ಅಣ್ತಮ್ಮಂದಿರನ್ನು ಬೇರ್ಪಡಿಸಿದ 41 ಬಿಲಿಯನ್ ಡಾಲರ್: ಹೀಗೇಕೆ ಬ್ರದರ್?

By Web DeskFirst Published Oct 19, 2018, 5:41 PM IST
Highlights

ಅಂಬಾನಿ ಎಂಬ ಒಂದೇ ಬಳ್ಳಿಯ ಹೂಗಳು ದೂರಾಗಿದ್ದೇಕೆ?! ವ್ಯಾಪಾರದಲ್ಲಿ ಅಣ್ತಮ್ಮಂದಿರ ಮಧ್ಯೆ ಏಕಿಷ್ಟು ಪೈಪೋಟಿ?! ವ್ಯಾಪಾರದಲ್ಲಿ ಮುಖೇಶ್ ಅಂಬಾನಿ ಯಶಸ್ಸಿನ ಗುಟ್ಟೇನು?! ವಾಣಿಜ್ಯ ಜಗತ್ತಿನಲ್ಲಿ ಅನಿಲ್ ಅಂಬಾನಿ ಲೆಕ್ಕಾಚಾರ ತಪ್ಪಿದ್ದೆಲ್ಲಿ?! ಸಹೋದರರ ನಡುವಿನ ಆಸ್ತಿ ಮೌಲ್ಯದಲ್ಲಿ ಏಕಿಷ್ಟು ಅಂತರ?

ಮುಂಬೈ(ಅ.17): ಅವರಿಬ್ಬರೂ ಒಂದೇ ಬಳ್ಳಿಯ ಎರಡು ಹೂಗಳಿದ್ದಂತೆ. ತಂದೆ ಕಟ್ಟಿದ್ದ ವಾಣಿಜ್ಯ ಸಾಮ್ರಾಜ್ಯದ ಸಮಾನ ಪಾಲುದಾರರು. ಸಣ್ಣದೊಂದು ಬಿರುಕು ಅಣ್ತಮ್ಮಂದಿರನ್ನು ಬೇರ್ಪಡಿಸಿದ್ದು ಹೌದಾದರೂ, ರಕ್ತ ಕೂಗಿದಾಗ ಒಬ್ಬರಿಗೊಬ್ಬರು ಹಲೋ ಹೇಳುತ್ತಾರೆ.

ಹೌದು, ನಾವು ಮಾತನಾಡುತ್ತಿರುವುದು ದೇಶದ, ವಿಶ್ವದ ಇಬ್ಬರು ಅಗ್ರಗಣ್ಯ ಉದ್ಯಮಿಪತಿಗಳಾದ ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ಬಗ್ಗೆ. ಸ್ವಾತಂತ್ರ್ಯೋತ್ತರ ಭಾರತದ ಔದ್ಯೋಗಿಕ ಬೆಳವಣಿಗೆಯಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದ ದಿಗ್ಗಜ ಉದ್ಯಮಿ ದಿವಂಗತ ಧೀರೂಭಾಯಿ ಅಂಬಾನಿ ಅವರ ಸುಪುತ್ರರು.

ಆದರೆ ವ್ಯಾಪಾರದ ಜವಾಬ್ದಾರಿ ಹೊರುತ್ತಿದ್ದಂತೇ ಭಿನ್ನ ಭಿನ್ನ ಅಭಿಪ್ರಾಯದ ಮುಖೇಶ್ ಮತ್ತು ಅನಿಲ್ ದೂರವಾದರು. ಇವರಿಬ್ಬರು ಬೇರೆಯಾಗಿ ಬರೋಬ್ಬರಿ 16 ವಷರ್ಷಗಳು ಸಂದಿದ್ದು, ವಾಣಿಜ್ಯ ಸಾಮ್ರಾಜ್ಯದಲ್ಲಿ ಅಣ್ಣ ಮತ್ತು ತಮ್ಮ ಭಿನ್ನ ಭಿನ್ನ ಸ್ಥಾನವನ್ನು ಅಲಂಕರಿಸಿದ್ದಾರೆ. ಒಬ್ಬರು ತುಸು ಎತ್ತರದಲ್ಲಿದ್ದರೆ, ಮತ್ತೊಬ್ಬರು ದಿನದಿಂದ ದಿನಕ್ಕೆ ಕುಸಿಯುತ್ತಿದ್ದಾರೆ.

ಮೊದಲಿಗೆ ಅಣ್ಣ ಮುಖೇಶ್ ಅಂಬಾನಿ ಅವರನ್ನು ನೋಡುವುದಾದರೆ, ಮುಖೇಶ್ ಇತ್ತೀಚಿಗಷ್ಟೇ ಚೀನಾದ ಜ್ಯಾಕ್ ಮಾ ಅವರನ್ನು ಹಿಂದಿಕ್ಕಿ ಏಷ್ಯಾದ ಅಗ್ರ ಶ್ರೀಮಂತ ಎಂಬ ಹಣೆಪಟ್ಟಿಯನ್ನು ಗಳಿಸಿದ್ದಾರೆ.  ಮುಖೇಶ್ ಅವರ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಟೆಲಿಕಾಂ, ತೈಲೋಪತ್ಪನ್ನ ಉದ್ಯಮದ ಸಹಾಯದ ಮೂಲಕ ತನ್ನ ವ್ಯಾಪಾರವನ್ನು 100 ಬಿಲಿಯನ್ ಯುಎಸ್ ಡಾಲರ್ ಗೆ ವೃದ್ಧಿಸಿಕೊಂಡಿದೆ. 

ಈ ಮೂಲಕ ಮುಖೇಶ್ ಅಂಬಾನಿ ಅವರ ಆಸ್ತಿ ಮೌಲ್ಯ ಕೂಡ 43.1 ಬಿಲಿಯನ್ ಯುಎಸ್ ಡಾಲರ್ ನಷ್ಟಾಗಿದೆ. ಚೀನಾದ ಜಾಕ್ ಮಾಗಿಂತ ಮುಖೇಶ್ 5.2 ಬಿಲಿಯನ್ ಹೆಚ್ಚಿನ ಆಸ್ತಿ ಮೌಲ್ಯ ಹೊಂದಿದ್ದಾರೆ.  

ಇದಕ್ಕೆ ತದ್ವಿರುದ್ಧವಾಗಿ ಅನಿಲ್ ಅಂಬಾನಿ ಒಡೆತನದ ಸಂಸ್ಥೆ ನಷ್ಟದಲ್ಲಿ ಸಾಗುತ್ತಿದ್ದು, ಅನಿಲ್ ಅವರ ಆಸ್ತಿ ಮೌಲ್ಯ ಬರೋಬ್ಬರಿ 1.5 ಬಿಲಿಯನ್ ಯುಎಸ್ ಡಾಲರ್ ನಷ್ಟು ಕಡಿಮೆಯಾಗಿದೆ.  ಅರ್ಧಕ್ಕೆ ನಿಂತಿರುವ ಯೋಜನೆಗಳು, ಹೂಡಿಕೆದಾರರಿಗೆ ಕೊಡಬೇಕಾದ ಪಾಲು, ಹೆಚ್ಚಿದ ಸಾಲದ ಹೊರೆಯಿಂದ ಅನಿಲ್ ಕಂಪಿಸುತ್ತಿದ್ದಾರೆ.

ಇಷ್ಟೇ ಅಲ್ಲದೇ ಅನಿಲ್ ಅಂಬಾನಿ ಒಡೆತನದ ರಿಇಲಯನ್ಸ್ ನೆವಲ್ ಆ್ಯಂಡ್ ಎಂಜಿನಿಯರಿಂಗ್ ಲಿ. ಸಂಸ್ಥೆಯ ಷೇರು ಮೌಲ್ಯ ಶೇ. 75 ರಷ್ಟು ಕಡಿಮೆಯಾಗಿರುವುದು ಅನಿಲ್ ಅವರ ಸ್ಥಿತಿಯನ್ನು ಬಣ್ಣಿಸುತ್ತದೆ. ಪಾಲುದಾರಿಕೆಯ ಆಧಾರದ ಮೇಲೆ ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡಿರುವ ಅನಿಲ್, ಹೆಚ್ಚುತ್ತಿರುವ ಸಾಲದ ಕುರಿತು ಚಿಂತಾಕ್ರಾಂತರಾಗಿದ್ದಾರೆ.

ತಂದೆ ಧೀರೂಭಾಯಿ ಅಂಬಾನಿ ನಿಧನದ ಬಳಿಕ ಇಬ್ಬರೂ ಸಹೋದರರಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಕಾರಣ ಧೀರೂಭಾಯಿ ಸಾಯುವ ಮುನ್ನ ಯಾವುದೇ ವಿಲ್ ಅನ್ನು ಬರೆಯದೇ ಇರುವುದು ಆಸ್ತಿ ಹಂಚಿಕೆಗೆ ತೊಡಕಾಗಿತ್ತು.

2005ರಲ್ಲಿ ಅಂಬಾನಿ ಸಹೋದರರ ತಾಯಿ ಕೋಕಿಬೆನ್ ರಿಲಯನ್ಸ್ ಸಮೂಹ ಸಂಸ್ಥೆಯ ಜವಾಬ್ದಾರಿಯನ್ನು ಮಕ್ಕಳಲ್ಲಿ ಸಮಾನವಾಗಿ ಹಂಚಲು ಮುಂದಾದಾಗಲೇ, ಅಂಬಾನಿ ಕೋಟೆಯಲ್ಲಿ ಸಣ್ಣದೊಂದು ಒಡಕಿನ ಧ್ವನಿ ಮೊಳಗಿತ್ತು. ಕೊನೆಗೆ ಮುಖೇಶ್ ತೈಲ ಉದ್ಯಮದ ಒಡೆತನ ಪಡೆದರೆ, ಅನಿಲ್ ಟೆಲಿಕಾಂ ಉದ್ಯಮದ ಒಡೆತನ ಪಡೆದರು. ಆದರೆ ತದನಂತರ ಮುಖೇಶ್ ಕೂಡ ಟೆಲಿಕಾಂ ಉದ್ಯಮದಲ್ಲಿ ಹೂಡಿಕೆ ಮಾಡಿ ಅನಿಲ್ ಅವರಿಗಿಂತ ಹೆಚ್ಚಿನ ಯಶಸ್ಸು ಪಡೆದರು.

ಆದರೆ ಇಬ್ಬರೂ ಸಹೋದರರಲ್ಲಿ ವ್ಯಾಪಾರದ ಭಿನ್ನತೆ ಇದ್ದರೂ, ಕಷ್ಟದ ಸಂದರ್ಭದಲ್ಲಿ ಪರಸ್ಪರರ ಸಹಾಯಕ್ಕೆ ಬರುವುದು ನಡೆದೇ ಇರುತ್ತದೆ. ಆದರೆ ಮುಖೇಶ್ ಮತ್ತು ಅನಿಲ್ ನಡುವಿನ ಆಸ್ತಿ ಮೌಲ್ಯದ ಅಂತರ, ಒಬ್ಬರ ಯಶಸ್ಸು ಮತ್ತೊಬ್ಬರ ಕುಸಿತ ಇವೆಲ್ಲವೂ ಕೂಡ ಅಂಬಾನಿ ಮನೆಯ ನಾಲ್ಕು ಗೋಡೆಗಳ ಮಧ್ಯೆ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಅಲ್ಲದೇ ಅನಿಲ್ ಅಂಬಾನಿಗಿಂತ ಮುಖೇಶ್ ಅಂಬಾನಿ 41 ಬಿಲಿಯನ್ ಯುಎಸ್ ಡಾಲರ್ ಹೆಚ್ಚಿನ ಆಸ್ತಿ ಮೌಲ್ಯ ಹೊಂದಿರುವುದೂ ಇಬ್ಬರ ನಡುವಿನ ಅಂತರವನ್ನು ಸೂಚಿಸುತ್ತದೆ.

click me!