್ಯಮಿ ವೇಣು ಶ್ರೀನಿವಾಸನ್ ಅವರ ಪುತ್ರಿ ಲಕ್ಷ್ಮಿ ವೇಣು (Lakshmi Venu) ಅವರು ತಮ್ಮ ತಂದೆಗೇ ನೇರವಾಗಿ ಲೀಗಲ್ ನೋಟಿಸ್ (Legal Notice) ಕಳುಹಿಸಿ, ಕುಟುಂಬದ ಜಂಟಿ ಆಸ್ತಿಗಳನ್ನು ವಿಭಜಿಸಿ ತಮಗೆ ಪಾಲು ನೀಡುವಂತೆ ಒತ್ತಾಯಿಸಿದ್ದಾರೆ.
ಕುಟುಂಬದ ವ್ಯವಹಾರ, ವ್ಯಾಪಾರ ಮತ್ತು ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೂ ಸಮಾನ ಹಕ್ಕು ಸಿಗಬೇಕು ಎಂಬ ವಿಷಯವನ್ನು ಲಕ್ಷ್ಮಿ ವೇಣು ಬಲವಾಗಿ ಪ್ರತಿಪಾದಿಸಿದ್ದಾರೆ. ವಿಶೇಷವೆಂದರೆ, ಈ ಕೌಟುಂಬಿಕ ಮತ್ತು ಕಾನೂನು ಸಮರದಲ್ಲಿ ತಾಯಿ ಮಲ್ಲಿಕಾ ಶ್ರೀನಿವಾಸನ್ (Mallika Srinivasan) ಅವರು ಸಹ ಮಗಳ ಪರವಾಗಿ ನಿಂತಿದ್ದು, ಲಕ್ಷ್ಮಿ ಅವರ ಹಕ್ಕಿನ ಪ್ರತಿಪಾದನೆಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಈ ವಿವಾದ ಶೀಘ್ರದಲ್ಲೇ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆಯಿದೆ.
ಭಾರತದ ಪ್ರಮುಖ ಆಟೋಮೊಬೈಲ್ ಉದ್ಯಮ ಸಮೂಹವಾದ ಟಿವಿಎಸ್ ಕುಟುಂಬದ ಆಸ್ತಿ ಹಂಚಿಕೆಯ ವಿವಾದ ಈಗ ಹೊಸ ಘಟ್ಟ ತಲುಪಿದೆ. ಟಿವಿಎಸ್ ಮೋಟಾರ್ ಕಂಪನಿಯ ಅಧ್ಯಕ್ಷ ಎಮೆರಿಟಸ್ (Chairman Emeritus) ವೇಣು ಶ್ರೀನಿವಾಸನ್ ಅವರಿಗೆ ಪುತ್ರಿ ಲಕ್ಷ್ಮಿ ವೇಣು ಔಪಚಾರಿಕ ಕಾನೂನು ನೋಟಿಸ್ ಕಳುಹಿಸಿದ್ದಾರೆ. ಇದರಲ್ಲಿ ಕುಟುಂಬದ ಜಂಟಿ ಆಸ್ತಿಗಳ ಮೇಲೆ ಹಕ್ಕು ಪ್ರತಿಪಾದಿಸಿರುವ ಅವರು, ಹೆಣ್ಣುಮಕ್ಕಳಿಗೂ ಆಸ್ತಿಯಲ್ಲಿ ಸಮಾನ ಪಾಲು ನೀಡಬೇಕೆಂದು ವಾದಿಸಿದ್ದಾರೆ.
ಹಿಂದೂ ಉತ್ತರಾಧಿಕಾರ ಕಾಯ್ದೆಯಡಿ (Hindu Succession Act) ಕುಟುಂಬದ ಜಂಟಿ ಆಸ್ತಿಯಲ್ಲಿ ಕಾನೂನುಬದ್ಧ ಪಾಲು ಕೇಳುವ ಹಕ್ಕು ತಮಗಿದೆ ಎಂದು ಲಕ್ಷ್ಮಿ ಪ್ರತಿಪಾದಿಸಿದ್ದಾರೆ. ಕುಟುಂಬದಲ್ಲಿ, ವ್ಯವಹಾರದಲ್ಲಿ ಮಾತ್ರವಲ್ಲದೆ ಆಸ್ತಿಯಲ್ಲೂ ತಮ್ಮ ಸಹೋದರ ಸುದರ್ಶನ್ ವೇಣು (Sudarshan Venu) ಅವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ತಮ್ಮನ್ನು ಕಡೆಗಣಿಸಲಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಇದು ಕೇವಲ ಕೌಟುಂಬಿಕ ಜಗಳವಾಗಿ ಉಳಿದಿಲ್ಲ; ಬದಲಾಗಿ ಟಿವಿಎಸ್ ಸಮೂಹದ ವಿವಿಧ ಕಂಪನಿಗಳ ಮಾಲೀಕತ್ವ, ಕುಟುಂಬದ ಪಾಲು ಮತ್ತು ಭವಿಷ್ಯದ ವಾಣಿಜ್ಯ ನಿಯಂತ್ರಣದ ಲೆಕ್ಕಾಚಾರಗಳನ್ನು ಒಳಗೊಂಡಿದೆ.
ಲಕ್ಷ್ಮಿ ವೇಣು ಅವರು ಟಿವಿಎಸ್ ಸಮೂಹದ ಈ ಕೆಳಗಿನ 5 ಪ್ರಮುಖ ಸಂಸ್ಥೆಗಳು ಮತ್ತು ಟ್ರಸ್ಟ್‌ನಲ್ಲಿ ತಮ್ಮ ಪಾಲನ್ನು ಕೇಳಿದ್ದಾರೆ.
2020ರಲ್ಲಿ ಟಿವಿಎಸ್ ವ್ಯವಹಾರ, ವ್ಯಾಪಾರ ಮತ್ತು ಆಡಳಿತಕ್ಕೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಟಿವಿಎಸ್ ಕುಟುಂಬದ ವಿವಿಧ ಸದಸ್ಯರಿಗೆ ಪ್ರತ್ಯೇಕ ಜವಾಬ್ದಾರಿಗಳನ್ನು ಹಂಚಿಕೆ ಮಾಡಿ, ಆಸ್ತಿ ವಿಭಜನೆಗೆ ಸಂಬಂಧಿಸಿದಂತೆ ಒಂದು ವ್ಯವಸ್ಥೆ ಮಾಡಲಾಗಿತ್ತು. ಪ್ರತಿಯೊಂದು ವ್ಯವಹಾರದ ಮೇಲೂ ಹೆಚ್ಚಿನ ಗಮನ ಹರಿಸಿ, ಆರ್ಥಿಕ ಬಲ ನೀಡುವುದು ಇದರ ಉದ್ದೇಶವಾಗಿತ್ತು. ಆದರೆ ಲಕ್ಷ್ಮಿ ವೇಣು ಅವರ ಪ್ರಕಾರ, 2020ರಲ್ಲಿ ನಡೆದ ಆ ಒಪ್ಪಂದವು ಟಿವಿಎಸ್ ಕುಟುಂಬದ ವಿವಿಧ ಕವಲುಗಳ (Branch/Relatives) ನಡುವೆ ನಡೆದಿತ್ತೇ ಹೊರತು, ವೇಣು ಶ್ರೀನಿವಾಸನ್ ಅವರ ಸ್ವಂತ ಕುಟುಂಬದ ಆಸ್ತಿಯಲ್ಲಿ ಅಂತಹ ಯಾವುದೇ ವಿಭಜನೆ ನಡೆದಿಲ್ಲ. ತಮ್ಮ ಕುಟುಂಬದ ಆಂತರಿಕ ಆಸ್ತಿಯಲ್ಲಿ ಇನ್ನೂ ಯಾವುದೇ ಹಂಚಿಕೆಯಾಗಿಲ್ಲ ಎಂಬುದೇ ಈ ಇಡೀ ವಿವಾದದ ಮೂಲ ಕಾರಣವಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.