ಪತಂಜಲಿ ಸಂಸ್ಥೆ ಸ್ಥಾಪಿಸಲು ಬಾಬಾ ರಾಮ್ ದೇವ್ ಗೆ ಸಾಲ ನೀಡಿದ ಈಕೆ, ಇಂದು ಸ್ಕಾಟ್ಲೆಂಡ್ ನ ಶ್ರೀಮಂತ ಮಹಿಳೆ!

By Suvarna News  |  First Published Jun 19, 2023, 1:01 PM IST

ಪತಂಜಲಿ ಸಂಸ್ಥೆ ಇಂದು ಜನಪ್ರಿಯ ಬ್ರ್ಯಾಂಡ್ ಆಗಿ ರೂಪುಗೊಂಡಿದೆ.  40,000 ಕೋಟಿ ರೂ.ಗಿಂತಲೂ ಅಧಿಕ ವಹಿವಾಟು ನಡೆಸುವ ಈ ಸಂಸ್ಥೆ ಪ್ರಾರಂಭಿಸಲು ಬಾಬಾ ರಾಮ್ ದೇವ್ ಸಾಲ ಪಡೆದಿದ್ದರು. ಹಾಗೇ ಸಾಲ ನೀಡಿದವರಲ್ಲಿ ಪ್ರಮುಖರು ಭಾರತೀಯ ಮೂಲದ ಇಂಗ್ಲೆಂಡ್ ನಲ್ಲಿ ಉದ್ಯಮಿಯಾಗಿರುವ ಸುನೀತಾ ಹಾಗೂ ಅವರ ಪತಿ ಸರ್ವಾನ್ ಸ್ಯಾಮ್ ಪೊದ್ದರ್. ಈಕೆ ಬಾಬಾ ರಾಮ್ ದೇವ್ ಅವರಿಗೆ ಸ್ಕಾಟ್ಲೆಂಡ್ ನಲ್ಲಿ ದ್ವೀಪವೊಂದನ್ನು ಖರೀದಿಸಿ, ಉಡುಗೊರೆಯಾಗಿ ನೀಡಿದ್ದರು.


Business Desk: ಪತಂಜಲಿ ಸಂಸ್ಥೆ ಇಂದು ಅಂತಾರಾಷ್ಟ್ರೀಯ ಮಟ್ಟದ ಎಫ್ ಎಂಸಿಜೆ ಕಂಪನಿಗಳಿಗೆ ಪೈಪೋಟಿ ನೀಡುವಷ್ಟರ ಮಟ್ಟಕ್ಕೆ ಬೆಳೆದು ನಿಂತಿದೆ. ಈ ಸಂಸ್ಥೆಯನ್ನು ಜನಪ್ರಿಯ ಬ್ರ್ಯಾಂಡ್ ಆಗಿ ರೂಪಿಸುವಲ್ಲಿ ಬಾಬಾ ರಾಮ್ ದೇವ್ ಹಾಗೂ ಆಚಾರ್ಯ ಬಾಲಕೃಷ್ಣ ಅವರ ಶ್ರಮ ಸಾಕಷ್ಟಿದೆ. ಈ ಇಬ್ಬರೂ ಈ ಸಂಸ್ಥೆಗೆ ಬಂಡವಾಳ ಹೂಡಲು ಸಾಲದ ಮೊರೆ ಹೋಗಿದ್ದರು. ಆ ಸಮಯದಲ್ಲಿ ಇವರಿಬ್ಬರ ಬಳಿ ಬ್ಯಾಂಕ್ ಖಾತೆಯಿಲ್ಲದ ಕಾರಣ ವೈಯಕ್ತಿಕ ಸಾಲ ಪಡೆದು 2006ರಲ್ಲಿ ಪತಂಜಲಿ ಸಂಸ್ಥೆಯನ್ನು ಸ್ಥಾಪಿಸಿದ್ದರು. ಈ ಸಮಯದಲ್ಲಿ ಇವರಿಗೆ ಸಾಲ ನೀಡಿ ನೆರವಾದವರು ಅವರ ಅನುಯಾಯಿಗಳಾಗಿದ್ದ ಸುನೀತಾ ಹಾಗೂ ಸರ್ವಾನ್ ಸ್ಯಾಮ್ ಪೊದ್ದರ್. 2011ರ ವರದಿ ಅನ್ವಯ ಸರ್ವಾನ್ ಸ್ಯಾಮ್ ಪೊದ್ದರ್ ಹಾಗೂ ಅವರ ಪತ್ನಿ ಸುನೀತಾ ಸ್ಕಾಟ್ಲೆಂಡ್ ನಿವಾಸಿಗಳು. ಇವರು ಎರಡು ಮಿಲಿಯನ್ ಪೌಂಡ್ ಗೆ 'ಲಿಟ್ಲ ಕುಂಬ್ರೆ' ಎಂಬ ದ್ವೀಪ ಖರೀದಿಸಿ, ಅದನ್ನು ಬಾಬಾ ರಾಮ್ ದೇವ್ ಅವರಿಗೆ  2009ರಲ್ಲಿ ಉಡುಗೊರೆಯಾಗಿ ನೀಡಿದ್ದರು. ಇನ್ನು 2011ರಲ್ಲಿ ಇವರಿಬ್ಬರು ಪತಂಜಲಿ ಸಂಸ್ಥೆಯಲ್ಲಿ ತಲಾ 12.46 ಲಕ್ಷ ಷೇರುಗಳನ್ನು ಹೊಂದಿದ್ದರು. ಅಂದರೆ ಸಂಸ್ಥೆಯಲ್ಲಿ ಶೇ.7.2ರಷ್ಟು ಪಾಲು ಹೊಂದಿದ್ದರು. ಇವರಿಬ್ಬರು ಪಂಜಲಿಯಲ್ಲಿ ಎರಡನೇ ಅತೀದೊಡ್ಡ ಪಾಲುದಾರರಾಗಿದ್ದಾರೆ.

ಪತಂಜಲಿ ಆಯುರ್ವೇದದಲ್ಲಿ ಅತೀಹೆಚ್ಚು ಷೇರುಗಳನ್ನು ಆಚಾರ್ಯ ಬಾಲಕೃಷ್ಣ ಹೊಂದಿದ್ದಾರೆ. ಇವರು ಕಂಪನಿಯಲ್ಲಿ ಒಟ್ಟು ಶೇ.92ರಷ್ಟು ಪಾಲು ಹೊಂದಿದ್ದಾರೆ. ಆದರೆ, ಪ್ರಸ್ತುತ ಸರ್ವಾನ್  ಸ್ಯಾಮ್ ಪೊದ್ದರ್ ಹಾಗೂ ಅವರ ಪತ್ನಿ ಸುನೀತಾ ಪತಂಜಲಿಯಲ್ಲಿ ಷೇರುಗಳನ್ನು ಹೊಂದಿದ್ದಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಮಾಹಿತಿಯಿಲ್ಲ. ಆದರೆ, ಸಂಸ್ಥೆ ಪ್ರಾರಂಭಿಸುವಾಗ ಹಣಕಾಸಿನ ನೆರವು ನೀಡಿದವರಲ್ಲಿಇವರಿಬ್ಬರು ಪ್ರಮುಖರು.

Tap to resize

Latest Videos

ಅಮೆರಿಕದಲ್ಲಿ ಹೋಟೆಲ್ ಉದ್ಯಮ ಪ್ರಾರಂಭಿಸಿ ಯಶಸ್ವಿಯಾದ ಭಾರತೀಯ ಮಹಿಳೆ; ಯಾರೀಕೆ ಆಯೇಷಾ ಥಾಪರ್?

ಇನ್ನು ಸುನೀತಾ ಅವರು ಬಾಬಾ ರಾಮ್ ದೇವ್ ಅವರ ಅನುಯಾಯಿಯಾಗಲು ಒಂದು ಬಲವಾದ ಕಾರಣವಿದೆ. ಒಂದು ಸಮಯದಲ್ಲಿ ಸುನೀತಾ ಅವರ ತೂಕ ತುಂಬಾ ಹೆಚ್ಚಾಗಿತ್ತು. ಯಾವುದೇ ಡಯಟ್, ವ್ಯಾಯಾಮಗಳಿಂದಲೂ ತೂಕ ಕಳೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಕೊನೆಗೆ ಅವರು ಬಾಬಾ ರಾಮ್ ದೇವ್ ಅವರ ಯೋಗ ಅಭ್ಯಾಸಿಸಲು ಪ್ರಾರಂಭಿಸಿದರು. ಇದರಿಂದ ಸುನೀತಾ ಅವರ ದೇಹದ ತೂಕದಲ್ಲಿ ಗಣನೀಯ ಇಳಿಕೆ ಆಗಿತ್ತು. ಆ ಬಳಿಕ ಅವರು ಬಾಬಾ ರಾಮ್ ದೇವ್ ಅವರ ಅನುಯಾಯಿಯಾದರು. ಅಲ್ಲದೆ, ತಮ್ಮ ಪತಿ ಬಳಿ ದ್ವೀಪವೊಂದನ್ನು ಖರೀದಿಸಿ, ಬಾಬಾ ರಾಮ್ ದೇವ್ ಅವರಿಗೆ ಉಡುಗೊರೆಯಾಗಿ ನೀಡುವಂತೆ ಕೋರಿದ್ದರು.  ಸುನೀತಾ ಅವರು ಇಂಗ್ಲೆಂಡ್ ನಲ್ಲಿರುವ ಪತಂಜಲಿ ಪೀಠ ಟ್ರಸ್ಟ್ ನ ಟ್ರಸ್ಟಿ ಕೂಡ ಹೌದು. 

ಸರ್ವಾನ್ ಬಿಹಾರ ಮೂಲದವರು. ಅವರ ತಂದೆ ಗ್ಲಾಸ್ಗೋನಲ್ಲಿ ವೈದ್ಯರಾಗಿದ್ದರು. ಸ್ಯಾಮ್ ಅವರಿಗೆ ಕೇವಲ 4 ವರ್ಷವಾಗಿರುವಾಗ ಅವರು ಗ್ಲಾಸ್ಗೋಗೆ ತೆರಳಿದ್ದರು. ಇಂಜಿನಿಯರಿಂಗ್ ಪದವಿ ಪಡೆದಿರುವ ಸರ್ವಾನ್, ಮುಂಬೈ ಮೂಲದ ಆದರೆ, ಕಠ್ಮಂಡುವಿನಲ್ಲಿ ಬೆಳೆದಿರುವ ಸುನೀತಾ ಅವರನ್ನು ವಿವಾಹವಾಗುತ್ತಾರೆ. ಕೇವಲ 18ನೇ ವಯಸ್ಸಿನಲ್ಲಿ ಸುನೀತಾ ಅವರ ವಿವಾಹ ಸರ್ವಾನ್ ಅವರೊಂದಿಗೆ ನಡೆಯುತ್ತದೆ. ಆ ಬಳಿಕ ಆಕೆ ಪತಿಯೊಂದಿಗೆ ಗ್ಲಾಸ್ಗೋಗೆ ಬಂದು ನೆಲೆಸುತ್ತಾರೆ. 1980ರಲ್ಲಿ ಅವರು ಹೋಮ್ ಕೇರ್ ಉದ್ಯಮವನ್ನು ಖರೀದಿಸುತ್ತಾರೆ. 1982ರಲ್ಲಿ ಅವರು ಈ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇನ್ನು ಸುನೀತಾ ಗ್ಯಾಸ್ ಸ್ಟೇಷನ್ ಅನ್ನು ನಡೆಸುತ್ತಿದ್ದರು. ಆ ಬಳಿಕ ಆಕೆ ಪತಿಯ ಉದ್ಯಮಕ್ಕೆ ಸೇರ್ಪಡೆಗೊಳ್ಳುತ್ತಾರೆ. ಆ ಬಳಿಕ ಅವರ ಉದ್ಯಮ ಯಶಸ್ವಿಯಾಗುತ್ತದೆ ಕೂಡ. 

ಯೋಗ ಶಿಕ್ಷಕನಿಂದ ಬಿಲಿಯನೇರ್ ಉದ್ಯಮಿ ತನಕ; ಪತಂಜಲಿ ಸಿಇಒ ಆಚಾರ್ಯ ಬಾಲಕೃಷ್ಣ ಅವರ ಯಶಸ್ಸಿನ ಹಾದಿ ಹೀಗಿತ್ತು...

ಪ್ರಸ್ತುತ ಸುನೀತಾ ಅವರು ಓಕ್ ಮಿನಿಸ್ಟರ್ ಹೆಲ್ತ್ ಕೇರ್ ಸ್ಥಾಪಕರು ಹಾಗೂ ಸಿಇಒ ಆಗಿದ್ದಾರೆ. ಇದು ಪ್ರಸ್ತುತ ಸ್ಕಾಟ್ಲೆಂಡ್ ನ ಜನಪ್ರಿಯ ಹೋಮ್ ಕೇರ್ ಸೇವಾ ಕೇಂದ್ರವಾಗಿದೆ. ಸುನೀತಾ ಅವರು ಪ್ರಸ್ತುತ  ಗ್ಲಾಸ್ಗೋನ ಶ್ರೀಮಂತ ಮಹಿಳೆ. ಅವರು ಯೋಗ ತರಗತಿಗಳನ್ನು ಕೂಡ ನಡೆಸುತ್ತಾರೆ. ಯೋಗ ಶಿಕ್ಷಕರಿಗೆ ಕೂಡ ಅವರು ತರಬೇತಿ ನೀಡುತ್ತಾರೆ.  

ಪತಂಜಲಿ ಸಂಸ್ಥೆ ಕಳೆದ ಆರ್ಥಿಕ ಸಾಲಿನಲ್ಲಿ 886.44 ಕೋಟಿ ರೂ. ಲಾಭ ಗಳಿಸಿತ್ತು. ಕಂಪನಿಯ ವಹಿವಾಟು 40,000 ಕೋಟಿ ರೂ.ಗಿಂತಲೂ ಹೆಚ್ಚಿದೆ. 

click me!