ಚಹಾ ಭಾರತದ ಜನಪ್ರಿಯ ಪಾನೀಯ. ಬಹುತೇಕ ಭಾರತೀಯರ ದಿನ ಪ್ರಾರಂಭವಾಗೋದೆ ಚಹಾದಿಂದ. ಹೀಗಿರುವಾಗ ಕಳೆದ ಕೆಲವು ವರ್ಷಗಳಲ್ಲಿ ದೇಶದಲ್ಲಿ ಚಹಾವನ್ನೇ ಆಧಾರವಾಗಿಸಿಕೊಂಡು ಅನೇಕ ಸ್ಟಾರ್ಟ್ ಅಪ್ ಗಳು ಹುಟ್ಟಿಕೊಂಡಿವೆ. ಅಂಥ 6 ಟಾಪ್ ಸ್ಟಾರ್ಟ್ ಅಪ್ ಗಳ ಮಾಹಿತಿ ಇಲ್ಲಿದೆ.
Business Desk:ಚಹಾ ಇಷ್ಟಪಡದವರು ಯಾರಿದ್ದಾರೆ ಹೇಳಿ? ಭಾರತೀಯರಿಗೂ ಚಹಾಕ್ಕೂ ಒಂಥರ ಬಿಡಿಸಲಾಗದ ನಂಟು. ಬಹುತೇಕ ಭಾರತೀಯರಿಗೆ ಬೆಳಗ್ಗೆ ಒಂದು ಲೋಟ ಚಹಾ ಕುಡಿದ ಮೇಲೇನೆ ನಿದ್ದೆಯ ಮಂಪರು ಮರೆಯಾಗಿ ಹೊಸ ಉತ್ಸಾಹದಿಂದ ದಿನದ ಆರಂಭವಾಗುವುದು. ಭಾರತೀಯ ಚಹಾ ಮಂಡಳಿ ನಡೆಸಿರುವ ಸಮೀಕ್ಷೆಯ ಪ್ರಕಾರ ದೇಶದ ಒಟ್ಟು ಶೇ.88ರಷ್ಟು ಮನೆಗಳಲ್ಲಿ ಚಹಾದ ಸೇವನೆ ಮಾಡುತ್ತಾರೆ. ದೇಶದ ಒಟ್ಟು ಜನಸಂಖ್ಯೆಯ ಅಂದಾಜು ಶೇ.64ರಷ್ಟು ಮಂದಿ ಚಹಾ ಕುಡಿಯುತ್ತಾರೆ. ಇನ್ನು ಭಾರತದಲ್ಲಿ ಟೀ ಶಾಪ್ ಗಳ ಮೂಲಕವೇ ಜೀವನ ಕಟ್ಟಿಕೊಂಡವರ ಸಂಖ್ಯೆಯೂ ದೊಡ್ಡದಿದೆ. ರಸ್ತೆಬದಿಯಲ್ಲಿನ ಪುಟ್ಟ ಅಂಗಡಿಯಿಂದ ಹಿಡಿದು ಐಷಾರಾಮಿ ಟೀ ಶಾಪ್ ಗಳ ತನಕ ಭಾರತದಲ್ಲಿ ಚಹಾ ಮಾರಾಟ ಮಾಡುವವರ ಸಂಖ್ಯೆ ದೊಡ್ಡದಿದೆ. ಚಹಾದಲ್ಲೂ ಕೂಡ ವೈವಿಧ್ಯತೆಯನ್ನು ಪರಿಚಯಿಸುವ ಮೂಲಕ ದೊಡ್ಡ ಪ್ರಮಾಣದಲ್ಲಿ ಗ್ರಾಹಕರನ್ನು ಸೆಳೆಯುವ ಕೆಲಸವೂ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಚಹಾ ಆಧಾರಿತ ಸ್ಟಾರ್ಟ್ ಅಪ್ ಗಳ ಸಂಖ್ಯೆ ಕೂಡ ಹೆಚ್ಚಿದೆ. ಹಾಗಾದ್ರೆ ದೇಶದಲ್ಲಿನ ಜನಪ್ರಿಯ ಟೀ ಆಧಾರಿತ ಸ್ಟಾರ್ಟ್ ಅಪ್ ಗಳು ಯಾವುವು? ನೋಡೋಣ ಬನ್ನಿ.
1. ಎಂಬಿಎ ಚಾಯ್ ವಾಲಾ
ಪ್ರಧಾನಿ ನರೇಂದ್ರ ಮೋದಿ ಅವರ ಬಳಿಕ ಭಾರತದಲ್ಲಿ ಅತ್ಯಂತ ಜನಪ್ರಿಯ ಚಾಯ್ ವಾಲಾ ಅಂದ್ರೆ ಅದು ಪ್ರಫುಲ್ ಬಿಲ್ಲೋರ್. ಇವರ ಸ್ಫೂರ್ತಿದಾಯಕ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ 'ಎಂಬಿಎ ಚಾಯ್ ವಾಲಾ' ಎಂದೇ ಜನಪ್ರಿಯತೆ ಗಳಿಸಿದ್ದಾರೆ. ಕೇವಲ 22 ವರ್ಷದ ಇಂದೋರ್ ಮೂಲದ ಉದ್ಯಮಿ ಬಿಲ್ಲೋರ್, ಎಂಬಿಎ ಡ್ರಾಪ್ ಔಟ್. ಆದರೆ,ಇಂದು ಎಂಬಿಎ ಪದವೀಧರರಿಗೆ ಉದ್ಯೋಗ ನೀಡುವಷ್ಟು ಮಟ್ಟಿಗೆ ಬೆಳೆದು ನಿಂತಿದ್ದಾರೆ. ಎಂಬಿಎ ಪದವಿ ಪಡೆಯಲು ಸಾಧ್ಯವಾಗದಿದ್ರೂ ಭಾರತದಲ್ಲಿ ಅತ್ಯುನ್ನತ ಎಂಬಿಎ ಪದವೀಧರರನ್ನು ಸೃಷ್ಟಿಸುವ ಐಐಎಂ ಅಹಮದಾಬಾದ್ ಮುಂಭಾಗದಲ್ಲೇ 2017ರಲ್ಲಿ ಚಹಾ ಅಂಗಡಿ ತೆರೆದರು. ಇಲ್ಲಿಂದ ಮುಂದೆ ಬಿಲ್ಲೋರ್ ಹಿಂತಿರುಗಿ ನೋಡಿಯೇ ಇಲ್ಲ. ಇಂದು ಅವರು ದೇಶಾದ್ಯಂತ 'ಎಂಬಿಎ ಚಾಯ್ ವಾಲಾ' ಎಂಬ ಹೆಸರಿನ ಅನೇಕ ಫುಡ್ ಜಾಯಿಂಟ್ಸ್ ಹೊಂದಿದ್ದಾರೆ. 2019-20ನೇ ಆರ್ಥಿಕ ಸಾಲಿನಲ್ಲಿ 'ಎಂಬಿಎ ಚಾಯ್ ವಾಲಾ' ಸಂಸ್ಥೆ ವಹಿವಾಟು 3 ಕೋಟಿ ರೂ. ಇನ್ನು ಈ ಸಂಸ್ಥೆ ಭೋಪಾಲ್, ಶ್ರೀನಗರ, ಸೂರತ್ ಹಾಗೂ ದೆಹಲಿ ಸೇರಿದಂತೆ 100 ನಗರಗಳಲ್ಲಿ ಟೀ ಶಾಪ್ ಗಳನ್ನು ಹೊಂದಿದೆ.
undefined
ಅಮೆರಿಕದಲ್ಲಿ ಹೋಟೆಲ್ ಉದ್ಯಮ ಪ್ರಾರಂಭಿಸಿ ಯಶಸ್ವಿಯಾದ ಭಾರತೀಯ ಮಹಿಳೆ; ಯಾರೀಕೆ ಆಯೇಷಾ ಥಾಪರ್?
2.ಚಾಯ್ ಪಾಯಿಂಟ್
ಈ ಸಂಸ್ಥೆಯನ್ನು 2010ರಲ್ಲಿ ಅಮುಲೀಕ್ ಸಿಂಗ್ ಬಿರ್ಜಾಲ್ ಸ್ಥಾಪಿಸಿದರು ಇದು ಮೌಂಟೇನ್ ಟ್ರೈಲ್ ಫುಡ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಭಾಗವಾಗಿದ್ದು, ಭಾರತದ ಮೊದಲ ಟೀ ಸ್ಟಾರ್ಟ್ ಅಪ್ ಆಗಿದೆ. ತಾಜಾ ಸಾಮಗ್ರಿಗಳ ಜೊತೆಗೆ ಬಿಸಿಯಾದ ಚಹಾ ಅನ್ನು ವೃತ್ತಿಪರರಿಗೆ ಈ ಸಂಸ್ಥೆ ಒದಗಿಸುತ್ತದೆ. ಪ್ರತಿದಿನ ಚಾಯ್ ಪಾಯಿಂಟ್ 300,000 ಕಪ್ ಚಹಾ ಮಾರಾಟ ಮಾಡುತ್ತದೆ. ದೇಶಾದ್ಯಂತ ಈ ಸಂಸ್ಥೆ 100ಕ್ಕೂ ಅಧಿಕ ಔಟ್ ಲೆಟ್ ಗಳನ್ನು ಹೊಂದಿದೆ. ಅಮುಲೀಕ್ ಉದ್ಯಮ 2018ರಲ್ಲಿ 88 ಕೋಟಿ ರೂ. ಇದ್ದು, 2020ನೇ ಹಣಕಾಸಿನ ಸಾಲಿನಲ್ಲಿ 190 ಕೋಟಿ ರೂ.ಗೆ ಏರಿಕೆಯಾಗಿದೆ.
3.ಚಾಯೋಸ್
ಈ ಸಂಸ್ಥೆಯನ್ನು ನಿತಿನ್ ಸಲುಜಾ ಹಾಗೂ ರಾಘವ್ ವರ್ಮ ಎಂಬ ಇಬ್ಬರು ಐಐಟಿ ಪದವೀಧರರು ಸ್ಥಾಪಿಸಿದ್ದರು. ತಾಜಾ, ಗ್ರಾಹಕರ ಆದ್ಯತೆಗೆ ಅನುಸಾರವಾಗಿ ಚಹಾವನ್ನು 2012ರಿಂದಲೂ ಮಾರಾಟ ಮಾಡುತ್ತ ಬಂದಿದೆ. ಈ ಕಂಪನಿ ತನ್ನ ಮೊದಲ ಶಾಖೆಯನ್ನು ಗುರ್ಗಾಂವ್ ಸೈಬರ್ ಸಿಟಿಯಲ್ಲಿ ತೆರೆದಿದೆ. ಪ್ರಸ್ತುತ ಇವರು 6 ನಗರಗಳಾದ್ಯಂತ 190 ಮಳಿಗೆಗಳನ್ನು ಹೊಂದಿದ್ದಾರೆ. 2022ರ ಅಂತ್ಯದೊಳಗೆ ಮತ್ತೆ 100 ನಗರಗಳನ್ನು ಇದಕ್ಕೆ ಸೇರ್ಪಡೆಗೊಳಿಸುವ ಯೋಜನೆ ಹೊಂದಿದ್ದಾರೆ. ಈ ಸಂಸ್ಥೆಯಲ್ಲಿ ಗ್ರಾಹಕರಿಗೆ ಆಯ್ಕೆ ಮಾಡಿಕೊಳ್ಳಲು 80,000+ಆದ್ಯತೆಗಳನ್ನು ನೀಡಲಾಗಿದೆ. ಇದರಲ್ಲಿ ಗ್ರೀನ್ ಚಿಲ್ಲಿ ಟೀ, ಆಮ್ ಪಾಪಡ್ ಟೀ, ಚಾಟ್ ಹಾಗೂ ಫುಡ್ ಸೇರಿದಂತೆ ಕೆಲವು ವಿಶಿಷ್ಟ ರೆಸಿಪಿಗಳಿವೆ. 2020ನೇ ಆರ್ಥಿಕ ಸಾಲಿನಲ್ಲಿ ಚಾಯೋಸ್ ಆದಾಯ ಅಂದಾಜು ಒಂದು ಸಾವಿರ ಕೋಟಿ ರೂ.
4.ಚಾಯ್ ಸುಟ್ಟಾ ಬಾರ್
ಅನುಭವ್ ದುಬೆ ತನ್ನ ಇಬ್ಬರು ಸ್ನೇಹಿತರಾದ ಆನಂದ್ ನಾಯಕ್ ಹಾಗೂ ರಾಹುಲ್ ಪಟಿದರ್ ಜೊತೆ ಸೇರಿ 2016ರಲ್ಲಿ ಚಾಯ್ ಸುಟ್ಟಾ ಬಾರ್ ಸ್ಥಾಪಿಸಿದರು. ಇಂದೋರ್ ನಲ್ಲಿ ಹುಡುಗೀರ ಹಾಸ್ಟೆಲ್ ಹೊರಭಾಗದಲ್ಲಿ ಈ ಟೀ ಶಾಪ್ ಅನ್ನು ಮೊದಲ ಪ್ರಾರಂಭಿಸಲಾಯಿತು. ಇಂದು ಈ ಸಂಸ್ಥೆ ದೇಶಾದ್ಯಂತ 190 ನಗರಗಳಲ್ಲಿ 400ಕ್ಕೂ ಅಧಿಕ ಶಾಖೆಗಳನ್ನು ಹೊಂದಿದೆ. ಇನ್ನು ವಿದೇಶಗಳಲ್ಲಿ ಕೂಡ 5 ಔಟ್ ಲೆಟ್ ಗಳನ್ನು ಹೊಂದಿದೆ. ಪ್ರತಿದಿನ ಈ ಸಂಸ್ಥೆ 4.5 ಲಕ್ಷಕ್ಕೂ ಅಧಿಕ ಕುಲ್ಹದ್ ಟೀ ಮಾರಾಟ ಮಾಡುತ್ತಿದೆ. ಈ ಸಂಸ್ಥೆಯ ವಹಿವಾಟು 100 ಕೋಟಿ ರೂ.
ಪತಂಜಲಿ ಸಂಸ್ಥೆ ಸ್ಥಾಪಿಸಲು ಬಾಬಾ ರಾಮ್ ದೇವ್ ಗೆ ಸಾಲ ನೀಡಿದ ಈಕೆ, ಇಂದು ಸ್ಕಾಟ್ಲೆಂಡ್ ನ ಶ್ರೀಮಂತ ಮಹಿಳೆ!
5.ಟೀ ಬಾಕ್ಸ್
ಕೌಶಲ್ ದುಗರ್ ಎಂಬುವರು 2012ರಲ್ಲಿ ಟೀ ಬಾಕ್ಸ್ ಸ್ಥಾಪಿಸಿದರು. ಇದು ಇಂದು ಜಗತ್ತಿನಾದ್ಯಂತ ಚಹಾ ಪ್ರಿಯರಿಗೆ ಆಹ್ಲಾದಕರ ಟೀಗಳನ್ನು ಪೂರೈಕೆ ಮಾಡುತ್ತಿದೆ. ಟೀಬಾಕ್ಸ್ ಪ್ರೀಮಿಯಂ ಟೀ ಬ್ರ್ಯಾಂಡ್ ಆಗಿದ್ದು, ಅಮೆರಿಕ, ಭಾರತ ಹಾಗೂ ರಷ್ಯಾದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಭಾರತದ ಜನಪ್ರಿಯ ಉದ್ಯ,ಮಿ ರತನ್ ಟಾಟಾ ಟೀಬಾಕ್ಸ್ ನಲ್ಲಿ ಹೂಡಿಕೆ ಮಾಡಿದ್ದಾರೆ ಕೂಡ. ಈ ಸಂಸ್ಥೆಯಲ್ಲಿ ಇನ್ನೂ ಅನೇಕ ಬೃಹತ್ ಕಂಪನಿಗಳು ಹಾಗೂ ಹೂಡಿಕೆದಾರರು ಹೂಡಿಕೆ ಮಾಡಿದ್ದಾರೆ.
6.ಚಾಯಿ ಥೆಲಾ
2014ರಲ್ಲಿ ಪಂಕಜ್ ಜಡ್ಜ ಎಂಬುವರು ಚಾಯಿ ಥೆಲಾ ಸಂಸ್ಥೆ ಸ್ಥಾಪಿಸಿದರು. ಈ ಸಂಸ್ಥೆ ಆರೋಗ್ಯಕರ ಹಾಗೂ ಹೋಮ್ ಮೇಡ್ ಟೀಗಳನ್ನು ಕೆಲವು ತಿನಿಸುಗಳೊಂದಿಗೆ ಸರ್ವ್ ಮಾಡುತ್ತಿದೆ. 9 ರಾಜ್ಯಗಳಲ್ಲಿ ಈ ಸಂಸ್ಥೆ ಗ್ರಾಹಕರನ್ನು ಹೊಂದಿದ್ದು, ದೇಶಾದ್ಯಂತ 35 ಶಾಖೆಗಳನ್ನು ಹೊಂದಿದೆ.