ಬೈಕ್, ಕಾರು ಹಾಗೂ ವಾಣಿಜ್ಯ ವಾಹನಗಳ ಮಾಲೀಕರಿಗೆ ಸಿಹಿ ಸುದ್ದಿ| ಥರ್ಡ್ ಪಾರ್ಟಿ ವಿಮಾ ಪ್ರೀಮಿಯಂ ದರ ಹೆಚ್ಚಳ ಮಾಡದಿರಲು ನಿರ್ಧಾರ| ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಹತ್ವದ ನಿರ್ಧಾರ| ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದ ಐಆರ್‌ಡಿಎಐ|
ನವದೆಹಲಿ(ಮಾ.30): ಬೈಕ್, ಕಾರು ಹಾಗೂ ವಾಣಿಜ್ಯ ವಾಹನಗಳ ಮಾಲೀಕರಿಗೊಂದು ಸಿಹಿ ಸುದ್ದಿ. ಥರ್ಡ್ ಪಾರ್ಟಿ ವಿಮಾ ಪ್ರೀಮಿಯಂ ದರವನ್ನು ಈ ವರ್ಷ ಹೆಚ್ಚಳ ಮಾಡದೇ ಇರಲು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ನಿರ್ಧರಿಸಿದೆ.
ಕಳೆದೊಂದು ದಶಕದಿಂದ ಪ್ರತಿ ಏಪ್ರಿಲ್‌ನಲ್ಲಿ ಶೇ.10ರಿಂದ ಶೇ.40ರವರೆಗೆ ಥರ್ಡ್ ಪಾರ್ಟಿ ವಿಮಾ ಪ್ರೀಮಿಯಂ ಮೊತ್ತವನ್ನು ಐಆರ್‌ಡಿಎಐ ಪರಿಷ್ಕರಿಸುತ್ತಿತ್ತು. ಕಳೆದ ವರ್ಷ ಮೊದಲ ಬಾರಿಗೆ ಪ್ರೀಮಿಯಂ ಮೊತ್ತವನ್ನು ಬೈಕ್, ಕಾರು, ಟ್ಯಾಕ್ಸಿಗಳಿಗೆ ಶೇ.10ರಿಂದ ಶೇ.20ರವರೆಗೆ ಕಡಿತಗೊಳಿಸಿತ್ತು.
ಆದರೆ ಈ ವರ್ಷ ಏರಿಕೆ ಅಥವಾ ಇಳಿಕೆ ಮಾಡದೇ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ. 2018ರ ಏ.1ರಂದು ನಿಗದಿಪಡಿಸಿರುವ ಪ್ರೀಮಿಯಂ ದರಗಳು ಮುಂದಿನ ಆದೇಶದವರೆಗೂ ಮುಂದುವರೆಯುತ್ತದೆ ಎಂದು ತಿಳಿಸಿದೆ. ಇದರಿಂದಾಗಿ ಈ ವರ್ಷ ಪ್ರೀಮಿಯಂ ದರ ಶೇ.20ರಿಂದ ಶೇ.30ರಷ್ಟುಹೆಚ್ಚಳವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ವಾಹನ ಮಾಲೀಕರು ನಿರಾಳರಾಗುವಂತಾಗಿದೆ.
75 ಸಿಸಿಗಿಂತ ಕಡಿಮೆ ಎಂಜಿನ್ ಸಾಮರ್ಥ್ಯ ಹೊಂದಿರುವ ಸಣ್ಣ ಮೊಪೆಡ್‌ಗಳಿಗೆ ಸದ್ಯ 427 ರು. ಪ್ರೀಮಿಯಂ ದರವಿದೆ. 75ರಿಂದ 110 ಸಿಸಿ ಸ್ಕೂಟರ್ ಹಾಗೂ ಬೈಕ್‌ಗಳಿಗೆ 720 ರು., ಭಾರಿ ಸಾಮರ್ಥ್ಯದ ಬೈಕ್‌ಗಳಿಗೆ 985 ರು. ಇದೆ. ಅದು ಈ ವರ್ಷವೂ ಮುಂದುವರಿಯಲಿದೆ.
ಸಣ್ಣ ಕಾರುಗಳಿಗೆ 1850 ರು., 1000-1500 ಸಿಸಿಯ ಸೆಡಾನ್‌ಗಳಿಗೆ 2863 ರು., 1500 ಸಿಸಿ ಮೇಲ್ಪಟ್ಟಎಸ್‌ಯುವಿಗಳಿಗೆ 7890 ರು. ಇದೆ. ರಿಕ್ಷಾಗಳಿಗೆ 2595 ರು., ಇ- ರಿಕ್ಷಾಗಳಿಗೆ 1685 ರು. ಇದ್ದು, ಮುಂದುವರಿಯಲಿದೆ.