Tomato Price Hike In India: ಮೇ ತಿಂಗಳ ಕೊನೆಯ ವೇಳೆಗೆ ದೇಶದಲ್ಲಿ ಕೆಜಿಗೆ ಐದು ರೂಪಾಯಿಯಂತೆ ಮಾರಾಟವಾಗುತ್ತಿದ್ದ ಟೊಮ್ಯಾಟೋ ಬೆಲೆಯಲ್ಲಿ ಒಂದೇ ತಿಂಗಳಲ್ಲಿ ದಾಖಲೆಯ ಶೇ. 1900ರಷ್ಟು ಏರಿಕೆಯಾಗಿದೆ. ಇಷ್ಟು ದೊಡ್ಡ ಪ್ರಮಾಣದ ಏರಿಕೆಗೆ ಏನು ಕಾರಣ ಎನ್ನುವುದರ ವಿವರ ಇಲ್ಲಿದೆ.
ನವದೆಹಲಿ (ಜೂ.26): ದಕ್ಷಿಣ ಭಾರತ ಮಾತ್ರವಲ್ಲ ಇಡೀ ದೇಶದಲ್ಲಿ ಟೊಮ್ಯಾಟೋ ಬೆಲೆಯಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿದೆ. ದೇಶದ ಬಹುತೇಕ ಮಾರುಕಟ್ಟೆಗಳಲ್ಲಿ ಸೋಮವಾರ ಒಂದು ಕೆಜಿ ಟೊಮ್ಯಾಟೋ ಬೆಲೆ 100 ರೂಪಾಯಿ ದಾಟಿದೆ. ಬೆಂಗಳೂರಿನ ಕೆಲವೊಂದು ಮಳಿಗೆಯಲ್ಲಿ ಇದರ ಬೆಲೆ 110 ರೂಪಾಯಿವರೆಗೂ ತಲುಪಿದೆ. ಇನ್ನು ವೋಲ್‌ಸೇಲ್ ಮಾರುಕಟ್ಟೆಯಲ್ಲಿಯೇ ಒಂದು ಕೆಜಿ ಟೊಮ್ಯಾಟೋ 65-70 ರೂಪಾಯಿಗೆ ಮಾರಾಟವಾಗುತ್ತದೆ. ಒಂದು ವಾರದ ಹಿಂದೆ ಇದೇ ಟೊಮ್ಯಾಟೋ ಬೆಲೆ ಪ್ರತಿ ಕೆಜಿಗೆ 30 ರಿಂದ 35 ರೂಪಾಯಿಯಂತೆ ಮಾರಾಟಬವಾಗುತ್ತಿತ್ತು. ಇನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 40-50 ರೂಪಾಯಿಯಂತೆ ಮಾರಾಟವಾಗುತ್ತಿತ್ತು. ಒಂದೇ ವಾರದಲ್ಲಿ ಇದರ ಬೆಲೆಯಲ್ಲಿ ದುಪ್ಪಟ್ಟು ಹೆಚ್ಚಳವಾಗಿದ್ದು, ಜನಸಾಮಾನ್ಯನ ಬದುಕು ನರಕವಾದಂತಾಗಿದೆ. ಮೇ ತಿಂಗಳಲ್ಲಿ ದೇಶದ ಪ್ರಮುಖ ಟೊಮ್ಯಾಟೋ ಬೇಡಿಕೆಯ ರಾಜ್ಯಗಳಾದ ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಟೊಮ್ಯಾಟೋ ಕೆಜಗೆ 2 ರಿಂದ 5 ರೂಪಾಯಿ ಇತ್ತು. ಇದರ ಲೆಕ್ಕಾಚಾರಕ್ಕೆ ಹೋಗುವುದಾದರೆ, ಒಂದೇ ತಿಂಗಳಲ್ಲಿ ಟೊಮ್ಯಾಟೋ ಹಣ್ಣಿನ ಬೆಲೆಯಲ್ಲಿ ಶೇ. 1900ರಷ್ಟು ಏರಿಕೆ ಆದಂತಾಗಿದೆ.
ದೆಹಲಿಯಲ್ಲಿ ಟೊಮ್ಯಾಟೋ ಕೆಜಿಗೆ ರೂ.70ರಿಂದ 100ಕ್ಕೆ ಮಾರಾಟವಾಗುತ್ತಿದೆ. ಮಧ್ಯಪ್ರದೇಶದ ಮಾರುಕಟ್ಟೆಯಲ್ಲಿ 80 ರಿಂದ 100 ರೂ.ಗೆ ಟೊಮ್ಯಾಟೋ ಮಾರಾಟವಾಗುತ್ತಿದ್ದರೆ ಉತ್ತರ ಪ್ರದೇಶದಲ್ಲಿ 80 ರಿಂದ 100 ರೂ., ರಾಜಸ್ಥಾನದಲ್ಲಿ 90 ರಿಂದ 110 ರೂ.ಗೆ ಮತ್ತು ಪಂಜಾಬ್‌ನಲ್ಲಿ 60 ರಿಂದ 80 ರೂ.ಗೆ ಮಾರಾಟವಾಗುತ್ತಿದೆ. ಕರ್ನಾಟಕದಲ್ಲಿ 70 ರಿಂದ 110ರ ದರದಲ್ಲಿ ಮಾರಾಟವಾಗುತ್ತಿದೆ. ಇಡೀ ದೇಶ ಟೊಮ್ಯಾಟೋಗಾಗಿ ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಛತ್ತೀಸ್‌ಗಢ, ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಬಿಹಾರ ರಾಜ್ಯಗಳನ್ನು ನೆಚ್ಚಿಕೊಂಡಿದೆ. ಈ ರಾಜ್ಯಗಳಲ್ಲಿ ಆಗುವ ಬದಲಾವಣೆಗಳು ಟೊಮ್ಯಾಟೋ ದರದ ಮೇಲೆ ಪರಿಣಾಮ ಬೀರುತ್ತದೆ.
ಏರಿಕೆಗೆ ಕಾರಣವೇನು?: ಬಹುತೇಕ ರಾಜ್ಯಗಳಲ್ಲಿ ಮಳೆ ಆಗಮನವಾಗಿರುವ ಕಾರಣ ಟೋಮ್ಯಾಟೋ ಬೆಳೆಗೆ ಹಾನಿಯಾಗಿದೆ. ಇನ್ನೂ ಕೆಲವೊಂದು ರಾಜ್ಯಗಳಲ್ಲಿ ವಿಪರೀತ ಉಷ್ಣಹವೆ ಇದೆ. ಇದು ಬೆಳೆಯ ಇಳುವರಿ ಕುಸಿತವಾಗಲು ಕಾರಣವಾಗಿದೆ. ಅದರೊಂದಿಗೆ ನೆರೆಯ ರಾಜ್ಯಗಳಿಂದಲೂ ಬೇಕಾದಷ್ಟು ಪ್ರಮಾಣದ ಟೊಮ್ಯಾಟೋಗಳು ಬರುತ್ತಿಲ್ಲ. ಅದೆಲ್ಲಕ್ಕಿಂತ ಮುಖ್ಯವಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ದೇಶದ ಪ್ರಮುಖ ರಾಜ್ಯಗಳಿಗೆ ಟೋಮ್ಯಾಟೋ ಬೆಳೆಯನ್ನು ರೈತರೇ ಹೆಚ್ಚಾಗಿ ಬೆಳೆದಿರಲಿಲ್ಲ. ಇನ್ನು ಬಿಪರ್‌ಜಾಯ್ ಚಂಡಮಾರುತದ ಕಾರಣದಿಂದಾಗಿ ಬೆಳೆಯ ಮೇಲೆ ಪರಿಣಾಮ ಬೀರಿದೆ. ಗುಜರಾತ್ ಹಾಗೂ ಮಹಾರಾಷ್ಟ್ರ ದೇಶದ ಪ್ರಮುಖ ಟೊಮ್ಯಾಟೋ ಪೂರೈಕೆದಾರರಾಗಿದ್ದು, ಈ ಬಾರಿ ಬಿಪರ್‌ಜಾಯ್‌ನಿಂದ ಸಂಕಷ್ಟಕ್ಕೆ ಈಡಾಗಿದ್ದಾರೆ.
ನೆರೆ ರಾಜ್ಯಗಳಿಂದ ಪೂರೈಕೆ ಕಡಿಮೆ, ಸಾರಿಗೆ ವೆಚ್ಚ ಹೆಚ್ಚಿದೆ: ಒಂದು ವಾರದಲ್ಲಿ ಟೊಮೆಟೊ ಬೆಲೆ ದುಪ್ಪಟ್ಟಾಗಿದೆ ಎಂದು ದೆಹಲಿಯ ಆಜಾದ್‌ಪುರ ಸಗಟು ಮಾರುಕಟ್ಟೆಯ ಟೊಮೆಟೊ ವ್ಯಾಪಾರಿ ಅಶೋಕ್ ಗನೋರ್ ಹೇಳಿದ್ದಾರೆ. ಇದಕ್ಕೆ ಕಾರಣ ಹರ್ಯಾಣ ಮತ್ತು ಉತ್ತರ ಪ್ರದೇಶದಿಂದ ಟೊಮ್ಯಾಟೋ ಕೊರತೆ. ಬೇರೆ ರಾಜ್ಯಗಳಿಂದ ಟೊಮ್ಯಾಟೋ ತರಿಸಿಕೊಳ್ಳಲಾಗುತ್ತಿದ್ದು, ಸಾರಿಗೆ ವೆಚ್ಚ ಹೆಚ್ಚಿದೆ. ಮಹಾರಾಷ್ಟ್ರದ ನಾರಾಯಣಗಾಂವ್ ಭಾಗದ ರೈತ ಅಜಯ್ ಬೆಳ್ಹೇಕರ್ ಮಾತನಾಡಿ, ಮೇ ತಿಂಗಳಲ್ಲಿ ಟೊಮ್‌ಯಾಟೋ ಬೆಲೆ ಕೆಜಿಗೆ 2 ರೂ.ಗೆ ಇಳಿದಿತ್ತು. ಸರಿಯಾದ ಬೆಲೆ ಸಿಗದ ಕಾರಣ ರೈತರು ಬೆಳೆಗೆ ಕೀಟನಾಶಕ, ರಸಗೊಬ್ಬರ ಬಳಸಿಲ್ಲ. ಇದರಿಂದ ಬೆಳೆಗೆ ರೋಗಬಾಧೆ ಹೆಚ್ಚಾಗಿದ್ದು ಉತ್ಪಾದನೆ ಕುಂಠಿತವಾಗಿದೆ. ಇದರಿಂದಾಗಿ ಬೆಲೆ ಏರಿಕೆಯಾಗಿದೆ ಎಂದಿದ್ದಾರೆ.
ಇನ್ನು 2 ತಿಂಗಳಲ್ಲಿ ಬೆಲೆ ಇಳಿಕೆ: ಹೊಸ ಟೊಮ್ಯಾಟೋ ಬೆಳೆಯಿಂದ 1-2 ತಿಂಗಳಲ್ಲಿ ಬೆಲೆ ಇಳಿಕೆಯಾಗುವ ನಿರೀಕ್ಷೆ ಇದೆ. ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯದ ಪ್ರಕಾರ, ಟೊಮ್ಯಾಟೋ ಗಿಡಗಳು ಮೂರು ತಿಂಗಳಾದಾಗ, ಅದು ವಾರಕ್ಕೆ ಎರಡು ಬಾರಿ ಟೊಮ್ಯಾಟೋಗಳನ್ನು ಬಿಡುತ್ತದೆ. ಈ ಸಸ್ಯಗಳು 1-2 ತಿಂಗಳ ಅವಧಿಗೆ ಫಸಲು ನೀಡುತ್ತವೆ. ಆದಾಗ್ಯೂ, ಇದು ವೈವಿಧ್ಯತೆ, ಮಣ್ಣು ಮತ್ತು ಹವಾಮಾನ ಪರಿಸ್ಥಿತಿಗಳನ್ನು ಅವಲಂಬಿಸಿರುತ್ತದೆ.
ಐದು ಗ್ಯಾರಂಟಿ ಖುಷಿ ನಡುವೆ ಜನತೆಗೆ ಟೊಮೆಟೊ ದರ ಶಾಕ್: ನೂರರ ಸನಿಹಕ್ಕೆ 1 ಕೆ.ಜಿ ಟೊಮೆಟೊ
ಚೀನಾದ ನಂತರ ಅತಿ ಹೆಚ್ಚು ಟೊಮೆಟೊ ಉತ್ಪಾದಿಸುವ ದೇಶ ಭಾರತ: ನ್ಯಾಷನಲ್ ಹಾರ್ಟಿಕಲ್ಚರಲ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಫೌಂಡೇಶನ್ ಪ್ರಕಾರ, ಚೀನಾದ ನಂತರ ಭಾರತವು ವಿಶ್ವದ ಎರಡನೇ ಅತಿದೊಡ್ಡ ಟೊಮ್ಯಾಟೋ ಉತ್ಪಾದಿಸುವ ದೇಶವಾಗಿದೆ. ಇದು ಸುಮಾರು 7.89 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 20 ಮಿಲಿಯನ್ ಟನ್ ಟೊಮೆಟೊವನ್ನು ಉತ್ಪಾದಿಸುತ್ತದೆ ಮತ್ತು ಪ್ರತಿ ಹೆಕ್ಟೇರಿಗೆ ಸರಾಸರಿ 25.05 ಟನ್ ಇಳುವರಿ ನೀಡುತ್ತದೆ. ಚೀನಾ 56 ಮಿಲಿಯನ್ ಟನ್ ಉತ್ಪಾದನೆಯೊಂದಿಗೆ ಅಗ್ರಸ್ಥಾನದಲ್ಲಿದೆ.
ಚಿಕ್ಕಬಳ್ಳಾಪುರ: ಟೊಮೆಟೋಗೆ ಬಿಳಿ ನೊಣ ಕಾಟ, ಒಣಗುತ್ತಿರುವ ತೋಟ!
2021-22ರಲ್ಲಿ ಭಾರತದಲ್ಲಿ 20 ದಶಲಕ್ಷ ಟನ್‌ಗಳಿಗಿಂತ ಹೆಚ್ಚು ಟೊಮೆಟೊಗಳನ್ನು ಉತ್ಪಾದಿಸಲಾಗಿತ್ತು. ಇಲ್ಲಿ ಮುಖ್ಯವಾಗಿ ಎರಡು ಬಗೆಯ ಟೊಮ್ಯಾಟೋಗಳನ್ನು ಬೆಳೆಯಲಾಗುತ್ತದೆ. ಹೈಬ್ರಿಡ್ ಮತ್ತು ಸ್ಥಳೀಯ. ಮಧ್ಯಪ್ರದೇಶ ದೇಶದಲ್ಲೇ ಅತಿ ಹೆಚ್ಚು ಟೊಮ್ಯಾಟೋ ಉತ್ಪಾದಿಸುವ ರಾಜ್ಯವಾಗಿದೆ. ಇದರ ನಂತರ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಒಡಿಶಾ ಮತ್ತು ಗುಜರಾತ್ ರಾಜ್ಯಗಳಿವೆ.