
ಬಿಜಿಂಗ್(ಅ.20): ಚೀನಾದ ಆರ್ಥಿಕ ಬೆಳವಣಿಗೆ ಕಳೆದ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಶೇ.6.5ಕ್ಕೆ ಇಳಿಕೆಯಾಗಿದೆ. ಕಳೆದ 9 ವರ್ಷಗಳಲ್ಲಿಯೇ ಇದು ಕನಿಷ್ಠ ಮಟ್ಟವಾಗಿದೆ.
ಚೀನಾದ ಸ್ಥಳೀಯಾಡಳಿತಗಳ ಸಾಲದ ಮೊತ್ತ 258 ಲಕ್ಷ ಕೋಟಿ ಡಾಲರ್ ತಲುಪಿದ್ದು ಹಾಗೂ ಅಮೆರಿಕದ ಜೊತೆಗಿನ ವಾಣಿಜ್ಯ ಯುದ್ಧದಿಂದಾಗಿ ದೇಶದ ಆರ್ಥಿಕತೆ ಕುಂಠಿತವಾಗಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ಈ ಬೆಳವಣಿಗೆಗಳು ಜಿಡಿಪಿ ಬೆಳವಣಿಗೆಯ ಮೇಲೂ ದುಷ್ಪರಿಣಾಮ ಬೀರಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವಾರ್ಷಿಕ ಆಧಾರದಲ್ಲಿ ಹೋಲಿಸಿದರೆ, ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿ ವಿಸ್ತರಣೆ ಇಳಿಕೆಯಾಗಿದೆ. ಮೊದಲ ತ್ರೈಮಾಸಿಕದಲ್ಲಿ ಶೇ.6.8 ಮತ್ತು ಎರಡನೇ ತ್ರೈಮಾಸಿಕದಲ್ಲಿ ಶೇ.6.7ಕ್ಕೆ ಇಳಿದಿತ್ತು. 2009ರ ಜಾಗತಿಕ ಆರ್ಥಿಕ ಹಿಂಜರಿತದ ನಂತರ ಇದು ಚೀನಾದ ಅತ್ಯಂತ ಮಂದಗತಿಯ ತ್ರೈಮಾಸಿಕ ಜಿಡಿಪಿ ಬೆಳವಣಿಗೆ ಆಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ ಹೆಚ್ಚುವರಿ 2,500 ಕೋಟಿ ಡಾಲರ್ ಸುಂಕವನ್ನು ವಿಧಿಸಿದ ನಂತರ ಉಭಯ ರಾಷ್ಟ್ರಗಳ ನಡುವೆ ವಾಣಿಜ್ಯ ಯುದ್ಧ ತಾರಕಕ್ಕೆ ಏರಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.