'ಸರವಣ ಭವನ'ದಿಂದ ಜೈಲಿಗೆ: ಜೀವಾವಧಿ ಶಿಕ್ಷೆ ಪ್ರಸಿದ್ಧ ಉದ್ಯಮಿಗೆ!

By Web DeskFirst Published Mar 29, 2019, 1:19 PM IST
Highlights

ಪ್ರಸಿದ್ಧ ಉದ್ಯಮಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ಸುಪ್ರೀಂ ಕೋರ್ಟ್| ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಸರವಣ ಭವನದ ಮುಖ್ಯಸ್ಥ| ದೇಶ-ವಿದೇಶಗಳಲ್ಲಿ ಹೆಸರು ಗಳಿಸಿದ ಸರವಣ ಭವನ ಹೋಟೆಲ್ ಉದ್ಯಮ| ಉದ್ಯೋಗಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಪಿ.ರಾಜಗೋಪಾಲ್ ಜೈಲುಪಾಲು| ಉದ್ಯೋಗಿಯ ಪತ್ನಿಯನ್ನು ಮದುವೆಯಗಲು ಕೊಲೆ ಮಾಡಿದ ಆರೋಪ|

ಚೆನ್ನೈ(ಮಾ.29): ಇದೊಂದು ಕೆಟ್ಟ ಕೆಲಸ ಮಾಡಿರದಿದ್ದರೇ ಬಹುಶಃ ಪಿ. ರಾಜಗೋಪಾಲ್ ಭಾರತದ ಹೋಟೆಲ್ ಉದ್ಯಮದ ಮಿನುಗು ತಾರೆಯಾಗಿ ಮಿಂಚುತ್ತಿದ್ದರು. ಆದರೆ ಆಸೆಯ ಬೆನ್ನಿಗೆ ಬಿದ್ದ ಮನುಷ್ಯ ಕೊನೆಗೆ ಎಲ್ಲಿ ಸೇರಬೇಕೋ ಪಿ. ರಾಜಗೋಪಾಲ್ ಅಲ್ಲಿ ಹೊಗಿ ಸೇರಿದ್ದಾರೆ.

'ಸರವಣ ಭವನ'ದ ಮೂಲಕ ಭಾರತ ಮತ್ತು ವಿದೇಶಗಳಲ್ಲಿ ಖ್ಯಾತಿ ಗಳಿಸಿರುವ ಪ್ರಸಿದ್ಧ ಹೋಟೆಲ್ ಉದ್ಯಮಿ ಪಿ.ರಾಜಗೋಪಾಲ್ ಅವರಿಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಘೋಷಿಸಲಾಗಿದೆ.

2001ರಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲಿ ಪಿ.ರಾಜಗೋಪಾಲ್ ಅವರನ್ನು ದೋಷಿ ಎಂದು ಪರಿಗಣಿಸಿರುವ ಸುಪ್ರೀಂ ಕೋರ್ಟ್, ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

ತಮ್ಮ ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿ ಸನತ್ ಕುಮಾರ್ ಎಂಬಾತನನ್ನು, ಆತನ ಪತ್ನಿಯನ್ನು ಮದುವೆಯಾಗುವ ಕಾರಣಕ್ಕೆ 2001ರಲ್ಲಿ ಕೊಲೆ ಮಾಡಿದ ಆರೋಪ ಪಿ. ರಾಜಗೋಪಾಲ್ ಅವರ ಮೇಲಿತ್ತು.

ಈ ಹಿಂದೆ ಪ್ರಕರಣದ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೊರ್ಟ್, ಪಿ. ರಾಜಗೋಪಾಲ್ ಅವರಿಗೆ ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿತ್ತು. ಆದರೆ ಈ ತೀರ್ಪನ್ನು ಪ್ರಶ್ನಿಸಿ ರಾಜಗೋಪಾಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಸರವಣ ಭವನ ಹೋಟೆಲ್‌ನಲ್ಲಿ ಅಸಿಸ್ಟಂಟ್ ಮ್ಯಾನೇಜರ್ ಮಗಳು ಜೀವಜ್ಯೋತಿ ಅವರನ್ನು ಪಿ. ರಾಜಗೋಪಾಲ್ ಮದುವೆಯಾಗಲು ಬಯಸಿದ್ದರು. ಆದರೆ ಅದಾಗಲೇ ರಾಜಗೋಪಾಲ್ ಎರಡು ಮದುವೆಯಾಗಿದ್ದರಿಂದ ಜೀವಜ್ಯೋತಿ ಮದುವೆಗೆ ನಿರಾಕರಿಸಿದ್ದರು.

ಮುಂದೇ 1999ರಲ್ಲಿ ಶರವಣ ಭವನದ ಹೋಟೆಲ್ ಉದ್ಯಮಿ ಸನತ್ ಕುಮಾರ್ ಅವರನ್ನು ಜೀವಜ್ಯೊತಿ ಮದುವೆಯಾಗಿದ್ದರು. ಆದರೆ ಇದರಿಂದ ಕುಪಿತಗೊಂಡಿದ್ದ ರಾಜಗೋಪಾಲ್, 2001ರಲ್ಲಿ ಸನತ್ ಕುಮಾರ್ ಅವರ ಕೊಲೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು.

ಸದ್ಯ ಪ್ರಕರಣದ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌ನ ನ್ಯಾ. ಎನ್.ವಿ. ರಮಣ ಮತ್ತು ಮೋಹನ್ ಎಂ.ಎಸ್ ನೇತೃತ್ವದ ಪೀಠ ಆರೋಪಿ ಪಿ. ರಾಜಗೋಪಾಲ್ ಅವರಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿ ತೀರ್ಪು ನೀಡಿದೆ. ಇದೇ ಜುಲೈ 7 ರಂದು ಶರಣಾಗುವಂತೆ ಪಿ. ರಾಜಗೋಪಾಲ್ ಅವರಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ತಮಿಳುನಾಡು ಮೂಲದ ಸರವಣ ಭವನ ಲಂಡನ್, ಸಿಂಗಾಪೂರ ಸೇರಿದಂತೆ ವಿದೇಶಗಳಲ್ಲೂ ತನ್ನ ಶಾಖೆಗಳನ್ನು ಹೊಂದಿದ್ದು, ದಕ್ಷಿಣ ಭಾರತದ ತಿನಿಸುಗಳಿಗೆ ಹೆಸರಾಗಿದೆ.

click me!