Cyber: ಮೊಬೈಲ್‌ನಲ್ಲಿ 140, 1600 ಇಂದ ಸ್ಟಾರ್ಟ್‌ ಆಗೋ ಕರೆ ಬರ್ತಿವೆಯಾ? ತಕ್ಷಣ ಅಲರ್ಟ್ ಆಗಿ, ಹೊಸ ರೂಲ್ಸ್ ಇಲ್ಲಿದೆ!

Published : Jul 10, 2026, 11:22 PM IST
New mobile

ಸಾರಾಂಶ

ವಂಚನೆ ಮತ್ತು ಸ್ಪ್ಯಾಮ್ ಕರೆಗಳಿಗೆ ಬ್ರೇಕ್ ಹಾಕಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಆದರೆ, ಇತ್ತೀಚೆಗೆ ಮಾಧ್ಯಮಗಳಲ್ಲಿ 140 ಮತ್ತು 1600 ಸರಣಿಯ ನಂಬರ್‌ಗಳ ಬಗ್ಗೆ ಹರಡಿರುವ ಗೊಂದಲಗಳಿಗೆ ಟ್ರಾಯ್ ಇದೀಗ ಅಧಿಕೃತ ಸ್ಪಷ್ಟನೆ ನೀಡಿದೆ. 

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆದಾರರಿಗೆ ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಗಳ ಕಾಟ ವಿಪರೀತವಾಗಿದೆ. ವಂಚನೆ ಮತ್ತು ಸ್ಪ್ಯಾಮ್ ಕರೆಗಳಿಗೆ ಬ್ರೇಕ್ ಹಾಕಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಆದರೆ, ಇತ್ತೀಚೆಗೆ ಮಾಧ್ಯಮಗಳಲ್ಲಿ 140 ಮತ್ತು 1600 ಸರಣಿಯ ನಂಬರ್‌ಗಳ ಬಗ್ಗೆ ಹರಡಿರುವ ಗೊಂದಲಗಳಿಗೆ ಟ್ರಾಯ್ ಇದೀಗ ಅಧಿಕೃತ ಸ್ಪಷ್ಟನೆ ನೀಡಿದ್ದು, ಸಾರ್ವಜನಿಕರು ಈ ಪ್ರಮುಖ ಬದಲಾವಣೆಗಳನ್ನು ತಿಳಿಯುವುದು ಅಗತ್ಯವಾಗಿದೆ.

ಸೇವಾ ಕರೆಗಳಿಗಾಗಿ '1600' ಸರಣಿ ನಿಯಮ!

ಟ್ರಾಯ್ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಗಳ ಪ್ರಕಾರ, 1600xx ಇಂದ ಆರಂಭವಾಗುವ ಸಂಖ್ಯೆಗಳನ್ನು ಕೇವಲ ಸೇವಾ ಕರೆಗಳು, ಮತ್ತು ವಹಿವಾಟು ಕರೆಗಳಿಗಾಗಿ ಮಾತ್ರ ಕಡ್ಡಾಯವಾಗಿ ಮೀಸಲಿಡಲಾಗಿದೆ. ಇವು ಮುಖ್ಯವಾಗಿ ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಕಂಪನಿಗಳಿಗೆ ಅನ್ವಯಿಸುತ್ತವೆ. ಅಂದರೆ ಆರ್‌ಬಿಐ, ಸೇಬಿ, ಐಆರ್‌ಡಿಎಐ ಮತ್ತು ಪಿಎಫ್‌ಆರ್‌ಡಿಐನಿಂದ ನಿಯಂತ್ರಿಸಲ್ಪಡುವ ಬ್ಯಾಂಕ್ ಹಾಗೂ ವಿಮಾ ಕಂಪನಿಗಳು ತಮ್ಮ ಗ್ರಾಹಕರಿಗೆ ಪ್ರಮುಖ ಮಾಹಿತಿ ಮತ್ತು ಅಲರ್ಟ್‌ಗಳನ್ನು ನೀಡಲು ಈ ಸಂಖ್ಯೆಗಳನ್ನು ಬಳಸುತ್ತವೆ. ಇದರೊಂದಿಗೆ ಸರ್ಕಾರವು ಸಾರ್ವಜನಿಕರಿಗೆ ಅಗತ್ಯ ಯೋಜನೆಗಳ ಮಾಹಿತಿ ತಲುಪಿಸಲು ಕೂಡ ಈ ಸರಣಿಯನ್ನೇ ಬಳಸುತ್ತದೆ. ಗ್ರಾಹಕರು ಇಂತಹ ಪ್ರಮುಖ ಕರೆಗಳನ್ನು ನಂಬಿಕೆಯಿಂದ ಸ್ವೀಕರಿಸಲಿ ಎಂಬುದು ಸರ್ಕಾರದ ಉದ್ದೇಶ. ಹೀಗಾಗಿ, ಈ 1600 ಸರಣಿಯ ಕರೆಗಳನ್ನು ಟ್ಯಾಗ್ ಮಾಡುವುದು ಅಥವಾ ಬ್ಲಾಕ್ ಮಾಡಲು ಮೊಬೈಲ್ ಆಪರೇಟರ್‌ಗಳಿಗೆ ಕಾನೂನಿನಲ್ಲಿ ಅವಕಾಶವಿಲ್ಲ.

ಪ್ರಚಾರದ ಕರೆಗಳಿಗಾಗಿ '140' ಸರಣಿ ಕಡ್ಡಾಯ!

ಯಾವುದೇ ಕಂಪನಿಯು ತನ್ನ ಉತ್ಪನ್ನಗಳ ಜಾಹೀರಾತು, ಆಫರ್ ಅಥವಾ ಪ್ರಚಾರ ಮಾಡಲು 140xx ಸರಣಿಯ ಸಂಖ್ಯೆಗಳನ್ನು ಮಾತ್ರ ಬಳಸಬೇಕು ಎಂದು ಟ್ರಾಯ್ ಕಡಾಖಂಡಿತವಾಗಿ ಹೇಳಿದೆ. ಇಂತಹ ಪ್ರಚಾರದ ಕರೆಗಳನ್ನು ಮಾಡುವ ಕಂಪನಿಗಳು ಕಡ್ಡಾಯವಾಗಿ ಟೆಲಿಕಾಂ ನಿಯಮಗಳ (TCCCPR) ಪ್ರಕಾರ ನೋಂದಾಯಿಸಿಕೊಳ್ಳಬೇಕು. ವಿಶೇಷವೆಂದರೆ, ಈ 140 ಸರಣಿಯ ಕರೆಗಳನ್ನು ಸ್ವೀಕರಿಸಬೇಕೇ ಬೇಡವೇ ಎಂದು ನಿರ್ಧರಿಸುವ ಸಂಪೂರ್ಣ ಹಕ್ಕು ಗ್ರಾಹಕರಿಗಿದೆ. ಗ್ರಾಹಕರು ತಮಗೆ ಇಷ್ಟವಿಲ್ಲದಿದ್ದರೆ 'ಡು ನಾಟ್ ಡಿಸ್ಟರ್ಬ್' ಸೇವೆ ಮೂಲಕ ಇವುಗಳನ್ನು ಸುಲಭವಾಗಿ ನಿರ್ಬಂಧಿಸಬಹುದು.

ಸ್ಪ್ಯಾಮ್ ಕರೆಗಳನ್ನು ತಡೆಯುವುದು ಹೇಗೆ?

ನಿಮಗೆ ಇಂತಹ ಅನಗತ್ಯ ಕರೆಗಳ ಕಿರಿಕಿರಿ ಬೇಡವೆಂದಾದರೆ, ಸರ್ಕಾರದ ಅಧಿಕೃತ TRAI DND ಅಪ್ಲಿಕೇಶನ್ ಬಳಸಿ ಅವುಗಳನ್ನು ಸುಲಭವಾಗಿ ಬ್ಲಾಕ್ ಮಾಡಬಹುದು. ಅದರ ಹಂತಗಳು ಇಲ್ಲಿವೆ:

ಆ್ಯಪ್ ಡೌನ್‌ಲೋಡ್: ಗೂಗಲ್ ಪ್ಲೇ ಸ್ಟೋರ್ (Android) ಅಥವಾ ಆಪಲ್ ಆ್ಯಪ್ ಸ್ಟೋರ್ (iOS) ನಿಂದ ಅಧಿಕೃತ 'TRAI DND' ಆ್ಯಪ್ ಇನ್‌ಸ್ಟಾಲ್ ಮಾಡಿ.

ಅನುಮತಿ ನೀಡಿ: ಆ್ಯಪ್ ಓಪನ್ ಮಾಡಿದ ತಕ್ಷಣ ಅದು SMS, ಕಾಂಟ್ಯಾಕ್ಟ್ಸ್ ಮತ್ತು ಕರೆ ಲಾಗ್‌ಗಳಿಗೆ ಪ್ರವೇಶ ಕೇಳುತ್ತದೆ. ಸ್ಪ್ಯಾಮ್ ಕರೆಗಳನ್ನು ಗುರುತಿಸಲು ಈ ಅನುಮತಿಗಳನ್ನು ನೀಡುವುದು ಕಡ್ಡಾಯ.

ಲಾಗಿನ್ ಪ್ರಕ್ರಿಯೆ: ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಬರುವ 6 ಅಂಕಿಯ ಒಟಿಪಿ (OTP) ಮೂಲಕ ದೃಢೀಕರಿಸಿ.

DND ಆಯ್ಕೆ ಮಾಡಿ: ಆ್ಯಪ್‌ನ ಮುಖ್ಯ ಡ್ಯಾಶ್‌ಬೋರ್ಡ್‌ನಲ್ಲಿ ಎರಡು ಆಯ್ಕೆಗಳು ಸಿಗುತ್ತವೆ:

ಪೂರ್ಣ ಡಿಎನ್‌ಡಿ (Full DND): ಇದನ್ನು ಆರಿಸಿದರೆ ಎಲ್ಲಾ ರೀತಿಯ ವಾಣಿಜ್ಯ ಮತ್ತು ಪ್ರಚಾರದ ಕರೆಗಳು ಹಾಗೂ ಮೆಸೇಜ್‌ಗಳು ಸಂಪೂರ್ಣವಾಗಿ ಬ್ಲಾಕ್ ಆಗುತ್ತವೆ.

ಭಾಗಶಃ ಡಿಎನ್‌ಡಿ (Partial DND): ಇದನ್ನು ಆರಿಸಿದರೆ ಬ್ಯಾಂಕಿಂಗ್, ಶಿಕ್ಷಣ, ಆರೋಗ್ಯದಂತಹ ನಿಮಗೆ ಬೇಕಾದ ವಲಯಗಳ ಕರೆಗಳನ್ನು ಮಾತ್ರ ಅನುಮತಿಸಿ, ಉಳಿದ ಜಾಹೀರಾತು ಕರೆಗಳನ್ನು ನಿರ್ಬಂಧಿಸಬಹುದು.

ಸಲ್ಲಿಸಿ (Submit): ನಿಮ್ಮ ಆದ್ಯತೆಯನ್ನು ಆರಿಸಿ ಸಬ್ಮಿಟ್ ಮಾಡಿದರೆ ನಿಮ್ಮ ವಿನಂತಿ ರಾಷ್ಟ್ರೀಯ ಗ್ರಾಹಕ ಆದ್ಯತೆ ನೋಂದಣಿ (NCPR) ಯಲ್ಲಿ ದಾಖಲಾಗುತ್ತದೆ.

7 ದಿನಗಳ ಗಡುವು ಮತ್ತು ದೂರು:

ನಿಮ್ಮ ವಿನಂತಿ ದಾಖಲಾದ ನಂತರ ಜಿಯೋ, ಏರ್‌ಟೆಲ್, ವಿಐ ಅಥವಾ ಬಿಎಸ್ಎನ್ಎಲ್ ಆಪರೇಟರ್‌ಗಳು ಅದನ್ನು ಜಾರಿಗೆ ತರಲು ಗರಿಷ್ಠ 7 ದಿನಗಳನ್ನು ತೆಗೆದುಕೊಳ್ಳುತ್ತವೆ. ಒಂದು ವೇಳೆ 7 ದಿನಗಳ ನಂತರವೂ ನಿಮಗೆ 140 ಸರಣಿಯಿಂದ ನಿಯಮಬಾಹಿರವಾಗಿ ಸ್ಪ್ಯಾಮ್ ಕರೆಗಳು ಬರುತ್ತಿದ್ದರೆ, ಅದೇ ಆ್ಯಪ್ ಮೂಲಕ ಇತ್ತೀಚಿನ ಕರೆಗಳ ಪಟ್ಟಿಯನ್ನು ಆಯ್ದುಕೊಂಡು 'ವರದಿ' (Report) ಮಾಡುವ ಮೂಲಕ ನೇರವಾಗಿ ಟ್ರಾಯ್‌ಗೆ ಔಪಚಾರಿಕ ದೂರು ಸಲ್ಲಿಸಬಹುದಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Gold: ಆ ರಾತ್ರಿಯ ವಿಚಿತ್ರ ಕನಸು! 12 ದಿನಗಳ ನಂತರ ತೆರೆದುಕೊಂಡಿತು ಆ ರಹಸ್ಯ ಕೋಟಿ ನಿಧಿ! ಹೇಗಿತ್ತು ಆ ವಿಚಿತ್ರ ರಹಸ್ಯ ಪಯಣ?
ಕೆಲಸದಲ್ಲಿ ಶೀಘ್ರದಲ್ಲಿ ಪ್ರೊಮೋಷನ್ ಬೇಕೆ? ಚಾಣಕ್ಯ ನೀತಿಯ ಈ ನಿಯಮ ಇವತ್ತೆ ತಿಳಿಯಿರಿ