ದೇಶದಲ್ಲೇ ಬೆಂಗಳೂರಲ್ಲಿ ಮಾತ್ರ ತೆರಿಗೆ ಸಂಗ್ರಹ ಏರಿಕೆ!

By Kannadaprabha News  |  First Published Sep 17, 2020, 7:20 AM IST

ದೇಶದಲ್ಲೇ ಬೆಂಗಳೂರಲ್ಲಿ ಮಾತ್ರ ತೆರಿಗೆ ಸಂಗ್ರಹ ಏರಿಕೆ!| ದೇಶದಲ್ಲಿ ತೆರಿಗೆ ಸಂಗ್ರಹ ಶೇ.22.5 ಕುಸಿತ| ಬೆಂಗಳೂರಿನಲ್ಲಿ ಶೇ.9.9ರಷ್ಟುಏರಿಕೆ


ಮುಂಬೈ(ಸೆ.17): ಕೊರೋನಾ ವೈರಸ್‌ ತಡೆಯಲು ಜಾರಿಗೊಳಿಸಿದ್ದ ಲಾಕ್‌ಡೌನ್‌ನ ಆರ್ಥಿಕ ದುಷ್ಪರಿಣಾಮ ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲೂ ಮುಂದುವರೆದಿದ್ದು, ದೇಶದಲ್ಲಿ ತೆರಿಗೆ ಸಂಗ್ರಹ ಒಟ್ಟಾರೆ ಶೇ.22.5ರಷ್ಟುಕುಸಿತವಾಗಿದೆ. ದೇಶದ ಎಲ್ಲಾ ಮಹಾನಗರಗಳಲ್ಲೂ ತೆರಿಗೆ ಸಂಗ್ರಹ ಕಳೆದ ವರ್ಷದ ಎರಡನೇ ತ್ರೈಮಾಸಿಕಕ್ಕಿಂತ ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕುಸಿತ ಕಂಡಿದ್ದರೆ, ಬೆಂಗಳೂರಿನಲ್ಲಿ ಮಾತ್ರ ಏರಿಕೆಯಾಗಿದೆ.

2019ರ ಎರಡನೇ ತ್ರೈಮಾಸಿಕದಲ್ಲಿ ಸೆ.15ರವರೆಗೆ ಕೇಂದ್ರ ಸರ್ಕಾರಕ್ಕೆ ಒಟ್ಟಾರೆ 3,27,320.5 ಕೋಟಿ ರು. ತೆರಿಗೆ ಸಂಗ್ರಹವಾಗಿತ್ತು. ಆದರೆ, ಈ ವರ್ಷ ಇದೇ ಅವಧಿಗೆ ವೈಯಕ್ತಿಕ ಆದಾಯ ತೆರಿಗೆ, ಕಂಪನಿಗಳ ತೆರಿಗೆ ಹಾಗೂ ಮುಂಗಡ ತೆರಿಗೆ ಸೇರಿದಂತೆ ಒಟ್ಟಾರೆ ತೆರಿಗೆ ಸಂಗ್ರಹ ಶೇ.22.5ರಷ್ಟುಕುಸಿದು, 2,53,532.3 ಕೋಟಿ ರು. ಸಂಗ್ರಹವಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ಹೇಳಿವೆ.

Latest Videos

undefined

ಮುಂಬೈ ಮತ್ತು ದೆಹಲಿಯಲ್ಲಿ ತೆರಿಗೆ ಸಂಗ್ರಹ ತಲಾ ಶೇ.13.9ರಷ್ಟುಕುಸಿದಿದೆ. ಕೊಚ್ಚಿಯಲ್ಲಿ ಶೇ.49ರಷ್ಟುಕಡಿಮೆಯಾಗಿದೆ. ದೇಶದಲ್ಲಿ ಅತಿಹೆಚ್ಚು ತೆರಿಗೆ ಸಂಗ್ರಹವಾಗುವ ಮಹಾನಗರಗಳ ಪೈಕಿ ಬೆಂಗಳೂರಿನಲ್ಲಿ ಮಾತ್ರ ಕಳೆದ ವರ್ಷದ ಇದೇ ಅವಧಿಗಿಂತ ಶೇ.9.9ರಷ್ಟುತೆರಿಗೆ ಸಂಗ್ರಹ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಕಳೆದ ವರ್ಷದ ಈ ಅವಧಿಯಲ್ಲಿ 36,986 ಕೋಟಿ ರು. ತೆರಿಗೆ ಸಂಗ್ರಹವಾಗಿದ್ದರೆ, ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ 40,665.3 ಕೋಟಿ ರು. ತೆರಿಗೆ ಸಂಗ್ರಹವಾಗಿದೆ.

ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ.31ರಷ್ಟುತೆರಿಗೆ ಸಂಗ್ರಹ ಕುಸಿತವಾಗಿತ್ತು. ಆಗ ಲಾಕ್‌ಡೌನ್‌ ಜಾರಿಯಲ್ಲಿತ್ತು. ನಂತರ ಲಾಕ್‌ಡೌನ್‌ ತೆರವಾದ ಮೇಲೆ ಎರಡನೇ ತ್ರೈಮಾಸಿಕದಲ್ಲಿ ಪರಿಸ್ಥಿತಿ ಸುಧಾರಿಸಬಹುದು ಎನ್ನಲಾಗಿತ್ತು. ಆದರೆ, ಎರಡನೇ ತ್ರೈಮಾಸಿಕದಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗಿಲ್ಲ.

click me!