ಮಾನವ ಮಲ ಸಂಗ್ರಹಿಸಿ ಅಧ್ಯಯನ ಮಾಡುವ ಉದ್ದೇಶದಿಂದ ಹ್ಯೂಮನ್ ಮೈಕ್ರೋಬ್ಸ್ ಎನ್ನುವ ಸಂಸ್ಥೆ “ಗುಣಮಟ್ಟದ ಮಲ ದಾನಿʼಗಳನ್ನು ಹುಡುಕುತ್ತಿದೆ. ಇದಕ್ಕೆ ಭಾರೀ ಮೊತ್ತದ ಹಣವನ್ನೂ ಫಿಕ್ಸ್ ಮಾಡಲಾಗಿದೆ. ಆದರೆ, ನಮ್ಮ ದೇಶದಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವುದೇ ಬೇಸರದ ಸಂಗತಿ.
ಹಲವು ರೀತಿಯ ದಾನಗಳ ಬಗ್ಗೆ ನಾವು ಕೇಳಿದ್ದೇವೆ. ಇತ್ತೀಚಿನ ದಿನಗಳಲ್ಲಂತೂ ಕಿಡ್ನಿ, ಯಕೃತ್ ಸೇರಿದಂತೆ ದೇಹದ ಹಲವು ಅಂಗಾಂಗಗಳ ದಾನವೂ ಮಹತ್ವ ಪಡೆದುಕೊಂಡಿದೆ. ಅಂತಹ ದಾನಿಗಳಿಗೆ ಭಾರೀ ಬೇಡಿಕೆಯಿದೆ, ಸಮ್ಮಾನವೂ ಇದೆ. ದೇಹದ ಎಲ್ಲ ಭಾಗಗಳೂ ಪ್ರಯೋಜನಕಾರಿಯೇ. ಆದರೆ, ಮಾನವ ತ್ಯಾಜ್ಯವೊಂದು ಯಾವುದಕ್ಕೂ ಬಾರದ್ದು ಎಂದು ನೀವು ಅಂದುಕೊಂಡರೆ ಬೆಪ್ಪರಾಗುತ್ತೀರಿ. ಏಕೆಂದರೆ, ಈ ದಿನಗಳಲ್ಲೂ ಅದಕ್ಕೂ ಬೆಲೆಯಿದೆ! ಅಚ್ಚರಿ ಬೇಡ, ಹ್ಯೂಮನ್ ಮೈಕ್ರೋಬ್ಸ್ ಎನ್ನುವ ಕಂಪೆನಿಯೊಂದು ಮಾನವನ ಮಲವನ್ನು ಸಹ ಕೊಂಡುಕೊಳ್ಳುತ್ತಿದೆ. “ಗುಣಮಟ್ಟದ ಮಲ ದಾನಿʼಗಳ ಶೋಧ ನಡೆಸುತ್ತಿರುವುದಾಗಿ ಕಂಪೆನಿ ಈ ಹಿಂದೆ ಹೇಳಿಕೊಂಡಿತ್ತು. ಅಮೆರಿಕ ಮತ್ತು ಕೆನಡಾಗಳಲ್ಲಿ ಕಾರ್ಯಾಚರಿಸುತ್ತಿರುವ ಈ ಕಂಪೆನಿ ಮಲ ನೀಡುವವರಿಗೆ 500 ಡಾಲರ್ ಹಣ ಅಂದರೆ, ನಮ್ಮ ರೂಪಾಯಿಯಲ್ಲಿ 41 ಸಾವಿರ ರೂಪಾಯಿ ನೀಡುವುದಾಗಿ ಹೇಳಿದೆ. ವಿಶ್ವದ ಯಾವುದೇ ಭಾಗದ ಜನ “ಗುಣಮಟ್ಟದ ಮಲʼವನ್ನು ಕಳುಹಿಸಬಹುದು. ನಿಮ್ಮ ಕರುಳು ದಿನವೂ ಚಲಿಸುತ್ತಿದೆ ಎಂದಾದರೆ, ನೀವು ವಾರ್ಷಿಕವಾಗಿ 180,000 ಡಾಲರ್ ಗಳಿಸಬಹುದು ಎಂದು ಕಂಪೆನಿಯ ವೆಬ್ ಸೈಟ್ ನಲ್ಲಿ ಹೇಳಲಾಗಿದೆ. ಅಂದರೆ, 1.5 ಕೋಟಿ ರೂಪಾಯಿ!
ಕೇವಲ ಮಲದಿಂದಲೇ (Human Excreta) ವಾರ್ಷಿಕವಾಗಿ ಇಷ್ಟೊಂದು ಗಳಿಸಲು ಸಾಧ್ಯವಿದೆಯಲ್ಲ ಎಂದು ಥ್ರಿಲ್ (Thrill) ಆಗುವ ಮುನ್ನ ಒಂದು ಮಾತು. ಮಲ ಆರೋಗ್ಯಪೂರ್ಣವಾಗಿರಬೇಕು. ಅದಕ್ಕೆ ಹಲವಾರು ಪರೀಕ್ಷೆಗಳನ್ನು (Test) ಎದುರಿಸಬೇಕು. ಎಲ್ಲವನ್ನೂ ಕಂಪೆನಿಯೇ ನಿಭಾಯಿಸುತ್ತದೆ.
ಬ್ರ್ಯಾಂಡ್ ಪ್ರಮೋಷನ್‌ಗೆ ಈ ನಟಿ ಕೇಳಿದಷ್ಟು ದುಡ್ಡು ಕೊಡುತ್ತೆ ಕಂಪನಿಗಳು!
ಒಂದೊಮ್ಮೆ ಕಂಪೆನಿ ನಿಗದಿಪಡಿಸಿರುವ ಹಣ ತೃಪ್ತಿಕರವಾಗಿಲ್ಲದಿದ್ದರೆ ಬೇರೆ ದರವನ್ನು ಕೇಳುವ ಅವಕಾಶವೂ ಇದೆ. ಅದನ್ನೂ ಸಹ ಪರಿಶೀಲನೆ ಮಾಡಲಾಗುತ್ತದೆ. ಡ್ರೈ ಐಸ್ ಶಿಪ್ಪಿಂಗ್ ಮೂಲಕ ಮಲವನ್ನು ಕಳುಹಿಸಬಹುದು. ಯಾರು ಮಲವನ್ನು (Poop) ದಾನವಾಗಿ ನೀಡುತ್ತಾರೋ ಅವರ ಮಾಹಿತಿಯನ್ನು ಗೌಪ್ಯವಾಗಿ ಇಡುವುದಾಗಿ ಕಂಪೆನಿ (Company) ಭರವಸೆ ನೀಡುತ್ತದೆ. ನಿಮ್ಮ ಖಾಸಗಿತನಕ್ಕೆ ಯಾವುದೇ ಧಕ್ಕೆ ಬರುವುದಿಲ್ಲ ಎಂದು ಸಂಸ್ಥೆ ಹೇಳಿದೆ. ಸದ್ಯಕ್ಕೆ ನಮ್ಮ ದೇಶದಲ್ಲಿ ಈ ಕಂಪೆನಿ ಕಾರ್ಯನಿರ್ವಹಣೆ ಮಾಡುತ್ತಿಲ್ಲ ಬಿಡಿ.
ಮಲವನ್ನೇನು ಮಾಡಲಾಗುತ್ತೆ?
ಆದರೆ, ಮಾನವನ ಮಲವನ್ನು ಇಷ್ಟೆಲ್ಲ ಹಣ ನೀಡಿ ಕೊಂಡುಕೊಳ್ಳುವುದಾದರೂ ಏತಕ್ಕೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿಯೇ ಮೂಡುತ್ತದೆ. ಅದಕ್ಕೂ ಘನವಾದ ಉದ್ದೇಶವಿದೆ.
ಜಗತ್ತಿನ ಎಲ್ಲ ಭಾಗಗಳಲ್ಲೂ ಆಹಾರ ಪದ್ಧತಿಯಲ್ಲಿ (Food Style) ವಿಪರೀತ ಬದಲಾವಣೆಯಾಗಿದೆ. ಹಿಂದಿನ ಜನರಂತೆ ಶುದ್ಧವಾದ ಆಹಾರ ಸೇವನೆ ಇಂದು ಸಾಧ್ಯವೇ ಇಲ್ಲ. ಪರಿಣಾಮವಾಗಿ, ಇಲ್ಲಸಲ್ಲದ ಕಾಯಿಲೆಗಳು ಬಂದಿವೆ, ಬರುತ್ತಿವೆ. ವಿಶ್ವದ ಕೇವಲ ಶೇಕಡ 0.1 ರಷ್ಟು ಜನ ಮಾತ್ರವೇ ಆರೋಗ್ಯವಂತರಾಗಿದ್ದಾರೆ ಎನ್ನಲಾಗಿದೆ. ಈ ಜನರ ಮಲವನ್ನೇ ಸಂಗ್ರಹಿಸಿ ಸಂಶೋಧನೆ (Study) ಮಾಡುವುದು ಸಂಸ್ಥೆಯ ಉದ್ದೇಶ.
ಹೊಟ್ಟೆಯಲ್ಲಿ ಸ್ಥಳೀಯ ಸೂಕ್ಷ್ಮಜೀವಿಗಳಿಲ್ಲ!
ತಲೆಮಾರುಗಳಿಂದ ತಲೆಮಾರಿಗೆ ಹೊಟ್ಟೆಯಲ್ಲಿರುವ ಸೂಕ್ಷ್ಮಜೀವಾಣುಗಳ (Microbes) ವ್ಯವಸ್ಥೆ ಬದಲಾಗುತ್ತಿದೆ. ಕೆಲವೇ ಕೆಲವು ಜನರಲ್ಲಿ ಮಾತ್ರ ಸ್ಥಳೀಯ ಬ್ಯಾಕ್ಟೀರಿಯಾಗಳು ಕಂಡುಬರುತ್ತವೆ. ಅವರನ್ನು ವೈದ್ಯರು, ಸಂಶೋಧಕರು, ಆಸ್ಪತ್ರೆಗಳ ಅಧ್ಯಯನಗಳಲ್ಲಿ ಭಾಗಿಯಾಗುವಂತೆ ಮಾಡುವುದು ಸಂಸ್ಥೆಯ ಉದ್ದೇಶ. ಉತ್ತಮ ಮೈಕ್ರೋಬ್ಸ್ ಹೊಂದಿರುವ ಜನರನ್ನು ಹೆಚ್ಚಿನ ಅಧ್ಯಯನದ (Research) ಉದ್ದೇಶಕ್ಕಾಗಿಯೇ “ಗುಣಮಟ್ಟದ ಮಲ ದಾನಿʼಗಳನ್ನು ಹುಡುಕಲಾಗುತ್ತಿದೆ.
ಈ ಬ್ಯುಸಿನೆಸ್ ಮಾಡಿ ತಿಂಗಳಿಗೆ ಲಕ್ಷ ಗಳಿಸ್ತಿದ್ದಾನೆ ಈ ವ್ಯಕ್ತಿ.. ನೀವೂ ಟ್ರೈ ಮಾಡಿ
ದೀರ್ಘಕಾಲದ ರೋಗ ಮತ್ತು ಸಾಮಾನ್ಯವಾಗಿ ದುರ್ಬಲ ಆರೋಗ್ಯ ಹೊಂದಿರುವ ಸಮಸ್ಯೆ ಎಲ್ಲೆಡೆ ಹೆಚ್ಚುತ್ತಿದೆ. ಬಹುಪಾಲು ಜನ ಅನಾರೋಗ್ಯದಿಂದ ಕೂಡಿದ್ದಾರೆ. ಕರುಳಿನಲ್ಲಿ ಸ್ಥಳೀಯ ಮೈಕ್ರೋಬ್ಸ್ ಹೊಂದಿಲ್ಲದಿರುವುದೇ ಇದಕ್ಕೆ ಕಾರಣವಾಗಿದೆ. ಈ ಪ್ರಮುಖ ಸಮಸ್ಯೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಅಧ್ಯಯನ ಮಾಡುವುದು ಮುಖ್ಯ ಉದ್ದೇಶ. ಇತ್ತೀಚಿನ ಕೆಲವು ಮೈಕ್ರೋಬ್ಸ್ ಕುರಿತ ಅಧ್ಯಯನಗಳು ಈ ಬಗ್ಗೆ ವಿವಿಧ ಆಯಾಮಗಳಲ್ಲಿ ಬೆಳಕು ಚೆಲ್ಲಿದೆ ಎಂದು ಸಂಸ್ಥೆ ಹೇಳಿದೆ.