ಇದು ಟ್ರೇಲರ್, ಬಾಂಬ್ ಇಟ್ಟು ಕೊಲ್ಲುತ್ತೇವೆ‌: ಅಂಬಾನಿ ಕುಟುಂಬಕ್ಕೆ ಜೀವ ಬೆದರಿಕೆ!

By Kannadaprabha News  |  First Published Feb 27, 2021, 7:53 AM IST

ಮುಂದಿನ ಸಲ ‘ಬಾಂಬ್‌’ ಇಡುತ್ತೇವೆ| ಮತ್ತಷ್ಟು ಸಿದ್ಧತೆಯೊಂದಿಗೆ ಬರುತ್ತೇವೆ| ಸ್ಫೋಟಕ ತುಂಬಿದ್ದ ಕಾರಿನಲ್ಲಿ ಪತ್ರ ಪತ್ತೆ| ಉದ್ಯಮಿ ಕುಟುಂಬಕ್ಕೆ ಪೊಲೀಸ್‌ ಭದ್ರತೆ


ಮುಂಬೈ(ಫೆ.27): ದೇಶದ ನಂ.1 ಶ್ರೀಮಂತ ಉದ್ಯಮಿ, ರಿಲಯನ್ಸ್‌ ಇಂಡಸ್ಟ್ರೀಸ್‌ ಉದ್ಯಮ ಸಾಮ್ರಾಜ್ಯದ ಅಧಿಪತಿ ಮುಕೇಶ್‌ ಅಂಬಾನಿ ನಿವಾಸದ ಬಳಿ ಸ್ಫೋಟಕ ತುಂಬಿದ್ದ ಕಾರು ಪತ್ತೆಯಾದ ಪ್ರಕರಣಕ್ಕೆ ಹೊಸ ತಿರುವು ಲಭಿಸಿದೆ. ಸ್ಫೋಟಕವಿದ್ದ ಕಾರಿನಲ್ಲಿ ಹರುಕು- ಮುರುಕು ಇಂಗ್ಲಿಷ್‌ ಲಿಪಿ ಬಳಸಿ ಹಿಂದಿಯಲ್ಲಿ ಕೈಬರಹದ ಪತ್ರ ದೊರೆತಿದ್ದು, ಇದು ಟ್ರೇಲರ್‌ ಎಂದು ಅಂಬಾನಿ ಕುಟುಂಬಕ್ಕೆ ಎಚ್ಚರಿಕೆ ನೀಡಲಾಗಿದೆ.

ಇದರೊಂದಿಗೆ, ಅಂಬಾನಿ ನಿವಾಸದ ಬಳಿ ಸ್ಫೋಟಕ ತುಂಬಿದ್ದ ಕಾರನ್ನು ಉದ್ದೇಶಪೂರ್ವಕವಾಗಿಯೇ ನಿಲ್ಲಿಸಲಾಗಿದೆ ಎಂಬುದಕ್ಕೆ ಪುಷ್ಟಿಬಂದಿದೆ. ಪೊಲೀಸರಿಗೆ ದೊರೆತಿರುವ ಪತ್ರದಲ್ಲಿ ಹಲವು ವ್ಯಾಕರಣ ದೋಷಗಳಿವೆ. ಆ ಪತ್ರವನ್ನು ಮುಕೇಶ್‌ ಹಾಗೂ ನೀತಾ ಅಂಬಾನಿ ಅವರನ್ನು ಉದ್ದೇಶಿಸಿ ಬರೆಯಲಾಗಿದೆ. ‘ಕಾರಿನಲ್ಲಿ ಸ್ಫೋಟಕ ಇಟ್ಟಿರುವುದು ಕೇವಲ ‘ಝಲಕ್‌’ (ಟ್ರೇಲರ್‌). ಮುಂದಿನ ಸಲ ‘ಸಾಮಾನು’ (ಬಾಂಬ್‌) ಸಂಪೂರ್ಣ ಪ್ರಮಾಣದಲ್ಲಿ ಇಡುತ್ತೇವೆ. ನಿಮ್ಮ ಇಡೀ ಕುಟುಂಬವನ್ನು ಕೊಲ್ಲಲು ಮತ್ತಷ್ಟುಸಿದ್ಧತೆಯೊಂದಿಗೆ ಬರುತ್ತೇವೆ’ ಎಂದು ಆ ಪತ್ರದಲ್ಲಿ ಬರೆಯಲಾಗಿದೆ. ಮುಂಬೈ ಇಂಡಿಯನ್ಸ್‌ ಎಂದು ಬರೆದ ಚೀಲ ಕಾರಲ್ಲಿ ದೊರಕಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

Tap to resize

Latest Videos

ಸಿಸಿಟೀವಿಯಲ್ಲಿ ದುಷ್ಕರ್ಮಿ ಸೆರೆ?:

20 ಜಿಲೆಟಿನ್‌ ಕಡ್ಡಿಗಳು ದೊರೆತಿದ್ದ ಕಾರನ್ನು ಗುರುವಾರ ನಸುಕಿನ ಜಾವ 1 ಗಂಟೆ ಸುಮಾರಿಗೆ ನಿಲ್ಲಿಸಲಾಗಿದೆ. ಕಾರು ನಿಲ್ಲಿಸಿ ವ್ಯಕ್ತಿಯೊಬ್ಬ ಹೋಗುತ್ತಿರುವ ದೃಶ್ಯಗಳು ಸಮೀಪದ ಕಿರಾಣಿ ಅಂಗಡಿಯೊಂದರ ಸಿಸಿಟೀವಿಯಲ್ಲಿ ಪತ್ತೆಯಾಗಿವೆ. ಸಿಸಿಟೀವಿ ಚಿತ್ರದ ಗುಣಮಟ್ಟವೃದ್ಧಿಸಿ ಶಂಕಿತನನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಫೋಟಕ ಸಿಕ್ಕ ಬೆನ್ನಲ್ಲೇ ಪೆದ್ದಾರ್‌ ರಸ್ತೆಯಲ್ಲಿರುವ ಅಂಬಾನಿ ನಿವಾಸ ‘ಆ್ಯಂಟಿಲಿಯಾ’ಗೆ ಮತ್ತಷ್ಟುಪೊಲೀಸರನ್ನು ನಿಯೋಜಿಸಲಾಗಿದೆ. ಅಗತ್ಯ ಬಿದ್ದರೆ ಮತ್ತಷ್ಟುಭದ್ರತೆಯನ್ನು ಒದಗಿಸಲಾಗುತ್ತದೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.

ಅಂಬಾನಿ ನಿವಾಸದಿಂದ ಕೇವಲ 600 ಮೀಟರ್‌ ದೂರದಲ್ಲಿರುವ ಆಲ್ಟಮೌಂಟ್‌ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಕಾರೊಂದು ನಿಂತಿತ್ತು. ಈ ಬಗ್ಗೆ ಪೊಲೀಸರು ತಪಾಸಣೆ ನಡೆಸಿದಾಗ ಅದರಲ್ಲಿ 20 ಜಿಲೆಟಿನ್‌ ಕಡ್ಡಿಗಳು ಪತ್ತೆಯಾಗಿದ್ದವು

click me!