
ನವದೆಹಲಿ (ಫೆ.12): ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಕರ್ನಾಟಕಕ್ಕೆ ಭೇಟಿ ನೀಡಿದಾಗ ಅವರಿಗೆ ಪ್ಲಾಸ್ಟಿಕ್ ಬಾಟಲಿಗಳಿಂದ ಮರುಬಳಕೆ ಮಾಡಿದ ತಿಳಿ ನೀಲಿ ಬಣ್ಣದ 'ಸದ್ರಿ' ಹಾಫ್ ಜಾಕೆಟ್ ಅನ್ನುಉಡುಗೊರೆಯಾಗಿ ನೀಡಲಾಗಿತ್ತು. ಈ ಜಾಕೆಟ್ ಬಗ್ಗೆ ಸಾಕಷ್ಟು ಚರ್ಚೆಗಳು ಕೂಡ ನಡೆದಿದ್ದವು. ಅಂದ ಹಾಗೇ ಈ ಜಾಕೆಟ್ ಸಿದ್ಧಗೊಂಡಿದ್ದು ತಮಿಳುನಾಡಿನ ಕರೂರ್ ನ ಪ್ಲಾಸ್ಟಿಕ್ ಮರುಬಳಕೆ ಕಾರ್ಖಾನೆಯೊಂದರಲ್ಲಿ. ಫೆ.8ರಂದು ಸಂಸತ್ ಅಧಿವೇಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಈ ಜಾಕೆಟ್ ಧರಿಸಿ ಹೋಗಿದ್ದರು. ಆ ಬಳಿಕ ಈ ತಿಳಿ ನೀಲಿ ಬಣ್ಣದ ಜಾಕೆಟ್ ಬಗ್ಗೆ ಜನರಲ್ಲಿ ಸಾಕಷ್ಟು ಕುತೂಹಲ ಮೂಡಿದೆ. ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ಜಾಕೆಟ್ ಭಾರೀ ಸದ್ದು ಮಾಡಿತ್ತು ಕೂಡ. ಅಷ್ಟೇ ಅಲ್ಲ, ಈ ಜಾಕೆಟ್ ಗೆ ಈಗ ಭಾರೀ ಬೇಡಿಕೆ ಕೂಡ ಸೃಷ್ಟಿಯಾಗಿದೆ ಎಂದು ಅದನ್ನು ಸಿದ್ಧಪಡಿಸಿದ ಕಾರ್ಖಾನೆ ಮಾಲೀಕರಾದ ಸೆಂಥಿಲ್ ಶಂಕರ್ ತಿಳಿಸಿದ್ದಾರೆ. ಪ್ರಧಾನಿ ಈ ಜಾಕೆಟ್ ಅನ್ನು ಸಂಸತ್ತಿಗೆ ಧರಿಸಿ ಹೋದ ದಿನದಿಂದ ಇವರ ಮೊಬೈಲ್ ಗೆ ನಿರಂತರ ಕರೆಗಳು ಬರುತ್ತಿರೋದಾಗಿ ಅವರು ತಿಳಿಸಿದ್ದಾರೆ. 'ಜನರಿಂದ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆ ನೋಡಿ ನಮಗೆ ಮಾತೇ ಬರುತ್ತಿಲ್ಲ' ಎಂದು ಸೆಂಥಿಲ್ ಸಂತಸ ವ್ಯಕ್ತಪಡಿಸಿದ್ದಾರೆ. ಅಂದ ಹಾಗೇ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಸೆಂಥಿಲ್, ಪ್ಲಾಸ್ಟಿಕ್ ಮರುಬಳಕೆಯ ಈ ಉದ್ಯಮ ಮುನ್ನಡೆಸಲು ಉತ್ತಮ ವೇತನದ ಕಾರ್ಪೋರೇಟ್ ಕೆಲಸವನ್ನೇ ತೊರೆದಿದ್ದರು.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಬೆಂಗಳೂರಿನಲ್ಲಿ ಫೆ.6ರಂದು ಆಯೋಜಿಸಿದ್ದ‘ಭಾರತ ಇಂಧನ ಸಪ್ತಾಹ-2023’ಉದ್ಘಾಟನೆಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತೀಯ ತೈಲ ನಿಗಮ ಲಿ. (IOCL)ತಿಳಿ ನೀಲಿ ಬಣ್ಣದ ಜಾಕೆಟ್ ಅನ್ನು ಉಡುಗೊರೆಯಾಗಿ ನೀಡಿತ್ತು. ಈ ಜಾಕೆಟ್ ಅನ್ನು ತಮಿಳುನಾಡು ಕರೂರಿನ ಶ್ರೀ ರೆಂಗ ಪಾಲಿಮರ್ಸ್ ಹಾಗೂ ಇಕೋಲೈನ್ ಕ್ಲೋಥಿಂಗ್ ಕಾರ್ಖಾನೆಯಲ್ಲಿ ಸಿದ್ಧಪಡಿಸಲಾಗಿತ್ತು. ಈ ಕಾರ್ಖಾನೆ ಪಾಲುದಾರರಲ್ಲಿಸೆಂಥಿಲ್ ಕೂಡ ಒಬ್ಬರು. 34 ವರ್ಷದ ಸೆಂಥಿಲ್ ಈ ಉದ್ಯಮ ಮುನ್ನಡೆಸಲು ಕಾರ್ಪೋರೇಟ್ ಉದ್ಯೋಗ ತೊರೆದಿದ್ದರು.
ಪ್ರಧಾನಿ ಅವರಿಗೆ ನೀಡಿರುವ ಜಾಕೆಟ್ ಬಗ್ಗೆ ಮಾತನಾಡಿರುವ ಸೆಂಥಿಲ್, 20-28 ಪೆಟ್ ಬಾಟಲ್ ಗಳನ್ನು (PET bottles) ಬಳಸಿ ಈ ಜಾಕೆಟ್ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಹಾಗೆಯೇ ಈ ಜಾಕೆಟ್ ಗೆ 2,000ರೂ. ರಿಟೇಲ್ ಬೆಲೆಗೆ ಮಾರಾಟ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಕೂಡ ನೀಡಿದ್ದಾರೆ.
ಹಿಂಡನ್‌ಬರ್ಗ್ ವಿರುದ್ಧ ಅದಾನಿ ಕಾನೂನು ಸಮರ: ಅಮೆರಿಕದ ದುಬಾರಿ ಕಾನೂನು ಸಂಸ್ಥೆ ‘ವಾಚ್‌ಟೆಲ್’ ನೇಮಕ
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸುಸ್ಥಿರ ಫ್ಯಾಷನ್ ಸಾಕಷ್ಟು ಜನಪ್ರಿಯತೆ ಗಳಿಸುತ್ತಿದೆ. ಇದು ಈಗ ನಿಧಾನವಾಗಿ ಭಾರತೀಯ ಮಾರುಕಟ್ಟೆಗೂ ಕಾಲಿಡುತ್ತಿದೆ ಎಂದು ಸೆಂಥಿಲ್ ತಿಳಿಸಿದ್ದಾರೆ. 'ನಾವು ಸಾಕಷ್ಟು ಕಾರ್ಪೋರೇಟ್ಸ್ ಹಾಗೂ ಸ್ಟಾರ್ಟ್ ಅಪ್ ಗಳ ಜೊತೆಗೆ ಕಾರ್ಯನಿರ್ವಹಿಸುತ್ತಿದ್ದೇವೆ. ಐಒಸಿಎಲ್ ( IOCL), ಸೇಂಟ್ ಗೊಬೈನ್ (Saint-Gobain) ಹಾಗೂ ಝುಹು (Zoho) ಕೂಡ ನಮ್ಮ ಗ್ರಾಹಕರು ಎಂದು ಸೆಂಥಿಲ್ ಹೇಳಿದ್ದಾರೆ.
ಇಕೋಲೈನ್ ಕ್ಲೋಥಿಂಗ್ ಉದ್ಯಮಕ್ಕೆ ಕಾಲಿಡಲು ಏನು ಪ್ರೇರಣೆಯಾಯ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಸೆಂಥಿಲ್, '2007ರಲ್ಲಿ ವೀಕ್ಷಿಸಿದ ಗುರು ಸಿನಿಮಾ ನನ್ನ ಬದುಕಿಗೆ ಹೊಸ ತಿರುವು ನೀಡಿತು. ಆಗಲೇ ನಾನು ಉದ್ಯಮ ಕ್ಷೇತ್ರಕ್ಕೆ ಕಾಲಿಡುವ ನಿರ್ಣಯ ಕೈಗೊಂಡಿದ್ದೆ' ಎಂದಿದ್ದಾರೆ.
ರಿಲ್ಯಾಕ್ಸ್ ಆಗಲು ಸ್ಟಾರ್ ಬಕ್ಸ್ ಕಾಫಿ ಕುಡಿದ ದಂಪತಿ,ಬಿಲ್ ನೋಡಿ ಶಾಕ್!
ಸೆಂಥಿಲ್ ತಂದೆ ಕೆ.ಶಂಕರ್ (65) ಐಐಟಿ ಪದವೀಧರರಾಗಿದ್ದು, ಪಾಲಿಮರ್ ಉತ್ಪನ್ನಗಳನ್ನು ಮರುಬಳಕೆಗೆ ವಿನೂತನ ಯೋಜನೆ ರೂಪಿಸಬೇಕೆಂಬ ಕನಸು ಹೊಂದಿದ್ದರು. ಅದರ ಭಾಗವಾಗಿಯೇ 2008ರಲ್ಲಿ ಶ್ರೀರೆಂಗ ಪಾಲಿಮರ್ಸ್ ಪ್ರಾರಂಭಿಸಿದರು. ಈ ಸಂಸ್ಥೆ ಪೆಟ್ ಬಾಟಲಿಗಳನ್ನು ಮರುಬಳಕೆ ಮಾಡುತ್ತದೆ. ಬಾಟಲಿಗಳನ್ನು ಪುಡಿ ಮಾಡಿ, ತೊಳೆದು, ನಂತರ ರುಬ್ಬಲಾಗುತ್ತದೆ. 2014ರಿಂದ ಈ ಸಂಸ್ಥೆ ಪಾಲಿಸ್ಟರ್ ಪೈಬರ್ ಗಳನ್ನು ಸಿದ್ಧಪಡಿಸುತ್ತಿದೆ. 2021ರಲ್ಲಿ ಇವರು ಇಕೋಲೈನ್ ಕ್ಲೋಥಿಂಗ್ ಪ್ರಾರಂಭಿಸಿದರು. ಈ ಸಂಸ್ಥೆಯಲ್ಲಿ 400 ಮಂದಿ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಮರುಬಳಕೆಯಿಂದ ಸಿದ್ಧಗೊಂಡಿರುವ ಸಮವಸ್ತ್ರಗಳನ್ನು ದೇಶಾದ್ಯಂತ ಪೆಟ್ರೋಲ್ ಬಂಕ್ ಉದ್ಯೋಗಿಗಳಿಗೆ ವಿತರಿಸಲು ಐಒಸಿಎಲ್ ಯೋಜನೆ ರೂಪಿಸಿದೆ.
ಪರಿಸರಸ್ನೇಹಿ ಸುಸ್ಥಿರ ಉದ್ಯಮಗಳಿಗೆ ಕೇಂದ್ರ ಸರ್ಕಾರ ಹೆಚ್ಚಿನ ಮಹತ್ವ ನೀಡುತ್ತಿದೆ. ಅಭಿವೃದ್ಧಿ ಹೊಂದಿದ ಅನೇಕ ರಾಷ್ಟ್ರಗಳು ತ್ಯಾಜ್ಯಗಳ ಮರುಬಳಕೆಗೆ ಒತ್ತು ನೀಡುತ್ತಿವೆ. ಈಗ ಭಾರತದಲ್ಲಿ ಕೂಡ ಈ ಕುರಿತ ಉದ್ಯಮಗಳು ತಲೆ ಎತ್ತುತ್ತಿವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.