Bitcoin: ಬಿಟ್‌ಕಾಯಿನ್‌ಗೆ ಕರೆನ್ಸಿ ಮಾನ್ಯತೆ ನೀಡಲ್ಲ: ಕೇಂದ್ರ

By Kannadaprabha News  |  First Published Nov 30, 2021, 8:26 AM IST

* ಸರ್ಕಾರ ಬಿಟ್‌ಕಾಯಿನ್‌ ವಹಿವಾಟಿನ ಮಾಹಿತಿ ಸಂಗ್ರಹಿಸುತ್ತಿಲ್ಲ

* ಸಂಸದೆ ಸುಮಲತಾ, ಡಿ.ಕೆ.ಸುರೇಶ್‌ ಪ್ರಶ್ನೆಗೆ ನಿರ್ಮಲಾ ಉತ್ತರ

* ಬಿಟ್‌ಕಾಯಿನ್‌ಗೆ ಕರೆನ್ಸಿ ಮಾನ್ಯತೆ ನೀಡಲ್ಲ: ಕೇಂದ್ರ


ನವದೆಹಲಿ(ನ.30): ದೇಶಾದ್ಯಂತ ಬಿಟ್‌ಕಾಯಿನ್‌ (Bitcoin) ಮುಂತಾದ ಕ್ರಿಪ್ಟೋಕರೆನ್ಸಿಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿರುವಾಗಲೇ, ಈ ಮಾದರಿಯ ವರ್ಚುವಲ್‌ ಹಣಕ್ಕೆ (Virtual Money) ಕರೆನ್ಸಿಯ ಮಾನ್ಯತೆ ನೀಡುವ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಸೋಮವಾರ ಲೋಕಸಭೆಯಲ್ಲಿ ಕರ್ನಾಟಕದ ಸಂಸದರಾದ ಸುಮಲತಾ ಮತ್ತು ಡಿ.ಕೆ.ಸುರೇಶ್‌ (Karnataka's MP's Sumalatha And SK Suresh) ಬಿಟ್‌ಕಾಯಿನ್‌ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Finance Minister Nirmala Sitharaman), ‘ಬಿಟ್‌ಕಾಯಿನ್‌ಗೆ ಭಾರತದಲ್ಲಿ ಕರೆನ್ಸಿಯ ಮಾನ್ಯತೆ ನೀಡುವ ಪ್ರಸ್ತಾಪ ನಮ್ಮ ಮುಂದಿಲ್ಲ. ಜೊತೆಗೆ, ಕೇಂದ್ರ ಸರ್ಕಾರವು ಬಿಟ್‌ಕಾಯಿನ್‌ ವ್ಯವಹಾರಗಳ ಬಗ್ಗೆ ಯಾವುದೇ ಮಾಹಿತಿ ಸಂಗ್ರಹಿಸುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.

ಪ್ರಸಕ್ತ ಚಳಿಗಾಲದ ಅಧಿವೇಶನದಲ್ಲಿ (Parliament Winter Session) ಕೇಂದ್ರ ಸರ್ಕಾರವು ದೇಶದಲ್ಲಿ ಕೆಲವೇ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು (Cryptocurrency) ಬಿಟ್ಟು ಇನ್ನೆಲ್ಲ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸುವ ಕ್ರಿಪ್ಟೋಕರೆನ್ಸಿ ಅಂಡ್‌ ರೆಗ್ಯುಲೇಶನ್‌ ಆಫ್‌ ಅಫಿಷಿಯಲ್‌ ಡಿಜಿಟಲ್‌ ಕರೆನ್ಸಿ ಮಸೂದೆ ಮಂಡಿಸಲು ಚಿಂತನೆ ನಡೆಸಿದೆ. ತನ್ಮೂಲಕ ಕೆಲ ಕ್ರಿಪ್ಟೋಕರೆನ್ಸಿಗೆ ಆರ್‌ಬಿಐ ಮೂಲಕ ಡಿಜಿಟಲ್‌ ಕರೆನ್ಸಿಯ ಮಾನ್ಯತೆ ನೀಡಲು ಮುಂದಾಗಿದೆ ಎಂದು ಹೇಳಲಾಗಿದೆ. ಅದರ ನಡುವೆಯೇ ನಿರ್ಮಲಾ ಈ ಸ್ಪಷ್ಟನೆ ನೀಡಿರುವುದು ಕುತೂಹಲ ಮೂಡಿಸಿದೆ.

Latest Videos

undefined

ಕ್ರಿಪ್ಟೋಕರೆನ್ಸಿ ದುರ್ಬಳಕೆ ತಡೆಯಿರಿ: ಮೋದಿ ಕರೆ

 

ದೇಶದಲ್ಲಿ ಬಿಟ್‌ಕಾಯಿನ್‌ನಂತಹ ಕ್ರಿಪ್ಟೋಕರೆನ್ಸಿಗಳ ಬಗ್ಗೆ ಭಾರಿ ಚರ್ಚೆ ನಡೆಯುತ್ತಿರುವಾಗಲೇ ಪ್ರಧಾನಿ ನರೇಂದ್ರ ಮೋದಿ (Prime Minister narendra Modi) ಇದೇ ಮೊದಲ ಬಾರಿ ಈ ಡಿಜಿಟಲ್‌ ಕರೆನ್ಸಿಯ ಸುರಕ್ಷತೆಯ ಕುರಿತು ಮಾತನಾಡಿದ್ದು, ಪ್ರಜಾಪ್ರಭುತ್ವ ರಾಷ್ಟ್ರಗಳೆಲ್ಲ ಸೇರಿ ಒಟ್ಟಾಗಿ ಕ್ರಿಪ್ಟೋಕರೆನ್ಸಿಗಳು ಕೆಟ್ಟಕೈಗಳಿಗೆ ಸಿಗದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.

ಇಂದು ತಂತ್ರಜ್ಞಾನ ಮತ್ತು ದತ್ತಾಂಶಗಳು ಹೊಸ ಅಸ್ತ್ರಗಳಾಗುತ್ತಿವೆ. ತಂತ್ರಜ್ಞಾನದಿಂದ ಲಭಿಸುವ ಶಕ್ತಿಯು ದೇಶ ದೇಶಗಳ ನಡುವೆ ಸಹಕಾರದ ಸಾಧನವಾಗುತ್ತದೆಯೋ ಅಥವಾ ಸಂಘರ್ಷದ ಸಾಧನವಾಗುತ್ತದೆಯೋ ಎಂಬುದು ನಾವು ಅದನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ನಿಂತಿದೆ. ನಾವೆಲ್ಲ ಒಟ್ಟಾಗಿ ಭವಿಷ್ಯದ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಪ್ರಯತ್ನಿಸಬೇಕು. ಕ್ರಿಪ್ಟೋಕರೆನ್ಸಿ ಮುಂತಾದ ಹೊಸ ತಂತ್ರಜ್ಞಾನಗಳು ತಪ್ಪು ಕೈಗಳಿಗೆ ಸೇರದಂತೆ ವಿಶ್ವಾಸಾರ್ಹ ಉತ್ಪಾದನೆ ಮತ್ತು ಪೂರೈಕೆಯ ವ್ಯವಸ್ಥೆಯನ್ನು ಸೃಷ್ಟಿಸಿಕೊಳ್ಳಬೇಕು. ಏಕೆಂದರೆ ಇಂತಹ ತಂತ್ರಜ್ಞಾನಗಳು ನಮ್ಮ ಯುವಕರನ್ನು ಹಾಳುಮಾಡಬಲ್ಲವು ಎಂದು ಹೇಳಿದ್ದಾರೆ.

ದೇಶದಲ್ಲಿ ಇತ್ತೀಚೆಗೆ ಕ್ರಿಪ್ಟೋಕರೆನ್ಸಿಯ ಕುರಿತು ಯುವಜನರಲ್ಲಿ ಎದ್ದಿರುವ ಹೊಸ ಆಸಕ್ತಿಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಭಾರಿ ಲಾಭ ಬರುತ್ತದೆ ಎಂಬ ದಾರಿ ತಪ್ಪಿಸುವ ಪ್ರಚಾರ, ಕ್ರಿಪ್ಟೋಕರೆನ್ಸಿಯನ್ನು ಹವಾಲಾಕ್ಕೆ ಅಥವಾ ಭಯೋತ್ಪಾದನೆಗೆ ಬಳಸಿಕೊಳ್ಳುವುದು ಮುಂತಾದ ಆತಂಕಗಳ ಕುರಿತು ಕಳೆದ ವಾರವಷ್ಟೇ ಮೋದಿ ಅವರು ಉನ್ನತ ಮಟ್ಟದ ಸಭೆ ನಡೆಸಿದ್ದರು. ಇದೀಗ ಮೊದಲ ಬಾರಿ ಪ್ರಜಾಪ್ರಭುತ್ವ ರಾಷ್ಟ್ರಗಳು ಒಟ್ಟಾಗಿ ಈ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅವರು ಕರೆ ನೀಡಿರುವುದು ಮಹತ್ವ ಪಡೆದಿದೆ.

click me!